ಸೋಲದ ದೆಹಲಿಯ ‘ಸಂತೆ’

7

ಸೋಲದ ದೆಹಲಿಯ ‘ಸಂತೆ’

Published:
Updated:
ಸೋಲದ ದೆಹಲಿಯ ‘ಸಂತೆ’

ದಶಕದಿಂದ ಈಚೆಗೆ ನಗರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಶಾಪಿಂಗ್‌ ಮಾಲ್‌ಗಳು ಭಾರಿ ಪ್ರಮಾಣದಲ್ಲಿ ತಲೆ ಎತ್ತಿವೆ. ಒಂದೇ ಸೂರಿನಡಿ ಎಲ್ಲ ವಸ್ತುಗಳೂ ದೊರೆಯುತ್ತವೆ ಎಂಬ ಕಾರಣದಿಂದ ಗ್ರಾಹಕರೂ ಅವುಗಳ ಆಕರ್ಷಣೆಗೆ ಒಳಗಾಗಿದ್ದು ಸುಳ್ಳಲ್ಲ. ಮಧ್ಯಮ, ಕೆಳ ಮಧ್ಯಮ ವರ್ಗದವರೂ, ಬಡವರೂ ಅಕಸ್ಮಾತ್‌ ಆ ಮಾಲ್‌ಗಳಿಗೆ ಹೋದರೆ ದಿಕ್ಕೇ ತೋಚುತ್ತಿಲ್ಲ ಎಂಬಂತಾದರೆ ಅದು ಅವರ ತಪ್ಪಲ್ಲ. ಯಾಕೆಂದರೆ ಮಾಲ್‌ಗಳು ಸಿರಿವಂತರ ಪಾಲಿನ ಸ್ವರ್ಗ.

₹ 200ಕ್ಕೆ ಅರ್ಧ ಡಜನ್‌ ಬಾಳೆಹಣ್ಣು, ಸಾವಿರದ ದರದಲ್ಲಿ ಅಲ್ಪೋಪಹಾರ, ಲಕ್ಷ ರೂಪಾಯಿ ಬೆಲೆಯ ಬೂಟು, ₹ 20 ಲಕ್ಷಕ್ಕೆ ಒಂದು ಸಣ್ಣ ಕೈಗಡಿಯಾರ, ಅಲ್ಲಿ ಮಾರಾಟಕ್ಕೆ ಲಭ್ಯ. ಥರಹೇವಾರಿ ಬಟ್ಟೆ– ಬರೆ ದೊರೆಯುವ ದೊಡ್ಡ ದೊಡ್ಡ ಅಂಗಡಿಗಳ ಬಾಗಿಲುಗಳೂ ಅಲ್ಲಿ ಹಣವಂತರಿಗಾಗಿಯೇ ತೆರೆದುಕೊಂಡಿವೆ. ಅಲ್ಲಿ ಏನುಂಟು ಏನಿಲ್ಲ ಎಂಬುದನ್ನು ಹೇಳುವುದಕ್ಕೇ ಆಗುವುದಿಲ್ಲ.

ಈಗೀಗ ಮಧ್ಯಮ ವರ್ಗದವರೂ ಮಾಲ್‌ಗಳ ಮೋಡಿಗೆ ಒಳಗಾಗಿ ಬೇಕೆಂದಿದ್ದನ್ನು ದುಬಾರಿ ದರ ತೆತ್ತು, ತರಲು ಶುರು ಮಾಡಿದ್ದಾರೆ. ಆದರೂ, ಅಂಥವರ ಸಂಖ್ಯೆ ವಿರಳ. ಅದೇನಿದ್ದರೂ ಹಣವಂತರ ‘ಆಟದ ಮೈದಾನ’. ಹಾಗಾದರೆ, ಪಾರಂಪರಿಕ ಮಾರುಕಟ್ಟೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಧುನಿಕತೆಯ ಭರಾಟೆಯ ನಡುವೆಯೂ ಸಾಂಪ್ರದಾಯಿಕವಾದ ಸಂತೆಗಳು ಉಸಿರಾಡುತ್ತಿವೆ. ಜೀವಂತಿಕೆಯಿಂದ ನಳನಳಿಸುತ್ತಿವೆ. ಆಧುನೀಕತೆಯ ಭರಾಟೆ ಅಡಿ ಬೆಳಕು ಪಡೆದಿರುವುದು ಮಾಲ್ ಸಂಸ್ಕೃತಿ. ಆದರೆ, ದೆಹಲಿವಾಸಿಗಳು ಆ ಸಂಸ್ಕೃತಿಗೆ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ಸಮರ್ಪಿಸಿಕೊಳ್ಳದೆ ಸ್ಥಳೀಯ, ಸಾಂಪ್ರದಾಯಿಕ ಮಾರುಕಟ್ಟೆಗಳ ಅಸ್ತಿತ್ವಕ್ಕೆ ಪೋಷಕರಾಗಿರುವುದು ಅಚ್ಚರಿಯೇನಲ್ಲ.

ಮಾಲ್‌ ಸಂಸ್ಕೃತಿ ಎಷ್ಟೇ ಆಕರ್ಷಿಸಿದರೂ ನಿಗದಿತ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ನಡೆಯುತ್ತಿರುವ ‘ಸಂತೆ’ಗಳತ್ತಲೇ ಮುಕ್ಕಾಲು ಭಾಗದಷ್ಟು ದೆಹಲಿಗರಿಗೆ ಎಲ್ಲಿಲ್ಲದ ಪ್ರೀತಿ. ‘ಕೈಗೆಟುಕಲಾರದ ದರದ, ಚೌಕಾಶಿಗೆ ಆಸ್ಪದವನ್ನೇ ನೀಡದ ಮಾಲ್‌ಗಳ ಉಸಾಬರಿ ನಮಗೇಕೆ’ ಎಂದೇ ಭಾವಿಸಿದಂತಿದೆ. ಮಧ್ಯಮ, ಕೆಳ ಮಧ್ಯಮ ಮತ್ತು ಬಡ ವರ್ಗದ ಜನರ ‘ಬೇಕು– ಬೇಡ’ಗಳನ್ನು ಪೂರೈಸುವ ಈ ಸಂತೆಗಳು ಈಗಲೂ ಅಚ್ಚುಮೆಚ್ಚಿನ ಖರೀದಿ ಕೇಂದ್ರಗಳಾಗಿ ಜೀವಂತಿಕೆ ಉಳಿಸಿಕೊಂಡಿವೆ. ವಿಭಿನ್ನ ಭಾಷೆ ಮತ್ತು ಸಂಸ್ಕೃತಿಯ ಅಂದಾಜು ಎರಡೂ ಕಾಲು ಕೋಟಿಯಷ್ಟು ಜನ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಕನಸುಗಳನ್ನು ಕಾಣುವವರಿಗೆ ಪೂರಕ ವಾತಾವರಣ ಕಲ್ಪಿಸಿಕೊಡುವಂತಹ ಬೆರಗಿನ ಈ ಶಹರದ ಮೇಲೆ ‘ಹಳೆಯದು’ ಮತ್ತು ‘ಹೊಸತು’ ಎಂಬ ಛಾಯೆ ಇದೆ. ‘ಇಲ್ಲಿ ವಾಸಿಸುತ್ತಿರುವ ಬಹುತೇಕರು ಆಧುನಿಕತೆಗೆ ಮಾರು ಹೋದವರೇ! ಮಾರುಹೋಗದವರು ಇಲ್ಲಿ ವಿರಳಾತಿ ವಿರಳ ಅಥವಾ ಇಲ್ಲವೇ ಇಲ್ಲ’ ಎಂಬ ಮಾತು ಕೇಳಿಬರುತ್ತದೆ. ಆದರದು ಅರ್ಧ ಸತ್ಯ.ಅಧಿಕಾರಶಾಹಿ ಮತ್ತು ಆಡಳಿತಶಾಹಿಯ ಹಿಡಿತಕ್ಕೆ ಸಿಲುಕಿರುವ ಈ ನಗರದಲ್ಲಿ ದೇಶದ ಎಲ್ಲಾ ಭಾಗಗಳ, ಎಲ್ಲಾ ಭಾಷಿಕ ಜನಸಮೂಹವೇ ಇದೆ. ದೇಶ– ವಿದೇಶಗಳ ಜನರೂ ನೆಲೆ ನಿಂತಿದ್ದಾರೆ. ಎರಡೂವರೆ ನಿಮಿಷಕ್ಕೊಂದರಂತೆ ನಭದಿಂದ ಇಳಿಯುವ ವಿಮಾನಗಳು, ದೇಶದೆಲ್ಲೆಡೆಯಿಂದ ಬರುವ ರೈಲುಗಳು ಹೊತ್ತು ತರುವ ಪ್ರಯಾಣಿಕರ ಸಂಖ್ಯೆಯೇ ದಿನವೊಂದಕ್ಕೆ 25 ಲಕ್ಷದಷ್ಟಿದೆ.

ಈ ನಗರದ ಒಟ್ಟು ವ್ಯಾಪ್ತಿಗೆ ‘ರಾಷ್ಟ್ರ ರಾಜಧಾನಿ ವಲಯ’ (ಎನ್‌ಸಿಆರ್‌) ಎಂಬ ಹೆಸರೂ ಇದೆ. ಹೊಟ್ಟೆ ಹೊರೆಯಲು ಕೆಲಸ ಅರಸಿ ಬಂದಂತಹ ವಲಸಿಗರಿಂದಲೇ ಬಹುತೇಕವಾಗಿ ತುಂಬಿಕೊಂಡಿರುವ ಈ ಊರಿನಲ್ಲಿ ಮೂಲ ನಿವಾಸಿಗಳೂ ಇದ್ದಾರೆ. ಹಿಂದೆಂದೋ ಬಂದು ಇಲ್ಲಿ ಬೇರೂರಿದವರೇ ಇಲ್ಲಿನ ಮೂಲದವರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ವಸತಿ ವ್ಯವಸ್ಥೆ ಇರುವ ನವದೆಹಲಿಗೂ, ಬಡ ಕಾರ್ಮಿಕ ವರ್ಗದವರು ವಾಸಿಸುವ ಹಳೆಯ ದೆಹಲಿಗೂ, ಅಪಾರ್ಟ್‌ಮೆಂಟ್‌ಗಳ ಮಹಡಿಗಳಲ್ಲಿ ಲಕ್ಷಾಂತರ ಜನರಿಗೆ ಬೆಚ್ಚನೆಯ ಗೂಡನ್ನು ನೀಡಿರುವ ಉತ್ತರಪ್ರದೇಶದ ನೊಯಿಡಾ, ಘಾಜಿಯಾಬಾದ್‌ಗಳಿಗೂ, ಹರಿಯಾಣದ ಗುರುಗ್ರಾಮಗಳಿಗೂ ವ್ಯಾಪಿಸಿರುವ ಮಾಲ್‌ ಸಂಸ್ಕೃತಿಯ ನಡುವೆಯೇ 400ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ವಾರದ ಸಂತೆಗಳು ಸಣ್ಣ ವ್ಯಾಪಾರಿಗಳ ಅಸ್ತಿತ್ವವನ್ನು ಸಾರುತ್ತಿವೆ. ಬಡವರಿಗೂ ಆಸರೆಯಾಗಿ ಉಳಿದುಕೊಂಡಿವೆ.

ಹತ್ತಾರು ಕಿಲೋ ಮೀಟರ್‌ ವ್ಯಾಪ್ತಿಯ ಒಂದು ಪ್ರದೇಶದ ಕೆಲವೆಡೆ, ನಿಗದಿಪಡಿಸಿದ ಆಯಾ ವಾರದ ದಿನ ನಡೆಯುವ ಸಂತೆಗಾಗಿ ಇಲ್ಲಿನವರ ಮನಸ್ಸು ಸದಾ ಹಾತೊರೆಯುತ್ತದೆ. ಸಾಮಾನ್ಯರಲ್ಲೇ ಸಾಮಾನ್ಯರು ಅನ್ನಿಸಿಕೊಂಡವರು ಮಾತ್ರವಲ್ಲದೆ, ಉಳ್ಳವರೂ ಆಕರ್ಷಣೆಗೆ ಒಳಗಾಗುವುದು ಈ ಮಾರುಕಟ್ಟೆಯ ವೈಶಿಷ್ಟ್ಯ.

ಭಾನುವಾರದಿಂದ ಸೋಮವಾರದವರೆಗೆ ಪ್ರಮುಖ ರಸ್ತೆಗಳೇ ಸಂತೆಗೆ ವೇದಿಕೆ ಒದಗಿಸುತ್ತವೆ. ಮಧ್ಯಾಹ್ನದ ನಂತರ ಸಂತೆಗಳಿಗಾಗಿ ಆ ರಸ್ತೆಯಲ್ಲಿನ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ರಸ್ತೆಯ ವಿಭಜಕದಲ್ಲೂ, ಅತ್ತ ಇತ್ತ ಇರುವ ಪಾದಚಾರಿ ಮಾರ್ಗದಲ್ಲೂ ನೂರಾರು ಅಂಗಡಿಗಳು ನೋಡನೋಡುತ್ತಿದ್ದಂತೆಯೇ ತಲೆ ಎತ್ತುತ್ತವೆ. ಇಂತಹ ಸಂತೆಗಳಿಗೆ ತಮ್ಮನ್ನು ಹೊಂದಿಸಿಕೊಂಡಿರುವ ವ್ಯಾಪಾರಿಗಳು, ಮಧ್ಯಾಹ್ನದ ವೇಳೆಗೆ ತಮಗೆ ಗೊತ್ತುಪಡಿಸಿದ ಜಾಗೆಗಳಲ್ಲಿ ಕಬ್ಬಿಣದ ಸರಳುಗಳನ್ನು ನೆಟ್ಟು, ಮೇಲೊಂದು, ಹಿಂದೊಂದು, ಅಕ್ಕಪಕ್ಕದಲ್ಲೆರಡು ತಗಡಿನ ಶೀಟ್‌ ಜೋಡಿಸಿ ಶೆಡ್ಡು ಹಾಕಲು ಆರಂಭಿಸುತ್ತಾರೆ (ಇದನ್ನು ಕಂಡೇ ‘ಸಂತೆಯ ಹೊತ್ತಿಗೆ ಮೂರು ಮೊಳ’ ಎಂಬ ಗಾದೆ ಸೃಷ್ಟಿಯಾಗಿರಲೂಬಹುದು). ಸೂರ್ಯ ಮುಳುಗಿ ಕತ್ತಲು ಆವರಿಸುತ್ತಿದ್ದಂತೆಯೇ ಝಗಮಗಿಸುವ ವಿದ್ಯುದ್ದೀಪಗಳ ಅಡಿಯಲ್ಲಿ ಹಣ ಎಣಿಸುವ ವ್ಯಾಪಾರ ಶುರುವಿಟ್ಟುಕೊಳ್ಳುತ್ತಾರೆ. ಎಲ್ಲೆಲ್ಲಿಂದಲೋ ಬಂದು ಸೇರುವ ಜನಜಂಗುಳಿ, ತಮ್ಮಿಷ್ಟದ ವಸ್ತುಗಳನ್ನು ಖರೀದಿಸಲು ಆರಂಭಿಸಿದಾಗ ಸಂಜೆ ಕಳೆದಿರುತ್ತದೆ. ರಾತ್ರಿ 11ರವರೆಗೂ ನಡೆಯುವ ಈ ಸಂತೆಯ ಮೋಹಕತೆಗೆ ಮಾರು ಹೋಗದವರೇ ಇಲ್ಲ. ಖಾಲಿ ಕೈಯಿಂದ ಬರುವವರು ಮನೆಗೆ ಮರಳುವಾಗ ಅವರು ತಂದಿದ್ದ ಖಾಲಿ ಚೀಲಗಳು ಭರ್ತಿಯಾಗಿರುತ್ತವೆ.

ಪಾತ್ರೆ, ಬಟ್ಟೆ– ಬರೆ, ಕಾಳು– ಕಡಿ, ಹಾಸಿಗೆ– ಹೊದಿಕೆ, ದಿನಸಿ, ತರಕಾರಿ, ಚಳಿಯಿಂದ ರಕ್ಷಣೆ ನೀಡುವ ಸ್ವೆಟರ್‌, ಬಿಸಿಲ ಬೇಗೆಗೆ ಬಳಲದಂತೆ ತಡೆಯುವ ಟೋಪಿ, ಕಾಲಿನ ಸೌಂದರ್ಯ ಹೆಚ್ಚಿಸುವ ಚಪ್ಪಲಿ– ಶೂ, ಸಾಕ್ಸು, ಮುಖದ ಸುಕ್ಕನ್ನು ಮುಚ್ಚಿಡುವ ಸ್ನೋ– ಪೌಡರ್‌ ಬಾಕ್ಸು... ಚಿಕ್ಕಮಕ್ಕಳು, ಹದಿಹರೆಯದವರು, ವೃದ್ಧರು ಹಾಗೂ ವಿಶೇಷವಾಗಿ ಮಹಿಳೆಯರಿಗೆ ಬೇಕಾಗುವ ಪ್ರತಿ ವಸ್ತುವೂ ಈ ಸಂತೆಗಳಲ್ಲಿ ಲಭ್ಯ. ಅದೂ ಸುಲಭದ ದರಕ್ಕೆ.

ಯಾವುದಾದರೂ ಒಂದು ವಸ್ತು ನಿಮ್ಮನ್ನು ಸೆಳೆಯಿತೆಂದರೆ, ಅಂಗಡಿಯವನು ಹೇಳಿದ ದರ ನಿಮಗೆ ಹೆಚ್ಚೆನ್ನಿಸಿದರೆ ಧಾರಾಳವಾಗಿ ಚೌಕಾಶಿಗೆ ಇಳಿಯಬಹುದು. ಅದಕ್ಕೆ ಇಲ್ಲಿ ಮುಕ್ತ ಅವಕಾಶ ಉಂಟು. ಅದನ್ನು ನಿರೀಕ್ಷಿಸಿಯೂ ಇರುವ ವ್ಯಾಪಾರಿಗೆ ನಿಮ್ಮನ್ನು ಬಿಟ್ಟೂ ಕೊಡದ, ಮುಂದಕ್ಕೆ ಹೋಗಲೂ ಬಿಡದಂತಹ ಭಾವ. ಖರೀದಿಸಲೇಬೇಕೆಂಬ ಆಮಿಷಕ್ಕೆ ಸಿಲುಕಿಸಿ ಖರೀದಿಗೆ ಪ್ರೇರೇಪಿಸುವುದು ಆತನಿಗೆ ಸಿದ್ಧಿಸಿರುವ ಕಲೆ.

ಖರೀದಿಸಿ ಮುನ್ನುಗ್ಗುವಾಗ ‘ವ್ಯಾಪಾರಿಯನ್ನು ಬಗ್ಗಿಸಿದೆ’ ಎಂಬ ಸಂತೃಪ್ತಿ ಕೊಳ್ಳುವವನದ್ದಾಗಿರುತ್ತದೆ. ಆತನಿಂದಾಗಿ ಅಷ್ಟಿಷ್ಟು ಲಾಭ ಲಭಿಸಿತು ಎಂಬ ಉಮೇದಿಯೂ ಆ ವ್ಯಾಪಾರಿಯದ್ದಾಗಿರುತ್ತದೆ.

ದಕ್ಷಿಣ ದೆಹಲಿಯಲ್ಲಿನ ಪುಷ್ಪ ವಿಹಾರದಲ್ಲಿ ಸೋಮವಾರ, ಜಂಗ್‌ಪುರ್‌ ಬೋಗಲ್‌ನಲ್ಲಿ ಮಂಗಳವಾರ, ಗೋವಿಂದ್‌ಪುರಿಯಲ್ಲಿ ಬುಧವಾರ, ಸೌಥ್‌ ಎಕ್ಸ್‌ ಮಸ್ಜಿದ್‌ ಮೋಟ್‌ನಲ್ಲಿ ಗುರುವಾರ, ಆರ್‌.ಕೆ. ಪುರಂನ ಸೆಕ್ಟರ್‌ 2ರಲ್ಲಿ ಶುಕ್ರವಾರ, ಲಾಜ್‌ಪತ್‌ನಗರದಲ್ಲಿ ಶನಿವಾರ, ಆರ್‌.ಕೆ. ಪುರಂ ಸೆಕ್ಟರ್‌ 7ರಲ್ಲಿ ಭಾನುವಾರಗಳಂದು ವಾರದ ಸಂತೆ ನಡೆಯುತ್ತದೆ. ಇದೇ ರೀತಿ ಪೂರ್ವ, ಪಶ್ಚಿಮ ಮತ್ತು ಉತ್ತರ ದೆಹಲಿಯಲ್ಲಿನ ವಿವಿಧೆಡೆ ಆಧುನಿಕ ಮಾರುಕಟ್ಟೆಗಳಾದ ಮಾಲ್‌ಗಳು ನೂರಾರು ವರ್ಷಗಳಿಂದ ನಿರಂತರ ನಡೆಯುತ್ತಿರುವ ಈ ಸಂತೆಗಳಿಗೆ ಸೆಡ್ಡು ಹೊಡೆದಿದ್ದರೂ ಅವು ಬಗ್ಗಿಲ್ಲ. ಜನರೂ ಈ ಸಂತೆಗಳ ಕೈಬಿಟ್ಟಿಲ್ಲ.

‘ಸೋಮವಾರದಿಂದ ಶನಿವಾರದವರೆಗೆ ಕೆಲಸಕ್ಕೆ ಹೋಗುವ ನನಗೆ ಭಾನುವಾರ ರಜೆ. ಆ ರಜೆಯ ದಿನವನ್ನು ಮಾರುಕಟ್ಟೆಗೆ ಹೋಗಿ ಕಳೆಯಲು ನನಗೆ ಇಷ್ಟವಿಲ್ಲ. ನಮ್ಮ ಏರಿಯಾದಲ್ಲೇ ಶುಕ್ರವಾರ ನಡೆಯುವ ಸಂತೆ, ಸಂಜೆ ನಡೆಯುವುದರಿಂದ ಕೆಲಸದಿಂದ ಮರಳಿದ ನಂತರ ಮನೆಯವರನ್ನೆಲ್ಲ ಕರೆದುಕೊಂಡು ಹೋಗಿ ಬೇಕಾದದ್ದನ್ನೆಲ್ಲ ಖರೀದಿಸಿಕೊಂಡು ಬರುತ್ತೇನೆ. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಸಾವಿರಕ್ಕೆ ದೊರೆಯುವ ವಸ್ತು ಇಲ್ಲಿ ಇನ್ನೂರು, ಮುನ್ನೂರಕ್ಕೆ ಸಿಗುತ್ತದೆ’ ಎಂದು ಖಾಸಗಿ ಸಂಸ್ಥೆಯೊಂದರ ನೌಕರಾಗಿರುವ ವಸಂತವಿಹಾರದ ನಿವಾಸಿ ಸೌರವ್‌ ತ್ರಿವೇದಿ ಹೇಳುತ್ತಾರೆ.

‘60 ವರ್ಷಗಳಿಂದಲೂ ನಮ್ಮ ಕುಟುಂಬ ಈ ಸಂತೆಯ ವ್ಯಾಪಾರವನ್ನೇ ನೆಚ್ಚಿಕೊಂಡಿದೆ. ಒಂದು ದಿನ ಇಲ್ಲಿ, ಇನ್ನೊಂದು ದಿನ ಅಲ್ಲಿ ಎಂಬಂತೆ ನಮ್ಮ ವ್ಯಾಪಾರ ನಿರಂತರ ನಡೆಯುತ್ತಿದೆ. ನನ್ನ ಮೂವರು ಮಕ್ಕಳಲ್ಲಿ ಇಬ್ಬರು ಅಂಗಡಿ ಜೋಡಿಸುವ ಕೆಲಸದಲ್ಲಿ ತೊಡಗುತ್ತಾರೆ. ಸಗಟು ಖರೀದಿ ಜವಾಬ್ದಾರಿಯೂ ಅವರದೇ. ಇನ್ನೊಬ್ಬ ಮಗ ಸಂಜೆ ನಡೆಯುವ ವ್ಯಾಪಾರಕ್ಕೆ ನನ್ನೊಂದಿಗೆ ಕೈಜೋಡಿಸುತ್ತಾನೆ. ನಗರ ಬೆಳೆಯುತ್ತ ಸಾಗಿದೆ. ಈಗಂತೂ ಮೊದಲಿಗಿಂತ ಹೆಚ್ಚಿನ ಸಂಖ್ಯೆಯ ಜನ ಸಂತೆಗೆ ಬರುತ್ತಿದ್ದಾರೆ. ಮೊದಲು ಐದಾರು ಸಾವಿರ ರೂಪಾಯಿಯಷ್ಟು ಇದ್ದ ನಮ್ಮ ವ್ಯಾಪಾರ ಈಗ ಎರಡು ಲಕ್ಷಕ್ಕೆ ತಲುಪಿದೆ. ನಮ್ಮಲ್ಲಿ ಬಿಕರಿಯಾಗುವ ಬಟ್ಟೆಯತ್ತ ಯಾರಾದರೂ ನೋಟ ಬೀರಿದರೂ ನಾವು ಅವರನ್ನು ಮುಂದೆ ಕಳುಹಿಸುವುದಿಲ್ಲ. ಕಡೆಯ ಪಕ್ಷ 20 ರೂಪಾಯಿ ಲಾಭ ದೊರೆತರೂ ಪರವಾಗಿಲ್ಲ ಎಂದುಕೊಂಡು ಗ್ರಾಹಕ ಕೇಳಿದ ದರಕ್ಕೇ ಮಾರಾಟ ಮಾಡುತ್ತೇವೆ. ಒಮ್ಮೊಮ್ಮೆ ಅದೇ ಉತ್ಪನ್ನಕ್ಕೆ 50– 70 ರೂಪಾಯಿ ಲಾಭವೂ ಸಿಗುತ್ತದೆ. ದರ ಕಡಿಮೆ ಮಾಡುವ ನಮ್ಮ ನೀತಿಯೇ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ನೆರವಾಗಿದೆ’ ಎಂದು ತಿಳಿಸಿದ ಮುನಿರ್ಕಾದ ಜಗದೀಪ್‌ ಕೋಸ್ಲಾ ಅವರಿಗೆ ಈಗ 75ರ ಇಳಿವಯಸ್ಸು.

‘ಲಾಜ್‌ಪತ್‌ ನಗರದ ಶನಿವಾರ ಸಂತೆಯಲ್ಲಿ ಕೇವಲ 150 ರೂಪಾಯಿಗೆ ಶುದ್ಧ ಕಾಟನ್‌ನಿಂದ ತಯಾರಿಸಿದ ಬೆಡ್‌ಶೀಟ್‌ ದೊರೆಯಿತು. ಇದೇ ಮಾದರಿಯ ಬೆಡ್‌ ಶೀಟ್‌ಗೆ ಸರೋಜಿನಿ ನಗರ ಮಾರುಕಟ್ಟೆಯಲ್ಲಿನ ಅಂಗಡಿಯೊಂದರಲ್ಲಿ 275 ರೂಪಾಯಿ ದರ ಇದೆ. ದೊಡ್ಡ ಮಾಲ್‌ಗಳಲ್ಲಿ ಇದಕ್ಕೆ ಸಾವಿರ ರೂಪಾಯಿ ದರವಿದೆ. ನಮ್ಮಂತಹ ಮಧ್ಯಮ ವರ್ಗದ ಜನತೆಗೆ, ಅದರಲ್ಲೂ ಚೌಕಾಶಿ ಮಾಡಿಯೇ ಖರೀದಿಸುವ ನಮ್ಮಂತಹ ಮಹಿಳೆಯರಿಗೆ ಈ ಸಂತೆಗಳಲ್ಲಿ ಖರೀದಿಸುವುದೇ ಖುಷಿ ಕೊಡುತ್ತದೆ’ ಎಂದು ತಿಳಿಸಿದವರು ಡಿಫೆನ್ಸ್‌ ಕಾಲೊನಿಯ ಪಾಯಲ್‌ ಮೆಹ್ರಾ.

ಫ್ಯಾಷನ್‌ಗೆ ಆಕರ್ಷಿತರಾಗುವ ಯುವಜನತೆ ಧರಿಸುವ ಜೀನ್ಸ್‌ ಪ್ಯಾಂಟುಗಳು, ಟಿ ಶರ್ಟ್‌ಗಳು, ಟಾಪ್‌ಗಳು, ಬಣ್ಣಬಣ್ಣದ ಶೂಗಳು, ಬೆಲ್ಟ್‌, ಫಳಫಳ ಹೊಳೆಯುವ ಚಪ್ಪಲಿಗಳು, ಬ್ಯಾಗುಗಳು ನೂರಿನ್ನೂರು ರೂಪಾಯಿಗಷ್ಟೇ ದೊರೆಯುವುದರಿಂದ ಸಂತೆಗಳತ್ತಲೇ ಅವರಿಗೂ ಒಲವು.

ದೆಹಲಿಯಲ್ಲಿ ಇಂಥವೇ 427 ಸಂತೆಗಳು ಆಯಾ ವಾರಗಳಂದು ನಡೆಯುತ್ತವೆ. ಇವುಗಳಲ್ಲಿ 300 ಸಂತೆಗಳು ಮಹಾನಗರ ಪಾಲಿಕೆಗಳ ಉಸ್ತುವಾರಿಯಲ್ಲೇ ನಡೆದುಕೊಂಡು ಬರುತ್ತಿವೆ. ಮಿಕ್ಕ ಕಡೆ ನಡೆಯುವ ಸಂತೆಗಳನ್ನು ವ್ಯಾಪಾರಿಗಳೇ ಅಲ್ಲಲ್ಲಿ ಆರಂಭಿಸಿ ಬಡಜನರ ಬೇಡಿಕೆ ಪೂರೈಸುತ್ತಿದ್ದಾರೆ.ವಾರವಿಡೀ ಬೇಕಾಗುವ ತರಕಾರಿಯ ಜೊತೆಗೆ ದಿನಸಿ ಸಹ ಈ ಸಂತೆಗಳಲ್ಲಿ ಪ್ರತ್ಯೇಕವಾಗಿ ಮಾರಾಟಕ್ಕಿದೆ. ತಮ್ಮ ಮನೆಯವರ ದೈನಂದಿನ ಅಗತ್ಯಗಳನ್ನು ಪೂರೈಸುವ ಹೊಣೆ ಹೊತ್ತ ಮಹಿಳೆಯರ ದಂಡು ಈ ಸಂತೆಗಳಿಗೆ ಗುಂಪುಗುಂಪಾಗಿ ಹೋಗುವುದನ್ನು ರೂಢಿಸಿಕೊಂಡಿದೆ. ಕರ್ನಾಟಕದ ಪಟ್ಟಣ ಪ್ರದೇಶಗಳಲ್ಲಿ ಕಂಡು ಬರುವ ಸಂತೆಗಳಿಗೂ, ದೆಹಲಿಯ ಬಡಾವಣೆಗಳಲ್ಲಿನ ವಾರದ ಸಂತೆಗಳಿಗೂ ಅಂತಹ ವ್ಯತ್ಯಾಸವಂತೂ ಕಂಡುಬರುವುದಿಲ್ಲ. ಅಪ್ಪಟ ಗ್ರಾಮೀಣ ವಾತಾವರಣವೂ ಈ ಸಂತೆಗಳಲ್ಲಿ ಜೀವಂತ ಇದೆ.

***

ಪ್ರವಾಸಿಗರಿಗೂ ಮಾರುಕಟ್ಟೆಗಳಿವೆ!

ಉತ್ತರ ಭಾರತದ ಹೆಬ್ಬಾಗಿಲೇ ಆಗಿರುವ ದೆಹಲಿಗೆ ಬರುವ ಪ್ರವಾಸಿಗರ ಅಚ್ಚುಮೆಚ್ಚಿನ ನಿರ್ದಿಷ್ಟ ಮಾರುಕಟ್ಟೆಗಳೂ ಇವೆ.

ಇಲ್ಲಿನ ಕರೋಲ್‌ ಬಾಗ್‌, ಸರೋಜಿನಿ ನಗರ, ಕನಾಟ್‌ ಪ್ಲೇಸ್‌, ನೆಹರೂ ಪ್ಲೇಸ್‌, ಸೌಥ್‌ ಎಕ್ಸ್‌ಗಳಲ್ಲಿರುವ ಮಾರುಕಟ್ಟೆಗಳು ಪ್ರವಾಸಕ್ಕೆಂದು ಹೀಗೆ ಬಂದು ಹಾಗೆ ಹೋಗುವವರನ್ನು ಆಕರ್ಷಷಿಸುತ್ತವೆ.

ಈ ಮಾರುಕಟ್ಟೆಗಳಿಗೆ ಐತಿಹಾಸಿಕ ಹಿನ್ನೆಲೆ ಇದೆ. ನಿರ್ದಿಷ್ಟ ವಸ್ತುವಿಗೆಂದೇ ನಿಗದಿಯಾದ ಅಂಗಡಿಗಳ ಸಾಲುಗಳೂ ಇಲ್ಲಿವೆ. ಅತ್ಯಂತ ವ್ಯವಸ್ಥಿತವಾಗಿ ನಡೆಯುವ ಮಾರಾಟ ಪ್ರಕ್ರಿಯೆಯತ್ತ ಗ್ರಾಹಕರೂ ಸಹಜವಾಗಿಯೇ ಮಾರು ಹೋಗುತ್ತಾರೆ.

ಈ ಮಾರುಕಟ್ಟೆಗಳಲ್ಲಿ ಬ್ರಾಂಡೆಡ್‌ ಉತ್ಪನ್ನಗಳ ಮಾರಾಟ ಮಾಡುವ ಮಳಿಗೆಗಳೂ ಇವೆ. ಗ್ರಾಹಕರನ್ನು ಕೈಬೀಸಿ, ಕೂಗಿ ಕರೆಯುವ ಬೀದಿ ಬದಿಯ ವ್ಯಾಪಾರಿಗಳೂ ಇದ್ದಾರೆ. ಶಕ್ತಾನುಸಾರ ಖರೀದಿ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ.

ಬೇಸಿಗೆ ಮತ್ತು ಚಳಿಗಾಲಗಳಲ್ಲಿ ಈ ಮಾರುಕಟ್ಟೆಗಳ ಸ್ವರೂಪವೇ ಬದಲಾಗುತ್ತದೆ. ಚಳಿಗಾಲದಲ್ಲಿ ರಜಾಯಿ, ಥರ್ಮಲ್‌ ವೇರ್‌, ಸ್ವೆಟರು, ಕೈಗವಸು (ಗ್ಲೌಸ್‌), ಟೋಪಿ, ಮಫ್ಲರ್‌, ಜಾಕೆಟ್‌, ಕೋಟ್‌, ದುಪಟ್ಟಾ ಅಂಗಡಿಗಳೆದುರು ನೇತಾಡುತ್ತಿದ್ದರೆ, ಬೇಸಿಗೆಯಲ್ಲಿ ಕಾಟನ್‌ ಬಟ್ಟೆಗಳು ಆ ಜಾಗವನ್ನು ಆಕ್ರಮಿಸಿರುತ್ತವೆ.

ಎಲೆಕ್ಟ್ರಾನಿಕ್‌ ಸಾಮಗ್ರಿ ದೊರೆಯುವ ಮಾರುಕಟ್ಟೆ ಪ್ರತ್ಯೇಕವಾಗಿದೆ. ಮೊಬೈಲ್‌ ಫೋನ್‌ಗಳು ದೊರೆಯುವ ಮಳಿಗೆಗಳ ಸಾಲು, ರಿಪೇರಿ ಮಾಡುವ ಅಂಗಡಿಗಳ ಸಾಲು, ಫೋನ್‌ಗಳ ಕವರ್‌ಗಳ ಮಾರಾಟದ್ದೇ ಪ್ರತ್ಯೇಕ ವಾಣಿಜ್ಯ ಸಂಕೀರ್ಣಗಳು ಇಲ್ಲಿನ ಮಾರುಕಟ್ಟೆಗಳಲ್ಲಿ ಕಾಣಸಿಗುತ್ತವೆ. ಎಲೆಕ್ಟ್ರಿಕ್‌ ಸಾಮಗ್ರಿಗಳಿಗಾಗಿಯೇ ಒಂದಿಡೀ ಮಾರುಕಟ್ಟೆ ಇಲ್ಲುಂಟು. ಸಗಟು ಮತ್ತು ರೀಟೇಲ್‌ ವಹಿವಾಟಿನಲ್ಲೂ ವ್ಯಾಪಾರಿಗಳು ತೊಡಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry