ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗಳೇ ಪರಿಶ್ರಮದ ಅಳತೆಗೋಲು

Last Updated 27 ಜನವರಿ 2018, 10:02 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ದಾಖಲೆ ರಹಿತ ತಾಂಡಾ, ಹಾಡಿ, ಗೊಲ್ಲರ ಹಟ್ಟಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾ ಗುತ್ತಿದ್ದು, ಈವರೆಗೆ 40 ಹಾಡಿ-ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನ ಭಾಗವಾಗಿದ್ದ ನ್ಯಾಮತಿಗೆ ತಾಲ್ಲೂಕು ಸ್ಥಾನಮಾನ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ನಮ್ಮ ಸಾಧನೆಗಳೇ ಪರಿಶ್ರಮದ ಅಳತೆಗೋಲುಗಳಾಗಬೇಕು ಎಂದ ಅವರು, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಎಲ್ಲ ವರ್ಗದವರಿಗೂ ಸೌಲಭ್ಯಗಳನ್ನು ನೀಡಲಾಗಿದೆ’ ಎಂದರು. ಸಾರ್ವಭೌಮತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ಪ್ರಜಾಸತ್ತಾತ್ಮಕ ಭದ್ರ ತಳಹದಿಯ ಮೇಲೆ ದೇಶ ನಿರ್ಮಾಣವಾಗಿದೆ ಎಂದರು.

ತೋಟಗಾರಿಕಾ ಇಲಾಖೆಯಿಂದ 2013–14ನೇ ಸಾಲಿನಿಂದ ಇಲ್ಲಿಯವರೆಗೂ 5,268 ಕೃಷಿ ಹೊಂಡ, 81 ಪಾಲಿಹೌಸ್‌, 39,458 ಹೆಕ್ಟೇರ್‌ನಲ್ಲಿ 27 ಸಾವಿರ ರೈತರು ಸೂಕ್ಷ್ಮ ನೀರಾವರಿ ಅಳವಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹ 10 ಕೋಟಿ ಪ್ರಯೋಜನ ಪಡೆದಿದ್ದು, ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನಡಿ ₹ 23 ಕೋಟಿ ವೆಚ್ಚದಲ್ಲಿ 7,430 ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಎಂದರು.

ಜಿಲ್ಲೆಯಲ್ಲಿ ₹ 1.99 ಕೋಟಿ ವೆಚ್ಚದಲ್ಲಿ 6,800 ಫಲಾನುಭವಿಗಳಿಗೆ ತರಕಾರಿ ಬೀಜಗಳ ಕಿಟ್ ವಿತರಿಸಲಾಗಿದೆ. ಕುಂದವಾಡ ಕೆರೆಯ ಬಳಿ ₹18 ಕೋಟಿ ವೆಚ್ಚದಲ್ಲಿ ಗಾಜಿನ ಮನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಗಾಜಿನ ಮನೆಯ ಸುತ್ತ ₹4.25 ಕೋಟಿ ವೆಚ್ಚದಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗಿದೆ ಎಂದರು.

ಕೃಷಿ ಭಾಗ್ಯ ಯೋಜನೆಯಲ್ಲಿ ಪಾಲಿಹೌಸ್, ನೆರಳು ಪರದೆ, ಕೃಷಿಹೊಂಡ ಮತ್ತು ಸೋಲಾರ್, ಡೀಸೆಲ್ ಪಂಪ್‌ಸೆಟ್ ಅಳವಡಿಕೆಗೆ ₹12.50 ಕೋಟಿ ಒದಗಿಸಲಾಗಿದೆ. ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 6,800 ಮೆಟ್ರಿಕ್‌ ಟನ್‌, 2,000 ಮೆಟ್ರಿಕ್‌ ಟನ್‌, 5,000 ಮೆಟ್ರಿಕ್‌ ಟನ್ ಸಾಮರ್ಥ್ಯದ ಗೋದಾಮುಗಳನ್ನು ₹ 20.02 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ 155.34 ಕಿ.ಮೀ ರಸ್ತೆ, 28 ಸೇತುವೆ ನಿರ್ಮಾಣ, ಕೆರೆ ಸಂಜೀವಿನಿ ಯೋಜನೆಯಡಿ 59 ಕೆರೆ ಹೂಳೆತ್ತುವುದು, ಅನ್ನಭಾಗ್ಯ ಯೋಜನೆಯಡಿ 4,15,000 ಕುಟುಂಬಗಳು ಪ್ರಯೋಜನ ಪಡೆದಿವೆ. ಗಂಗಾ ಕಲ್ಯಾಣ ಯೋಜನೆಯಡಿ 1,255 ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ ಎಂದರು.

ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ 2013ರಿಂದ 1,65,976 ಶೌಚಾಲಯ ನಿರ್ಮಿಸಿ, ‘ಬಯಲು ಶೌಚಮುಕ್ತ ಜಿಲ್ಲೆ’ ಎಂದು ಘೋಷಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 17 ಯೋಜನೆಗಳ ಪೈಕಿ 9 ಪೂರ್ಣಗೊಂಡಿವೆ ಎಂದು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಅಂಕಿ ಅಂಶಗಳನ್ನು ತೆರದಿಟ್ಟರು.

ಡಿಆರ್‌ಪಿ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಎಸ್‌ಪಿಎಸ್ ನಗರದ ಸರ್ಕಾರಿ ಶಾಲೆ, ಜೈನ್ ಪ್ರೌಢಶಾಲೆ ಹಾಗೂ ಅಮೃತ ವಿದ್ಯಾಲಯ ಮಕ್ಕಳು ದೇಶಭಕ್ತಿ ಸಾರುವ ನೃತ್ಯರೂಪಕ ಪ್ರದರ್ಶಿಸಿದರು.

ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು, ಮೇಯರ್ ಅನಿತಾಬಾಯಿ ಮಾಲತೇಶ್, ಉಪ ಮೇಯರ್ ನಾಗರತ್ನಮ್ಮ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ದೂಡಾ ಅಧ್ಯಕ್ಷ ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್‌.ಪಿ.ಡಾ.ಭೀಮಾಶಂಕರ ಎಸ್.ಗುಳೇದ, ಜಿಲ್ಲಾ ಪಂಚಾಯ್ತಿ ಸಿಇಒ ಅಶ್ವತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ತಹಶೀಲ್ದಾರ್ ಸಂತೋಷ್‌ ಕುಮಾರ್, ಪಾಲಿಕೆ ಆಯುಕ್ತ ಮಂಜುನಾಥ ಆರ್.ಬಳ್ಳಾರಿ ಅವರೂ ಇದ್ದರು.

ಕೊನೆ ಭಾಗದ ರೈತರಿಗೂ ನೀರು

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರಿಗೂ ನೀರು ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ. ನಾಲೆಗೆ ಅಕ್ರಮವಾಗಿ ಅಳವಡಿಸಿಕೊಂಡಿರುವ ಪಂಪ್‌ಸೆಟ್‌ಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜನ ಹೇಳಿದರು.

‘ನಾಲಾ ಡಿಸ್ಟ್ರಿಬ್ಯೂಟರ್‌’ಗಳನ್ನು ಹಾನಿಗೊಳಿಸುವುದು ಹಾಗೂ ಕಾರ್ಯಾಚರಣೆಗೆ ಯಾವ ರಾಜಕಾರಣಿಯೂ ಅಡ್ಡಿಯಾಗಬಾರದು ಎಂದರು. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನ ಮುಂದೂಡಲಾಗಿದೆ. ಮುಂದಿನ ವರ್ಷ ಜಿಲ್ಲೆಯಲ್ಲೇ ಸಮ್ಮೇಳನ ನಡೆಯಲಿದೆ. ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT