ಗಾಂಧೀಜಿ ಮತ್ತು ಗಾಂಧೀವಾದಿಗಳು

7

ಗಾಂಧೀಜಿ ಮತ್ತು ಗಾಂಧೀವಾದಿಗಳು

Published:
Updated:
ಗಾಂಧೀಜಿ ಮತ್ತು ಗಾಂಧೀವಾದಿಗಳು

ಗಾಂಧೀಜಿಯ ಟೀಕಾಕಾರರ ಸಂಖ್ಯೆ ಗಾಂಧೀಜಿಯ ಭಕ್ತರಷ್ಟೇ ಇತ್ತು. ಅದೂ ಅಲ್ಲದೆ ಅವರಲ್ಲಿಯ ಹಲವರ ಅಧಿಕಾರ ಮತ್ತು ಸ್ಥಾನ ಉನ್ನತವೂ ಆಗಿತ್ತು. ಹೀಗಾಗಿ ಅವರ ಕಾರ್ಯ ಹಾಗೂ ವಿಚಾರಗಳನ್ನು ವಿವರವಾಗಿ ಗಮನಿಸಬೇಕಾಗುತ್ತದೆ. ಅದರಲ್ಲಿ ಕೆಲವು ಕೇವಲ ಅವರದ್ದಷ್ಟೇ ಅಲ್ಲ, ಅವರ ಸಂಗಾತಿಗಳ, ಸಮುದಾಯದವರ ಮತ್ತು ಅನುಯಾಯಿಗಳ ಕಥೆಯೂ ಸೇರಿದೆ. ಹಲವರ ಹಿಂದೆ ಅವರ ವಿಚಾರಗಳ ಪ್ರವಾಹವೂ ಇತ್ತು. ಅವುಗಳೆಲ್ಲದರ ಪರಾಮರ್ಶೆಯನ್ನು ಕೈಗೊಳ್ಳುವಾಗ ಒಂದು ವಿಷಯ ಮಾತ್ರ ಎಲ್ಲರೂ ಗಮನಿಸುವಂತಹುದು ಖಂಡಿತಕ್ಕೂ ಇದೆ. ಗಾಂಧೀಜಿಯವರು ತಮ್ಮ ಟೀಕೆಗಳಿಗೆ ಬಹಿರಂಗವಾಗಿ ಎಂದೂ ಉತ್ತರಿಸಲಿಲ್ಲ. ಯಾವುದೇ ಟೀಕಾಕಾರರು ಪತ್ರ ಬರೆದು ತಮ್ಮ ಅಭಿಪ್ರಾಯ ತಿಳಿಸಿದಾಗ, ಅವರೂ ಪತ್ರದ ಮೂಲಕ ಉತ್ತರಿಸುವುದನ್ನು ಬಿಟ್ಟು ಬೇರೆ ಏನೂ ಮಾಡಲಿಲ್ಲ. ನಾಥೂರಾಮ ಅವರ ಮೇಲೆ ಗುಂಡು ಹಾರಿಸಿದಾಗ, ಅವರು ಅವನಿಗೆ ನಮಸ್ಕರಿಸಲೆಂದೇ ಕೈ ಎತ್ತಿದರೆಂಬ ಸತ್ಯವನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ.

ಗಾಂಧೀಜಿ ಹಾಗೂ ಅವರ ವಿಚಾರ ಪ್ರವಾಹಕ್ಕೆ ಅವರ ವಿರೋಧಿಗಳಾಗಲಿ ಅಥವಾ ಟೀಕಾಕಾರರಾಗಲಿ ಹಾನಿಯನ್ನು ಮಾಡಲಿಲ್ಲ. ಆದರೆ ಅಷ್ಟು ಹಾನಿಯನ್ನು ಅವರನ್ನು ದೈವವೆಂದು ಭಾವಿಸುವ, ಸ್ವಂತಕ್ಕೆ ಗಾಂಧೀವಾದಿ ಎಂದುಕೊಳ್ಳುವ ಅವರ ‘ಚೇಲಾ’ಗಳು ಮಾಡಿದರು. ಅವರನ್ನು ಬೇಕೆಂದೇ ಅನುಯಾಯಿ ಎಂದು ಕರೆಯಲಿಲ್ಲ. ಆ ಚೇಲಾಗಳಲ್ಲಿ ನೆಹರೂ–ಪಟೇಲರ, ರಾಜಾಜಿ–ರಾಜೇಂದ್ರ ಬಾಬುಗಳ ಇಲ್ಲವೇ ಮೌಲಾನಾ–ಗಡಿನಾಡ ಗಾಂಧಿಯ ಸಮಾವೇಶವಿಲ್ಲ. ಅವರು ಗಾಂಧೀಜಿಯ ನಿಜವಾದ ಅನುಯಾಯಿಗಳು ಆಗಿದ್ದರು. ಗಾಂಧೀಜಿ ಅವರಿಗೆ ನೀಡಿದ ವಿಚಾರಗಳ ಸ್ವಾತಂತ್ರ್ಯವನ್ನು ಅವರು ಬಳಸುತ್ತಲೂ ಇದ್ದರು. ಅವರು ಗಾಂಧಿಯ ಆಂದೋಲನದಲ್ಲಿದ್ದರು. ಅವರ ಜೊತೆ ಕಾರಾಗೃಹದಲ್ಲಿದ್ದರು, ಹೋರಾಟದಲ್ಲಿದ್ದರು ಮತ್ತು ಶಾಂತಿಯಲ್ಲೂ ಇದ್ದರು. ಗಾಂಧೀಜಿಗೆ ದೊರೆತ ಹೊಗಳಿಕೆಯನ್ನು ಅನುಭವಿಸುವುದರಿಂದ, ಗಾಂಧಿ ಕುರಿತ ಟೀಕಾ ಪ್ರಹಾರವನ್ನೂ ಮೈಮೇಲೆ ಎಳೆದುಕೊಳ್ಳುವ ಮೂಲಕ ಅನುಯಾಯಿ ಆಗುತ್ತಾರೆ. ಆ ತಲೆಮಾರು ಎಂದೋ ಮುಗಿದು ಹೋಗಿದೆ.

ಮುಂದಿನ ಕಾಲದಲ್ಲಿ ತಮ್ಮನ್ನು ಗಾಂಧೀವಾದಿ ಎಂದುಕೊಳ್ಳುವವರು, ಅವರ ವಿಚಾರ ಪರಂಪರೆಯ ಮೇಲೆ ತಮ್ಮ ಹಕ್ಕು ಹೇಳುವವರು, ಆದರೆ ಅವರು ತೋರಿಸಿದ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಹೋಗುವ ಜನಾಂದೋಲನದ ಕಡೆಗೆ ಬೇಕೆಂದೇ ಬೆನ್ನು ತಿರುಗಿಸುವ ಈ ಜನ ಗಾಂಧಿ ಮತ್ತು ಅವರ ವಿಚಾರವನ್ನು ಸಂಪೂರ್ಣ ಹದಗೆಡಿಸಿಬಿಟ್ಟರು. ಆಚಾರ್ಯ ವಿನೋಬಾರ ಜೊತೆಗೆ ಅಥವಾ ಅವರ ಬೆನ್ನು ಹತ್ತಿದವರು, ಗಾಂಧಿ ಪಂಚೆಯನ್ನು ಉಟ್ಟರೂ ಗಾಂಧೀಜಿ ಮಾಡಿದ ಇಲ್ಲವೇ ತೋರಿದ ಎಲ್ಲ ಸಂಘರ್ಷವನ್ನು ತೊರೆದು ಬದುಕುವ ಪ್ರಯತ್ನದಲ್ಲಿದ್ದ ಈ ಜನ ಗಾಂಧಿಯನ್ನು ಜನರಿಂದ ಕೇವಲ ದೂರ ಒಯ್ಯಲಿಲ್ಲ, ಜನರ ಮನದಲ್ಲಿದ್ದ ಗಾಂಧಿಯ ಪ್ರತಿಮೆಯನ್ನು ತೀರಾ ದುರ್ಬಲ ಮತ್ತು ವಿಕೃತಗೊಳಿಸಿದರು. ‘ಮಜಬೂರಿ ಕಾ ನಾಮ್ ಮಹಾತ್ಮಾ ಗಾಂಧೀ’ ಎಂಬ ಮಾತು ಅವರದೇ ಆಚಾರ ವಿಚಾರದಿಂದ ಹೊರಬಂದಿರುವಂತಹದು. ಈ ಜನರಿಗೆ ಗಾಂಧಿ ಅರ್ಥವಾಗಲಿಲ್ಲ. ಅವರಿಗೆ ಅದನ್ನು ಅರ್ಥ ಮಾಡಿಕೊಳ್ಳುವ ಇಚ್ಛೆಯಿರಲಿಲ್ಲವೋ ಅಥವಾ ಅವರ ಅನುಯಾಯಿತನವನ್ನು ಸೇರುವುದು ಅವರ ದೌರ್ಬಲ್ಯಕ್ಕೆ ಸಾಧ್ಯವಿರಲಿಲ್ಲವೋ ಎಂಬುದೇ ಅವರ ಬಗೆಗೆ ಮನದೊಳಗೆ ಮೂಡುವ ಪ್ರಶ್ನೆಯಾಗಿದೆ. ಈ ಜನರು ಗಾಂಧಿಯ ಅನುಯಾಯಿಯೂ ಆಗಿರಲಿಲ್ಲ, ಭಕ್ತರೂ ಆಗಿರಲಿಲ್ಲ. ಅವರು ಅವರ ಪುಣ್ಯದ ಬಲದಿಂದ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಆಶ್ರಿತರಂತೆ ಇರುವವರಾಗಿದ್ದರು. ಈಗಲೂ ಇದ್ದಾರೆ. ಅವರಲ್ಲಿ ಒಂದಿಬ್ಬರು ಜ್ಞಾನಿಗಳನ್ನೋ, ಕಾರ್ಯಕರ್ತರನ್ನೋ ಅಪವಾದವೆಂದು ಬಿಟ್ಟರೂ ಉಳಿದ ಹಿಂಡು ಮಾತ್ರ ಹೀಗೇ ಇತ್ತು ಮತ್ತು ಇದೆ. ಗಾಂಧಿಯ ಹೆಸರಿನಲ್ಲಿ ತಲೆಯೆತ್ತಿದ ಯಾವುದೇ ಆಶ್ರಮಕ್ಕೆ ಇಲ್ಲವೇ ಸಂಸ್ಥೆಗೆ ಹೋಗಿ ಅವರು ಹೀಗಿರುವುದನ್ನು ಕಾಣಬಹುದು. ದೀನರಾಗಿ ಕಾಣುವ, ದುರ್ಬಲರಾಗಿರುವ ಮತ್ತು ಕೆಚ್ಚೆದೆಯ ಸಾದಾ ಕಿಡಿಯೂ ಮೈಯಲ್ಲಿರದ ಈ ನಿಸ್ತೇಜ ಜನರನ್ನು ಸ್ವತಃ ಗಾಂಧಿ ಸಹ ತಮ್ಮ ಜೊತೆಗೆ ಕರೆದುಕೊಳ್ಳದವರಂತೆಯೇ ಇದ್ದಾರೆ.

ಅವರ ಬಗೆಗೆ ಮತ್ತೂ ಒಂದು ವಿಷಯ. ಗಾಂಧಿಯನ್ನು ನೆಹರು ಭೇಟಿಯಾದಾಗ ನೆಹರೂ, ಪಟೇಲರ ವಯಸ್ಸು ಸರಿಸುಮಾರು ಮೂವತ್ತು. ಮೌಲಾನಾ, ಬಾಬು ರಾಜೇಂದ್ರರೂ ಅದೇ ವಯಸ್ಸಿನವರು. ರಾಜಾಜಿಯವರನ್ನು ಹೊರತುಪಡಿಸಿ ಉಳಿದ ಎಲ್ಲ ಸಂಗಾತಿಗಳು, ಅನುಯಾಯಿಗಳು ತರುಣರಾಗಿದ್ದರು. ಅನಂತರದ ಮತ್ತು ಈಗಿನ ಗಾಂಧೀವಾದಿಗಳು ವೃದ್ಧಾಶ್ರಮ ವಾಸಿಗಳೇ ಆಗಿ ಬಿಟ್ಟಿದ್ದಾರೆ. ಅವರತ್ತ ತಾರುಣ್ಯ ಇಣುಕಿ ನೋಡುವದಿಲ್ಲ. ಹೊಸ ವರ್ಗದವರು ಸುಳಿಯುವುದಿಲ್ಲ. ಏಕೆಂದರೆ ಈಗ ಅವರ ಬಳಿ ಹೋಗುವಂತಹದಾಗಲಿ, ಹೇಳುವಂತಹದಾಗಲಿ ಏನೂ ಉಳಿಯಲಿಲ್ಲ. ಗಾಂಧೀಜಿಯ ಹೆಸರಿನಲ್ಲಿರುವ ಎಸ್ಟೇಟ್‌ಗಳನ್ನು ಸಂಭಾಳಿಸುವ ಕೆಲವು ವ್ಯವಸ್ಥಾಪಕರು ಇವತ್ತಿಗೂ ಮೋಜಿನಲ್ಲಿದ್ದಾರೆ. ಅವರಲ್ಲಿ ಗಾಂಧೀಜಿಯ ಕಣವೂ ಇಲ್ಲ.

ಅವರು ಗಾಂಧೀಜಿಯ ವಿದ್ರೂಪ ಗೊಂಬೆಯಾಗುಳಿದಿದ್ದಾರೆ... ಇಂಥ ಅವನತಿ ಏಕಾಯಿತು. ಈ ವರ್ಗ ಗಾಂಧಿಯ ಕಾಲದಲ್ಲೂ ಇತ್ತು. ಅವರು ನಿಷ್ಕಾಮವಾಗಿರುವವರು ಮತ್ತು ಕೇವಲ ಮೆರೆಯುವವರು ಎಂದು ಗಾಂಧೀಜಿಗೂ ಗೊತ್ತಿತ್ತು. ಗಾಂಧೀಜಿ ವಿದರ್ಭದ ಒಂದು ನಗರಕ್ಕೆ ಭೇಟಿ ನೀಡಿದರು. ಅದರ ನಗರಾಧ್ಯಕ್ಷ ಅವರನ್ನು ಅಗಸೆ ಬಾಗಿಲಲ್ಲೇ ಸ್ವಾಗತಿಸಿದ. ಅವನು ಹಾಕಿದ ಹಾರವನ್ನು ತೆಗೆದು ಸನಿಹದ ಕಾರ್ಯಕರ್ತನಿಗೆ ಕೊಟ್ಟು ಗಾಂಧೀಜಿ ಹೇಳಿದರು. ‘ಕ್ಯಾ ಕರತೇ ಹೋ?’ ಅವನು ‘ನಗರಾಧ್ಯಕ್ಷ ಹೂಂ’ ಎಂದು ಉತ್ತರಿಸಿದ. ‘ವೋ ಆಪಕಾ ದಂಧಾ ಹೈ ಕ್ಯಾ?’ ಎಂದು ಗಾಂಧೀಜಿ ಉಪರೋಧದಿಂದ ಪ್ರತಿಕ್ರಿಯಿಸಿದರು.

ಇದೇ ನಗರದ ಮತ್ತೂ ಒಂದು ವಿಷಯವನ್ನು ಗಾಂಧೀಜಿ ಜನರನ್ನು ಹೇಗೆ ಅರಿತಿದ್ದರು ಎಂಬ ಬಗ್ಗೆ ನಮೂದಿಸಬೇಕು. ಆ ನಗರದ ಕೆಲವು ಗುಜರಾತಿ ಸಮುದಾಯದ ಜನರು ಅವರನ್ನು ಭೇಟಿಯಾಗಲು ಅವರ ವಾಸ್ತವ್ಯದ ಸ್ಥಳಕ್ಕೆ ಬಂದರು. ಅವರು ಗಾಂಧೀಜಿಗೆ ಒಂದು ಲಕ್ಷ ರೂಪಾಯಿಯ ಹಮ್ಮಿಣಿಯನ್ನು ನೀಡುವಾಗ ಹೇಳಿದರು. ಗಾಂಧೀಜಿಯ ಕಾರ್ಯಕ್ಕೆ ಹಣವಂತೂ ಬೇಕಿತ್ತು. ಅವರು ಅದನ್ನು ಸ್ವೀಕರಿಸಲು ಒಪ್ಪಿಗೆ ನೀಡಿದರು. ಆದರೆ ಬಂದ ಜನರು ಹೇಳಿದರು ‘ಬಾಪೂ, ನಮ್ಮದೊಂದು ಕರಾರಿದೆ. ನೀವು ನಮ್ಮ ಗುಜರಾತಿ ಭವನಕ್ಕೇ ಬಂದು ಥೈಲಿಯನ್ನು ಸ್ವೀಕರಿಸಬೇಕು’. ಆಗ ಗಾಂಧೀಜಿ ಎಂದರು ‘ನಾನು ಗುಜರಾತಿಯಲ್ಲ, ದೇಶದವನು’. ಅದರಿಂದ ನಿರಾಸೆಗೊಂಡ ಆ ಜನರು ಮರಳಿ ಹೋದರು. ಅವರು ಆ ಹಣವನ್ನು ಗಾಂಧೀಜಿಗೆ ನೀಡಲಿಲ್ಲ. ಆಗ ಗಾಂಧೀಜಿ ತಮ್ಮ ಪ್ರತಿಕ್ರಿಯೆಯನ್ನು ಕಾರ್ಯಕರ್ತರ ಎದುರಿಗೆ ವ್ಯಕ್ತ ಮಾಡಿದರು. ‘ಈ ಘಟನೆಯ ಅರ್ಥವೇನೆಂದರೆ, ಸ್ವರಾಜ್ಯ ಬೇಗ ಸಿಗಲಿದೆ’ ಎಂದು ಮೋಜಿನಿಂದ ಹೇಳಿದರು. ‘ಅದು ಹೇಗೆ?’ ಯಾರೋ ಒಬ್ಬರು ಪ್ರಶ್ನಿಸಿದರು. ‘ಇಲ್ಲದಿದ್ದರೆ ನಮ್ಮ ಜನರು ಇಷ್ಟೆಲ್ಲ ದುಡ್ಡನ್ನು ಅದರಲ್ಲಿ ತೊಡಗಿಸಲು ಬರುತ್ತಿರಲಿಲ್ಲ’ ಎಂದು ಗಾಂಧಿ ಉತ್ತರಿಸಿದರು.

ಗಾಂಧೀಜಿ ಜನರೊಡನೆ ಒಂದಾಗಿ ಬಾಳುವ ನಾಯಕರಾಗಿದ್ದರು. ಹಾಗವರು ಮನುಷ್ಯರನ್ನು ಅರಿಯುವ ಮುಖಂಡರೂ ಆಗಿದ್ದರು. 1937ರ ಚುನಾವಣೆ ಬಳಿಗೆ ಬಂದಾಗ ಪಕ್ಷವನ್ನು ಎಚ್ಚರಿಸಿದ್ದರು... ‘ಪಕ್ಷದ ಟಿಕೇಟು ಪಡೆದು ಸರ್ಕಾರವನ್ನು ಸೇರುವ ಜನರು ಬಳಿಕ ತಾವೇ ಸರ್ಕಾರವಾಗಿ ಬಿಡುತ್ತಾರೆ. ಅವರು ಜನರ ಗೌರವವನ್ನು ಉಳಿಸುವುದಿಲ್ಲ. ಸತ್ತೆಯ ಮೋಹಕ್ಕೆ ಬಲಿಯಾಗುತ್ತಾರೆ. ಅದು ಜನರನ್ನು ಭ್ರಷ್ಟರನ್ನಾಗಿ ಮಾಡುತ್ತದೆ. ಅಂಥವರನ್ನು ಪಕ್ಷದಿಂದ ದೂರವಿಡಿ, ಇಲ್ಲದೆ ಹೋದರೆ ಒಂದು ದಿನ ನಾನೇ ನಮ್ಮವರ ವಿರುದ್ಧ ಆಂದೋಲನ ಮಾಡಬೇಕಾದೀತು...’

ಗಾಂಧಿ ಹೊರಟು ಹೋದರು. ಇಂಥ ಜನರೂ ಮುಕ್ತರಾದರು. ಬಳಿಕ ಅವರಲ್ಲಿಯ ಹಲವರು ಸಂಪತ್ತು ಮಾಡಿಕೊಂಡರು. ಕೆಲವರು ಗಾಂಧೀಜಿಯ ಹೆಸರಿನಲ್ಲಿರುವ ಆಸ್ತಿಯನ್ನು ಹಸ್ತಗತ ಮಾಡಿಕೊಂಡರು. ಒಳಗೊಳಗೇ ಹಂಚಿಕೊಂಡರು. ಹೊರಗಿನವರು ಪಾಲು ಬೇಡಬಾರದೆಂದು ಬಂದೋಬಸ್ತ್ ಸಹ ಮಾಡಿದರು. ದೇಶದ ತುಂಬೆಲ್ಲ ಇರುವ ಗಾಂಧೀಜಿಯ ಸಂಸ್ಥೆಯ ಚಿತ್ರ ‘ಒಳಗಿನಿಂದ ಮುಚ್ಚಿದ’ ರೀತಿಯಲ್ಲಿರುತ್ತದೆ. ಸತ್ತೆ ಪ್ರಾಪ್ತಿಯ ಬಳಿಕ ಕಾಂಗ್ರೆಸ್ ಪಕ್ಷವನ್ನು ಜನಸೇವಾ ಸಂಘದಲ್ಲಿ ವಿಸರ್ಜಿಸಬೇಕು ಎಂದು ಅವರು ಮಾಡಿದ ಈ ಸೂಚನೆಯೂ ಇದೇ ದೃಷ್ಟಿಯಿಂದ ಬಂದಿರುವಂತಹದು. ಸ್ವಾತಂತ್ರ್ಯ ಪ್ರಾಪ್ತಿಯು ದೇಶದ ಎದುರಿನ ಗಾಂಧೀ ಕಾಲದ ಧ್ಯೇಯವಾಗಿತ್ತು. ಅದರ ಪ್ರಾಪ್ತಿಗಾಗಿ ಅವರು ಮತ್ತು ಅವರ ಜೊತೆಗಿನ ಸಂಗಾತಿಗಳೆಲ್ಲರೂ ಪ್ರಾಣವನ್ನೇ ಒತ್ತೆಯಿಟ್ಟರು. ಈ ಸ್ವಾತಂತ್ರ್ಯವು ಜನರ ಇಚ್ಛೆ ಮತ್ತು ಹೋರಾಟದಿಂದ ಬರುವಂತಹದಾಗಿತ್ತು. ಹೀಗಾಗಿ ಈ ಸ್ವಾತಂತ್ರ್ಯದ್ದೂ ಜನರ ಬಗೆಗೆ ಅತೀ ದೊಡ್ಡ ಹೊಣೆಗಾರಿಕೆಯಿತ್ತು... ಬಂಗಾಲ ಪ್ರಾಂತದಲ್ಲಿ 1942ರಲ್ಲಿ ಭೀಕರ ಬರಗಾಲ ಬಿತ್ತು. ಅದು ಕೃತ್ರಿಮವೂ, ವ್ಯಾಪಾರಿಗಳಿಂದಲೇ ನಿರ್ಮಾಣಗೊಂಡಿರುವಂತಹದಾಗಿತ್ತು. ಆಗ 40 ಲಕ್ಷಕ್ಕಿಂತ ಹೆಚ್ಚು ಜನರು ಹಸಿವೆಯಿಂದ ಒದ್ದಾಡಿ ಸತ್ತರು. ಪ್ರತಿದಿನ ನಗರ ಪಾಲಿಕೆಯ ವಾಹನಗಳು ರಸ್ತೆಯಲ್ಲಿ ಬಿದ್ದ ಜನರ ಹೆಣವನ್ನು ಕೊಲ್ಕತ್ತೆಯ ಹೊರಗೆ ಸಾಗಿಸುತ್ತಿದ್ದರು. ಸ್ವಾತಂತ್ರ್ಯ ಸಿಕ್ಕ ಬಳಿಕ 1950ರಲ್ಲಿ ಒರಿಸಾದ ಕಾಲಹಂಡಿಯ ಆದಿವಾಸಿ ಪ್ರದೇಶದಲ್ಲಿ ಹಸಿವೆಯಿಂದ ಒಬ್ಬ ಬಲಿಯಾದ ಸುದ್ದಿ ಬಂತು. ಆ‌ಗ ಸಂವಿಧಾನ ಸಮಿತಿಯ ಕಾಂಗ್ರೆಸಿನ ಸದಸ್ಯರೊಬ್ಬರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ನೆಹರೂ ಅವರನ್ನು ಕೇಳಿದರು. ‘ದೇಶ ಸ್ವತಂತ್ರವಾಗಿದೆ. ನೀವು ಅದರ ಪ್ರಧಾನಿ. ಇಂಥ ಕಾಲ ದೇಶದ ನಾಗರಿಕನೊಬ್ಬನು ಹಸಿವೆಯಿಂದ ಸಾಯುತ್ತಾನೆಂದರೆ ಏನಿದು?’ ಅಂತ ಅವರು ನೆಹರೂರನ್ನು ಪ್ರಶ್ನಿಸಿದರು. ನೆಹರೂ ಶಾಂತವಾಗಿ ಹೇಳಿದರು. ‘ನನಗೆ ಈ ಹುದ್ದೆಯ ಆಸೆಯಿಲ್ಲ. ಆದರೂ ನಿಮ್ಮ ಬೇಡಿಕೆಯಲ್ಲಿರುವ ವಾಸ್ತವವು ನನ್ನನ್ನು ಕಂಗೆಡಿಸಿದೆ. ಎಂಟು ವರ್ಷಗಳ ಹಿಂದೆ ಬಂಗಾಲದ ಬರಗಾಲದಲ್ಲಿ ಲಕ್ಷಾಂತರ ಜನರು ಸತ್ತರು. ಆಗ ಯಾರೂ ಯಾರ ರಾಜೀನಾಮೆ ಬೇಡಲಿಲ್ಲ. ಏಕೆಂದರೆ ರಾಜ್ಯ ಪರಕೀಯರದ್ದಾಗಿತ್ತು. ನಾವಿಂದು ಸ್ವತಂತ್ರರಾಗಿದ್ದೇವೆ. ಹಸಿವೆಯಿಂದ ಅಸು ನೀಗಿದ ಒಬ್ಬನಿಗಾಗಿ ನೀವು ಪ್ರಧಾನಿಯಿಂದ ರಾಜೀನಾಮೆಯನ್ನು ಬೇಡುತ್ತಿದ್ದೀರಿ. ನನ್ನ ಪ್ರಕಾರ ಈ ಸ್ವಾತಂತ್ರ್ಯವು ಮನುಷ್ಯನ ಆಯುಷ್ಯಕ್ಕೆ ಬೆಲೆ ನೀಡಿತು.’ ನೆಹರೂ, ಪಟೇಲ ಹಾಗೂ ಅವರ ಸಂಗಾತಿಗಳಿಗೆ ಅರಿವಾದ ಸ್ವಾತಂತ್ರ್ಯದ ಬೆಲೆ ಮತ್ತೆಷ್ಟು ಜನರಿಗೆ ಗೊತ್ತಾಗಿದೆ?

ಆಗ ರಾಜಕೀಯ ಅಸ್ಥಿರತೆಯಿದ್ದುದರಿಂದ ಕಾಂಗ್ರೆಸನ್ನು ವಿಸರ್ಜಿಸುವುದು ಸಾಧ್ಯವಿರಲಿಲ್ಲ. ಹಲವಾರು ವರ್ಷಗಳ ಕಾಲ ಹೋರಾಡಿ, ಲಭಿಸಿದ ದೇಶಸೇವೆಯ ಅವಕಾಶವನ್ನು ಕಳೆದುಕೊಳ್ಳಲು ಪಕ್ಷದ ಯಾರೂ ಸಿದ್ಧರಿರಲಿಲ್ಲ. ಆದರೆ ಅವರೆಲ್ಲರೂ ಸ್ವಾರ್ಥಿಗಳಾಗಿದ್ದರು ಎಂದು ಭಾವಿಸುವುದು ಅಪರಾಧವಾಗುತ್ತದೆ. ಕಾಂಗ್ರೆಸ್ಸಿನ ತತ್ಕಾಲದ ಸರ್ಕಾರದಲ್ಲಿದ್ದ ಪ್ರತಿಯೊಬ್ಬರೂ ಅವರ ಆಯುಷ್ಯದ 8 ರಿಂದ 11 ವರ್ಷವಾದರೂ ಸೆರೆಮನೆಯಲ್ಲಿ ಕಳೆದಿದ್ದರು. ಆದರೆ ಎಲ್ಲರನ್ನೂ ಸರ್ಕಾರದಲ್ಲಿ ನೇಮಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಹಲವರ ಆರೋಗ್ಯವೂ ಸರಿಯಿರಲಿಲ್ಲ. ಇಂಥ ದೊಡ್ಡ ಹಾಗೂ ಗಾಂಧಿ ವಿಚಾರಕ್ಕಾಗಿ ಮುಡಿಪಾಗಿಟ್ಟವರಿಗಾಗಿ ಸರ್ವೋದಯ ಸಂಘವನ್ನು (ಸರ್ವ ಸೇವಾ ಸಂಘ) ಸ್ಥಾಪಿಸುವ ನಿರ್ಣಯವನ್ನು ಆ ಕಾಲದ ನಾಯಕತ್ವವು ತೆಗೆದುಕೊಂಡಿತು. ಈ ಕಾರಣಕ್ಕಾಗಿ ನೆಹರೂ, ಪಟೇಲ, ರಾಜೇಂದ್ರಬಾಬೂ ಮತ್ತು ರಾಜಾಜಿ ಮುಂತಾದ ನಾಯಕರು ಸೇವಾಗ್ರಾಮಕ್ಕೆ ಬಂದರು. ವಿಧಾಯಕ ಜನಸೇವೆಯ ಬಳುವಳಿಯನ್ನು ಹೊತ್ತವರಿಗಾಗಿ ಈ ಸಂಘವನ್ನು ಸ್ಥಾಪಿಸಲಾಯಿತು. ಅವರ ಸೂತ್ರವನ್ನು ಆಚಾರ್ಯ ವಿನೋಬಾರಂತಹ ನಿಸ್ಪೃಹ ಹಾಗೂ ಜ್ಞಾನಿ ಮನುಷ್ಯನ ಕೈಗೆ ನೀಡಿದರು. ವಿನೋಬಾರವರು ಎರಡೇ ಶಬ್ದಗಳಲ್ಲಿ ಸರ್ವೋದಯದ ವ್ಯಾಖ್ಯೆಯನ್ನು ಮಾಡಿದರು. ‘ಆಧ್ಯಾತ್ಮ ಮತ್ತು ವಿಜ್ಞಾನವೆಂದರೇನೆ ಸರ್ವೋದಯ’.

ವಿನೋಬಾರವರ ವರ್ಚಸ್ಸು ದೊಡ್ಡದಾಗಿತ್ತು. ವ್ಯಕ್ತಿಗತ ಸತ್ಯಾಗ್ರಹದ ಆಂದೋಲನದಲ್ಲಿ ಅವರನ್ನು ಮೊದಲ ಸತ್ಯಾಗ್ರಹಿ ಎಂದು ಗಾಂಧೀಜಿ ಆಯ್ಕೆ ಮಾಡಿದ್ದರು. ಅಧ್ಯಯನ, ಗ್ರಹಿಕೆ, ಜಗತ್‌ಭಾವ ಹಾಗೆಯೇ ಧರ್ಮ, ತತ್ವಜ್ಞಾನ, ವಿಶ್ವ ಸಂಸ್ಕೃತಿಯ ಬಗೆಗಿನ ಅವರ ಓದು, ವ್ಯಾಪಕತೆ ಚಕಿತಗೊಳಿಸುವಂತಹುದು. ಮನುಷ್ಯನ ದಾನವೃತ್ತಿಯನ್ನು ಆಹ್ವಾನಿಸುವ ಅವರ ಶಕ್ತಿಯೂ ತುಂಬ ದೊಡ್ಡದಾಗಿತ್ತು. ಅವರು 1950ರ ಸುಮಾರಿಗೆ ಭೂದಾನದ ಚಳವಳಿಯನ್ನು ಕೈಗೆತ್ತಿಕೊಂಡರು. 42,000 ಮೈಲು ದೇಶದುದ್ದಕ್ಕೂ ಕಾಲ್ನಡಿಗೆಯಿಂದಲೇ ಪ್ರಯಾಣ ಮಾಡುವ ಸಾಮರ್ಥ್ಯ ಆ ಪುಟ್ಟ ದೇಹದಲ್ಲಿತ್ತು. ಅವರ ಗಾಂಧೀನಿಷ್ಠೆ, ತ್ಯಾಗ ಮತ್ತು ಅಧಿಕಾರದ ಪ್ರಭಾವ ಎಷ್ಟು ದೊಡ್ಡದಾಗಿತ್ತೆಂದರೆ– ವಿನೋಬಾರವರ ಭೂದಾನ ಚಳವಳಿಯು 45 ಲಕ್ಷ ಎಕರೆ ಭೂಮಿಯನ್ನು ಸಂಪಾದಿಸುವಂತಾಯಿತು.

ಆದರೆ ವಿನೋಬಾರ ಆಚಾರ ವಿಚಾರದಲ್ಲಿ ಗಾಂಧೀಜಿಯ ಜನ ಸಂಘರ್ಷವಿರಲಿಲ್ಲ. ಜನತೆಯ ಪ್ರಶ್ನೆಗಾಗಿ ಪ್ರಾಣ ಒತ್ತೆಯಿಟ್ಟು ಮುಂದೆ ಹೋಗುವ, ಸಮಯ ಬಂದರೆ ಆಹುತಿ ನೀಡುವ ಸಿದ್ಧತೆಯಿರಲಿಲ್ಲ. ಗಾಂಧೀಜಿಯವರು ಜನಾಂದೋಲನದ ಸೈನಿಕರೂ ಸೇನಾಪತಿಯೂ ಆಗಿದ್ದರು. ಯಾವುದೇ ಆಹ್ವಾನಕ್ಕೆ ಪ್ರತಿ ಆಹ್ವಾನ ನೀಡುವ ಫಲ ಅವರಲ್ಲಿತ್ತು. ಅವರ ನಾಯಕತ್ವದಲ್ಲಿ ನಡೆದ ಬೃಹತ್‌ ಜನಾಂದೋಲನವು ಈ ಹಿಂದೆ ಜಗತ್ತಿನ ಚರಿತ್ರೆಯಲ್ಲಿ ಎಂದೂ ಆಗಿರಲಿಲ್ಲ. ಗಾಂಧಿ ಮತ್ತು ವಿನೋಬಾರ ನಡುವಣ ಮೂಲ ವ್ಯತ್ಯಾಸವೆಂದರೆ ಗಾಂಧಿ– ಸಂಘರ್ಷದ ಹಾಗೂ ವಿನೋಬಾ– ಸಮನ್ವಯದ ಪ್ರತಿನಿಧಿಯಾಗಿದ್ದರು. ಗಾಂಧಿ ಸಂಘರ್ಷಕ್ಕೆ ಮುಖಾಮುಖಿಯಾಗುತ್ತಿದ್ದರು. ವಿನೋಬಾ ಸಂಘರ್ಷವನ್ನು ತಪ್ಪಿಸಿ ಮುನ್ನಡೆಯುತ್ತಿದ್ದರು. ಅವರಿಗೆ ಸಂಘರ್ಷ ಇಷ್ಟವಾಗದೆ ಇರಲು ಕಾರಣವೇನೆಂದರೆ ದೇಶದಲ್ಲಿ ಪರಕೀಯರ ಆಡಳಿತವಿತ್ತು. ಯಾರ ವಿರುದ್ಧ ಹೋರಾಡಬೇಕಾಗಿದೆಯೋ, ಆ ಜನರೂ ನಮ್ಮವರೇ ಎಂಬುದು. ಸಂಘರ್ಷ ಮತ್ತು ಸಮನ್ವಯ ಈ ಎರಡು ಸಂಕಲ್ಪದ ಮೂಲಕವೇ ಗಾಂಧಿ ಮತ್ತು ವಿನೋಬಾ ಇವರಲ್ಲಿ ಪ್ರತ್ಯೇಕತೆಯನ್ನು ಕಾಣಬಹುದಾಗಿದೆ. ಗಾಂಧೀ ಮಾರ್ಗ ಹಿಡಿಯಲಾರದ ಹಲವರು ಅನಂತರ ವಿನೋಬಾರ ಸಮನ್ವಯದ ಸಂಘರ್ಷ ರಹಿತವಾದ ಹಾದಿಯನ್ನು ಸ್ವೀಕರಿಸಿದರು. ವಿನೋಬಾರ ಕನ್ನಡಕದಿಂದ ಮತ್ತು ಅವರ ಆಚಾರ–ವಿಚಾರಗಳಿಂದ ಗಾಂಧಿಯನ್ನು ಅರಿಯುವ ಪ್ರಯತ್ನ ಅವರದಾಗಿತ್ತು. ಗಾಂಧೀಜಿಗೆ ಸಂಘರ್ಷ ಎಂದೂ ತಪ್ಪಲಿಲ್ಲ, ವಿನೋಬಾ ಸಂಘರ್ಷ ಎಂದೂ ಮಾಡಲಿಲ್ಲ. ಅವರು ಸಂಘರ್ಷದ ಪ್ರಶ್ನೆಗಳಿಗೆ ಸುತ್ತು ಬಳಸಿ ಮುನ್ನಡೆಯಲಾರಂಭಿಸಿದರು. ಸಮನ್ವಯದ ವಿನೋಬಾರ ಮೂಲಕ ಗಾಂಧಿಯನ್ನು ನೋಡಿದರೆ ಅವರಲ್ಲಿಯ ಸಂಘರ್ಷ ಕಾಣದಂತಾಗುತ್ತದೆ. ಸಂಘರ್ಷದ ಹೊರತು ಬೇರೆ ಯಾವ ವ್ಯವಹಾರವೂ ತರುಣರಿಗೆ ಆಕರ್ಷಕವೆನಿಸಲಾರದು. ತರುಣವರ್ಗವು ಗಾಂಧಿಯ ಬೋಧನೆಯಿಂದ ದೂರ ಸರಿಯುವ ಮಹತ್ವದ ಕಾರಣವಿದು. ಸಂಘರ್ಷ ರಹಿತ ಗಾಂಧಿಯು ಕೇವಲ ನೂಲು ತೆಗೆಯುವ, ಶರೀರಶ್ರಮ ಮಾಡುವ ಮತ್ತು ಶಾಂತಿಯ ಉಪದೇಶ ಮಾಡುವ ಸಂತನಾಗಿರುತ್ತಾನೆ. ದೇಶದ ಸ್ವಾತಂತ್ರ್ಯಕ್ಕಾಗಿ ಜನಶಕ್ತಿಯನ್ನು ಕಟ್ಟಿ ಹೋರಾಡುವ, ಕಾರಾಗೃಹಕ್ಕೆ ಹೋಗುವ, ಅದಕ್ಕಾಗಿ ಪ್ರಾಣವನ್ನು ಒತ್ತೆಯಿಡುವ ಗಾಂಧಿಯೂ ಕಾಣುವುದಿಲ್ಲ. ಗಾಂಧಿ ತರುಣರ ಮತ್ತು ಅವರ ಕುದಿಯುವ ರಕ್ತದ ನಾಯಕನಾಗಿದ್ದ.

ಗಾಂಧೀಜಿಯ ಬಗ್ಗೆ ವಿನೋಬಾರಿಗೆ ಪೂಜ್ಯ ಭಾವನೆಯಿತ್ತು. ಆದರೆ ಗಾಂಧಿಯ ಸತ್ಯಾಗ್ರಹ ಅವರಿಗೆ ಒಪ್ಪಿಗೆಯಿರಲಿಲ್ಲ. ಆ ಸತ್ಯಾಗ್ರಹದ ಅರ್ಥವನ್ನೂ ಅವರು ಆಧ್ಯಾತ್ಮಿಕ ಪರಿಭಾಷೆಯಲ್ಲಿ ಮಂಡಿಸಿದರು. ‘ಸತ್ಯವೆಂದರೆ ಬ್ರಹ್ಮಸತ್ಯ. ಸತ್ಯಾಗ್ರಹವೆಂದರೆ ಆ ಅಂತಿಮ ಸತ್ಯದ ಆರಾಧನೆ’– ಇದು ಅವರ ನಿಲುವು ಆಗಿತ್ತು. ಈ ನಿಲುವು ನೆಲದೊಂದಿಗೆ ಹೊಂದಿದ ಗಾಂಧಿಯ ಸತ್ಯಾಗ್ರಹದ ಸಂಬಂಧವನ್ನು ಕಡಿದು ಹಾಕುವಂತಹದಾಗಿತ್ತು. ವಿನೋಬಾರ ಸತ್ಯಾಗ್ರಹ ಅಧ್ಯಾತ್ಮದ್ದು, ಅಂತರಿಕ್ಷದ ಪಾತಳಿಯದ್ದು, ಗಾಂಧೀಜಿಯವರ ಸತ್ಯಾಗ್ರಹ ಈ ದೇಶದ ನೆಲದ್ದು.

ಕಾಂಗ್ರೆಸ್ಸನ್ನು ವಿಸರ್ಜಿಸಿ ಎಂಬ ಸಲಹೆಯನ್ನು ಸ್ವಾತಂತ್ರ್ಯ ಪ್ರಾಪ್ತಿಯ ನಂತರ ಆ ಪಕ್ಷದ ನಾಯಕರಿಗೆ ಗಾಂಧೀಜಿ ನೀಡಿದರು. ವಿನೋಬಾರ ಕಾಂಗ್ರೆಸ್‌ ಪ್ರೇಮ ಮಾತ್ರ ಎಂದಿಗೂ ಕಡಿಮೆಯಾಗಲಿಲ್ಲ. ಅವರ ಮನದಲ್ಲಿರುವ ಸರ್ವಧರ್ಮ ಸಮಭಾವದಿಂದ ಇರಬಹುದು ಅಥವಾ ಸೇನಾಧರ್ಮದ ಶ್ರೇಷ್ಠತೆಯ ವಿಷಯದ ಬಗೆಗಿನ ಅವರ ಶ್ರದ್ಧೆಯಿಂದ ಇರಬಹುದು. ಅವರು ಈ ವಿಷಯದ ಬಗೆಗೆ ಬರೆಯುವುದಾಗಲಿ, ಮಾತಾಡುವುದಾಗಲಿ ಮಾಡಲಿಲ್ಲ. ಆದರೂ 1964 ರಲ್ಲಿ ನೆಹರೂ ಅವರ ಸಾವಿನ ಬಳಿಕ ಒಂದಿಷ್ಟು ನಿರಾಶರಾದ ಕಾಂಗ್ರೆಸ್‌ ನಾಯಕರ ಒಂದು ಶಿಷ್ಯ ಮಂಡಲಿ ಅವರನ್ನು ಕಾಣಲು ಹೋಯಿತು. ಆಗ ವಿನೋಬಾ ನುಡಿದರು. ‘ಈಗ ನೆಹರೂ ಇಲ್ಲ, ನಿಮ್ಮ ಎತ್ತಿನ ಜೋಡಿಯೂ ಓಡಿಹೋಗಿದೆ. ನಾನೊಬ್ಬನೇ ನಿಮಗೆ ಎಷ್ಟು ದಿನ ಬೆಂಬಲಕ್ಕೆ ನಿಲ್ಲಬಲ್ಲೆ?’ಚಿತ್ರಗಳು: ವೆಂಕಟ್ರಮಣ ಭಟ್

ಭಾರತದಲ್ಲಿ ವಕೀಲಿ ವೃತ್ತಿ ನಡೆಯಲಿಲ್ಲವೆಂದು ಗಾಂಧಿ ಆಫ್ರಿಕೆಗೆ ತೆರಳಿದರು. ಇಂಥ ಮನಸ್ಥಿತಿಯ ಯಾವುದೇ ವ್ಯಕ್ತಿಯು ಮೊದಲಿಗೆ ತನ್ನ ವ್ಯವಸಾಯದ ಬಗೆಗೆ ಯೋಚಿಸುತ್ತಾನೆ. ಆದರೆ ಗಾಂಧಿಗೆ ಅಲ್ಲಿಯ ಭಾರತಿಯರ ದುರವಸ್ಥೆ ಮೊದಲಿಗೆ ಕಾಣಿಸಿತು. ಅಲ್ಲಿಯ ಗಣಿ ಕಾರ್ಮಿಕರ ಯಾತನೆಯು ಅವರನ್ನು ಕೈಬೀಸಿ ಕರೆಯಿತು. ಭಾರತೀಯರ ಮೇಲೆ ಹೇರಿದ ವಿಶೇಷ ಕರ, ಅವರಿಗೆ ನಿರಾಕರಿಸಲಾದ ಸಾಮಾಜಿಕ ಸ್ಥಾನಮಾನ, ಶ್ರೀಮಂತರೇ ಇರಲಿ ಬಡವರೇ ಇರಲಿ, ಬಿಳಿಯರಿಂದ ಹೆಜ್ಜೆ ಹೆಜ್ಜೆಗೂ ನಡೆಯುವ ಅಪಮಾನ... ಈ ವಿಷಯಗಳೇ ಅವರನ್ನು ವ್ಯಥೆಗೊಳಿಸಿದವು. ದಕ್ಷಿಣ ಆಫ್ರಿಕಾ ಸಹ ಭಾರತದಂತೆಯೇ ಬ್ರಿಟಿಷರ ವಸಾಹತು ಆಗಿತ್ತು. ಹಾಗಾದರೆ ಈ ಸಾಮ್ರಾಜ್ಯವು ತನ್ನದೇ ಎರಡು ಪ್ರಜೆಗಳನ್ನು ಭಿನ್ನ ಹಾಗೂ ವಿಷಮವಾಗಿ ಏಕೆ ನಡೆಸಿಕೊಳ್ಳುತ್ತಿದೆ– ಎಂಬ ಪ್ರಶ್ನೆಯಿಂದ ಕಂಗೆಟ್ಟ ಗಾಂಧೀಜಿ ತನ್ನ ವ್ಯವಸಾಯವನ್ನು ಬದಿಗೊತ್ತಿ ಅಲ್ಲಿಯ ಭಾರತೀಯರ ಹಕ್ಕಿಗಾಗಿ ಸಾಮ್ರಾಜ್ಯಶಾಹಿಯೊಂದಿಗೆ ಹೋರಾಡಲು ಸಿದ್ಧರಾದರು. ಅದಕ್ಕಾಗಿ ಅವರು ಲಾಠಿ ಹೊಡೆತವನ್ನು ಸಹಿಸಿದರು, ಕಾರಾವಾಸವನ್ನು ಅನುಭವಿಸಿದರು, ಪ್ರಾಣಾಂತಿಕ ಹಲ್ಲೆಯನ್ನು ಅನುಭವಿಸಿದರು.

ಬೋರ್‌ ಯುದ್ಧದಲ್ಲಿ ಬ್ರಿಟಿಷ್‌ ಸೈನಿಕರು ಗಾಯಗೊಳ್ಳುತ್ತಿದ್ದರು. ಅವರಿಗಾಗಿ ಆರೈಕೆಯ ತಂಡವನ್ನು ನಿರ್ಮಿಸಲು ಮುಂದಾದರು. ಗಾಯಾಳು ಸೈನಿಕರನ್ನು ಸ್ಟ್ರೆಚರ್‌ ಮೇಲೆ, ಕೆಲವೊಮ್ಮೆ ಬೆನ್ನ ಮೇಲೆ ಹೊತ್ತು ಎಷ್ಟೋ ಮೈಲು ಸಾಗಿಸಿದರು. ಅವರ ಈ ಕಾರ್ಯದಲ್ಲಿ ಕಸ್ತೂರಬಾ ಸಹ ಶಾಮೀಲರಾದರು. ಭಾರತಕ್ಕೆ ಬಂದ ಮೇಲೂ ಅವರು ಅದೇ ವ್ರತವನ್ನು ಮುಂದುವರೆಸಿದರು. ಅಲ್ಲಿಯ ರೈತರ ಕರುಣಾಜನಕ ಕಥೆ ಅವರನ್ನು ಅಲ್ಲಿಗೆ ಎಳೆದೊಯ್ದಿತು. ಅವರ ಜೊತೆಗಿದ್ದು ಅವರ ನ್ಯಾಯಾಲಯದ ಹೋರಾಟವನ್ನು ಮುಂದುವರೆಸಿ ಅವರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಿದರು. ಭಂಗಿಗಳ ಮುಕ್ತಿಗಾಗಿ, ಅಸ್ಪೃಶ್ಯರ ಉದ್ಧಾರಕ್ಕಾಗಿ, ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಕುಷ್ಟರೋಗಿಗಳ ಸೇವೆಗಾಗಿ ಅವರು ಭಾರತದಲ್ಲಿ ಸಾತತ್ಯದಿಂದ ಪರಿಶ್ರಮ ಮಾಡಲಾರಂಭಿಸಿದರು. ಅವರನ್ನು ಕಾಡುತ್ತಿರುವ ಪ್ರಶ್ನೆಗಳು ಗಾಂಧೀವಾದಿ ಎಂದು ಕರೆಸಿಕೊಳ್ಳುವ ಇತರರಿಗೂ ಕಾಣಿಸುತ್ತಲೇ ಇತ್ತು. ಆಗ ಮತ್ತು ಈಗಲೂ ಆ ಪ್ರಶ್ನೆಗಳು ಹಾಗೇ ಇವೆ. ದಾರಿದ್ರ್ಯ, ವಿಷಮತೆ, ದಲಿತರ ಮೇಲಿನ ದೌರ್ಜನ್ಯ, ಗಿರಿಜನರ ಲೂಟಿ, ಅಲ್ಪಸಂಖ್ಯಾತರ ಪ್ರಶ್ನೆ, ಸ್ತ್ರೀಯರ ಸಂಕಟ, ರೈತರ ಒದ್ದಾಟ, ಅಪೌಷ್ಟಿಕತೆ. ಈ ವಿಷಯಗಳು ಹಿಂದೆಯೂ ಇತ್ತು. ಇಂದಿಗೂ ಇವೆ. ಆದರೆ ಅವುಗಳೆಲ್ಲ ಗಾಂಧೀಜಿಗೆ ಕಂಡವು. ಹಾಗೆ ಗಾಂಧೀವಾದಿ ಎನಿಸಿಕೊಳ್ಳುವ ಅನಂತರದ ಜನರಿಗೆ ಕಾಣಲಿಲ್ಲ.

ಪ್ರತಿಯೊಂದು ಪ್ರಶ್ನೆ ಬೇರೆ, ಅವುಗಳ ಉತ್ತರವೂ ಬೇರೆಯಾಗಿರುತ್ತದೆ. ಎಲ್ಲ ಪ್ರಶ್ನೆಗಳಿಗೆ ಸ್ವಾತಂತ್ರ್ಯ ಒಂದೇ ರಾಮಬಾಣ ಉಪಾಯವಾಗಿದೆ ಎಂದೇನೂ ಗಾಂಧೀಜಿ ಭಾವಿಸಿರಲಿಲ್ಲ. ಪ್ರತಿಯೊಂದು ವರ್ಗಕ್ಕೆ, ಪ್ರತಿಯೊಂದು ವ್ಯಥೆಗೆ ಬೇರೆ– ಬೇರೆ ಯೋಜನೆಗಳಿದ್ದವು. ಅದನ್ನವರು ತಮ್ಮದೇ ರೀತಿಯಲ್ಲಿ ಬಿಡಿಸುತ್ತಿದ್ದರು. ಹೀಗಿರುವಾಗ ವಿನೋಬಾ ಹಾಗೂ ಅವರ ಅನುಯಾಯಿಗಳಿಗೆ ಮಾತ್ರ ಭೂದಾನವೇ ಸಕಲ ಸಾಮಾಜಿಕ ರೋಗಗಳಿಗೆ ಏಕಮೇವ ಮದ್ದು ಎಂದೆನಿಸಲು ಕಾರಣವೇನು? ಅವರಿಗೆ ಗಾಂಧಿ ಅರ್ಥವಾಗಲಿಲ್ಲವೋ ಅಥವಾ ಅರ್ಥವಾದ ಬಳಿಕವೂ ಅವರ ಬಹುವಿಧ ದೃಷ್ಟಿ ಮತ್ತು ಏಕ ಕಾಲಕ್ಕೆ ಹಲವು ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯ ಅವರಲ್ಲಿರಲಿಲ್ವೆ?

ತಮ್ಮ ರಾಜಕೀಯ ಹಕ್ಕಿಗಾಗಿ ಜನಸಾಮಾನ್ಯರು ಸಂಘಟಿತರಾದ, ಸತ್ತೆಯ ವಿರುದ್ಧ ಹೋರಾಡಿದ ಕೆಲವೇ ಉದಾಹರಣೆ ಜಗತ್ತಿನ ಚರಿತ್ರೆಯಲ್ಲಿ ಕಾಣಬರುತ್ತದೆ. ಇಂಗ್ಲೆಂಡಿನಲ್ಲಿಯ ಸಾಮಂತರು, ಉಚ್ಚ ವರ್ಗದವರು ರಾಜಕೀಯ ಹಕ್ಕಿಗಾಗಿ ಮೊದಲನೇ ಜೇಮ್ಸ್‌ ಎಂಬ ರಾಜನ ವಿರುದ್ಧ ಒಗ್ಗೂಡಿ ಇಂಥ ಹೋರಾಟವನ್ನು 1215 ರಲ್ಲಿ ನಡೆಸಿದರು. ಪರಾಭವಗೊಂಡ ರಾಜನಿಂದ ಅವರು ಜನರಿಗಾಗಿ ಒಂದು ಹಕ್ಕಿನ ಸನದನ್ನು (ಮೆಗ್ನಾಕಾರ್ಟ) ಬೇಡಿ ಪಡೆದರು. ಕಾನೂನಿನ ಸಹಾಯದಿಂದ ಯಾರನ್ನೂ ಬಂಧಿಸಲಾಗುವದಿಲ್ಲ ಎಂಬ ಮಹತ್ವದ ಅಧಿಕಾರ ಜನತೆಗೆ ಲಭಿಸಿತು. ಜೇಮ್ಸ್‌ ನಂತರ ಬಂದ ಅವನ ಮಗ ಚಾರ್ಲ್ಸ್‌ ಇವನು ಈ ಹಕ್ಕಿನ ಬಗೆಗೆ ನಿರ್ಲಕ್ಷ್ಯ ಮಾಡಲಾರಂಭಿಸಿದಾಗ ಅವನ ವಿರುದ್ಧ ಮತ್ತೆ ಜನಾಂದೋಲನ ಶುರುವಾಯಿತು. ಅದರಲ್ಲಿ ಪರಾಭವಗೊಂಡ ರಾಜನನ್ನು ನೇರವಾಗಿ ನೇಣಿಗೇರಿಸಿದರು. ಇಂಥ ಜನಾಂದೋಲನದ ಒಂದು ಜ್ವಲಂತ ಉದಾಹರಣೆಯು ಮಹಾರಾಷ್ಟ್ರದ ಚರಿತ್ರೆಯಲ್ಲಿದೆ. ಶಿವಾಜಿಯ ಸಾವು 1680 ರಲ್ಲಾಯಿತು. ಸಂಭಾಜಿ ರಾಜನ ಕೊನೆ 1691 ರಲ್ಲಾಯಿತು. ಆನಂತರ ರಾಜಾರಾಮ ಜಿಂಜಿಗೆ ಹೋಗುತ್ತಾನೆ. ಮರಾಠರಿಗೆ ರಾಜನೂ ಇಲ್ಲ, ಸೇನಾಪತಿಯೂ ಇಲ್ಲ. ಸಕಾಲಕ್ಕೆ ಸಿಗುವ ವೇತನವಿರುವುದಿಲ್ಲ. ಮರಳಿ ಹೋಗಿ ಅಡಗಲು ಕೋಟೆಗಳೂ ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಬಡ ಮಾವಳರು 1691–1707 ವರೆಗೆ ಎದುರಾಗಿರುವ ಔರಂಗಜೇಬನ ಆರು ಲಕ್ಷ ಸೈನಿಕರೊಂದಿಗೆ ಧೈರ್ಯದಿಂದ ಹೋರಾಡುತ್ತಾರೆ. ಕೊನೆಗೆ ಔರಂಗಜೇಬ ಮಡಿಯುತ್ತಾನೆ, ಮರಾಠರು ಗೆಲ್ಲುತ್ತಾರೆ. ನಾಯಕತ್ವವಿಲ್ಲದಿದ್ದರೂ ಈ ಕೆಚ್ಚೆದೆಯ ಮಾವಳರಿಗೆ ಹೋರಾಡುವ ಪ್ರೇರಣೆಯು ಶಿವಾಜಿಯಿಂದ ಸಿಕ್ಕಿದ್ದು. ಇದು ಜನಾಂದೋಲನದ ಭಾರತದ ಪಾಲು. ಅನಂತರದ ಜನಾಂದೋಲನವು ಗಾಂಧೀಜಿಯದ್ದೇ. ರಾಜನೂ, ಸೇನಾಪತಿಯೂ ಇಲ್ಲ. ಕೈಯಲ್ಲಿ ಶಸ್ತ್ರವಿಲ್ಲದೆ ವಿಶ್ವದ ಅತೀ ದೊಡ್ಡ ಸಾಮ್ರಾಜ್ಯಶಾಹಿಯ ವಿರುದ್ಧ ನಡೆದ ಹೋರಾಟ ಇದು. ಅಲ್ಲಿವರೆಗೆ ನಮ್ಮ ಚರಿತ್ರೆಯು ರಾಜ ಮಹಾರಾಜರ ಹೋರಾಟದ, ಸಂಧಾನದ ಕಥೆಯಿಂದ ಕೂಡಿದೆ. ರಾಜರು ದೊಡ್ಡವರಾಗುವ ಇಲ್ಲವೇ ಅವನತಿ ಹೊಂದಿದ ಕಥೆ. ಭಾರತದ ಚರಿತ್ರೆಯಲ್ಲಿ ಜನತೆ ಎಲ್ಲೂ ಕಾಣಿಸುವುದಿಲ್ಲ, ಭಾರತೀಯ ಜನತೆಯ ಇತಿಹಾಸವು ಗಾಂಧೀಜಿಯಿಂದ ಶುರುವಾಗುತ್ತದೆ. ಒಂದು ದಿನ ಇಡೀ ದೇಶವೇ ಅವರ ಸೈನ್ಯವಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡುವುದನ್ನು ಕಾಣುತ್ತೇವೆ.

ಗಾಂಧೀಜಿಯ ನಾಯಕತ್ವದಲ್ಲಿ ಭಾರತದಲ್ಲಿ ನಡೆದ ಜನಾಂದೋಲನವು ಜಗತ್ತಿನ ಚರಿತ್ರೆಯಲ್ಲೇ ದೊಡ್ಡದು. ಅವರಿಗೆ ಲಭಿಸಿದಷ್ಟು ಸೈನಿಕರು, ಚರಿತ್ರೆಯಲ್ಲಿ ಯಾವ ನಾಯಕನಿಗೂ, ರಾಜನಿಗೂ, ಧರ್ಮ ಸಂಸ್ಥಾಪಕರಿಗೂ ಲಭಿಸಲಿಲ್ಲ. ಬುದ್ಧನ ಭಿಕ್ಕು ಸಂಘದಲ್ಲಿ ಎಷ್ಟು ಜನರಿದ್ದರು? ಏಸುವಿನ ಅಂತಿಮ ಕಾಲದಲ್ಲಿ ಅವನ ಜೊತೆಗೆ ಕೇವಲ ಹನ್ನೆರಡೇ ಜನರಿದ್ದರು. ಅವರಲ್ಲೂ ಒಬ್ಬ ಕೊನೆಗೆ ಮೋಸ ಮಾಡಿದ. ರಾಮಕೃಷ್ಣರಿಗಾಗಲಿ, ಉಳಿದ ಯಾರಿಗೇ ಆಗಲಿ ಗಾಂಧಿಯಷ್ಟು ಜನಾಂದೋಲನದ ಸೈನಿಕರು ಲಭಿಸಲಿಲ್ಲ. ಅದರಲ್ಲೂ ಈ ಸೈನಿಕರು ನಿಶ್ಶಸ್ತ್ರಧಾರಿಗಳು, ಶಸ್ತ್ರ ಹಿಡಿಯದೆ ವಿಜಯಿಗಳಾಗುವ ಪ್ರೇರಣೆಯನ್ನು ಪಡೆದವರು. ಗಾಂಧಿಯವರು 1942ರ ಆಗಸ್ಟ್‌ ತಿಂಗಳಲ್ಲಿ ‘ಚಲೇ ಜಾವ್‌’ ಎಂಬ ಘೋಷಣೆಯ ಮೂಲಕ ವಿಶ್ವದಲ್ಲೇ ಅತೀ ದೊಡ್ಡ ಜನಾಂದೋಲನವನ್ನು ಭಾರತದಲ್ಲಿ ಕಟ್ಟಿದರು. ನಾಯಕರಿಲ್ಲದೆ ಈ ಆಂದೋಲನ ಶುರುವಾಯಿತು. ಆಂದೋಲನದ ಘೋಷಣೆ ಹಾಕಿದ್ದೇ ತಡ ಬ್ರಿಟಿಷ್‌ ಸರಕಾರವು ಗಾಂಧಿ, ನೆಹರೂ, ಪಟೇಲ, ಆಝಾದ್‌ ಮುಂತಾದ ಕಾಂಗ್ರೆಸ್‌ ಕಾರ್ಯಕಾರಿಣಿಯ ಸಕಲ ನಾಯಕರನ್ನು ಬಂಧಿಸಿ, ಕಾರಾಗೃಹಕ್ಕೆ ತಳ್ಳಿತು. ಮುಂದಿನ ಹೋರಾಟವನ್ನು ಜನತೆ ಮುಂದುವರೆಸಿತು. ಈ ಹೋರಾಟ ಮುಖ್ಯವಾಗಿ ಶಾಂತತೆಯಿಂದ ಕೂಡಿತ್ತು. ಕೆಲವು ಕಡೆಗಳಲ್ಲಿ ಹಿಂಸಾಚಾರವೂ ಕಂಡುಬಂತು. ಈ ಹೋರಾಟದಲ್ಲಿ ಜನರು 550 ಕ್ಕಿಂತ ಹೆಚ್ಚು ಪೊಲೀಸ್‌ ಠಾಣೆಗಳನ್ನು ವಿಧ್ವಂಸಗೊಳಿಸದರು. 400ಕ್ಕೂ ಹೆಚ್ಚು ರೈಲು ನಿಲ್ದಾಣಗಳಿಗೆ ಬೆಂಕಿ ಹಚ್ಚಿದರು. ಸರಕಾರ ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಿತು. ಆದರೂ ಹೋರಾಟ ಹಾಗೇ ಮುಂದುವರಿಯಿತು. ಜಗತ್ತಿನ ಅತಿ ದೊಡ್ಡ ಮತ್ತು ಬಲಾಢ್ಯ ಸತ್ತೆಯೊಂದಿಗೆ ನಿಶಸ್ತ್ರಧಾರಿಗಳು ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಿರುವ ಘಟನೆಯನ್ನು ಜಗತ್ತು ಮೊದಲ ಬಾರಿಗೆ ನೋಡುತ್ತಿತ್ತು. ಈ ಹೋರಾಟವು ಬರೇ ಇಂಗ್ಲೆಂಡಷ್ಟೇ ಅಲ್ಲ, ಅಮೆರಿಕೆಯ ಸರಕಾರವನ್ನೂ ನಡುಗಿಸಿಬಿಟ್ಟಿತು. ಆಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಚರ್ಚಿಲ್‌ ಅವರು ‘ವಿಸರ್ಜನೆಯಾಗುತ್ತಿರುವ ಸಾಮ್ರಾಜ್ಯದ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲು ನಾನು ಪ್ರಧಾನಿಯಾಗಲಿಲ್ಲ’ ಎಂದವರು ನುಡಿದರು. ಆದರೂ ಅಮೆರಿಕೆಯ ಅಧ್ಯಕ್ಷರಾದ ಫ್ರಾಂಕ್ಲಿನ್‌ ರೂಜ್‌ವೆಲ್ಟ್‌ ಇವರ ಒತ್ತಡಕ್ಕೆ ಮಣಿದು ಭಾರತದ ಜನರು ಹಾಗೂ ಅದರ ನಾಯಕರೊಂದಿಗೆ ತಮ್ಮ ಪ್ರತಿನಿಧಿಯ ಮೂಲಕ ಮಾತಾಡಲು ರಾಜಿಯಾದರು. ಅದಕ್ಕಾಗಿ ಅವರು ಸರ್‌ ಸ್ಟ್ರಾಫೊರ್ಡ್‌ ಕ್ರಿಪ್ಸ್‌ ಇವರ ನೇತೃತ್ವದಲ್ಲಿ ಒಂದು ಶಿಷ್ಟ ಮಂಡಳಿಯನ್ನು ಭಾರತಕ್ಕೆ ಕಳಿಸಿದರು. ಇವರು ದೇಶಕ್ಕೆ ಸ್ವಾತಂತ್ರ್ಯ ನೀಡುವ ಯೋಜನೆಯನ್ನು ರೂಪಿಸಿಕೊಂಡೇ ಇಲ್ಲಿಯ ನಾಯಕರನ್ನು ಭೇಟಿಯಾದರು.

ಗಾಂಧೀಜಿಯ ಜೀವನದ ಎಲ್ಲಕ್ಕಿಂತ ಮಹತ್ವದ ಸಂಗತಿ, ಅವರು ಆರಂಭಿಸಿದ ಜನಾಂದೋಲನದಲ್ಲಿದೆ. ಇಂಥ ಜನಾಂದೋಲನವನ್ನು ಶುರು ಮಾಡಲು ಅದರ ಪ್ರೇರಣೆ ನೀಡುವ ಮನುಷ್ಯ ತುಂಬ ದೊಡ್ಡವನಾಗಿರಬೇಕಾಗುತ್ತದೆ. ಅವನ ಶಬ್ದದಲ್ಲಿ ಮಂತ್ರದ ಸಾಮರ್ಥ್ಯವಿರಬೇಕಾಗುತ್ತದೆ. ಗಾಂಧೀಜಿಯ ಶಬ್ದದಲ್ಲಿ ಈ ಸಾಮರ್ಥ್ಯವಿತ್ತು. ಅವರದನ್ನು ಜೀವನವಿಡೀ ಸಮಾಜಕ್ಕಾಗಿ ಮಾಡಿದ ತ್ಯಾಗ ಮತ್ತು ಸತ್ಯದ ಮಾರ್ಗದಿಂದ ಗಳಿಸಿದ್ದರು. ಸ್ವಂತಕ್ಕೆ ಗಾಂಧೀವಾದಿ ಎಂದು ಕರೆಸಿಕೊಳ್ಳುತ್ತಿರುವವರು ಈ ಜನಾಂದೋಲನವನ್ನು ಕೈಬಿಟ್ಟು ಕೇವಲ ಗಾಂಧಿಯನ್ನು ಸ್ವೀಕರಿಸಿದರು, ಅದನ್ನಷ್ಟೇ ಜನರಿಗೆ ಹೇಳಿದರು. ಅದು ದಿಟವಾಗಿರಲಿಲ್ಲ. ಜನರಿಗೆ ಮೆಚ್ಚುಗೆಯಾಗುವಂತಹದೂ ಆಗಿರಲಿಲ್ಲ. ಅನುಯಾಯಿಗಳು ಮಾಡಿದ ನಾಯಕತ್ವದ ದಾರುಣ ಪರಾಭವ ಸಹ ಚರಿತ್ರೆಯಲ್ಲಿ ಬೇರೊಂದಿರಲಿಕ್ಕಿಲ್ಲ.

***

ಗಾಂಧಿ ಹೇಳಿದ್ದರಲ್ಲಿ ಹೊಸದೇನಿದೆ?

ಗಾಂಧೀವಾದ ಎಂಬ ಯಾವ ವಾದವೂ ಅಸ್ತಿತ್ವದಲ್ಲಿರಲಿಲ್ಲ. ಗಾಂಧಿಯವರು ತಮ್ಮ ವೈಚಾರಿಕ ನಿಲುವನ್ನು ಎಂದೂ ಸೂತ್ರಬದ್ಧವಾಗಿ ಮಂಡಿಸಲಿಲ್ಲ. ಆ ವಿಚಾರಗಳಿಗೆ ಬದ್ಧರಾಗಿರುವಂತೆ ಯಾವ ಪ್ರತಿಜ್ಞೆಯನ್ನೂ ಅವರು ತಮ್ಮ ಅನುಯಾಯಿಗಳಿಗೆ ಸ್ವೀಕರಿಸಲು ಹೇಳಲಿಲ್ಲ. ಗಾಂಧಿಯ ಕಾಲಕ್ಕನುಗುಣವಾಗಿ ಬದಲಾಗುತ್ತ ಹೋದ ಮತ್ತು ಸದಾ ಕಾಲದ ಹಾಗೂ ಜನರ ಜೊತೆಗಿರುವ ವಿಚಾರ ಪ್ರವಾಹ ಎಲ್ಲಿಯವರೆಗೆ ಪ್ರವಾಹಿಯಾಗಿರುವದೋ ಅಲ್ಲಿವರೆಗೆ ವಾದವಾಗುವುದಿಲ್ಲ. ಅದಕ್ಕೆ ಪೂರ್ಣ ವಿರಾಮ ನೀಡಿದರೆ ಇಲ್ಲವೇ ಲಭಿಸಿದರೆ ಮಾತ್ರ ವಾದವಾಗುತ್ತದೆ.

ಗಾಂಧೀಜಿಯ ವಿಚಾರದಲ್ಲಿ ಹೊಸದೇನಿದೆ– ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಸತ್ಯದ ಆಗ್ರಹ ಇಲ್ಲವೇ ಅಹಿಂಸೆಯ ಹಾದಿ ಹಳೆಯದೇ. ಗಾಂಧಿಯವರೇ ಸಾಕ್ರಟಿಸ್‌ನನ್ನು ವಿಶ್ವದ ಮೊದಲ ಸತ್ಯಾಗ್ರಹಿ ಎಂದಿದ್ದಾರೆ. ಅವನ ಕಾಲ ಕ್ರಿ.ಪೂ. 300. ಅಹಿಂಸಾ ಮಾರ್ಗದವರು ಇಬ್ಬರು– ಮಹಾವೀರ ಹಾಗೂ ಬುದ್ಧ. ಅವರು ಕ್ರಿ.ಪೂ 600 ವರ್ಷದ ಹಿಂದಿನವರು. ಮನುಷ್ಯ ಧರ್ಮದ ಆಗ್ರಹ ಜಗತ್ತಿನ ಎಲ್ಲೆಡೆ ಇದೆ. ಸಾರ್ವತ್ರಿಕ, ಸಾರ್ವಕಾಲಿಕ ಮೌಲ್ಯಕ್ಕೆ ಸನಾತನವೆನ್ನುತ್ತಾರೆ. ಗಾಂಧೀಜಿ ಸ್ವತಃ ತಮ್ಮನ್ನು ಸನಾತನಿ ಎಂದಿದ್ದಾರೆ. ಹೀಗಾಗಿ ಅವರು ಸಾರ್ವತ್ರಿಕ– ಸಾರ್ವಕಾಲಿಕರಾಗಿದ್ದಾರೆ. ವರ್ಗ, ಸಮೂಹ, ಜಾತಿ, ಧರ್ಮ, ಪಂಥ ಇಲ್ಲವೇ ದೇಶ– ಇವು ತಮ್ಮ ವಿಚಾರದೊಂದಿಗೆ ಕಾಲಬದ್ಧತೆಯನ್ನೂ ತರುತ್ತವೆ. ಈ ಮಿತಿಯ ಗಾಂಧಿಯನ್ನು ಬಾಧಿಸಲಿಲ್ಲ. ಅವರು ಎಂದೆಂದಿಗೂ ವೈಶ್ವಿಕರಾಗಿದ್ದರು. ಹೀಗಾಗಿ ಗಾಂಧಿ ಎಲ್ಲೆಡೆ ಇದ್ದಾರೆ, ಗಾಂಧೀವಾದಿಗಳು ಮಾತ್ರ ಅವರ ಆಶ್ರಮದ ಬೇಲಿಯೊಳಗೆ ಸಿಲುಕಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry