ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃದ್ವಂಗಿ ಚಿಪ್ಪುಗಳ ವೈವಿಧ್ಯ, ವಿಸ್ಮಯ

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

1. ‘ಮೃದ್ವಂಗಿ ಚಿಪ್ಪು’ - ಅದೆಂಥ ನಿರ್ಮಿತಿ?

ಧರೆಯ ಪ್ರಾಣಿ ಸಾಮ್ರಾಜ್ಯದಲ್ಲಿ ‘ಮೃದ್ವಂಗಿ’ಗಳದು ಒಂದು ವಿಶಿಷ್ಟ ವರ್ಗ. ಹೆಸರೇ ಸೂಚಿಸುವಂತೆ ಮೃದ್ವಂಗಿಗಳದು ತುಂಬ ಮೆದುವಾದ ಶರೀರ; ಎಲುಬೇ ಇಲ್ಲದ ಮುದ್ದೆಯಂತಹ ಶರೀರ. ಇಂಥ ಪ್ರಾಣಿಗಳು ತಮ್ಮ ದೇಹದ ರಕ್ಷಣೆಗೆ, ಇಡೀ ಶರೀರವನ್ನು ಆವರಿಸುವಂತೆ ತಾವೇ ನಿರ್ಮಿಸಿಕೊಳ್ಳುವ ಗಟ್ಟಿ ಕವಚವೇ ಮೃದ್ವಂಗಿ ಚಿಪ್ಪು. ಹಾಗೆ ನಾನಾ ವಿಧಗಳಲ್ಲಿ ತಮ್ಮ ದೇಹದಲ್ಲಿ ತಯಾರಾಗುವ ವಸ್ತುಗಳಿಂದಲೇ ಮೃದ್ವಂಗಿಗಳು ರಚಿಸಿಕೊಳ್ಳುವ ಈ ‘ಬಾಹ್ಯ ಅಸ್ಥಿ ಪಂಜರ’ ಮೃದ್ವಂಗಿ ಬದುಕಿಗೆ ಅನಿವಾರ್ಯ ಕೂಡ. ಮೊಟ್ಟೆಯಿಂದ ಹೊರಬಂದ ಕೂಡಲೇ ಹೀಗೆ ನಿರ್ಮಿಸಿಕೊಳ್ಳುವ ಚಿಪ್ಪಿನ ಕೋಟೆಯೊಳಗೇ ಬದುಕುವುದು, ಅದನ್ನು ಹೊತ್ತೇ ಈಜುವುದು-ನಡೆದಾಡುವುದು ಮೃದ್ವಂಗಿಗಳ ಜೀವನ ಕ್ರಮ.

ಇಲ್ಲೊಂದು ಮುಖ್ಯ ವಿಷಯ: ಮೃದ್ವಂಗಿಗಳ ಚಿಪ್ಪು ಆಮೆಗಳ, ಏಡಿ-ನಳ್ಳಿಗಳ ಚಿಪ್ಪುಗಳಿಗಿಂತ ಬಹಳ ವಿಭಿನ್ನ. ಮೃದ್ವಂಗಿಗಳ ಚಿಪ್ಪು ಜೀವಕೋಶಗಳಿಂದ ರೂಪುಗೊಳ್ಳುವ ನಿರ್ಮಿತಿ ಅಲ್ಲ. ಅವುಗಳಲ್ಲಿ ನರಗಳಿಲ್ಲ, ರಕ್ತ ನಾಳಗಳಿಲ್ಲ. ಹಾಗಾಗಿ ಅವು ಭಗ್ನಗೊಳ್ಳುತ್ತವೆಯೇ ಹೊರತು ಗಾಯಗೊಳ್ಳುವುದಿಲ್ಲ.

2. ಮೃದ್ವಂಗಿ ಚಿಪ್ಪುಗಳಲ್ಲಿ ಎಷ್ಟು ವಿಧಗಳಿವೆ?

ಮೃದ್ವಂಗಿಗಳಲ್ಲಿ ಈವರೆಗೆ ಒಂದು ಲಕ್ಷಕ್ಕೂ ಅಧಿಕ ಪ್ರಭೇದಗಳನ್ನು ಗುರುತಿಸಲಾಗಿದೆ. ಮೃದ್ವಂಗಿಗಳ ವರ್ಗಕ್ಕೇ ಸೇರಿದ್ದರೂ ಬಾಹ್ಯ ಚಿಪ್ಪನ್ನು ನಿರ್ಮಿಸದ ಸ್ಕ್ವಿಡ್, ಅಕ್ಟೋಪಸ್, ಕಟ್ಲ್ ಮೀನು ಇತ್ಯಾದಿ ಕೆಲವೇ ಪ್ರಭೇದಗಳನ್ನು ಹೊರತುಪಡಿಸಿ ಉಳಿದ ಎಲ್ಲ ಮೃದ್ವಂಗಿಗಳೂ ಚಿಪ್ಪನ್ನು ನಿರ್ಮಿಸುತ್ತವೆ. ಹಾಗೆಂದರೆ, ಮೃದ್ವಂಗಿ ಚಿಪ್ಪುಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ವಿಧಗಳಿವೆ ಎಂಬುದು ಸ್ಪಷ್ಟ ತಾನೇ?

ಇಷ್ಟೂ ಬಗೆಗಳ ಮೃದ್ವಂಗಿ ಚಿಪ್ಪುಗಳನ್ನು ಅವುಗಳ ಕೆಲ ನಿರ್ದಿಷ್ಟ ಸ್ವರೂಪಗಳನ್ನಾಧರಿಸಿ ಐದು ಪ್ರಧಾನ ವಿಧಗಳನ್ನಾಗಿ ವರ್ಗೀಕರಿಸಲಾಗಿದೆ: ‘ಗ್ಯಾಸ್ಟ್ರೋಪೋಡಾ, ಬೈವಾಲ್ವಿಯಾ, ಸೆಫಲೋಪೋಡಾ, ಸ್ಕೇಫೋಪೋಡಾ ಮತ್ತು ಪಾಲಿಪ್ಲಕೋಫೋರಾ’. ಕವಡೆಗಳು, ಶಂಖಗಳು (ಚಿತ್ರ 5, 6, 7) ಮತ್ತು ಶಂಕುವಿನಾಕಾರದ ಎಲ್ಲ ಚಿಪ್ಪುಗಳು (ಚಿತ್ರ-8) ಗ್ಯಾಸ್ಟ್ರೋಪೋಡಾ ವರ್ಗದಲ್ಲಿವೆ. ತೆರೆಯಲು - ಮುಚ್ಚಲು ಸಾಧ್ಯವಾಗುವಂತೆ ಕೀಲಿನಿಂದ ಬಂಧಗೊಂಡ ಸರ್ವ ಸಮ ರೂಪದ ಎರಡು ಚಿಪ್ಪುಗಳ - ‘ಕಪ್ಪೆ ಚಿಪ್ಪು’ಗಳೆಂದೇ ಹೆಸರಾದ - ಸಕಲ ಚಿಪ್ಪುಗಳದು ‘ಬೈವಾಲ್ವಿಯಾ’ ವರ್ಗ (ಚಿತ್ರ 4 ಮತ್ತು 9ರಿಂದ 14). ‘ಜೈವಿಕ ರತ್ನ’ವಾದ ‘ಮುತ್ತು ಅಥವಾ ಮುಕ್ತಾ ಫಲ’ವನ್ನು ನಿರ್ಮಿಸುವ ಮುತ್ತಿನ ಸಿಂಪಿಯೂ ಇಚ್ಚಿಪ್ಪುಗಳ ಇದೇ ವರ್ಗಕ್ಕೆ ಸೇರಿದೆ. ಪುರಾತನ ಅಮೋನೈಟ್‌ಗಳು (ಚಿತ್ರ 1) ಮತ್ತು ಈಗಿನ ‘ನಾಟಿಲಸ್’ಗಳು ನಿರ್ಮಿಸುವ ‘ಸುರುಳಿ ಚಿಪ್ಪು’ಗಳದು (ಚಿತ್ರ 2, 3) ‘ಸೆಫಲೋಪೋಡಾ’ ವರ್ಗ. ‘ಸ್ಕೇಫೋಪೋಡಾ’ ವರ್ಗದ ಚಿಪ್ಪುಗಳದು ಆನೆ ದಂತದ ಆಕಾರವಾದರೆ ಅಷ್ಟ ತಟ್ಟೆಗಳನ್ನು ಪೇರಿಸಿಟ್ಟಂತೆ ರಚನೆಗೊಂಡ ಚಿಪ್ಪುಗಳದು ‘ಪಾಲಿಪ್ಲಕೋಫೋರಾ’ ವರ್ಗ.

ವಿಶೇಷ ಏನೆಂದರೆ, ಮೃದ್ವಂಗಿ ಚಿಪ್ಪುಗಳ ಈ ಐದೂ ವರ್ಗಗಳಲ್ಲಿ ಗ್ಯಾಸ್ಟ್ರೋಪೋಡಾ ವರ್ಗದ ಚಿಪ್ಪುಗಳದೇ ಗರಿಷ್ಠ ಸಂಖ್ಯೆ, ಗರಿಷ್ಠ ವೈವಿಧ್ಯ. ಸಕಲ ಮೃದ್ವಂಗಿ ಚಿಪ್ಪುಗಳ ಶೇಕಡ 80ರಷ್ಟು ಭಾಗ ಈ ಚಿಪ್ಪುಗಳದೇ ಆಗಿದೆ.

3. ಮೃದ್ವಂಗಿ ಚಿಪ್ಪುಗಳು ನಿರ್ಮಾಣಗೊಳ್ಳುವುದು ಹೇಗೆ?

ಪ್ರತಿ ಮೃದ್ವಂಗಿಯೂ ಮೊಟ್ಟೆಯಿಂದ ಹೊರಬಂದ ಕ್ಷಣದಿಂದಲೇ ತನ್ನದೇ ವಿಶಿಷ್ಟ ಚಿಪ್ಪನ್ನು ತಾನೇ ನಿರ್ಮಿಸಲು ಆರಂಭಿಸುತ್ತದೆ; ಜೀವನ ಪರ್ಯಂತ ಅದೇ ಚಿಪ್ಪನ್ನು ಬೆಳೆಸುತ್ತ ಇರುತ್ತದೆ. ಅದೊಂದು ಅದ್ಭುತ ನೈಸರ್ಗಿಕ, ಅಯತ್ನಪೂರ್ವಕ ಕ್ರಿಯೆ. ಅದಕ್ಕಾಗಿ ಮೃದ್ವಂಗಿಗಳ ಶರೀರದಲ್ಲಿ ಒಂದು ಅತಿ ವಿಶೇಷ ವ್ಯವಸ್ಥೆಯೇ ಇದೆ.

ಮೃದ್ವಂಗಿಗಳ ಶರೀರದ ಹೊರಭಾಗದಲ್ಲಿ, ಚಿಪ್ಪಿನ ಒಳಮೈಗೆ ಹೊಂದಿದಂತೆ ‘ಮ್ಯಾಂಟಲ್’ ಎಂಬ ವಿಶೇಷ ಅಂಗಾಂಶಗಳಿವೆ. ಅಗತ್ಯಕ್ಕೆ ತಕ್ಕಂತೆ ಮ್ಯಾಂಟಲ್‌ನಿಂದ ಪೇಸ್ಟಿನಂತಹ ದ್ರವ್ಯವೊಂದು ಸ್ರಾವಗೊಳ್ಳುತ್ತದೆ. ಶೇಕಡ 98ರಷ್ಟು ಭಾಗ ಕ್ಯಾಲ್ಷಿಯಂ ಕಾರ್ಬನೇಟ್ ಮತ್ತು ಶೇಕಡ 2ರಷ್ಟು ಭಾಗ ಪ್ರೊಟೀನ್‌ಗಳ ಮಿಶ್ರಣವಾದ ಈ ದ್ರವ್ಯ ಹೊರಹರಿದ ಕೆಲ ಕ್ಷಣಗಳಲ್ಲೇ ಘನ ರೂಪ ತಳೆದು ಗಟ್ಟಿಯಾದ ಚಿಪ್ಪು ಆಗುತ್ತದೆ. ನಿರಂತರ ಬೆಳೆಯುವ ಮೃದ್ವಂಗಿಯ ಶರೀರದ ಗಾತ್ರಕ್ಕೆ ಅನುಗುಣವಾಗಿ ಚಿಪ್ಪು ಅದರ ತೆರೆದ ಅಂಚಿನಲ್ಲಿ ದೊಡ್ಡದಾಗುತ್ತ ಹೋಗುತ್ತದೆ.

ವಿಶೇಷ ಏನೆಂದರೆ, ಮೃದ್ವಂಗಿ ಚಿಪ್ಪು ತ್ರಿವಿಧ ವಿಭಿನ್ನ ಪದರಗಳನ್ನು ಹೊಂದಿದೆ: ‘ಅತ್ಯಂತ ಹೊರಗೆ ಪ್ರೊಟೀನ್‌ನಿಂದಾದ ತೆಳ್ಳನೆಯ ಒಂದು ಪದರ; ಅದರ ಕೆಳಗೆ ಕ್ಯಾಲ್ಷಿಯಂ ಕಾರ್ಬನೇಟ್‌ನ ದೃಢವಾದ ಒಂದು ಗಟ್ಟಿ ಪದರ; ಅತ್ಯಂತ ಒಳಗೆ ಮುತ್ತಿನ ಕಾಂತಿಯ, ತುಂಬ ನುಣುಪಾದ ‘ನೀಕೇ’ ಎಂಬ ವಸ್ತುವಿನ ಬಹು ತೆಳ್ಳನೆಯ ಪದರ’.

ಇಲ್ಲೊಂದು ಮುಖ್ಯ ವಿಷಯ: ಚಿಪ್ಪಿನ ನಿರ್ಮಾಣಕ್ಕೆ ಬೇಕಾದ ಪ್ರೊಟೀನ್ ಮತ್ತು ಸುಣ್ಣದ ಕಾರ್ಬನೇಟ್ ವಸ್ತುಗಳು ಮೃದ್ವಂಗಿಯ ಶರೀರದಲ್ಲೇ, ಅದು ಸೇವಿಸುವ ಆಹಾರದಿಂದಲೇ ಉತ್ಪತ್ತಿಯಾಗುತ್ತವೆ. ಜೊತೆಗೆ ಬೇರೆ ಬೇರೆ ಪ್ರದೇಶಗಳ ಮೃದ್ವಂಗಿಗಳಿಗೆ ಆಯಾ ಪ್ರದೇಶಗಳಲ್ಲಿ ಲಭಿಸುವ ವಿಶೇಷ ಆಹಾರಗಳಿಂದ ಪ್ರಾಪ್ತವಾಗುವ ನಿರ್ದಿಷ್ಟ ಖನಿಜಗಳು ಚಿಪ್ಪುಗಳಿಗೆ ವಿಶಿಷ್ಟ ವರ್ಣಗಳನ್ನು, ವರ್ಣ ಚಿತ್ತಾರಗಳನ್ನು ಒದಗಿಸುತ್ತವೆ. ಒಟ್ಟಾರೆ ಮೃದ್ವಂಗಿ ಚಿಪ್ಪುಗಳು ಸುಂದರ, ವಿಸ್ಮಯಕರ ಕಲಾಕೃತಿಗಳಂತೆ ರೂಪುಗೊಳ್ಳುತ್ತವೆ.

ಇನ್ನೊಂದು ವಿಷಯ: ಮುತ್ತಿನ ಮಣಿ ಕೂಡ ಮೃದ್ವಂಗಿ ನಿರ್ಮಿತಿಯೇ ಹೌದಾದರೂ ಅದು ‘ಮೃದ್ವಂಗಿ ಚಿಪ್ಪು’ ಅಲ್ಲ. ಇಚ್ಚಿಪ್ಪಿನ ಮೃದ್ವಂಗಿಗಳ ಇಪ್ಪತ್ತು ಸಾವಿರಕ್ಕೂ ಅಧಿಕ ಪ್ರಭೇದಗಳಲ್ಲಿ ‘ಮಾರ್ಗರಿಟಿಫೆರಾ’ ಗುಂಪಿಗೆ ಸೇರಿದ ಕೆಲವೇ ಪ್ರಭೇದಗಳು ಮುತ್ತನ್ನು ತಯಾರಿಸುತ್ತವೆ. ಸಾಗರಾವಾರದ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಕಡಲ ನೆಲದ ಮೇಲೆ ವಾಸಿಸುವ ‘ಮುತ್ತಿನ ಸಿಂಪಿ’ (ಆಯ್‌ಸ್ಟರ್) ಆಹಾರಕ್ಕಾಗಿಯೋ, ಈಜಲೆಂದೋ ಚಿಪ್ಪನ್ನು ತೆರೆದಾಗ ಕೆಲವು ಬಾರಿ ಆಕಸ್ಮಿಕವಾಗಿ ಮರಳಿನ ಕಣದಂಥ ಕಲ್ಮಶ ಚಿಪ್ಪಿನೊಳಸೇರುತ್ತದೆ; ಮೈಗೆ ಹೊಕ್ಕ ಮುಳ್ಳಿನಂತೆ ಈ ಬಾಹ್ಯ ವಸ್ತು ಮುತ್ತಿನ ಸಿಂಪಿಗೆ ತೊಂದರೆ ಕೊಡುತ್ತದೆ. ಈ ಉಪದ್ರವವನ್ನು ನಿವಾರಿಸಿಕೊಳ್ಳಲು ಮುತ್ತಿನ ಜೀವಿ ಆ ವಸ್ತುವಿನ ಸುತ್ತ ತಾನೇ ಸ್ರವಿಸುವ ವಿಶಿಷ್ಟ ದ್ರವ ‘ನೀಕೆ’ಯನ್ನು ಪದರ ಪದರವಾಗಿ ಹರಿಸುತ್ತದೆ. ಆ ದ್ರವ ಒಣಗಿ, ನುಣುಪಾದ ಮೇಲ್ಮೈನ ಮುತ್ತಿನ ಮಣಿ ಆಗುತ್ತದೆ.

4. ಮೃದ್ವಂಗಿ ಚಿಪ್ಪುಗಳದು ಸರಿಸುಮಾರು ಒಂದೇ ಗಾತ್ರ, ಹೌದೇ?

ಖಂಡಿತ ಇಲ್ಲ. ಮೃದ್ವಂಗಿ ಪ್ರಭೇದಗಳಲ್ಲಿರುವಷ್ಟೇ ವೈವಿಧ್ಯ ಅವು ನಿರ್ಮಿಸುವ ಚಿಪ್ಪುಗಳ ಗಾತ್ರ, ಆಕಾರ, ಅಲಂಕಾರಗಳಲ್ಲೂ ಇವೆ. ಮರಳಿನ ಕಣಗಳಷ್ಟೇ ಅಲ್ಪ ಗಾತ್ರದ ಚಿಪ್ಪುಗಳಿವೆ; ನಾಲ್ಕು-ಐದು ಅಡಿ ಅಗಲದ ಚಿಪ್ಪುಗಳೂ ಇವೆ; ನೂರಾರು ಕಿಲೋ ಗ್ರಾಂ ತೂಗುವ ಮೃದ್ವಂಗಿ ಕವಚಗಳೂ ಅಪರೂಪವಲ್ಲ.

ಉದಾಹರಣೆಗೆ ಗ್ಯಾಸ್ಟ್ರೋಪೋಡಾ ವರ್ಗಕ್ಕೆ ಸೇರಿದ ‘ಅಮೋನಿಸೆರಾ ರೋಟಾ’ ಪ್ರಭೇದದ ಮೃದ್ವಂಗಿಗಳ ಚಿಪ್ಪುಗಳದು ಕೇವಲ ಅರ್ಧ ಮಿಲಿಮೀಟರ್ ವ್ಯಾಸ. ತದ್ವಿರುದ್ಧವಾಗಿ, ಅದೇ ವರ್ಗದ ‘ಸೈರಿಂಕ್ಸ್ ಅರುವಾನಸ್’ ನಿರ್ಮಿಸುವ ಶಂಖ ಎಪ್ಪತ್ತೇಳು ಸೆಂಟಿಮೀಟರ್ ಉದ್ದ ಮತ್ತು ಒಂದು ಮೀಟರ್ ಸುತ್ತಳತೆ ಮುಟ್ಟುತ್ತದೆ! ‘ಟ್ರೈಡಾಕ್ನಾ ಗೀಗಾಸ್’ ಪ್ರಭೇದದ ‘ಕಪ್ಪೆ ಚಿಪ್ಪು’ ಒಂದು ಮೀಟರ್ ಅಗಲ ಮೀರುತ್ತದೆ; ಮುನ್ನೂರು ಕಿಲೋ ಗ್ರಾಂ ಮೀರುವ ತೂಕದ ಮೃದ್ವಂಗಿ ಚಿಪ್ಪುಗಳೂ ಇವೆ!

5. ಮೃದ್ವಂಗಿ ಚಿಪ್ಪುಗಳಿಂದ ಏನೇನು ಪ್ರಯೋಜನಗಳಿವೆ?

ಮೃದ್ವಂಗಿಗಳು ಬದುಕಿರುವವರೆಗೂ ಅವುಗಳ ಮೆದು ಶರೀರಕ್ಕೆ ಭದ್ರ ಕವಚದಂತೆ ರಕ್ಷಣೆ ನೀಡುವುದು ಚಿಪ್ಪುಗಳ ಅತಿ ಪ್ರಧಾನ ಪ್ರಯೋಜನ. ಮೃತವಾದ ಮೃದ್ವಂಗಿಗಳ ಚಿಪ್ಪುಗಳು ಕಡಲ ನೆಲದ ಮೇಲೆ ಸಂಗ್ರಹವಾಗುತ್ತವೆ (ಸಾಗರದಲ್ಲೇ ಅಲ್ಲದೆ ನದಿ, ಸರೋವರಗಳಂಥ ಶುದ್ಧ ನೀರಿನ ನೆಲೆಗಳಲ್ಲೂ, ನೆಲದ ಮೇಲೂ ವಾಸಿಸುವ ಮೃದ್ವಂಗಿ ಪ್ರಭೇದಗಳು ಬೇಕಾದಷ್ಟಿವೆ). ಚಿಪ್ಪುಗಳ ಅಂಥ ರಾಶಿಗಳು ಕಾಲಕ್ರಮದಲ್ಲಿ ಸುಣ್ಣ ಶಿಲಾ ಪದರಗಳಾಗುತ್ತವೆ; ಸೂಕ್ತ ಪರಿಸ್ಥಿತಿ ಲಭಿಸಿದರೆ ರೂಪಾಂತರಗೊಂಡು ಅಮೃತ ಶಿಲೆ ಆಗುತ್ತವೆ.

ನೈಸರ್ಗಿಕವಾಗಿಯೇ ಮೃತವಾಗುವ ಮೃದ್ವಂಗಿ ಚಿಪ್ಪುಗಳಿಗೆ ಸಾಗರ ಪರಿಸರದಲ್ಲಿ ಇನ್ನೂ ಹಲವಾರು ಮಹತ್ವಗಳಿವೆ. ಉದಾಹರಣೆಗೆ, ಕಡಲ ವಾಸಿಗಳಾದ ‘ಸನ್ಯಾಸಿ ಏಡಿ’ಗಳು ಮೃತ ಮೃದ್ವಂಗಿಗಳ ದೊಡ್ಡ ಗಾತ್ರದ ಖಾಲಿ ಚಿಪ್ಪುಗಳನ್ನು ‘ಮನೆ’ ಮಾಡಿಕೊಳ್ಳುತ್ತವೆ. ಕಡಲ ತೀರದ ನೂರಾರು ಹಕ್ಕಿ ಪ್ರಭೇದಗಳು ಚಿಪ್ಪುಗಳನ್ನೇ ನೆಲದ ಮೇಲೆ ಹರಡಿ, ಪೇರಿಸಿ ಮೊಟ್ಟೆ-ಮರಿಗಳಿಗೆ ಗೂಡು ನಿರ್ಮಿಸುತ್ತವೆ. ಅಲೆಗಳಿಂದ ದಡ ಸೇರಿ, ಅಲೆಗಳ ತಾಡನದಿಂದಲೇ ಪುಡಿಯಾಗುವ ಚಿಪ್ಪುಗಳು ಬೀಚುಗಳ ಮರಳ ರಾಶಿಗಳ ಒಂದು ಪ್ರಧಾನ ಭಾಗ ಕೂಡ.

ಮನುಷ್ಯರಿಗೂ ಮೃದ್ವಂಗಿ ಚಿಪ್ಪುಗಳಿಂದ ನಾನಾ ಪ್ರಯೋಜನಗಳಿವೆ. ಸುಣ್ಣ, ಸುಣ್ಣ ಶಿಲೆ ಮತ್ತು ಅಮೃತ ಶಿಲೆಗಳ ಬಹುವಿಧ ಪ್ರಯೋಜನಗಳು ನಿಮಗೂ ಗೊತ್ತಲ್ಲ? ಅಷ್ಟೇ ಅಲ್ಲದೆ, ಹಲವಾರು ಬಗೆಗಳ ಮೃದ್ವಂಗಿ ಚಿಪ್ಪುಗಳು - ಉದಾಹರಣೆಗೆ ‘ಮ್ಯೂರೆಕ್ಸ್’ ವರ್ಗ - ಶ್ರೇಷ್ಠ ಮಟ್ಟದ ‘ವರ್ಣವಸ್ತು’ಗಳನ್ನು ಒದಗಿಸುತ್ತವೆ. ನೂರಾರು ವಿಧಗಳ ಮೃದ್ವಂಗಿ ಚಿಪ್ಪುಗಳು ಆಲಂಕಾರಿಕ ವಸ್ತುಗಳಾಗಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. ಮುತ್ತಿನ ಮಣಿಯಂತೂ ಅತೀವ ಬೆಲೆಯ ಅಮೂಲ್ಯ ನವರತ್ನಗಳ ಗುಂಪನ್ನೇ ಸೇರಿದೆ.

6. ಮೃದ್ವಂಗಿ ಚಿಪ್ಪುಗಳನ್ನು ಕೊಳ್ಳಲೇಬಾರದು - ಏಕೆ?

ವಿಶೇಷವಾಗಿ ಕಡಲಿನ ತೀರಗಳಲ್ಲಿ - ಕಡಲ ತೀರದ ವಿಹಾರ ಸ್ಥಳಗಳಲ್ಲಿ - ಮೃದ್ವಂಗಿ ಚಿಪ್ಪುಗಳ ಮಾರಾಟ ತುಂಬ ಸಾಮಾನ್ಯವಾದ, ಭಾರೀ ಲಾಭದಾಯಕವಾದ ಒಂದು ವ್ಯಾಪಾರ. ನಾನಾ ಆಕಾರಗಳ, ವಿವಿಧ ವರ್ಣಾಲಂಕಾರಗಳ, ಹೇರಳ ವಿಧಗಳ ಮೃದ್ವಂಗಿ ಚಿಪ್ಪುಗಳು, ಚಿಕ್ಕ ಚಿಕ್ಕ ಚಿಪ್ಪುಗಳನ್ನು ಜೋಡಿಸಿ ತಯಾರಿಸಿದ ಕಲಾಕೃತಿಗಳು... ಇಂತಹವು ನೆನಪಿನ ವಸ್ತುಗಳಾಗಿ ಬಹಳ ಜನಪ್ರಿಯ.

ಆದರೆ ವಾಸ್ತವವಾಗಿ ಕಡಲ ಚಿಪ್ಪುಗಳನ್ನು ಕೊಳ್ಳುವುದು ಸಾಗರ ಪರಿಸರಕ್ಕೆ, ಸಾಗರ ಜೀವಜಾಲಕ್ಕೆ ಬಹಳ ಮಾರಕ. ಕಡಲ ಚಿಪ್ಪುಗಳನ್ನು ಸಂಗ್ರಹಿಸುವ ಮತ್ತು ಮಾರಾಟಕ್ಕೆ ಸಿದ್ಧಪಡಿಸುವ ವಿಧಾನಗಳೂ ಮೃದ್ವಂಗಿಗಳ ಬದುಕಿಗೆ ಭಾರೀ ವಿಧ್ವಂಸಕ; ಕ್ರೂರ ನರಕ! ಹೇಗೆಂದು ನೀವೇ ನೋಡಿ:

ವ್ಯಾಪಾರಕ್ಕಾಗಿ ಇಡಲಾಗುವ ಕಡಲ ಚಿಪ್ಪುಗಳು ಮೃತ ಮೃದ್ವಂಗಿಗಳದಲ್ಲ. ಏಕೆಂದರೆ, ಆಯುಷ್ಯ ಮುಗಿದು ಮೃತವಾದ ಅಥವಾ ಬೇಟೆಗಾರ ಪ್ರಾಣಿಗಳಿಗೆ ಬಲಿಯಾದ ಮೃದ್ವಂಗಿಗಳ ಚಿಪ್ಪುಗಳು ಅಲ್ಲಲ್ಲಿ ಭಗ್ನವಾಗಿರುತ್ತವೆ; ಅವುಗಳ ಗಟ್ಟಿತನ, ಹೊಳಪು ಮತ್ತು ಗಾಢ ವರ್ಣ ಚಿತ್ತಾರಗಳು ಕ್ಷೀಣವಾಗಿರುತ್ತವೆ. ಹಾಗಾಗಿ ಚಿಪ್ಪುಗಳ ದಂಧೆಕೋರರು ಕಡಲಲ್ಲಿ ಮುಳುಗಿ ಜೀವಂತ ಮೃದ್ವಂಗಿಗಳನ್ನೇ ಬಾಚಿ ಮೂಟೆಗಳಲ್ಲಿ ತುಂಬಿ ತರುತ್ತಾರೆ. ಹಾಗೆ ತಂದ ಚಿಪ್ಪುಗಳನ್ನು ಬಿಸಿಲಲ್ಲಿ ಒಣಗಿಸಿ, ಕುದಿವ ನೀರಲ್ಲಿ ಮುಳುಗಿಸಿ ಅಥವಾ ಪ್ರಬಲ ಆಮ್ಲಗಳಲ್ಲಿ ಅದ್ದಿ ಚಿಪ್ಪೊಳಗಿನ ಮೃದ್ವಂಗಿಗಳಿಗೆ ನರಕ ಯಾತನೆ ನೀಡಿ ಸಾಯಿಸುತ್ತಾರೆ. ನಂತರ ಚಿಪ್ಪುಗಳನ್ನು ಸ್ವಚ್ಚಗೊಳಿಸಿ, ಕೃತಕ ಆಕರ್ಷಕ ಬಣ್ಣಗಳನ್ನೂ ಪೂಸಿ ಮಾರಲು ತರುತ್ತಾರೆ. ಆದ್ದರಿಂದಲೇ ಕಡಲ ಮೃದ್ವಂಗಿ ಚಿಪ್ಪುಗಳನ್ನು ಕೊಳ್ಳುವುದು ಹಿಂಸಾಮಯ, ಅಮಾನವೀಯ, ಪರಿಸರ ವಿರೋಧಿ ವ್ಯಾಪಾರಕ್ಕೆ ಪ್ರೋತ್ಸಾಹದಾಯಕ ಎಂಬುದು ಸ್ಪಷ್ಟ ತಾನೇ? ಆದ್ದರಿಂದಲೇ ಕಡಲ ಚಿಪ್ಪುಗಳನ್ನು ಕೊಳ್ಳಲೇಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT