ಐಎಸ್‌ ನೆಲೆಯಲ್ಲಿ ನಲುಗಿದವರ ನೈಜ ಕಥನ

7

ಐಎಸ್‌ ನೆಲೆಯಲ್ಲಿ ನಲುಗಿದವರ ನೈಜ ಕಥನ

Published:
Updated:
ಐಎಸ್‌ ನೆಲೆಯಲ್ಲಿ ನಲುಗಿದವರ ನೈಜ ಕಥನ

ನೈಜ ಘಟನೆಯ ಒಂದು ಎಳೆಯನ್ನಷ್ಟೆ ಎತ್ತಿಕೊಂಡು ಅದಕ್ಕೆ ಕಾಲ್ಪನಿಕ ಸಂಗತಿಗಳನ್ನು ಬೆರೆಸಿ ಒಂದೂವರೆ ತಾಸಿನ ರೋಚಕ ಸಿನಿಮಾ ಮಾಡಿ ಪ್ರೇಕ್ಷಕರನ್ನು ಸೆಳೆಯುವುದು ಸುಲಭ. ನೈಜ ಘಟನೆಯನ್ನು ಯಥಾವತ್ತಾಗಿ ತೆರೆಗೆ ತರುವ ಪ್ರಯತ್ನವೂ ಕೆಲವೊಮ್ಮೆ ಸೋಲಬಹುದು. ನೈಜ ಘಟನೆಯೇ ರೋಚಕವಾಗಿದ್ದರೆ ಸಿನಿಮಾಕ್ಕೆ ದೊಡ್ಡಮಟ್ಟದ ಯಶಸ್ಸು ದಕ್ಕುತ್ತದೆ ಎನ್ನುವುದಕ್ಕೆ 2017ರ ಮಲಯಾಳಂ ಚಿತ್ರ ‘ಟೇಕ್‌ ಆಫ್‌’ ಉತ್ತಮ ಉದಾಹರಣೆ.

ಈಚೆಗೆ ಗೋವಾದಲ್ಲಿ ನಡೆದ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ(ಇಫಿ)ದಲ್ಲಿ ‘ಟೇಕ್‌ ಆಫ್‌’ ದೊಡ್ಡಮಟ್ಟದಲ್ಲಿ ಗಮನ ಸೆಳೆಯಿತು. ಚಿತ್ರದ ನಾಯಕಿ ಟಿ.ಕೆ. ಪಾರ್ವತಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ತಂದು ಕೊಟ್ಟಿತು. ಇಫಿಯ ಇತಿಹಾಸದಲ್ಲಿ ಭಾರತೀಯ ನಟಿಯೊಬ್ಬರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದದ್ದು ಇದೇ ಮೊದಲು. ನಿರ್ದೇಶಕ ಮಹೇಶ್‌ ನಾರಾಯಣನ್‌ ಜ್ಯೂರಿ ಪ್ರಶಸ್ತಿ ಪಡೆದುಕೊಂಡರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಪ್ರಶಸ್ತಿಗಳೇ ಸಿನಿಮಾದ ಯಶಸ್ಸಿನ ಮಾನದಂಡ ಅಲ್ಲ. ‘ಟೇಕ್‌ ಆಫ್‌’ ಚಿತ್ರದ ಯಶಸ್ಸಿನ ದೊಡ್ಡ ಪಾಲು, ನೈಜ ಘಟನೆಗಳನ್ನು ಸಿನಿಮಾಗೆ ಅಳವಡಿಸುವಲ್ಲಿ ನಿರ್ದೇಶಕ ಮಹೇಶ್‌ ತೋರಿದ ವೃತ್ತಿಪರತೆಗೆ ಸಲ್ಲುತ್ತದೆ.

ಭಾರತದಿಂದ ಇರಾಕ್‌ಗೆ ದುಡಿಯಲು ಹೋದ ಕೇರಳದ 19 ನರ್ಸ್‌ಗಳು ಅಲ್ಲಿನ ಐಎಸ್‌ ಉಗ್ರರ ಒತ್ತೆಯಾಳಾಗಿ ಅನುಭವಿಸುವ ಕಷ್ಟಗಳು, ಮಾನಸಿಕ ವೇದನೆ, ಅಸಹಾಯಕತೆಗಳನ್ನು ‘ಟೇಕ್‌ ಆಫ್‌’ ಕಟ್ಟಿಕೊಡುತ್ತದೆ. 2014ರ ಜುಲೈ ತಿಂಗಳಲ್ಲಿ ನಡೆದ ಘಟನೆ ಇದು. ಐಎಸ್‌ ಉಗ್ರರ ಹಿಡಿತದಲ್ಲಿ ಸಿಕ್ಕಿಕೊಂಡ ನರ್ಸ್‌ಗಳು ಸುರಕ್ಷಿತರಾಗಿ ಹಿಂದಕ್ಕೆ ಬರುವರೇ ಎಂಬುದು ಆಗ ದೊಡ್ಡ ಪ್ರಶ್ನೆಯಾಗಿ ದೇಶದ ಗಮನ ಸೆಳೆದಿತ್ತು. ಭಾರತ ಸರ್ಕಾರಕ್ಕೂ ಸವಾಲಾಗಿತ್ತು. ಭಾರತ ಸರ್ಕಾರ, ಇರಾಕ್‌ನ ಭಾರತದ ರಾಯಭಾರಿ, ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಗಳ ಎಚ್ಚರಿಕೆಯ ನಡೆ, ನರ್ಸ್‌ಗಳು ತೋರಿದ ಜಾಣ್ಮೆ, ಅವರ ಕುಟುಂಬದವರ ಪ್ರಾರ್ಥನೆ, ದೇಶದ ಕೋಟ್ಯಂತರ ಜನರ ಹಾರೈಕೆಗಳೆಲ್ಲ ಸೇರಿಕೊಂಡು ಈ ಪ್ರಕರಣ ಸುಖಾಂತ್ಯ ಕಂಡಿತ್ತು.

ಐಎಸ್‌ ಉಗ್ರರ ಅಟ್ಟಹಾಸ, ರಕ್ತದಾಹ, ಇರಾಕ್‌ ಸರ್ಕಾರದ ಅಸಹಾಯಕತೆಗಳೇ ಅಲ್ಲದೆ ಕೊಲ್ಲಿ ರಾಷ್ಟ್ರಗಳಿಗೆ ದುಡಿಯಲು ಹೋಗುವ ಭಾರತೀಯ ಹೆಣ್ಣುಮಕ್ಕಳ ಅಸಹಾಯಕತೆ, ಅವರ ಕುಟುಂಬಗಳ ಆರ್ಥಿಕ ದುಸ್ಥಿತಿಗಳ ಮೇಲೂ ಚಿತ್ರ ಗಮನ ಸೆಳೆಯುತ್ತದೆ. ಇರಾಕ್‌ನ ತಿಕ್ರಿತ್‌ ಮತ್ತು ಮೊಸುಲ್‌ ನಗರಗಳಲ್ಲಿ ನಡೆದ ಐಎಸ್‌ ಉಗ್ರರ ದಾಳಿಗಳು ಮತ್ತು ಅವರ ನೆಲೆಗಳ ದೃಶ್ಯಗಳನ್ನು ದುಬೈನಲ್ಲಿ ಚಿತ್ರೀಕರಿಸಲಾಗಿದೆ. ಈ ದೃಶ್ಯಗಳು ಚಿತ್ರಕ್ಕೆ ಅದ್ದೂರಿತನವನ್ನು ತಂದುಕೊಟ್ಟಿವೆ.

ಸಿನಿಮಾಕ್ಕಾಗಿ ಮೂಲ ಘಟನೆಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಐಎಸ್‌ ಉಗ್ರರ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದವರು ಮರೀನಾ ಜೋಸ್‌ ಎಂಬ ನರ್ಸ್‌.

ಚಿತ್ರದಲ್ಲಿ ಆ ಪಾತ್ರ ಮುಸ್ಲಿಂ ಯುವತಿ ಸಮೀರಾ ಆಗಿ ಬದಲಾಗಿದೆ. ಭಾರತದಿಂದ ಹೋಗಿದ್ದ ನರ್ಸ್‌ಗಳು ಐಸಿಸ್‌ ಉಗ್ರರ ದಾಳಿಗೆ ತುತ್ತಾದ ಇರಾಕ್‌ ಮತ್ತು ಲಿಬಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮರೀನಾ ಜೋಸ್‌ ಕೇರಳದ ಆಗಿನ ಮುಖ್ಯಮಂತ್ರಿ ಓಮನ್‌ ಚಾಂಡಿ ಅವರನ್ನು ಸಂಪರ್ಕಿಸಿ ಒತ್ತೆಯಾಳಾಗಿ ಸಿಕ್ಕಿಕೊಂಡಿರುವ ವಿಷಯ ತಿಳಿಸಿ ಸಹಾಯಕ್ಕಾಗಿ ಕೋರುತ್ತಾರೆ. ಚಾಂಡಿ ಅವರು ಭಾರತ ಸರ್ಕಾರವನ್ನು ಸಂಪರ್ಕಿಸುತ್ತಾರೆ. ಇರಾಕ್‌ನಲ್ಲಿರುವ ಭಾರತದ ರಾಯಭಾರಿ ಮತ್ತು ಕೊಲ್ಲಿ ರಾಷ್ಟ್ರವೊಂದರ ಅನಿವಾಸಿ ಭಾರತೀಯ(ಮಲೆಯಾಳಿ)ರ ಮಧ್ಯಸ್ಥಿಕೆಯ ಪ್ರಯತ್ನಗಳಿಂದ ನರ್ಸ್‌ಗಳ ಬಿಡುಗಡೆ ಆಗುತ್ತದೆ. ಐಎಸ್‌ ಸೇರುವ ಭಾರತೀಯ ಮುಸ್ಲಿಂ ಯುವಕರ ದಾರುಣ ಪರಿಸ್ಥಿತಿಯನ್ನೂ ಚಿತ್ರ ಸಾಂಕೇತಿಕವಾಗಿ ಹೇಳುತ್ತದೆ.

ಟಿ.ಕೆ. ಪಾರ್ವತಿ, ಸಮೀರಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ದಿಟ್ಟ ಮುಸ್ಲಿಂ ಯುವತಿಯಾಗಿ ಚಿತ್ರದ ಉದ್ದಕ್ಕೂ ವಿಜೃಂಭಿಸಿದ್ದಾರೆ. ಕೇರಳದ ಮುಸ್ಲಿಂ ಹೆಣ್ಣುಮಕ್ಕಳ ಬಡತನ, ಅಪ್ಪನ ಸಾಲದ ಹೊರೆ ಇಳಿಸಲು ಮೊದಲ ಮದುವೆಯನ್ನು ಮುರಿದುಕೊಂಡು ಮಗನನ್ನೂ ಗಂಡನಿಗೆ ಒಪ್ಪಿಸಿ, ಎರಡನೆ ಮದುವೆಯಾಗಿ ಹೊರ ದೇಶಕ್ಕೆ ದುಡಿಯಲು ಹೊರಟು ನಿಲ್ಲುವ ಸಮೀರಾ ಪಾತ್ರದಲ್ಲಿ ಪಾರ್ವತಿ ಅಭಿನಯ ನೈಜವಾಗಿದೆ. ಕುಂಚಾಕೊ ಬೂಬನ್‌, ಫಹಾದ್‌ ಫಾಸಿಲ್‌, ಪ್ರಕಾಶ್‌ ಬೆಳವಾಡಿ ಮತ್ತಿತರರು ಚಿತ್ರದಲ್ಲಿದ್ದಾರೆ.

***

ಪಾರ್ವತಿಯ ಯಶಸ್ಸು

‘ಟೇಕ್‌ ಆಫ್‌’ ಚಿತ್ರದ ಮೂಲಕ ಟಿ.ಕೆ. ಪಾರ್ವತಿ ಈಗ ದೇಶದ ಸಿನಿಮಾ ಉದ್ಯಮ ಮತ್ತು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸೂಕ್ಷ್ಮ ಸಂವೇದನೆಯ ಪಾತ್ರಗಳ ಮೂಲಕ ಕೇರಳದಲ್ಲಿ ಮನೆ ಮಾತಾಗಿರುವ ಈ ನಟಿ ಕನ್ನಡ, ತಮಿಳು ಸಿನಿಮಾ ಪ್ರೇಕ್ಷಕರಿಗೂ ಪರಿಚಿತರು. ‘ಮಿಲನ’ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ ನಾಯಕಿಯಾಗಿ ನಟಿಸಿ ದೊಡ್ಡಮಟ್ಟದ ಯಶಸ್ಸು ಕಂಡಿದ್ದಾರೆ.ಟಿ.ಕೆ. ಪಾರ್ವತಿ

ನಾಯಕನ ಎದುರು ತೆರೆಯ ಮೇಲೆ ವಿಜೃಂಭಿಸುವ ಪಾತ್ರಗಳಿಗಿಂತ ಅಭಿನಯಕ್ಕೆ ಹೆಚ್ಚಿನ ಅವಕಾಶ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು, ಸಂವೇದನಾಶೀಲ ಅಭಿನಯದ ಮೂಲಕವೇ ಪ್ರವರ್ಧಮಾನಕ್ಕೆ ಬಂದ ಪಾರ್ವತಿ ನಟಿಸಿರುವ ಚಿತ್ರಗಳ ಸಂಖ್ಯೆ ದೊಡ್ಡದಲ್ಲ. ಆದರೆ, ಅಭಿನಯಿಸಿರುವ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುವಂತವು.

ಸಮೀರಾ ಪಾತ್ರದಲ್ಲಿ ಪಾರ್ವತಿಯ ನಟನೆ ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಕುಟುಂಬಕ್ಕೆ ನೆರವಾಗಲು ಕೊಲ್ಲಿ ರಾಷ್ಟ್ರಗಳಿಗೆ ದುಡಿಯಲು ಹೋಗಿ ಅಲ್ಲಿ ಸಂಕಷ್ಟಗಳಿಗೆ ಗುರಿಯಾಗುವ ಭಾರತೀಯ ಹೆಣ್ಣುಮಕ್ಕಳ ಪ್ರತಿನಿಧಿಯಂತೆ ಅವರ ವೇದನೆಗಳನ್ನೆಲ್ಲ ಆವಾಹಿಸಿಕೊಂಡವರಂತೆ ನಟಿಸಿದ್ದಾರೆ. ಗೋವಾ ಚಿತ್ರೋತ್ಸವದ ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿದ್ದ 12 ದೇಶಗಳ ಸಿನಿಮಾಗಳ ಪೈಪೋಟಿ ಎದುರಿಸಿ ‘ಟೇಕ್‌ ಆಫ್‌’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿ ಅವರ ಪ್ರತಿಭೆಗೆ ದೊರೆತ ಅಂತರರಾಷ್ಟ್ರೀಯ ಮನ್ನಣೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry