ಆಸ್ಪತ್ರೆಯಿಂದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಡಿಸ್ಚಾರ್ಜ್

7

ಆಸ್ಪತ್ರೆಯಿಂದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಡಿಸ್ಚಾರ್ಜ್

Published:
Updated:
ಆಸ್ಪತ್ರೆಯಿಂದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಡಿಸ್ಚಾರ್ಜ್

ಬೆಂಗಳೂರು: ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ಇಂದು ಮಧ್ಯಾಹ್ನ ಡಿಸ್ಚಾರ್ಜ್ ಮಾಡಲಾಗಿದೆ.

ಸಿದ್ಧಗಂಗಾ ಶ್ರೀಗಳಿಗೆ ‘ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಜ್ವರ, ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಹಾಗೂ ಕಫ ಹೆಚ್ಚಾಗಿತ್ತು. ಹಾಗಾಗಿ ಶುಕ್ರವಾರ ಬೆಳಿಗ್ಗೆ  ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

‘ಸ್ವಾಮೀಜಿಯ ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿಯಲ್ಲಿ ಸಮಸ್ಯೆ ಉಂಟಾಗಿತ್ತು. ಇದರಿಂದ ಪಿತ್ತಕೋಶ ಬ್ಲಾಕ್‌ ಆಗುತ್ತಿದೆ. ಸ್ವಾಮೀಜಿಗೆ 110 ವರ್ಷ ವಯಸ್ಸಾಗಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಸ್ಟೆಂಟ್‌ಗಳ ಮೂಲಕವೇ ಬ್ಲಾಕ್‌ಗಳನ್ನು ಸರಿಪಡಿಸಬೇಕು. ಈ ಬಾರಿ ಒಂದು ಮೆಟಲ್‌ ಹಾಗೂ ಎರಡು ಪ್ಲಾಸ್ಟಿಕ್‌ ಸ್ಟೆಂಟ್‌ಗಳನ್ನು ಹಾಕಿದ್ದೇವೆ. ಅವರಿಗೆ ಈವರೆಗೆ ಒಟ್ಟು ಎಂಟು ಸ್ಟೆಂಟ್‌ ಅಳವಡಿಸಲಾಗಿದೆ’ ಎಂದು ಬಿಜಿಎಸ್‌ ಆಸ್ಪತ್ರೆಯ ವೈದ್ಯ ಡಾ.ರವೀಂದ್ರನಾಥ್ ಹೇಳಿದ್ದಾರೆ.

ಶುಕ್ರವಾರ ಸಂಜೆ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಶನಿವಾರ ಬೆಳಗ್ಗೆ ಗುಣಮುಖರಾದ ಶ್ರೀಗಳು  ಆಸ್ಪತ್ರೆಯಲ್ಲಿಯೇ ಪೂಜೆ ನೆರವೇರಿಸಿದ್ದಾರೆ.

ಬೆಳಗ್ಗೆಯೇ ನಾನು ಆಸ್ಪತ್ರೆಯಲ್ಲಿ ಇರಲ್ಲ, ನನಗೆ ಮಠಕ್ಕೆ ಹೋಗಬೇಕೆಂದು ಶ್ರೀಗಳು ಹಠ ಹಿಡಿದಿದ್ದಾರೆ. ಸ್ವಾಮಿಗಳ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಮಧ್ಯಾಹ್ನ ಡಿಸ್ಚಾರ್ಜ್ ಮಾಡಿದ್ದಾರೆ. ಟ್ರಾಫಿಕ್ ಮುಕ್ತ ಮಾಡಿ ಶ್ರೀಗಳನ್ನು ಮಠಕ್ಕೆ ಕರೆದುಕೊಂಡು ಹೋಗಲಾಗಿದೆ.

ಮಕ್ಕಳು, ಭಕ್ತರ ಹರ್ಷೋದ್ಘಾರ, ಜೈ ಜೈಕಾರ

ತುಮಕೂರು: ಡಾ.ಶಿವಕುಮಾರ ಸ್ವಾಮೀಜಿಯವರು ಬೆಂಗಳೂರಿನ ಬಿಜಿಎಸ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಸಂಜೆ ಮಠಕ್ಕೆ ಬರುತ್ತಿದ್ದಂತೆಯೇ ಮಠದ ಅಂಗಳದಲ್ಲಿದ್ದ ವಿದ್ಯಾರ್ಥಿಗಳು, ಭಕ್ತರು ಹರ್ಷೋದ್ಗಾರ, ಜೈ ಕಾರ ಹಾಕಿದರು.

ಸ್ವಾಮೀಜಿಯವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ, ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್ವರ್ ನೇತ್ವದ ವೈದ್ಯರ ತಂಡ, ಮಠದ ಆಡಳಿತ ವರ್ಗದವರು ಸ್ವಾಮೀಜಿಯವರನ್ನು ಹಳೆಯ ಮಠದಲ್ಲಿರುವ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋದರು.

ಸ್ವಾಮೀಜಿಯವರ ವಿಶ್ರಾಂತಿ ಕೊಠಡಿಯನ್ನು ತುರ್ತು ನಿಗಾ ಘಟಕವಾಗಿ ಪರಿವರ್ತಿಸಲಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್ ತಿಳಿಸಿದರು.

ಮಠದ ಅಧ್ಯಕ್ಷ ಸಿದ್ದಲಿಂಗಸ್ವಾಮೀಜಿ ಮಾತನಾಡಿ,'  ಸ್ವಾಮೀಜಿಯವರಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಾಗಿರುವುದರಿಂದ ಗಣ್ಯರೂ ಸೇರಿದಂತೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇಲ್ಲ. ಭಕ್ತರೇ ಅರಿತುಕೊಂಡು ಸಹಕರಿಸಬೇಕು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry