ಅನುದಾನ ಹಂಚಿಕೆಯಲ್ಲಿ ಜಾತಿ ಭೇದ ಮಾಡಿಲ್ಲ

7

ಅನುದಾನ ಹಂಚಿಕೆಯಲ್ಲಿ ಜಾತಿ ಭೇದ ಮಾಡಿಲ್ಲ

Published:
Updated:
ಅನುದಾನ ಹಂಚಿಕೆಯಲ್ಲಿ ಜಾತಿ ಭೇದ ಮಾಡಿಲ್ಲ

ಮೊಳಕಾಲ್ಮುರು: ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಮಾನವಾಗಿ ಸ್ಪಂದಿಸಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.

ಇಲ್ಲಿನ ಹಾನಗಲ್‌ ರಸ್ತೆಯಲ್ಲಿನ ನೂತನ ಸ್ವಕುಳಸಾಲಿ ಗುರುಪೀಠ ಆವರಣದಲ್ಲಿ ಶುಕ್ರವಾರ ನಡೆದ ‘ಸ್ವಕುಳಸಾಳಿ ನೇಕಾರ ರಾಜ್ಯಮಟ್ಟದ ಸಮಾವೇಶ, ನೂತನ ವಿದ್ಯಾರ್ಥಿ ನಿಲಯ ಉದ್ಘಾಟನಾ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಸಮುದಾಯಗಳಿಗೆ ಭವನಗಳನ್ನು ನಿರ್ಮಿಸಿಕೊಳ್ಳಲು ಅನುದಾನ ನೀಡಲಾಗಿದೆ. ಪ್ರತಿ ಹಳ್ಳಿಯಲ್ಲಿ ಸಮುದಾಯ ಭವನಗಳು ತಲೆ ಎತ್ತಿವೆ. ಶೈಕ್ಷಣಿಕ ಅನುಕೂಲಕ್ಕಾಗಿ ಜಾತಿವಾರು ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಸಾಕಷ್ಟು ಒತ್ತು ನೀಡಲಾಗಿದೆ. ಹಿಂದುಳಿದ ಹಾಗೂ ಶೋಷಿತ ಸಮುದಾಯಗಳು  ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಮೊಳಕಾಲ್ಮುರು ಹಿಂದುಳಿದ ತಾಲ್ಲೂಕಾಗಿದ್ದು, ಇಲ್ಲಿ ಎಸ್‌ಟಿಪಿ, ಟಿಎಸ್‌ಪಿ ಯೋಜನೆಯಲ್ಲಿ ಸಾಕಷ್ಟು ಅನುದಾನ ನೀಡಲಾಗಿದೆ. ₹ 3 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಪ್ರಗತಿಯಲ್ಲಿದೆ. ನೇಕಾರ ವೃತ್ತಿಗೆ ಜಾಗತೀಕರಣ ಬಿಸಿ ತಟ್ಟಿದ್ದು, ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಸಂಸದ ಬಿ. ಚಂದ್ರಪ್ಪ ಮಾತನಾಡಿ, ‘ಸ್ವಕುಳಸಾಲಿ ನೇಕಾರ ಜನಾಂಗದವರು ಮೊಳಕಾಲ್ಮುರಿನಂತಹ ಹಿಂದುಳಿದ ಪ್ರದೇಶದಲ್ಲಿ ಗುರುಪೀಠ ಹಾಗೂ ಸುಸಜ್ಜಿತ ವಿದ್ಯಾರ್ಥಿನಿಲಯ ಸ್ಥಾಪಿಸುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ  ಅನುದಾನದಲ್ಲಿ  ಅನುಕೂಲ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಜನಾಂಗದ ರಾಜ್ಯ ಘಟಕ ಅಧ್ಯಕ್ಷ ಚಂದ್ರಕಾಂತ ಭಂಡಾರೆ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ರಾಜ್ಯಸರ್ಕಾರ ₹ 50 ಲಕ್ಷವನ್ನು ನಿಲಯ ನಿರ್ಮಾಣಕ್ಕೆ ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚುವರಿ ಅನುದಾನ ಅಗತ್ಯವಿದ್ದು, ಪರಿಶೀಲಿಸಬೇಕು’ ಎಂದು ಹೇಳಿದರು. ಶಾಸಕ ಎಸ್‌. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬುದ್ಧಿಪೀಠದ ಪ್ರಭಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ. ಪ್ರಕಾಶ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬಸಮ್ಮ, ಇಒ ಚಂದ್ರಶೇಖರಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಡಾ. ಬಿ. ಯೋಗೇಶ್‌ ಬಾಬು, ಮುಂಡ್ರಗಿ ನಾಗರಾಜ್‌, ಸಮಾಜದ ಅಖಿಲ ಭಾರತ ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಚೌದರಿ, ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶಿಂಧೆ, ಗುರುಪೀಠ ಸಮಿತಿ ಅಧ್ಯಕ್ಷ ಹನುಮಂತಪ್ಪ ಕ್ಷೀರಸಾಗರ್‌, ಸ್ಥಳೀಯ ಮುಖಂಡರಾದ ಸ್ವಾಮಿದೇವ ಗಾಯಕವಾಡ್‌, ಡಿ.ಎಂ. ಈಶ್ವರಪ್ಪ, ಬಿ.ಜಿ. ಸೂರ್ಯನಾರಾಯಣ್‌ ಉಪಸ್ಥಿತರಿದ್ದರು. ಇದೇ ವೇಳೆ ಸ್ಮರಣ ಸಂಚಿಕೆ, ಸ್ವಕುಳಸಾಳಿ ವಾರ್ತೆ ಹಾಗೂ ಮೂರು ಕವನ ಸಂಕಲನಗಳನ್ನು ಸಚಿವ ಆಂಜನೇಯ ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry