ಕಾಡೂರಿನ ಮೈಲಾರಿ

7

ಕಾಡೂರಿನ ಮೈಲಾರಿ

Published:
Updated:

ಬಹಳ ವರ್ಷಗಳ ಹಿಂದೆ ಅಘನಾಶಿನಿ ನದಿ ದಡದಲ್ಲಿ ಒಂದು ದೊಡ್ಡ ಕಾಡಿತ್ತು. ಅದೆಷ್ಟು ದೊಡ್ಡದೆಂದರೆ ಒಮ್ಮೆ ದಾರಿ ತಪ್ಪಿದರೆ ಹೊರಬರಲಾಗದೇ ದಿನಗಟ್ಟಲೆ ಅಲೆಯುವಂತಾಗುತ್ತಿತ್ತು. ಅಂತಹ ದಟ್ಟ ಕಾಡಿನ ಮಧ್ಯದಲ್ಲಿ ಕಾಡೂರು ಎಂಬ ಹಳ್ಳಿಯಿತ್ತು. ಕಾಡನ್ನೇ ಕಡಿದು ಅಲ್ಲಿಯ ಜನ ಮನೆಗಳನ್ನು ಕಟ್ಟಿ ವಾಸಿಸತೊಡಗಿದ್ದರಿಂದ ಆ ಹಳ್ಳಿಗೆ ಕಾಡೂರು ಎಂಬ ಹೆಸರು. ಕಾಡೂರಿನ ಜನರು ಯಾವುದಕ್ಕೂ ಅತಿಯಾಸೆ ಪಡದೆ ಇದ್ದುದರಲ್ಲಿಯೇ ನೆಮ್ಮದಿಯ ಜೀವನ ನಡೆಸುತ್ತಿದ್ದರು.

ಈ ಹಳ್ಳಿಗೆ ಅಪವಾದವೆಂಬಂತೆ ಮೈಲಾರಿ ಎಂಬುವವನೊಬ್ಬನಿದ್ದ. ಮೈಲಾರಿಗೆ ಅತಿಯಾಸೆಯ ದುರ್ಬುದ್ಧಿ. ಇಡೀ ಹಳ್ಳಿಗೆ ತಾನೇ ಶ್ರೀಮಂತನೆನಿಸಿಕೊಳ್ಳಬೇಕು, ಎಲ್ಲರೂ ತನ್ನನ್ನು ನೋಡಿ ಹೊಟ್ಟೆಕಿಚ್ಚು ಪಡಬೇಕು, ಯಾರಿಗೂ ಸಿಗದ ಐಶ್ವರ್ಯ ತನಗೆ ದೊರಕಬೇಕು... ಇತ್ಯಾದಿ ಹುಚ್ಚು ಯೋಚನೆಗಳಲ್ಲಿಯೇ ಕಾಲ ಕಳೆಯುತ್ತಿದ್ದ. ಅವನ ಈ ಕೆಟ್ಟ ಬುದ್ಧಿಯಿಂದಾಗಿ ಯಾರಿಗೂ ಮೈಲಾರಿ ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲವಾದರೂ ಮೈಲಾರಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇರಲಿಲ್ಲ.

ಕಾಡೂರಿನ ಸಮೀಪದಲ್ಲೇ ಬಂಗಾರ ಪರ್ವತವೆಂಬ ದೊಡ್ಡ ಬೆಟ್ಟ. ಬೆಳಗಿನ ಸೂರ್ಯಕಿರಣಗಳು ಬೆಟ್ಟದ ತುದಿಯಿಂದ ಬಂಗಾರದ ಕಿರಣಗಳಂತೆ ಹೊರಹೊಮ್ಮಿ ಊರಿನವರ ಪಾಲಿಗೆ ಮಾಯಾಲೋಕವನ್ನೇ ಸೃಷ್ಟಿಸುತ್ತಿತ್ತು. ಬಂಗಾರ ಪರ್ವತವೇ ಊರಿನ ದೈವ. ವರ್ಷಕ್ಕೊಮ್ಮೆ ದೊಡ್ಡ ಪೂಜೆ ನಡೆಯುತ್ತಿತ್ತು. ಮನೆ ಮನೆಯಲ್ಲೂ ಸಿಹಿಯಡುಗೆ ಮಾಡಿ ಎಲ್ಲರ ಮನೆಗೂ ಹಂಚಿ ಊರವರೆಲ್ಲ ಸೇರಿ ಬೆಟ್ಟದಲ್ಲಿ ಕುಳಿತು ಊಟ ಮಾಡುತ್ತಿದ್ದರು.

ಬಂಗಾರ ಪರ್ವತದ ಒಂದು ಮರದಲ್ಲಿ ವರ್ಷಕ್ಕೊಮ್ಮೆ ಸುಂದರ ಹೂವು ಬಿಡುತ್ತಿತ್ತು. ಅದರ ಸುವಾಸನೆ ಅದೆಷ್ಟು ಗಾಢವಾಗಿರುತ್ತಿತ್ತೆಂದರೆ ಮೊಗ್ಗಾಗುತ್ತಿದ್ದ ಕಾಲಕ್ಕೇ ಇಡೀ ಊರಿಗೇ ಅದರ ಪರಿಮಳ ಹರಡಿಬಿಡುತ್ತಿತ್ತು. ಕಾರಣವೇ ಇಲ್ಲದಿದ್ದರೂ ಎಲ್ಲರೂ ನಗುನಗುತ್ತ ಖುಷಿಯಾಗಿರುತ್ತಿದ್ದರು. ಇದೆಲ್ಲ ಆಗುತ್ತಿದ್ದುದು ಆ ಹೂವಿನಿಂದಾಗಿ ಎನ್ನುವುದು ಎಲ್ಲರಿಗೂ ತಿಳಿದಿತ್ತು. ವರ್ಷವೂ ಬಂಗಾರ ಹಬ್ಬದ ಸಿದ್ಧತೆ ಆಗ ಪ್ರಾರಂಭವಾಗುತ್ತಿತ್ತು

ಬಂಗಾರಪುಷ್ಪ ದೇವರ ವರವೆಂದೇ ಊರಿನವರ ನಂಬಿಕೆ. ಅದಕ್ಕೆ ಕಾರಣವೂ ಇದೆ. ಇಂತಹ ಹೂವನ್ನು ಎಲ್ಲೂ ಯಾರೂ ಕಂಡವರಿರಲಿಲ್ಲ. ವಿಚಿತ್ರವೆಂದರೆ ಬಂಗಾರ ಪುಷ್ಪ ಮೊಗ್ಗಾಗಿ, ಹೂವಾಗಿ ಪರಿಮಳ ಹರಡುತ್ತಾ ಇರುವಷ್ಟು ಕಾಲ ಎಲ್ಲರ ರೋಗರುಜಿನಗಳೂ ಮಾಯವಾಗುತ್ತಿದ್ದವು. ವಯಸ್ಸಾದವರಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುತ್ತಿತ್ತು, ಮಕ್ಕಳು ಅಳುವುದನ್ನೇ ಮರೆಯುತ್ತಿದ್ದರು, ಕೆರೆಯಲ್ಲಿ ಕಮಲಗಳರಳುತ್ತಿದ್ದವು, ಕೊಳ್ಳಗಳ ನೀರು ಸಿಹಿಯಾಗುತ್ತಿತ್ತು. ಬಂಗಾರ ಪುಷ್ಪವೂ, ಬಂಗಾರ ಪರ್ವತವೂ ಕಾಡೂರಿನವರಿಗೆ ದೇವರೇ.

ವರ್ಷದಂತೆಯೇ ಆ ವರ್ಷವೂ ರಾತ್ರಿ ಕಳೆದು ನಸುಕಾಗುವಷ್ಟರಲ್ಲಿ ಹೂವಿನ ಪರಿಮಳ ಎಲ್ಲೆಡೆ ಹರಡತೊಡಗಿತು. ಜನರೆಲ್ಲ ಉತ್ಸಾಹದಿಂದ ಹಬ್ಬದ ತಯಾರಿಗೆ ಶುರುವಿಟ್ಟರು. ಇತ್ತ ಮೈಲಾರಿ ಈ ವರ್ಷ ತನ್ನ ಯೋಚನೆಯನ್ನು ಕಾರ್ಯರೂಪಕ್ಕೆ ತರಲೇಬೇಕೆಂದು ನಿರ್ಧರಿಸಿದ. ಮೈಲಾರಿಯ ತಲೆಯಲ್ಲಿ ಕೆಟ್ಟ ಯೋಚನೆಯೊಂದು ತುಂಬಿಕೊಂಡಿತ್ತು. ಬಂಗಾರ ಪುಷ್ಪವನ್ನು ಯಾರಿಗೂ ಕಾಣದಂತೆ ಕೊಯ್ದು ತಂದು ತನ್ನ ಮನೆಯಲ್ಲಿಡಬೇಕು. ಬೇಕಾದರೆ ಇಲ್ಲಿಯೇ ಪೂಜೆ ಪುನಸ್ಕಾರಗಳನ್ನು ನಡೆಸಿದರಾಯಿತು. ಊರವರಿಗೆ ವರದಂತಿರುವ ಈ ಹೂವನ್ನು ತನ್ನ ಮನೆಗೆ ತಂದರೆ ಅದೃಷ್ಟ ದೇವತೆ ಬಾಗಿಲಲ್ಲಿ ಬಂದು ನಿಲ್ಲುತ್ತಾಳೆ. ಜನರೆಲ್ಲ ಇಲ್ಲಿಗೇ ಬಂದು ಪೂಜೆ ಪೂರೈಸುತ್ತಾರೆ. ಅದು ಹೇಗೆ ಬಂತೆಂಬುದೇ ತಿಳಿದಿಲ್ಲವೆಂದರಾಯಿತು. ಆಗ ದೇವರೇ ನನ್ನನ್ನು ಆಯ್ಕೆ ಮಾಡಿ ನನ್ನ ಮನೆ ಹೊಕ್ಕಿದ್ದಾನೆಂದು ಎಲ್ಲರೂ ತಿಳಿಯುತ್ತಾರೆ. ದೇವರಿಂದಲೇ ಆರಿಸಲ್ಪಟ್ಟವನೆಂದು ಊರೆಲ್ಲ ನನ್ನನ್ನು ಗೌರವಿಸುತ್ತದೆ ಎಂದೆಲ್ಲ ಯೋಚಿಸಿದ ಮೈಲಾರಿ ಹಾಗೆಯೇ ಮಾಡುವುದೆಂದು ನಿರ್ಧರಿಸಿದ. ಇನ್ನು ತಡಮಾಡಬಾರದೆಂದು ಅಂದೇ ರಾತ್ರಿ ಕಂಬಳಿ ಹೊದ್ದು ಮನೆಯಿಂದ ಹೊರಬಿದ್ದ.

ರಾತ್ರಿಯೆಲ್ಲ ಜಾಗರಣೆ ಮಾಡಿ ಸಂಭ್ರಮಾಚರಣೆಯಲ್ಲಿದ್ದ ಊರಿನವರ ಕಣ್ಣು ತಪ್ಪಿಸಿ ಬಂಗಾರ ಪರ್ವತವನ್ನು ಹತ್ತತೊಡಗಿದ ಮೈಲಾರಿ. ದಾರಿ ಸಾಗುತ್ತಿದ್ದಂತೆ ಹೂವಿನ ಪರಿಮಳವೂ ಗಾಢವಾಗುತ್ತಾ ಹೋಗುತ್ತಿತ್ತು. ಇನ್ನೇನು ಮರ ಸಮೀಪವಾಗುತ್ತಿದ್ದಂತೆ ಥಟ್ಟನೆ ಎದುರಾದ ಒಬ್ಬಳು ಅಜ್ಜಿ ಮೈಲಾರಿಯ ಕೈ ಹಿಡಿದು ಪಕ್ಕಕ್ಕೆಳೆದಳು. ಕೋಪದಿಂದ ಕೈ ಕೊಡವಿದ ಮೈಲಾರಿ ಅಜ್ಜಿಗೆ ಬಯ್ಯತೊಡಗಿದ.

‘ಏನಪ್ಪಾ ಈ ಸರಿರಾತ್ರಿಯಲ್ಲಿ ಇಲ್ಲೇನು ಕೆಲಸ ನಿನಗೆ?’ ಎಂದಳು ಅಜ್ಜಿ.

‘ನನ್ನದೇನೋ ಕೆಲಸವಿರುತ್ತದೆ. ಅದನ್ನು ನೀನೇಕೆ ಪ್ರಶ್ನೆ ಮಾಡುತ್ತೀಯಾ? ಈಗ ದಾರಿಬಿಡು’ ಎಂದ ಮೈಲಾರಿ ಅಜ್ಜಿಯನ್ನು ತಳ್ಳಿ ಮರದ ಕಡೆ ದಾಪುಗಾಲಿಟ್ಟು ನಡೆಯತೊಡಗಿದ.

ಅಜ್ಜಿ ಬಿದ್ದಲ್ಲೇ ಕನವರಿಸತೊಡಗಿದಳು. ಏನಾಗಿಹೋಯಿತೆಂದು ಹಲುಬಿದಳು. ಮೈಲಾರಿಯನ್ನು ಉರಿಗಣ್ಣಿಂದ ನೋಡಿ ದೊಡ್ಡ ಧ್ವನಿಯಲ್ಲಿ ಹಾಡತೊಡಗಿದಳು.

ಮರವೆಲ್ಲ ಮುಳ್ಳಾಗಿ, ಹೂವೆಲ್ಲ ಹಾವಾಗಿ

ಮೈಲಾರಿ ಕಣ್ಣು ಕೆಂಪಾಗಿ,

ಮೈಲಾರಿ ಕಣ್ಣು ಕೆಂಪಾಗಿ, ಧರೆಯೆಲ್ಲ,

ಬೆಂಕಿಯ ಒಡಲಾಗಿ ಉರಿಯಲಿ...

ಆಗಲೇ ಮರಹತ್ತುತ್ತಿದ್ದ ಮೈಲಾರಿಯ ಕಣ್ಣುಗಳು ಕೆಂಪಾಗಿ ಉರಿಯತೊಡಗಿದವು. ಉರಿ ತಡೆಯಲಾಗದೆ ಕಣ್ಣುಜ್ಜುತ್ತಾ ಕೆಳಗಡೆ ನೋಡಿದ ಮೈಲಾರಿಗೆ ನೆಲವೆಲ್ಲ ಬೆಂಕಿಯಿಂದ ಆವೃತವಾಗಿ ಇಡಿ ಕಾಡಿಗೇ ಬೆಂಕಿ ಪಸರಿಸುತ್ತಿರುವುದನ್ನು ನೋಡಿ ದಿಗಿಲಾಯಿತು. ಆದದ್ದಾಗಲಿ, ಇಲ್ಲಿಯತನಕ ಬಂದಾಗಿದೆ ಇನ್ನು ಹೆದರಬಾರದೆಂದು ಹೂವಿಗೆ ಕೈ ಹಾಕುವಷ್ಟರಲ್ಲಿ ಅದೊಂದು ದೊಡ್ಡ ಸರ್ಪವಾಗಿ ಮೈಲಾರಿಯನ್ನು ಕಚ್ಚಲು ಬರತೊಡಗಿತು. ಗಾಬರಿಗೊಂಡ ಮೈಲಾರಿ ಮರದಿಂದ ಹಾರಿ ಓಡತೊಡಗಿದ. ಬೆಂಕಿ ತನ್ನನ್ನೇ ಮುತ್ತಿಕೊಳ್ಳುತ್ತಿದೆ ಎಂಬ ಭ್ರಮೆಯಿಂದ ಓಡುತ್ತಿದ್ದ ಮೈಲಾರಿಗೆ ಹಾವೂ ತನ್ನನ್ನು ಅಟ್ಟಿಸಿಕೊಂಡು ಬರುತ್ತಿರುವಂತೆನಿಸಿ ಎದ್ದೆನೋ ಬಿದ್ದೆನೋ ಎಂದು ಊರಿನ ಕಡೆ ಓಡಿದ.

ಅಜ್ಜಿ ಬಿದ್ದಲ್ಲೇ ಗಹಗಹಿಸಿ ನಗತೊಡಗಿದ್ದಳು. ಅವರವರ ಕೆಲಸಗಳಲ್ಲಿ ತೊಡಗಿದ್ದ ಜನರೆಲ್ಲ ಹುಚ್ಚನಂತೆ ಓಡಿಬರುತ್ತಿದ್ದ ಮೈಲಾರಿಯನ್ನು ನೋಡಿದರು. ಹಾವು, ಹಾವು ಎನ್ನುತ್ತಿದ್ದ ಮೈಲಾರಿಯ ಹಿಂದೆ ಯಾವ ಹಾವೂ ಕಾಣಿಸದೆ ಜನರೆಲ್ಲ ಆಶ್ಚರ್ಯಗೊಂಡರು. ಇಡೀ ಊರಿಗೇ ಬೆಂಕಿ ಬಿದ್ದಿದೆ ಎಂದು ಕೂಗುತ್ತಿದ್ದ ಮೈಲಾರಿಯನ್ನು ಹಿಡಿಯಲು ನೋಡಿ ವಿಫಲರಾದರು. ಅವನು ಹೇಳುತ್ತಿರುವುದ್ಯಾವುದೂ ಊರಿನವರ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಹೇಳುವಷ್ಟು ಹೇಳಿದ ಮೈಲಾರಿ ಹುಚ್ಚು ಹಿಡಿದವನಂತೆ ಊರಿಂದ ಹೊರಗೆ ಓಡತೊಡಗಿದ. ಹಾಗೆ ಓಡಿ ಮಾಯವಾದವನು ತಿರುಗಿ ಬರಲೇ ಇಲ್ಲ. ಅವನನ್ನು ದೂರಕ್ಕೆ ಓಡಿಸಿದ ಹಾವು ಮತ್ತೆ ಹೂವಾಗಿ ಮರದ ಮೇಲೆ ತನ್ನ ಜಾಗದಲ್ಲಿ ಅರಳಿ ಕುಳಿತಿತು. ಬಂಗಾರ ಪರ್ವತದ ಘಟನೆಗಳ್ಯಾವುವೂ ಊರಿನ ಜನರ ಗಮನಕ್ಕೆ ಬರಲಿಲ್ಲ.

ಊರಿಗೆ ಅಪವಾದವಾಗಿದ್ದ ಮೈಲಾರಿ ಯಾರಿಗೂ ಗೊತ್ತಿಲ್ಲದಂತೆ ಮಾಯವಾದ. ಕಾಡೂರಿನಲ್ಲಿ ಒಳ್ಳೆಯ ಜನರೇ ಉಳಿದು, ಸುಖ ಸಂತೋಷಗಳಿಂದ ಬದುಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry