ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಸ್ತಕಾಭಿಷೇಕಕ್ಕೆ ₹ 264 ಕೋಟಿ ಅನುದಾನ

Last Updated 27 ಜನವರಿ 2018, 10:15 IST
ಅಕ್ಷರ ಗಾತ್ರ

ಹಾಸನ: ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ₹ 264 ಕೋಟಿ ಅನುದಾನ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ನಾಡಉತ್ಸವ. ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲೆ ನಿರಂತರವಾಗಿ ಬರ ಎದುರಿಸು ತ್ತಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ, ನಗರ ನೀರು ಪೂರೈಕೆಯೋಜನೆ ಹಾಗೂ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. 508 ಕೊಳವೆ ಬಾವಿ, 1,359 ಕಿರು ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗಿದೆ. 110 ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ತೆಂಗು ಪುನಶ್ಚೇತನಕ್ಕೆ ₹ 9.41 ಕೋಟಿ ನೆರವು ನೀಡಲಾಗಿದ್ದು, ಬೆಂಬಲ ಬೆಲೆಯೊಂದಿಗೆ 79,404 ಕ್ವಿಂಟಲ್ ಕೊಬ್ಬರಿಯನ್ನು ₹ 42 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ. ₹ 34 ಕೋಟಿ ವೆಚ್ಚದಲ್ಲಿ 2.6 ಲಕ್ಷ ಕ್ವಿಂಟಲ್‌ ಮೆಕ್ಕೆ ಜೋಳ, ₹ 106 ಕೋಟಿ ವೆಚ್ಚದಲ್ಲಿ 5 ಲಕ್ಷ ಕ್ವಿಂಟಲ್‌ರಾಗಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.

ಐದು ತಾಲ್ಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ ಕಾರ್ಯಾರಂಭ ವಾಗಿದೆ. ವಿವಿಧ ತಾಲ್ಲೂಕುಗಳಲ್ಲಿ ಸ್ಕ್ಯಾನಿಂಗ್ ಸೌಲಭ್ಯ ದೊರೆಯುತ್ತಿದ್ದು, ಹಾಸನ ವೈದ್ಯಕೀಯ ಕಾಲೇಜಿನ ಅತ್ಯಾಧುನಿಕ ಸೌಲಭ್ಯಗಳಿಗೆ ₹ 2.24 ಕೋಟಿ ನೀಡುವುದರೊಂದಿಗೆ 750 ಹಾಸಿಗೆಗಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ವಿವರಿಸಿದರು.

ವಿವಿಧ ಕ್ಷೇತ್ರದ ಸಾಧಕರಾದ ಪೊಲೀಸ್ ಕಾನ್‌ಸ್ಟೆಬಲ್‌ ಮಂಜುನಾಥ್, ಜಿಲ್ಲಾ ಗೃಹ ರಕ್ಷಕದಳದ ಎಂ.ಎ ಸತೀಶ್, ಎನ್.ಸಿ.ಸಿ ವಿದ್ಯಾರ್ಥಿ ಚಂದ್ರಶೇಖರ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾಂಚನಮಾಲಾ, ಬಾಲಕಿ ಎಚ್‌.ಆರ್‌. ಜಯಶ್ರೀ, ಚಾಲಕ ಬಾಬು, ಪೌರ ಕಾರ್ಮಿಕ ಚಲುವ, ರಕ್ತದಾನಿ ವಿ.ಡಿ ಆನಂದ್, ಪ್ರಾಮಾಣಿಕ ಆಟೊ ಚಾಲಕ ಮಾವಿನಕೆರೆಗೌಡ, ಸ್ವಾತಂತ್ರ್ಯ ಹೋರಾಟಗಾರ ಕೆ.ಎ.ಕೃಷ್ಣಸ್ವಾಮಿ, ಹುತಾತ್ಮ ಸೈನಿಕ ಡಿ.ಪಿ. ಸಂದೀಪ ಕುಮಾರ್ ಕುಟುಂಬ ಸದಸ್ಯರು, ಪತ್ರಕರ್ತ ಕೆ.ಎಚ್.ವೇಣುಕುಮಾರ್, ಸರ್ಕಾರಿ ಆಸ್ಪತ್ರೆ ಶವಾಗಾರದ ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆಯಡಿ ಜೀವರಕ್ಷಕ ಪ್ರಶಸ್ತಿಯನ್ನು ಗೃಹ ರಕ್ಷಕ ಅಧಿಕಾರಿ ಎಚ್.ಆರ್. ಪ್ರದೀಪ್‌ ಕುಮಾರ್, ಪುನೀತ್‌ಗೆ ನೀಡಲಾಯಿತು.

ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್ ಗೈಡ್ಸ್, ಎನ್.ಸಿ.ಸಿ, ಗೃಹ ರಕ್ಷಕ ದಳ, ಹಾಗೂ ಪೊಲೀಸ್ ತಂಡ ಸೇರಿದಂತೆ 44 ವಿವಿಧ ತಂಡಗಳು ಪಂಥ ಸಂಚಲನದಲ್ಲಿ ಪಾಲ್ಗೊಂಡಿದ್ದವು. ಶಾಲಾ ಮಕ್ಕಳು ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶಿಸಿದರು.

ಶಾಸಕ ಎಚ್.ಎಸ್. ಪ್ರಕಾಶ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ಶ್ವೇತಾ ದೇವರಾಜ್, ವಿಧಾನ ಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಉಪ ವಿಭಾಗಾಧಿಕಾರಿ ಎಚ್‌.ಎಲ್‌. ನಾಗರಾಜ್, ಹುಡಾ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಜಾನಕಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ, ನಗರಸಭೆ ಅಧ್ಯಕ್ಷ ಎಚ್‌.ಎಸ್‌. ಅನಿಲ್‌ ಕುಮಾರ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಕಲಾ ಕಾಲೇಜು ಪ್ರಥಮ
ಶಾಲಾ, ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಸ್ಕೌಟ್‌ ಗೈಡ್‌್, ಪೊಲೀಸ್‌ ಇಲಾಖೆ ಆಕರ್ಷಕ ಪಥಸಂಚಲನ ನಡೆಸಿದವು. ಉತ್ತಮ ತಂಡಗಳಿಗೆ ಬಹಮಾನ ನೀಡಲಾಯಿತು. ಸರ್ಕಾರಿ ಕಲಾ ಕಾಲೇಜಿನ ಎನ್‌ಸಿಸಿ ತಂಡ ಪ್ರಥಮ ಬಹುಮಾನ, ವಿವೇಕಾನಂದ ಪ್ರೌಢಶಾಲೆ ದ್ವಿತೀಯ ಹಾಗೂ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆ ಮೂರನೇ ಬಹುಮಾನ ಪಡೆಯಿತು.

ಸರ್ವೋತ್ತಮ ಪ್ರಶಸ್ತಿ ಪ್ರದಾನ

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಹರೀಶ್, ಸಕಲೇಶಪುರ ತಾಲ್ಲೂಕು ಗ್ರೇಡ್-1 ತಹಶೀಲ್ದಾರ್‌ ಜೆ.ಬಿ. ನಾಗಭೂಷಣ್, ಚನ್ನರಾಯಪಟ್ಟಣ ಸೋಸಲಗೆರೆ ಗ್ರಾಮದ ಗ್ರಾಮ ಲೆಕ್ಕಿಗರಾದ ಎಂ.ಬಿ. ದೀಪಾ, ಬೇಲೂರು ತಾಲ್ಲೂಕು ಅನುಘಟ್ಟ ವೃತ್ತ ಗ್ರಾಮ ಲೆಕ್ಕಿಗ ಡಿ.ಆರ್ ಹನುಮಂತು, ಹಾಸನ ಹಿಮ್ಸ್‌ನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಕೆ ನೇತ್ರಾವತಿ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT