ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಯ ಮೇಲೆ ದಾಳಿ

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ಅದು ಅದಮ್ಯ ಜಲಪಾತ.

ಆ ರೌರವ ಕಾಡಿನ ಮಧ್ಯ ಇರುವ ಜಲಪಾತ ಅವನೆಂದೂ ನೋಡಿದ್ದಾಗಿರಲಿಲ್ಲ. ಇದು ಪಾತಾಳದಿಂದತ್ತತ್ತ ಬ್ರಹ್ಮಾಂಡದಿಂದ ಇತ್ತಿತ್ತ ಇರುವಂತಹುದು, ಆಕಾಶ ಭೂಮಿಯನು ಅಪ್ಪಿದಂತೆ ಕಾಣುವುದು, ಎತ್ತ ನೋಡಿದರೂ ನೀರು ನೀರು ನೀರು, ಎಂಥ ಅದಮ್ಯ ಕಾಡು, ಅದಮ್ಯ ಮಳೆ, ವಿಚಿತ್ರ ಪ್ರಾಣಿಗಳು, ಇಲ್ಲಿ ಎಂದು ಯೋಚಿಸುತ್ತಿರುವಾಗಲೇ ಅವಳು ‘ಜೈಟೋ ಭಾರೋ ರಾಖೋ’ ಎಂದು ಕೂಗಿದಳು.

ಅವಳ ಹೆಸರು ತಾಬೋ ಮುಬಾಕಿ. ಅವನು ಅವಳ ಮಾತಿಗೆ ಉತ್ತರವಾಗಿ ತಟ್ಟನೆ ಕಾಡು ಪೊದೆಗಳನು ದಾಟಿ ಹೊರಬರುವಾಗ ಈ ಸಿಖಾನೇವ ಆಫ್ರಿಕಾ ಭಾಷೆಯಲ್ಲಿ ಮತ್ತೆ ಮನ ಬಂದಂತೆ ಜೋರಾಗಿ ಚೀರಾಡುತ್ತಿದ್ದಳು ಅವಳು. ನಿಶ್ಚಿತವಾಗಿ ಅದು ಅವನಿಗೆ ಬಯ್ದ ಬೈಗುಳಗಳೇ ಎಂದು ಅವನು ಗ್ರಹಿಸಿದ. ಆದರೆ ಕಾರಣವೇನೆಂಬುವುದು ಅವನಿಗೆ ತಿಳಿಯಲಿಲ್ಲ. ಮತ್ತೆ ಆ ಫಾರ್ಮ್‌ ಮುಟ್ಟಿದಾಕ್ಷಣವೇ ಅವಳು ಸುರ್ಜಿತ್ ಸಿಂಗ್ ಖಾಲ್ಸಾಗೆ ಜೋರಾಗಿ ಚಾಡಿ ಹೇಳುವೋಪಾದಿಯಲಿ ಏನೋ ಹೇಳಿದಳು. ಅವನು ಏನು ಉತ್ತರ ಕೊಟ್ಟನೋ? ಅವಳು ಅಲ್ಲಿಂದ ಅದಮ್ಯ ಕಾಡು ಪೊದೆಗಳ ಮಧ್ಯೆ ಮಾಯವಾದಳು. ಆಮೇಲೆ ಸುರ್ಜಿತ್ ಎಲ್ಲವನ್ನೂ ಅವನ ಭಾಷೆಗೆ ಭಾಷಾಂತರಿಸಿದ.

‘ಇಲ್ಲಿ ಹೆಬ್ಬಾವು, ಕರಿಚಿರತೆ, ನರಭಕ್ಷಕ ಜನರೂ ಇದ್ದಾರೆ, ನೀನು ಶೌಚಕಾರ್ಯ ಮಾಡಲು ದಟ್ಟ ಅಡವಿಯೊಳಗೆ ಹೋದೆಯಂತೆ, ಅದಕೆ ಅವಳು ಗಾಬರಿಯಾಗಿದ್ದಳು. ನೀನು ಅವಳ ಪಕ್ಕದಲ್ಲೆ ಕುಳಿತುಕೊಳ್ಳಬೇಕಾಗಿತ್ತು. ಇಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲ. ಅವಳ ಪಕ್ಕದಲ್ಲೆ ಕುಳಿತರೆ ನಿನಗೇನೂ ಅಪಾಯವಿಲ್ಲ. ಇಲ್ಲದಿದ್ದರೆ ಯಾವುದಾದರೂ ಪ್ರಾಣಿಗಳಿಗೆ ಆಹಾರವಾಗುವೆ. ಟೇಕ್ ಕೇರ್, ಇಂತಹ ಸೂಕ್ಷ್ಮ ವಿಚಾರಗಳನ್ನು ನೀನು ಕಲಿಯಬೇಕು. ಅವರಾದರೆ ಅಪಾಯದ ಸಮಯದಲಿ ಒಂದು ವಿಚಿತ್ರವಾದ ಧ್ವನಿ ಹೊರಡಿಸಿ ಪ್ರಾಣಿಗಳನ್ನು ಹಿಮ್ಮೆಟ್ಟಿಸುತ್ತಾರೆ’ ಎಂದ.

ಅವನು ಕರ್ನಾಟಕದಿಂದ ಇಲ್ಲಿಗೆ ಬಂದಿದ್ದು, ತನ್ನ ಎಂ.ಎಸ್ಸಿ (ಅಗ್ರಿ) ಎಂಬ ಓದಿನ ಬಾಬತ್ತಿನ ಪ್ರತಿಫಲಕ್ಕಾಗಿ. ಅಲ್ಲಿ ನೌಕರಿ ಸಿಗದಿದ್ದಾಗ ಭ್ರಮನಿರಸನಗೊಂಡು ಸಾಯಲು ಸಜ್ಜಾಗಿ ಕೊನೆಯ ಅಸ್ತ್ರವಾಗಿ ಇಲ್ಲಿಗೆ ಬಂದಿದ್ದ. ಈ ಪಂಜಾಬಿಗಳು ನಡೆಸುವ ಆಫ್ರಿಕಾದ ಈ ಫಾರ್ಮ್‌ನಲ್ಲಿ ಮ್ಯಾನೇಜರ್ ಆಗಿ ಸೇರಿದ್ದ. ಅದರಲ್ಲಿ ಸುಮಾರು ಎರಡು ಸಾವಿರ ಪುನಗನ ಬೆಕ್ಕುಗಳ ನಿರ್ವಹಣಾ ಜವಾಬ್ದಾರಿಯನ್ನು ಇವನಿಗೆ ವಹಿಸಲಾಗಿತ್ತು. ಅವುಗಳಿಗೆ ಕಾಫಿ ಹಣ್ಣನ್ನು ತಿನ್ನಿಸುವುದು ಅದನ್ನು ಅಮೇಧ್ಯವಾಗಿ ವಿಸರ್ಜಿಸುವಂತೆ ಮಾಡುವುದು, ಆಮೇಲೆ ಕಾಫಿ ಬೀಜಗಳನ್ನು ಅಮೇಧ್ಯದಿಂದ ಬೇರ್ಪಡಿಸಿ ಅದನ್ನು ಪ್ರಕ್ರಿಯಾಕರಣ ಮಾಡಿ ಮಾರುಕಟ್ಟೆ ಮಾಡುವುದು... ಇದು ದಿನನಿತ್ಯದ ಕ್ರಿಯೆ. ಪುನಗನ ಬೆಕ್ಕಿನ ವಿಸರ್ಜನೆಯೊಂದಿಗೆ ಬಂದ ಆ ಕಾಫಿ ಬೀಜಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಇನ್ನೂರು ಪಟ್ಟು ಹೆಚ್ಚು ದರವಿದ್ದುದರಿಂದ ಇದು ಬಹು ಲಾಭದಾಯಕವೂ ಆಗಿತ್ತು. ಮತ್ತು ಮಾರುಕಟ್ಟೆಯೂ ಕಷ್ಟಕರವಾಗಿರಲಿಲ್ಲ. ಇದರ ಮಾರುಕಟ್ಟೆಯ ಬೇಡಿಕೆಯಷ್ಟು ಪೂರೈಕೆ ಇಲ್ಲದ್ದರಿಂದ ಮಾರುಕಟ್ಟೆಯ ಬೇಡಿಕೆಯನ್ನು ಮೀಟ್ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇತ್ತು. ಇದೇ ಬಾಸೂ ಸುರ್ಜಿತ್ ಸಿಂಗ್ ಸುಮಾರು ಹತ್ತು ವರ್ಷಗಳ ಕಾಲ ಕರ್ನಾಟಕದ ಬೀದರಿನಲ್ಲಿ ಇದ್ದನಂತೆ. ಅಲ್ಲಿಯ ಗುರುನಾನಕ ಮಂದಿರದ ಮುಂಭಾಗದಲ್ಲಿ ಒಂದು ಆಟೋಮೊಬೈಲ್ ಶಾಪ್ ಇಟ್ಟುಕೊಂಡಿದ್ದನಂತೆ. ಆದ್ದರಿಂದ ಅವನು ಕನ್ನಡವನ್ನು ಮಾತಾಡುವವನಾಗಿದ್ದ.

ಕಾಲ ಉರಳುತ್ತಿತ್ತು, ಬರಬರುತ್ತ ಆ ಬೆಕ್ಕುಗಳು ಮತ್ತು ಇವನ ಮಧ್ಯೆ ವ್ಯತ್ಯಾಸವೇ ಇಲ್ಲದಂತೆ ಆಗಿತ್ತು. ಆ ಬೆಕ್ಕುಗಳದು ಬಲೂನಿನಂತೆ ಊದಿಕೊಂಡ ದೇಹ. ವಿಸರ್ಜನೆ ಮತ್ತು ಹೆಚ್ಚು ಹೆಚ್ಚು ತಿನ್ನುವುದರ ಪ್ರಭಾವ ಅದು. ಮ್ಯಾಂವ್ ಅಂದರೂ ಇಡೀ ದೇಹವೇ ಸಂಕುಚನ ಮತ್ತು ಆಂಕುಚನಕ್ಕೆ ಒಳಪಡುತ್ತಿತ್ತು. ಕೆಂಪಾದ ಕಾಫಿಹಣ್ಣುಗಳನ್ನು ನೋಡಿದೊಡನೆ ಅವು ಉರಿವ ಕೆಂಡವೆಂದು ಭಾವಿಸುತ್ತಿದ್ದವು. ಬಲವಂತದಿಂದ ಕಾಫಿ ಹಣ್ಣನ್ನು ನುಂಗುವುದರಿಂದ ಅವುಗಳ ಹೊಟ್ಟೆ ಉರಿಯುತ್ತಿತ್ತು. ಆಕಾಶಕ್ಕೇ ಕೇಳುವ ಹಾಗೆ ಮ್ಯಾಂವ್ ಮ್ಯಾಂವ್ ಎಂದು ಅರಚುತ್ತಿದ್ದವು. ದಿನಾಲು ಇವನು ಆ ಎಸ್ಟೇಟಿನಿಂದ ಕೆಂಡದಂಥ ಕಾಫಿ ಹಣ್ಣುಗಳನ್ನು ತರಿಸಿ ತಿನ್ನಿಸುವುದರಿಂದ ಅವು ಇವನನ್ನು ನರಕದ ಯಜಮಾನನೇ ಎಂದು ಭಾವಿಸಿದಂತಿತ್ತು. ದಿನಾಲು ಮುಂಜಾನೆ ಕೃತಕವಾಗಿ ಅವುಗಳ ಆಹಾರ ಸೇವಿಸುವ ಕ್ರಿಯೆಯನು ಹೆಚ್ಚಳಗೊಳಿಸಲು ಇಂಜೆಕ್ಷನ್‌ಗಳನ್ನು ಚುಚ್ಚಿಸುವುದು, ಸಂಜೆ ಅಮೇಧ್ಯ ವಿಸರ್ಜಿಸಲು ಮತ್ತೆ ಚುಚ್ಚುಮದ್ದು ಕೊಡುವುದು, ದಿನಾಲು ನಾಲ್ಕು ಕೆ.ಜಿ. ಕಾಫಿ ಹಣ್ಣುಗಳನ್ನು ತಿನ್ನಿಸುವುದು ಸಂಜೆ ಅಮೇಧ್ಯವನ್ನು ಹೊರ ಹಾಕಿಸುವುದು... ಬೆಕ್ಕುಗಳು ಯಂತ್ರಗಳಾಗಿ ಹೋದವೇನೋ, ತಾನು ಯಂತ್ರದ ಮನೆಯ ಯಜಮಾನನಾದೆನೋ?

ಅಂದು ಮೋಡದ ತುಂಬಾ ಬೆಳದಿಂಗಳು ಹರಡಿಕೊಂಡಿತ್ತು. ಆದರೆ ಆ ಬೆಳದಿಂಗಳು ಭೂಮಿಯನು ತಲುಪಲು ಸಾಧ್ಯವಿರಲಿಲ್ಲ. ಅಂತಹ ದುರ್ಗಮ ಕಾಡು ಅದು. ಮಲಗಬೇಕೆಂದರೆ ನಿದ್ರೆ ಇಲ್ಲ. ನಿದ್ರೆ ಹೇಗೆ ಮಾಡುವುದು? ಸಾಯಲು ತಯಾರಾಗಿ ಹೋದವನಿಗೆ ಕೈಬೀಸಿ ಕರೆದಿತ್ತು ಈ ಆಫ್ರಿಕಾ ನಾಡು. ಸಾಯುವ ನಿರ್ಧಾರ ತೆಗೆದುಕೊಂಡವನಿಗೆ ಭಯವೇ ಇರಬಾರದು. ಆದರೆ ಇಂದು ಭಯ ಏಕೆ ತನ್ನಲ್ಲಿ ಇಣುಕುತ್ತಿದೆ ಎನ್ನಿಸಿತು. ಸಾಯುವ ನಿರ್ಧಾರ ಆ ಕ್ಷಣದ್ದು. ಅದನ್ನು ದಾಟಿ ಬಂದ ಮೇಲೆ ಭಯ ಬೇಡವೆಂದರೆ ಹೇಗೆ? ಎದ್ದು ಕುಳಿತ. ಅಮ್ಮನ ನೆನಪು, ತಂಗಿಯ ಭವಿಷ್ಯ ಅಪ್ಪನೆಂಬ ಬೇಜವಬ್ದಾರಿ ಕುಡುಕನ ಬಗ್ಗೆ ಯೋಚಿಸುತ್ತಿರುವಾಗಲೇ ಸುರ್ಜಿತ್ ರೂಮಿಗೆ ಬಂದಿದ್ದ. ಅವನಿಗೆ ಕತ್ತಲಾದಮೇಲೆ ಅದೇ ಹಿಪ್ಪಿಯ ಹೂವಿನ ಪೇಯ ಕುಡಿಯುವ ಅಭ್ಯಾಸ. ಅದನ್ನು ತಯಾರು ಮಾಡಿ ಕೊಡುವವಳು ಅವಳೇ ತಾಬೋ ಮುಬಾಕಿ ಎನ್ನುವ ಕಪ್ಪು ಸುಂದರಿ.

‘ಸ್ಟಿಲ್ ಯು ಆರ್‌ ನಾಟ್ ಸ್ಲೆಪ್ಟ್‌?’ ಎನ್ನುತ್ತಲೇ ಮಾತಿಗೆ ಕುಳಿತ.

‘ನೋಡು ಇದು ಆಫೀಸ್ ಸಮಯವಲ್ಲದ್ದರಿಂದ ನಿನಗೆ ಕೆಲ ವಿಷಯಗಳನ್ನು ಹೇಳಲೇಬೇಕು. ನಿನ್ನನ್ನು ನಾನು ಈಗಾಗಲೇ ಅಂದಾಜು ಮಾಡಿ ಮೌಲ್ಯಮಾಪನ ಮಾಡಿದ್ದೇನೆ. ನೀನು ಬಹಳ ಸಾಫ್ಟ್‌. ಇಂಥ ವ್ಯವಹಾರ ಮಾಡಲು ಗುಂಡಿಗೆ ಬೇಕು. ಅದಕ್ಕಾಗಿ ಗುಂಡಿಗೆ ಗಟ್ಟಿ ಮಾಡಿಕೊಳ್ಳುವುದು ನಿನ್ನ ಕರ್ತವ್ಯ. ಇದಾದ ಮೇಲೆ ಮುಂದೆ ನೀನು ಇಲ್ಲೇ ಇರುವಿಯಂತೆ. ನಿನ್ನನ್ನು ನಾನು ಈ ವ್ಯವಹಾರದ ಭಾಗೀದಾರನನ್ನಾಗಿ ಮಾಡಿಕೊಳ್ಳಬಹುದು. ಇಲ್ಲಿಯ ಜನಕ್ಕೆ ಬುದ್ಧಿ ಇಲ್ಲ, ಜ್ಞಾನವಿಲ್ಲ, ಶಿಕ್ಷಣವಿಲ್ಲ. ಅದನ್ನು ನಾವು ಉಪಯೋಗಿಸಿಕೊಳ್ಳಬಹುದು. ಮತ್ತೆ ಇಲ್ಲಿ ನಾವು ಭಾರತೀಯರು ಇನ್ನೊಂದು ಸಾಮ್ರಾಜ್ಯ ಕಟ್ಟಬಹುದು’ ಎಂದು ಕಣ್ಣುಮುಚ್ಚಿ ಎರಡು ಗುಟುಕು ಕುಡಿದ.

ಮತ್ತೆ ಮಾತಾಡಹತ್ತಿದ. ‘ಈ ದೇಶದ ವಿಸ್ತೀರ್ಣವೇ ಮೂರು ನೂರು ಚದರ ಕಿ.ಮೀ. ಪಂಜಾಬಿನ ಕಾಲು ಭಾಗ ಜನ ಇಲ್ಲಿ ಬಂದು ನೆಲೆಸಿದರೆ, ಈ ದೇಶ ನನ್ನದೇ’ ಎಂದು ನಕ್ಕ.

ರೂಮಿನ ಹಿಂದೆ ಕ್ರೇನ್, ಆಸ್ಟ್ರಿಚ್ ಪಕ್ಷಿಗಳು ಓಡಾಡುತ್ತಿದ್ದವು. ಜಲಪಾತದ ಮೇಲೆ ಆಫ್ರಿಕನ್ ಈಗಲ್ ಎನ್ನುವ ರಣಹದ್ದುಗಳು ಕಣ್ಣು ಕಾಣದಿದ್ದರೂ ಸಂಜ್ಞೆ ಆಧಾರದಲಿ ಮೀನು ಹಿಡಿಯುತ್ತಿದ್ದವು. ಮತ್ತೆ ಅವನೇ ಹೇಳಹತ್ತಿದ– ‘ಈ ಪ್ರಾಜೆಕ್ಟ್ ಇದೆಯಲ್ಲ, ಈ ಪ್ರಾಜೆಕ್ಟ್‌ ಮೂಲಕವೇ ನಾವು ಏನನ್ನಾದರೂ ಸಾಧಿಸಬಹುದು. ಇಂತಹ ದೊಡ್ಡ ಪ್ರಾಜೆಕ್ಟನ್ನು ನಾನು ನಿನ್ನ ಕೈಗೆ ಕೊಟ್ಟಿದ್ದೇನೆ. ಇದು ಶುದ್ಧ ಮಲದ ವ್ಯವಹಾರ. ಆ ಬೆಕ್ಕುಗಳು ಎಷ್ಟು ಮಲ ವಿಸರ್ಜಿಸುತ್ತವೆ ಎಷ್ಟು ಕಾಫಿ ಹಣ್ಣುಗಳನ್ನು ತಿನ್ನುತ್ತವೆಯೋ ಅಷ್ಟು ನಿನಗೆ ಸಂಬಳ ಜಾಸ್ತಿ. ಅಷ್ಟು ಪ್ರಮೋಶನ್, ಅಷ್ಟು ಇನ್ಕ್ರಿಮೆಂಟುಗಳು. ಇದು ಒಂದು ವಿಸರ್ಜನಾ ಆಟ. ಈ ಪ್ರಾಜೆಕ್ಟ್‌ ಮುಗಿಯುವವರೆಗೂ ಎಲ್ಲರಿಗೂ ವಿಸರ್ಜನೆಯ ಸಮಸ್ಯೆಯೇ’ ಎಂದು ನಕ್ಕ.

ಅವನ ನಗು ವ್ಯವಹಾರದ ನಗುವಾಗಿತ್ತು. ಇಲ್ಲಿ ಎಲ್ಲರನ್ನೂ ವ್ಯವಹಾರದ ನಗುವಿನೊಳಗೆ ಬಂಧಿಸಿದ್ದಾನೆ ಎನ್ನಿಸಿತು. ತೋಬಾ ಮುಬಾಕಿ ಎಂಬ ಆ ಕಪ್ಪು ಸುಂದರಿಯನ್ನು ಸಹ. ಅವನದೇನಿದ್ದರೂ ಟೈಮ್ ಬಾಂಡ್‌ ಲೆಕ್ಕಾಚಾರ. ಆ ಬೆಕ್ಕುಗಳು ಇಂತಹ ಸಮಯದಲ್ಲಿ ಇಷ್ಟು ತಿನ್ನಬೇಕು, ಇಷ್ಟು ಸಮಯದಲ್ಲಿ ವಿಸರ್ಜಿಸಬೇಕು, ಇವನು ಗಾಣದೆತ್ತಿನಂತೆ ಇಷ್ಟು ಸಮಯ ದುಡಿಯಬೇಕು. ಸೂರ್ಯನನ್ನು ಇವನ ಆಳಾಗಿ ಇಟ್ಟುಕೊಂಡಿದ್ದಾನೆಂದೇ ಒಂದು ಕ್ಷಣ ಇವನಿಗೆ ಅನ್ನಿಸಿತು. ಇವನ ಹಿಂದೆ ಗೂಗೆಗಳು ಗೂಕ್ ಎಂದು ಕಾಡನ್ನು ಅನುರಣಿಸುತ್ತಿದ್ದವು. ಆ ಕಾಡಿನ ಏಕತಾನ ಮೌನ, ತಣ್ಣನೆಯ ಗಾಳಿ ಮತ್ತು ಇವನ ಮಾತುಗಳು ಮಾತ್ರ ಮಾತಾಡುತ್ತಿದ್ದವು. ಇವನು ಏನೋ ಮಾತಾಡಬೇಕಾಗಿತ್ತು. ಇಲ್ಲದಿದ್ದರೆ ಸಿಂಗ್ ತಪ್ಪು ತಿಳಿಯುವ ಸಂಭವವಿತ್ತು. ಇವನು ಅವನ ಮಾತಿಗೆ ಏನು ಹೇಳಬೇಕೆಂದು ತೋಚದೆ ‘ಪಾಪದ ಬೆಕ್ಕುಗಳು’ ಎಂದ. ಅಷ್ಟೆ ಸಿಂಗನಿಗೆ ಅಸಹನೆ ಕಟ್ಟೆ ಒಡೆಯಿತು.

‘ಸ್ವಾಮಿ ನೀನು ವ್ಯವಹಾರಸ್ಥನಲ್ಲ. ನೀನು ವ್ಯವಹಾರ ಮಾಡುವ ಮೊದಲು ಎದುರಿಗೆ ನಿಂತ ಮನುಷ್ಯನನ್ನು ಆತ್ಮ ಕವಚವೆಂದು ಹೇಳುವ ಗೀತೆಯನು ಸರಿಯಾಗಿ ಓದಿಕೊಳ್ಳಬೇಕು. ಅದು ಓದಿಕೊಂಡರೆ ಪಾಪದ ಬೆಕ್ಕುಗಳು ಎಂದು ಹೇಳುತ್ತಿರಲಿಲ್ಲ ಅನಿಸುತ್ತಿದೆ’ ಎಂದ.

‘ಯಾವುದೂ ಪಾಪವೂ ಅಲ್ಲ, ಪುಣ್ಯವೂ ಅಲ್ಲ. ಇದೊಂದು ವ್ಯವಹಾರ ಮಾತ್ರ. ಕೊಲ್ಲುವವನಿಗೆ ದೇಹವನ್ನು ಆತ್ಮದಿಂದ ಬೇರ್ಪಡಿಸಿ ನೋಡುವ ಚಾಣಾಕ್ಷತನವಿರಬೇಕು, ಆಗ ನೀನು ಮೇಲೆ ಬರಬಹುದು’ ಅಂದ.

ಪುನಗಿನ ಬೆಕ್ಕಿನ ಆತ್ಮ ಮತ್ತು ಕವಚದ ಬಗ್ಗೆ ಕ್ಷಣ ಯೋಚಿಸಿದನಿವನು. ಆ ಸಣ್ಣ ಪ್ರಾಣಿಯಲಿ ಆತ್ಮವೆಲ್ಲಿದೆಯೋ ದೇಹವೆಲ್ಲಿದೆಯೋ ತಿಳಿಯಲಿಲ್ಲ. ಅವನು ಮಾತಾಡುತ್ತಲೇ ಎದ್ದು ಹೋದ. ಅವನು ಹೋದ ಮೇಲೆ ಇವನಿಗೆ ದಿಗಿಲಾಯಿತು. ತಾನು ಈ ಸಾವಿನ ಮನೆಯ ಯಜಮಾನನಾದೆನೆ ಎಂದು ಕಳವಳಗೊಂಡ. ರಾತ್ರಿಯೆಲ್ಲ ಆ ಧುಮ್ಮಿಕ್ಕುವ ಜಲಪಾತ ಮತ್ತು ಗೂಕ್ ಎನ್ನುವ ಶಬ್ದಗಳದೇ ಕಾರುಬಾರು. ನಿದ್ರೆ ಆ ಎರಡು ಶಬ್ದಗಳಲಿ ಲೀನವಾಗಿ ಹೋಗಿತ್ತು.

ಮುಂಜಾನೆ ಹನ್ನೆರಡು ಪುನಗನ ಬೆಕ್ಕುಗಳು ಮತ್ತೆ ಸತ್ತು ಹೋಗಿದ್ದವು.

ಚುಚ್ಚುಮದ್ದುಗಳ ಮುಖಾಂತರ ಕೊಟ್ಟ ಕೃತಕ ಹಾರ್ಮೋನುಗಳ ಪ್ರಭಾವ ಅವುಗಳ ಮೇಲೆ ಆಗಿತ್ತು. ಸಿಂಗ್ ಏನೂ ಯೋಚಿಸಲಿಲ್ಲ. ‘ರಿಮೂವ್ ಇಟ್ ನೋ ಪ್ರಾಬ್ಲಮ್’ ಎಂದ. ಆದರೆ ಪಾಪದ ಬೆಕ್ಕುಗಳ ಸಾವು ಇವನ ಮನ ಕಲಕಿತ್ತು.

ಅಂದು ಸಂಜೆ ಸಿಂಗ್ ಖುಷಿಯಲ್ಲಿದ್ದ. ಯಾವುದೋ ಹಿಂದಿ ಹಾಡು ಹಾಡುತ್ತ ಇವನಿದ್ದಲ್ಲಿಗೆ ಬಂದ. ಸಂಜೆ ಸೂರ್ಯಾಸ್ತದ ತಿಳಿ ಕೆಂಬಣ್ಣ ಕಾಡು ಸೀಳಿಕೊಂಡು ಭೂಮಿ ತಲುಪಲು ಹರಸಾಹಸ ಮಾಡುತ್ತಿತ್ತು. ಇವನು ಅದೇ ಫಾರ್ಮಿನಲ್ಲಿ ಪುನಗನ ಬೆಕ್ಕುಗಳಿಗೆ ಔಷಧಿ ಕೊಡುವ ಕಾರ್ಯದಲ್ಲಿ ನಿರತನಾಗಿದ್ದ. ಅಲ್ಲಿಗೆ ಬಂದವನೇ ಸಿಂಗ್ ಸಾಬ್ ನಗುತ್ತಲೇ ಹೇಳಿದ– ‘ನೀನು ಲಿಂಗಾಯತನಾಗಿದ್ದರಿಂದ ಮಾಂಸ ತಿನ್ನುವುದಿಲ್ಲ, ಮದ್ಯ ಕುಡಿಯುವುದಿಲ್ಲ. ನನ್ನ ಸಂತೋಷ ಹೇಗೆ ಹಂಚಿ ಕೊಳ್ಳಲಿ? ಎದುರಿಗೆ ಇದ್ದ ವನೂ ನನ್ನಂತೆ ಕುಡಿದು ತಿಂದು ತೋಲಾಡಿದರೆ ಅದಕ್ಕೊಂದು ಬೆಲೆ ಇರುತ್ತದೆ. ಬೀದರಿನ ಅನೇಕ ನನ್ನ ಲಿಂಗಾಯತ ಮಿತ್ರರು ಮಾಂಸ ಸೇವಿಸುತ್ತಾರೆ. ನೀನೂ ಈ ದಿನ ಟೇಸ್ಟ್‌ ಇಟ್’ ಅಂದ.

‘ನನಗೆ ಗೊತ್ತು ನೀ ತಿನ್ನಲಾರೆ ಎಂದು, ಇರಲಿ ನಿನ್ನ ಮತ್ತು ನನ್ನ ಸಂತೋಷ ನಾನೊಬ್ಬನೇ ಅನುಭವಿಸುತ್ತೇನೆ’ ಎಂದು ತಾನು ಆನಂದತುಂದಿಲನಾದ ಕಾರಣ ಪ್ರಚುರಪಡಿಸಿದ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪುನಗನ ಬೆಕ್ಕು ತಿಂದು ವಿಸರ್ಜಿಸುವ ಈ ಕಾಫಿ ಬೀಜಗಳ ದರ ಒಮ್ಮಿಂದೊಮ್ಮೆಲೇ ಏರಿಕೆಯಾಗಿದೆ. ಈಗ ಭಾರತೀಯ ಕರೆನ್ಸಿಯ ಪ್ರಕಾರ ಕೆ.ಜಿ.ಗೆ ಮುವ್ವತ್ತು ಸಾವಿರದವರೆಗೆ ದರ ಏರಿದೆ. ಅದಕ್ಕಾಗಿ ನಮ್ಮಲ್ಲಿಯೂ ಉತ್ಪಾದನೆ ಹೆಚ್ಚಾಗಲಿ. ಇಲ್ಲಿರುವ ನನ್ನ ಕೃಷಿ ಭೂಮಿ, ಅರಣ್ಯ ಭೂಮಿ ಎಲ್ಲದರ ಆದಾಯ ನಾನು ನೆಚ್ಚಿಕೊಂಡಿಲ್ಲ. ನನ್ನ ಆದಾಯವನ್ನು ಪ್ರಮುಖವಾಗಿ ನೆಚ್ಚಿಕೊಂಡಿದ್ದು ಪುನಗನ ಬೆಕ್ಕಿನ ಕಾಫಿಯಿಂದಲೇ‘ ಅಂದ.

ತುಂತುರು ಹನಿ ಬರುತ್ತಿತ್ತು. ಸಿಂಗ್ ಮಳೆಯಿಂದ ತಪ್ಪಿಸಿಕೊಂಡು ಈ ಕಡೆ ಬಂದು ನಿಂತ. ಮತ್ತೆ ಹೇಳಿದ– ‘ಮತ್ತೆ ನಿನ್ನ ಉತ್ಪಾದನಾ ಜವಾಬ್ದಾರಿ ಹೆಚ್ಚಾತು. ಇನ್ನೂ ಎರಡು ಸಾವಿರ ಬೆಕ್ಕುಗಳನ್ನು ನಾವು ಪ್ಲಾನ್ ಮಾಡೋಣ. ವರ್ಷಕ್ಕೆ ಇಪ್ಪತ್ತು ಸಾವಿರ ಎಕರೆ ಭೂಮಿ ಖರೀದಿಸುವ ಗುರಿ ನನ್ನದು. ಅದು ನಿನ್ನ ಸಾಮರ್ಥ್ಯದ ಮೇಲೆ ನಿಂತಿದೆ. ಈ ವಿಷಯದಲ್ಲಿ ನೀನು ನನಗೆ ಸಹಾಯ ಮಾಡಬೇಕು‘ ಅಂದ.

ಆಗಲೇ ಸಂಜೆ ಆಗಿದ್ದರಿಂದ ತಣ್ಣನೆಯ ಹಾಡಿನ ಆಲಾಪ ಆ ಕಾಡು ಜನರ ಹಾಡಿಯಿಂದ ಕೇಳಿ ಬರುತ್ತಿತ್ತು. ಸಂಜೆ ಅಲ್ಲಿಯ ಜನರು ಕುಣಿದು ಕುಪ್ಪಳಿಸುತ್ತಿದ್ದರು. ‘ಆ ಕಾಡು ಜನರು ಹಾಡುವ ಹಾಡು ನಿನಗೆ ಅರ್ಥವಾಗುತ್ತಿದೆಯೇ?‘ ಎಂದ ಇಲ್ಲವೆಂದು ಇವನು ತಲೆ ಅಲ್ಲಾಡಿಸಿದ.
ಅವನೇ. ಅದರ ಅರ್ಥ ಹೇಳಿದ–

‘ಸ್ವತಂತ್ರ ಸ್ವಚ್ಛಂದ ಬದುಕು ನಮ್ಮದು
ಆ ಸ್ವಾತಂತ್ರ್ಯವ ಕಸಿಯುವವರಾರು?‘

‘ಆದರೆ ಪಾಪ ಇವರ ಸ್ವಾತಂತ್ರ್ಯ ಬೆಕ್ಕಿನ ತರಹವೇ’ ಎಂದು ನಕ್ಕ.

ಮತ್ತೆ ಹೇಳಿದ– ‘ಈ ಗುಲಾಮರಿಗೆ ವಿಮೋಚನೆಯೇ ಇಲ್ಲ. ಇವರು ಗುಲಾಮರಾಗಿ ಬೇರೆ ಬೇರೆ ಕಡೆ ಹೋಗುವುದು, ನೆಲ ಕಡಿಯುವುದು, ಕಾಡು ಕಡಿಯುವುದು, ಗದ್ದೆ ಮಾಡುವುದಕ್ಕೆ ಲಾಯಕ್ಕು. ಇವರು ಎಂದೂ ಮಾಲೀಕರಾಗಲು ಯೋಚಿಸುವುದಿಲ್ಲ, ಕೊನೆಯವರಿಗೂ ಗುಲಾಮರಾಗೇ ಇರುತ್ತಾರೆ‘ ಎಂದು ಬಾಯಲ್ಲಿ ಹುರಿದ ಗೋಡಂಬಿಯ ಹಾಕಿಕೊಂಡ.

‘ಆ ಕರಿಯ ಇದ್ದಾನಲ್ಲ, ಅವನ ಹೆಸರು ಜೋಶುಆ ಅದೇ ತಾಬೋಳ ಗಂಡನವನು. ತಾಬೋ ಎಂತಹ ಸುಂದರಿ ಎಂದರೆ, ಅವಳ ಹಿಮಗ್ಲೋಬಿನ್ ಭರಿತ ಮಾಂಸಖಂಡಗಳ ಹೊಳಪು ನೋಡುವುದೇ ಒಂದು ಚಂದ. ಅವಳನ್ನು ಎರಡು ದಿನ ಬಿಟ್ಟು ಹೋಗು ಎಂದರೆ ಜೋಶುಆ ನಗುತ್ತಲೇ ಬಿಟ್ಟುಹೋಗುತ್ತಾನೆ. ಅಂದರೆ ಇಲ್ಲಿ ಹೆಣ್ಣು ಇದೆ, ಮಣ್ಣು ಇದೆ, ಹೊನ್ನು ಇದೆ. ಬಿಲೀವ್ ಆರ್ ನಾಟ್ ಈ ಭೂಮಿ ಒಂದು ಎಕರೆಗೆ ಬರೀ ಹತ್ತು ಸಾವಿರ ರೂಪಾಯಿ. ಈ ನಾಡಿನಲ್ಲಿ ವಜ್ರಗಳೂ ಸಿಗುತ್ತವೆ. ಈ ಮೂರ್ಖರು ಇವುಗಳನ್ನು ನೂರು ರೂಪಾಯಿ ಇನ್ನೂರು ರೂಪಾಯಿಗಳಿಗೆ ನನಗೆ ಕೊಡುತ್ತಾರೆ. ನಾನು ಲಕ್ಷಾಂತರ ರೂಪಾಯಿಗಳನ್ನು ಈ ವಜ್ರದಿಂದಲೇ ಗಳಿಸುತ್ತೇನೆ. ನಾವು ಇಲ್ಲಿ ಇನ್ನೊಂದು ಭಾರತ, ಇನ್ನೊಂದು ಪಂಜಾಬ್ ಸೃಷ್ಟಿಸಬೇಕಾಗಿದೆ’ ಎಂದ.

ಮತ್ತೆ ಕ್ಷಣ ಕಾಲ ಮೌನ.

ಅವನೇ ಮೌನ ಮುರಿದು ಹೇಳಹತ್ತಿದ– ‘ಆ ತೋಬಾ ವಾಸಿಸುವ ಆ ಹಾಡಿಯೂ ನನ್ನ ಸುಪರ್ದಿಯಲ್ಲಿದೆ. ಕಳೆದ ಸಲ ಅದನ್ನು ಕೊಂಡುಕೊಂಡೆ. ಅದರ ವಿಸ್ತೀರ್ಣ ಐದುನೂರು ಎಕರೆ. ಇಲ್ಲಿಯ ಸರ್ಕಾರ ನಡೆಸುವವರು ಈ ಭೂಮಿಯನ್ನು ಹೀಗೆ ಹರಾಜು ಹಾಕುತ್ತಾರೆ. ಈ ದೇಶದ ಅಧ್ಯಕ್ಷನಿಗೂ ನಮ್ಮ ಗ್ರಾಮ ಪಂಚಾಯತ್ ಅಧ್ಯಕ್ಷನಿಗೂ ಏನು ವ್ಯತ್ಯಾಸವಿಲ್ಲ’ ಎಂದು ನಕ್ಕ.

ಅವನಿಗೆ ಇವನನ್ನು ಅಭಿಪ್ರೇರಿಸುವ ಕೆಲಸವಾಗಬೇಕಾಗಿತ್ತು, ಅದಕ್ಕಾಗಿ ಇವನಿಗೆ ಅನೇಕ ಇನ್ಸೆಂಟಿವ್‌ಗಳನ್ನು ಈ ದಿನವೇ ಘೋಷಿಸಿದ. ‘ನೀನು ದಯವಿಟ್ಟು ಕೊಂಚ ಜಗತ್ತಿಗೆ ತೆರೆದುಕೊಳ್ಳಬೇಕು. ಒಂದು ಮಾತು... ತಾಬೋ ನನ್ನೊಬ್ಬನ ಪ್ರಾಪರ್ಟಿಯಲ್ಲ ಹಾಗೂ ಆ ಜೋಶುಆನ ಪ್ರಾಪರ್ಟಿಯೂ ಅಲ್ಲ. ನೀನೂ ಅವಳನ್ನು ಬಳಸಿಕೊಳ್ಳಕೊಳ್ಳಬಹುದು’ ಎಂದ.

ಅವನ ಕುಡಿತದ ಅಮಲು ತಲೆಗೇರಿತ್ತು. ಡೋಡೋ ಎನ್ನುವ ಮುಗ್ಧ ಪಕ್ಷಿಗಳು ಬಲಿದಾನಕ್ಕೆ ಸಿದ್ಧವಾಗಿ ಬಂದಿದ್ದೇವೆ ಎನ್ನುವಂತೆ ವಿಲಕ್ಷಣ ರೀತಿಯಲ್ಲಿ ಆ ಫಾರ್ಮಿನ ಗೇಟಿನ ಆಚೆ ಅರಚುತ್ತಿದ್ದವು. ಇಲ್ಲಿಯ ಜನರು ಅವುಗಳನ್ನು ತಲೆಗೆ ಹೊಡೆದು ಸಾಯಿಸಿ ಮಸಾಲೆಯಲಿ ಬೇಯಿಸಿ ತಿನ್ನುತ್ತಿದ್ದರು. ಅವನು ಜಾನ್ಸೆ ಎನ್ನುವ ಬಾಣಸಿಗನಿಗೆ ಗೇಟಿನಲಿ ಡೋಡೋ ಬಂದ ವಿಷಯವನ್ನು ಹೇಳಿದ.

ಯಥೇಚ್ಛ ಚುಚ್ಚುಮದ್ದುಗಳ ಅಡ್ಡಪರಿಣಾಮಗಳಿಂದ ದಿನಾಲು 5–6 ಬೆಕ್ಕುಗಳ ಸಾವು ಸಾಮಾನ್ಯವಾಗಿತ್ತು. ಟಣ್ಣನೆ ಹಾರುವುದು ಕೊಂಯ್ ಕೊಂಯ್ ಎಂದು ಚೀರುವುದು. ಒದ್ದಾಡಿ ಸಾಯುವುದು. ಈ ನಿರಂತರ ಸಾವುಗಳು ಇವನನ್ನು ಕಂಗೆಡಿಸಿದ್ದವು. ಇವನಿಗೆ ತೋಬಾ ಎನ್ನುವ ಆ ಕಪ್ಪು ಸುಂದರಿಯ ಸಾಂತ್ವನವಿಲ್ಲದಿದ್ದರೆ ತಾನು ಹುಚ್ಚನಾಗಿ ಹೋಗುತ್ತೇನೆ ಎನ್ನುವಂತಾಯಿತು. ಆ ಸಂದರ್ಭದಲ್ಲಿ ಅನುಗಾಲದ ಆತ್ಮಸಖಿಯಾಗಿ ಸಿಕ್ಕವಳು ಅವಳು. ಅವಳಿಗೆ ಇಂಗ್ಲಿಷಿನ ಬೀಜಶಬ್ದಗಳಾದ ವಾಟರ್, ಫಾರೆಸ್ಟ್‌, ಕ್ಯಾಟ್ ಇಂತಹವು ಅರ್ಥವಾಗುತ್ತಿದ್ದರಿಂದ, ಸಂವಹನಕ್ಕೆ ಅಷ್ಟು ಸಾಕಾಗುತ್ತಿತ್ತು. ಒಂದು ದಿನ ಊಟಕ್ಕೆ ಕರೆದು ಮೆಕ್ಕೆ ಜೋಳದ ಅಮಲ ಮತ್ತು ಘೌಷ ಎನ್ನುವ ಡಿಷ್ ಮಾಡಿದ್ದಳು ಅವಳ ಮಾತಿಲ್ಲದ ಮಾತು, ಮೌನ, ಎಲ್ಲವೂ ಇವನಿಗೆ ಅರ್ಥವಾಗುತ್ತಿತ್ತು. ಇದು ಅವಳದಲ್ಲದ ನೆಲವೆನ್ನುವ ಸತ್ಯ ನೆನಪಾಗಿ ಕರುಳು ಕಿತ್ತುಬಂದಂತಾಯಿತು. ಇದು ನನ್ನ ಮುತ್ತಾತ ತಾತ ತಂದೆ, ಮಾವ ಬೆಳೆದ ಮನೆ ಮತ್ತು ಇನ್ನೊಂದು ಇದು ನನ್ನ ಈಗ ವಾಸಿಸುವ ಮನೆಯೆಂದು ಆ ದಟ್ಟ ಕಾಡಿನ ಮಧ್ಯದಲ್ಲಿರುವ ಮನೆಯನ್ನು ತೋರಿಸಿದಳು. ಆದರೆ ಇದು ಅವಳ ಮನೆಯಾಗಿರಲಿಲ್ಲ ಎನ್ನುವ ಸತ್ಯ ಇವನಿಗೆ ತಿಳಿದಿತ್ತು. ಆದರೆ ಅವಳಿಗೆ ತಿಳಿದಿರಲಿಲ್ಲ.

ಈ ದಿನ ಮತ್ತೆ ಏಳು ಬೆಕ್ಕುಗಳು ಸತ್ತು ಹೋಗಿದ್ದವು.

ಅವುಗಳ ಅಮೇಧ್ಯದ ಮೂಲಕ ಬೀಜ ಉಗಳುವ ಸಾಮರ್ಥ್ಯವೂ ಕಡಿಮೆಯಾಗಿತ್ತು. ಯಥೇಚ್ಛವಾಗಿ ಚುಚ್ಚುಮದ್ದು ಚುಚ್ಚುವುದರಿಂದ ಕೆಲ ಬೆಕ್ಕುಗಳು ವಿಸರ್ಜನೆಯ ಮೂಲಕ ರಕ್ತವನ್ನು ಉಗುಳುತ್ತಿದ್ದವು. ಸಿಂಗನಿಗೆ ಸಿಟ್ಟುಬಂದಿತ್ತು.

‘ನನಗೆ ಏನೂ ಗೊತ್ತಿಲ್ಲ. ಪ್ರೊಡಕ್ಷನ್ ಜಾಸ್ತಿಯಾಗದಿದ್ದರೆ ನೀನೇ ಕಾಫಿ ಬೀಜಗಳನ್ನು ತಿಂದು ವಿಸರ್ಜಿಸು. ಈ ಒಪ್ಪಂದವಿರುವುದೇ ಇನ್ನು ಒಂದು ವರ್ಷದವರೆಗೆ. ಅಷ್ಟರಲ್ಲಿ ಮಾರುಕಟ್ಟೆ ಬಿದ್ದು ಹೋಗುತ್ತದೆ. ನನ್ನನ್ನು ಹಾಳು ಮಾಡಲೆಂದೇ ಇಲ್ಲಿಗೆ ಬಂದಿರುವೆ ಅನಿಸುತ್ತದೆ’ ಎಂದು ವಾಚಾಮಗೋಚರವಾಗಿ ಬಯ್ಯಹತ್ತಿದ್ದ. ಅವನಿಗೆ ಯಾವುದೋ ನೆಪ ಬೇಕಾಗಿತ್ತು. ಕ್ಷಣ ಮೌನವಹಿಸಿ ಮತ್ತೆ ಕೇಳಿದ– ‘ಆ ಕರಿ ಹೆಂಗಸಿನ ಜೊತೆಗೆ ನಿನ್ನದೇನು ಕೆಲಸ?’

‘ಅವಳ ಜೊತೆ ಮಾತಾಡಿದರೆ ಹುಷಾರು, ಉತ್ಪಾದನೆ ಕಮ್ಮಿಯಾದರೆ ನಿನ್ನನ್ನು ಇದೇ ಬತ್ತದ ಗದ್ದೆಯಲ್ಲಿ ಕೂಲಿಯಾಗಿ ದುಡಿಸುತ್ತೇನೆ. ನಿನ್ನ ಪಾಸ್‌ಪೋರ್ಟ್‌, ವೀಸಾ ನನ್ನಲ್ಲಿವೆ ತಿಳಿದುಕೋ’ ಅಂದ.

ಅಂದು ರಾತ್ರಿ ನಿದ್ರೆ ಎಂಬುವುದೇ ಇಲ್ಲ. ಆ ಅರಣ್ಯದಲ್ಲಿ ಮರಗಳು ಮಾಡಿದ ಕತ್ತಲ ಕಡಲಿನಿಂದ ಮನಸು ಕತ್ತಲಾಗಿತ್ತೋ ಅಥವಾ ಇಂತಹ ಅಪಾಯದ ಜಗದ ಭಯ ನಿದ್ರೆಯಿಂದ ದೂರ ಒಯ್ದಿತೋ ತಿಳಿಯಲಿಲ್ಲ. ಅಂತೂ ಮುಂಜಾನೆ ಮೂರರ ಜಾವ ನಿದ್ರೆ ದೇಹದೊಳಗೆ ಸೇರಿತ್ತು. ನಿದ್ರೆಯ ಜೊತೆ ಒಂದು ಕನಸು ತಲೆಯಲ್ಲಿ ಹೊಕ್ಕಿತು. ಆ ಕನಸು ಈ ರೀತಿ ಇತ್ತು–

ಹದಿನಾರು ಗಾಲಿಯ ರಥ. ಆ ರಥವನು ಆ ಪಾಪದ ಬೆಕ್ಕುಗಳು ಎಳೆಯುತ್ತಿವೆ. ಇವನು ರಥಕ್ಕೆ ರಥಿಕನಾಗಿದ್ದಾನೆ. ಸಿಂಗ್ ರಥದಲಿ ಸೇನಾನಿಯಾಗಿ ನಿಂತಿದ್ದಾನೆ. ಅವನ ಕೈಯಲ್ಲಿ ಬ್ರಹ್ಮಾಸ್ತ್ರದಂತಹ ಬಿಲ್ಲು ಬಾಣಗಳನ್ನು ಹಿಡಿದಿದ್ದಾನೆ. ರಥ ಎಳೆಯುವ ಬೆಕ್ಕುಗಳು ಕಷ್ಟಪಟ್ಟು ಎಳೆಯುತ್ತಲಿವೆ. ಕೆಲ ಬೆಕ್ಕುಗಳು ಸಾಯುತ್ತಲಿವೆ. ಕೆಲ ಬೆಕ್ಕುಗಳು ಮತ್ತೆ ಸತ್ತ ಬೆಕ್ಕುಗಳಿಗೆ ಪರ್ಯಾಯವಾಗಿ ಸೇರಿಕೊಳ್ಳುತ್ತಿವೆ.

ಸಿಂಗ್ ರಥವನ್ನು ತೋಬಾ ಎನ್ನುವ ಸುಂದರಿ ವಾಸಿಸುವ ಸ್ಥಳಕ್ಕೆ ತಿರುಗಿಸು ಎಂದು ಹೇಳುತ್ತಾನೆ. ಆ ಸುಂದರ ದ್ವೀಪದಂತಹ ಆ ಊರು ಮುಂಜಾನೆಯ ಸೂರ್ಯನ ಕಿರಣಗಳಿಂದ ನಳ ನಳಿಸುತ್ತಲಿದೆ. ಪಕ್ಕದಲ್ಲೇ ಜಾಂಬೇದಿ ನದಿ ಹರಿಯುತ್ತಿದೆ. ಆ ಊರು ತಲುಪಿದೊಡನೆ ಅವನ ಬಾಣದಿಂದ ಆ ಹಟ್ಟಿಯನ್ನೇ ಸುಟ್ಟು ಹಾಕುತ್ತಾನೆ. ತೋಬಾ ಕರಕಲಾಗಿ ಆ ಬೆಂಕಿಯ ಕೆಂಡದಲ್ಲಿ ಭಸ್ಮವಾಗಿ ಹೋಗುತ್ತಾಳೆ. ಆ ಬೆಕ್ಕುಗಳೂ ಭಸ್ಮವಾಗಿವೆ. ಇವನೂ ಭಸ್ಮವಾಗಿದ್ದಾನೆ. ಎಲ್ಲವೂ ತಿಳಿಯುತ್ತಿದೆ. ಆದರೆ...

ಇದು ಸತ್ಯವೋ ಮಿಥ್ಯವೋ ಮುಂದೆ ನಡೆಯುವ ಕಾಣ್ಕೆಯೋ ಇವನಿಗೆ ತಿಳಿಯದಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT