ಕೂಡಿ ಬಾಳುತ್ತಾ ಒಕ್ಕೂಟ ರಾಷ್ಟ್ರವ್ಯವಸ್ಥೆ ಮಾದರಿಯಾಗಿಸೋಣ

7

ಕೂಡಿ ಬಾಳುತ್ತಾ ಒಕ್ಕೂಟ ರಾಷ್ಟ್ರವ್ಯವಸ್ಥೆ ಮಾದರಿಯಾಗಿಸೋಣ

Published:
Updated:

ಚಿತ್ರದುರ್ಗ: ‘ನಾವೆಲ್ಲರೂ ಕೂಡಿ ಬಾಳುವ ಮೂಲಕ ಇಂಥ ಒಕ್ಕೂಟ ರಾಷ್ಟ್ರ ವ್ಯವಸ್ಥೆಯಲ್ಲಿ ವಿಶ್ವಕ್ಕೆ ಮಾದರಿಯಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅಭಿಪ್ರಾಯಪಟ್ಟರು.

ಇಲ್ಲಿನ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಶುಕ್ರವಾರ ನಡೆದ 69ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ  ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನ ರಚನೆಯಾಯಿತು. ಆದ್ದರಿಂದಲೇ ಪ್ರಜಾಪ್ರಭುತ್ವದ ಪ್ರತಿಪಾದಕರಾಗಿದ್ದ ಅಂಬೇಡ್ಕರ್ ಅವರು ಭಾರತ ಸಂವಿಧಾನದ ಶಿಲ್ಪಿಯಾದರು ಎಂದು ಸ್ಮರಿಸಿದರು.

ನಮ್ಮದು ಕಲ್ಯಾಣ ರಾಜ್ಯ. ಇಲ್ಲಿ ಜನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವು ‘ಭಾಗ್ಯ’ ಗಳನ್ನು ಜಾರಿಗೆ ತರುವ ಮೂಲಕ ಸರ್ವರಿಗೂ ಸಮಬಾಳು, ಸಮಪಾಲು, ಸಾಮಾಜಿಕ ನ್ಯಾಯ ಒದಗಿಸಿದೆ. ಈ ನಾಲ್ಕೂ ಮುಕ್ಕಾಲು ವರ್ಷಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗಿದೆ. ಕೃಷಿ, ನೀರಾವರಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸಲಾಗಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗೆ ಪ್ರಯತ್ನಿಸಿದ್ದು, ಆ ಕೆಲಸ ಸಮರೋಪಾದಿಯಲ್ಲಿ ಸಾಗಿದೆ. ಮುಂದಿನ ಮಳೆಗಾಲದ ಅವಧಿಯೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಬರಬಹುದೆಂದು ನಿರೀಕ್ಷಿಸಲಾಗಿದೆ. ಈವರೆಗೆ ಆ ಯೋಜನೆಗಾಗಿ ₹ 2,073 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಯೋಜನೆಯಿಂದ ಹೊಳಲ್ಕೆರೆ ತಾಲ್ಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಟೆಂಡರ್ ಕರೆಯಲಾಗಿದೆ. ರಾಜನಹಳ್ಳಿ ಏತನೀರಾವರಿ ಯೋಜನೆಯಿಂದ ಭರಮಸಾಗರದ 2 ಕೆರೆಗಳು ಹಾಗೂ ಎಮ್ಮೆಹಟ್ಟಿ ಕೆರೆಗೆ ನೀರು ತುಂಬಿಸಲು ₹14 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಮೂಲಕ ಮೊದಲ ಹಂತದಲ್ಲಿ ಚಿತ್ರದುರ್ಗ ತಾಲ್ಲೂಕಿನ 4 ಹೊಳಲ್ಕೆರೆ 4 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿ ಟೆಂಡರ್ ಕರೆಯಲಾಗಿದ್ದು ಕಾಮಗಾರಿ ಆರಂಭವಾಗಲಿದೆ ಎಂದರು.

‘ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಜಿಲ್ಲೆಯ ಮೂರು ತಾಲ್ಲೂಕಿಗೆ ಕುಡಿಯುವ ನೀರು ಪೂರೈಸುವ ₹2,352.60 ಕೋಟಿಗೆ ಅನುಮೋದನೆ ನೀಡಿದೆ. ಹೊಸದುರ್ಗ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಭದ್ರಾ ಜಲಾಶಯದಿಂದ ಕುಡಿಯುವ ನೀರು ಪೂರೈಕೆಗೆ ₹ 350 ಕೋಟಿಗೆ ಅನುಮೋದನೆ ನೀಡಿ ಟೆಂಡರ್ ಕರೆಯಲಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸಂಸದ ಬಿ.ಎನ್.ಚಂದ್ರಪ್ಪ, ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ.ಸರ್ದಾರ್, ಡಾ.ಬಾಬೂ ಜಗಜೀವನ್ ರಾಂ ಚರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಓ.ಶಂಕರ್, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಷಿ ಅವರೂ ಇದ್ದರು.

‘ಸರ್ವೋತ್ತಮ ಸೇವಾ ಪ್ರಶಸ್ತಿ’ ಪುರಸ್ಕೃತರು...

ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಎಸ್.ಕಳ್ಳೆನ್ನವರ, ಚಿತ್ರದುರ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಚ್.ಜಯಣ್ಣ, ಚಳ್ಳಕೆರೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಡಿ.ಟಿ.ಜಗನ್ನಾಥ, ಹೊಸದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿರಿಯ ಫಾರ್ಮಸಿಸ್ಟ್ ಎಂ.ಆರ್.ಸಿ.ಮೂರ್ತಿ, ಹಿರಿಯೂರು ತಾಲ್ಲೂಕು ರಂಗನಾಥಪುರ ಗ್ರಾಮ ಪಂಚಾಯ್ತಿ ಪಿಡಿಒ ಕೆ.ಬಿ.ಅಸಿಂತಿಯಾಜ್ ಬೇಗಂ, ಚಿತ್ರದುರ್ಗದ ಮೆಟ್ರಿಕ್ ನಂತರ ಬಾಲಕಿಯರ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿನಿಲಯದ ನಿಲಯಪಾಲಕಿ ಎಂ.ಗಿರಿಸುವರ್ಣಮ್ಮ ಸೇರಿದಂತೆ ಏಳು ಸರ್ಕಾರಿ ಅಧಿಕಾರಿಗಳಿಗೆ ‘ವಿಶೇಷ ಸರ್ವೋತ್ತಮ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಚಿತ್ರದುರ್ಗ ಅಭಿವೃದ್ಧಿಗೆ ₹ 100 ಕೋಟಿ ಅನುದಾನ !

‘ಈ ಸರ್ಕಾರದ ಅವಧಿಯಲ್ಲಿ ನಾಲ್ಕು ಬಾರಿ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿದ್ದೇನೆ. ಇದು ಐದನೆಯ ಹಾಗೂ ಕೊನೆಯ ಧ್ವಜಾರೋಹಣ. ಮುಂದಿನ ವರ್ಷದ ವೇಳೆಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ. ಈ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ.

ಇನ್ನೂ ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿತ್ತು. ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲೆಯ ಜನಪ್ರತಿನಿಧಿ, ಎಲ್ಲ ಸರ್ಕಾರಿ ಅಧಿಕಾರಿಗಳು ಉತ್ತಮವಾಗಿ ಸಹಕರಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಏನಾದರೂ ಲೋಪದೋಷಗಳಾಗಿದ್ದರೆ,ಮನ್ನಿಸಿ,ಆಶೀರ್ವದಿಸಿ’ ಎಂದು ಭಾಷಣದ ಕೊನೆಯಲ್ಲಿ ಸಚಿವ ಆಂಜನೇಯ  ಸಾರ್ವಜನಿಕರಲ್ಲಿ ಮನವಿ ಮಾಡಿದರು.

‘ನಗರದ ಅಭಿವೃದ್ಧಿಗಾಗಿ ₹100 ಕೋಟಿಯಷ್ಟು ಅನುದಾನ ನೀಡಲಾಗಿದೆ. ಅದರಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇನ್ನೊಂದಿಷ್ಟು ನಡೆಯಬೇಕಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry