ತೇಜೋವಧೆ ಮಾಡುವುದನ್ನು ನಿಲ್ಲಿಸಿ

7

ತೇಜೋವಧೆ ಮಾಡುವುದನ್ನು ನಿಲ್ಲಿಸಿ

Published:
Updated:

ಹಾಸನ: ‘ದೇವೇಗೌಡರು ರಾಜಕೀಯ ಕಾರಣಕ್ಕಾಗಿ ನನ್ನ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು. ಅವರ ಹೇಳಿಕೆ ಮನಸ್ಸಿಗೆ ನೋವು ತಂದಿದೆ. ಸರ್ಕಾರಕ್ಕೆ ಪತ್ರ ಬರೆಯುವ ಬದಲು ನನಗೆ ಪತ್ರ ಬರೆದು ಜಿಲ್ಲೆಯ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲಿ’ ಎಂದು ಸಚಿವ ಮಂಜು ಮನವಿ ಮಾಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯ ವಿಚಾರವು ಈಗ ಸಂಸದ ಎಚ್‌.ಡಿ. ದೇವೇಗೌಡ ಮತ್ತು ಸಚಿವ ಎ.ಮಂಜು ನಡುವೆ ಮಾತಿನ ಸಮರಕ್ಕೆ ಎಡೆಮಾಡಿಕೊಟ್ಟಿದೆ.

ಸುದ್ದಿಗೋಷ್ಠಿಯಲ್ಲಿ ಗೌಡರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಂಜು, ‘ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ದೇವೇಗೌಡರು ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಳ್ಳದೇ ಹೋದರೆ ಮಹೋತ್ಸವ ನಿಂತು ಹೋಗುತ್ತಾ? ಅವರು ಛೀ… ಥೂ…ಪದ ಬಳಸಿರುವುದು ದೇಶ-ರಾಜ್ಯಕ್ಕೆ ಮಾಡಿದ ಅವಮಾನ, ಸೂಕ್ತ ಸಮಯಾವಕಾಶ ಬಂದಾಗ ಅವರ ಹಿನ್ನೆಲೆ ಏನೆಂಬುದನ್ನು ಬಿಚ್ಚಿಡುವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಸಿದ್ದರಾಮಯ್ಯ ಅವರಿಂದ ಅನೇಕ ಕಡತಗಳಿಗೆ ಸಹಿ ಹಾಕಿಸಿಕೊಂಡಿಲ್ಲವೇ? ಇಂಥ ಅನುಕೂಲಸಿಂಧು ರಾಜಕೀಯ ನಿಲ್ಲಿಸದಿದ್ದರೆ ಅವರ ಹಿನ್ನೆಲೆ ಬಿಚ್ಚಿಡುವೆ ಎಂದು ಎಚ್ಚರಿಸಿದರು. ‘ನಾನು ರೈತನ ಮಗ. ಅಂತರ್ಜಾತಿ ವಿವಾಹವಾಗಿದ್ದೇನೆ. ಹೋರಾಟದಿಂದ ರಾಜಕೀಯಕ್ಕೆ ಬಂದಿದ್ದೇನೆ’ ಎಂದರು.

ಅನಾಗರಿಕ ಪದ ಬಳಕೆ ಮಾಡಿರುವ ಕುಮಾರಸ್ವಾಮಿ ವಿರುದ್ಧವೂ ಗರಂ ಆದ ಮಂಜು, ‘ಅವರಿಗೆ ಆ ಪದದ ಅರ್ಥ ಗೊತ್ತೇ? ಅವರು ಯಾವ್ಯಾವಾಗ ಯೂಟರ್ನ್ ಆಗಿದ್ದಾರೆ ಅನ್ನೋದು ಗೊತ್ತಿದೆ. ನಾನು ದೇವೇಗೌಡರಿಗೆ ಸಹಾಯ ಮಾಡಿದ್ದು ಕುಮಾರಸ್ವಾಮಿಗೆ ಗೊತ್ತಿಲ್ಲ. ಆಗ ಅವರು ರಾಜಕೀಯದಲ್ಲೇ ಇರಲಿಲ್ಲ’ ಎಂದು ತಿರುಗೇಟು ನೀಡಿದರು.

‘ದೇವೇಗೌಡರು ನನ್ನ ವಿರುದ್ಧ ಮಾಡಿರುವ ಕಮಿಷನ್‌ ಆರೋಪ ತುಂಬಾ ನೋವು ತಂದಿದೆ. ಜ. 29 ರ ನಂತರ ಬೆಂಗಳೂರಿನಲ್ಲೇ ದಾಖಲೆ ಸಮೇತ ಉತ್ತರ ಕೊಡುವೆ. ಅಂದು ನನ್ನ ಹಿನ್ನೆಲೆ ಏನು? ದೇವೇಗೌಡರ ಹಿನ್ನೆಲೆ ಏನು? ಪದೇ ಪದೇ ತೇಜೋವಧೆ ಮಾಡುತ್ತಿರುವಾಗ ಸುಮ್ಮನಿರುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದರು.

ಮಸ್ತಕಾಭಿಷೇಕಕ್ಕೆ ಬಿಡುಗಡೆ ಮಾಡಿರುವ ₹ 175 ಕೋಟಿ ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಬಿಡುಗಡೆ ಮಾಡುವೆ. 2006ರ ಮಸ್ತಕಾಭಿಷೇಕದಲ್ಲಿ ಮಂತ್ರಿಯಾಗಿದ್ದ ದೇವೇಗೌಡರ ಮಗ ರೇವಣ್ಣ ಅಂದು ಬಿಡುಗಡೆಯಾಗಿದ್ದ ₹ 116 ಕೋಟಿ ವೆಚ್ಚದ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ’ ಎಂದು ಸವಾಲೆಸೆದರು.

ದೇವೇಗೌಡರ ಆರೋಪಗಳೆಲ್ಲಾ ನಿರಾಧಾರ. ನಾನು ಹೋರಾಟದಿಂದ ಬಂದವನು. ಅದೆಲ್ಲವನ್ನೂ ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಡುವೆ ಎಂದು ಘೋಷಿಸಿದರು. ಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌, ಹುಡಾ ಅಧ್ಯಕ್ಷ ಕೃಷ್ಣಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry