ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ನ ನಿಸರ್ಗ ರಾಣಿ; ‘ಕ್ವೀನ್ಸ್‌ಟೌನ್’

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ಗಗನಚುಂಬಿ ಬೆಟ್ಟಗಳು. ಕನ್ನಡಿಯಷ್ಟು ಸ್ಫಟಿಕ ಸ್ಪಷ್ಟ ಪಾರದರ್ಶಕ ಸರೋವರಗಳು. ಒಪ್ಪ ಓರಣವಾಗಿ ಜೋಡಿಸಿಟ್ಟಂತಹ ಕಟ್ಟಿಗೆಯ ಆಧುನಿಕ ಮನೆಗಳು. ಎತ್ತ ನೋಡಿದತ್ತ ರಂಗು ರಂಗಾದ ಹೂ ಗಿಡಗಳು. ಹೆಸರಿಗೆ ತಕ್ಕಂತೆ ರಾಣಿಯ ಹಾಗೆ ಚುಮು ಚುಮು ಚಳಿಯಲ್ಲಿ ಮಿಂದೆದ್ದು ಕಂಗೊಳಿಸುತ್ತಿರುವ ಈ ನಗರವೇ ಕ್ವೀನ್ಸ್‌ಟೌನ್.

ನ್ಯೂಜಿಲೆಂಡಿನ ದಕ್ಷಿಣ ಭಾಗದ ಈ ಸುಂದರ ನಗರಿ ನಮ್ಮ ಭಾರತ ದೇಶದ ಹಿಮಾಚಲ ಪ್ರದೇಶ, ಶಿಮ್ಲಾದಂತಹ ಕಣಿವೆ ಪ್ರದೇಶಗಳನ್ನು ಹೋಲುವ ಪ್ರದೇಶವಾದರೂ, ಅದೊಂದು ಬೇರೆಯದೇ ಆಹ್ಲಾದಕರ ಅನುಭವವನ್ನು ಉಣಬಡಿಸುವುದು.

ಹೋಟೆಲ್‌ ಮ್ಯಾನೇಜ್‌ಮೆಂಟಿನಲ್ಲಿ ಉನ್ನತ ವ್ಯಾಸಂಗ ಮಾಡಿ, ಅಲ್ಲಿನ ಪ್ರಸಿದ್ಧ ಹೋಟೆಲ್‌ ಹಿಲ್ಟನ್‌ನ ಬಾಣಸಿಗನಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ತಮ್ಮನನ್ನು ಭೇಟಿ ಮಾಡಲು ದೂರದ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡಿದ್ದೆವು. ಸುಮಾರು 15 ತಾಸುಗಳ ವಿಮಾನ ಪ್ರಯಾಣ! ಎರಡು ಚಿಕ್ಕಮಕ್ಕಳೊಂದಿಗೆ ಹದಿನೈದರಿಂದ ಹದಿನಾರು ತಾಸು ‍ಪ್ರಯಾಣ ಮಾಡಿ, ಸಿಡ್ನಿಯಿಂದ ನೇರ ಕ್ವೀನ್ಸ್‌ಟೌನ್‌ನ ವಿಮಾನ ನಿಲ್ದಾಣದಲ್ಲಿ ಇಳಿದಾಕ್ಷಣ ಅತ್ಯದ್ಭುತ ಅನುಭವ. ನಮಗೆ ಸ್ವಾಗತ ಕೋರಿದ್ದು ಮನಮೋಹಕ ಗಗನಚುಂಬಿ ಬೆಟ್ಟಗಳು. ಬೆಟ್ಟಗಳನ್ನು ಮುತ್ತಿಕ್ಕಿದ ಹಳದಿ ಕಾಡು ಹೂಗಳು. ಸೂಸುವ ತಂಗಾಳಿ. ದೇವಲೋಕವೆಂದರೆ ಹೀಗೇ ಇರಬಹುದೇನೋ ಎಂದು ಕೊಂಚ ಸಮಯ ಮನಸ್ಸಿಗೆ ಅನ್ನಿಸಿ, ಪ್ರಯಾಣದ ಆಯಾಸವೆಲ್ಲ ಕರಗಿ ಹೋಗಿದ್ದಂತೂ ನಿಜ. ರಾತ್ರಿ ಗಂಟೆ ಎಂಟು ಆದರೂ, ಇನ್ನೂ ಮಧ್ಯಾಹ್ನ ಮೂರು ಗಂಟೆಯ ಸೂರ್ಯ ಕಂಗೊಳಿಸುತ್ತಿದ್ದ. ಇಲ್ಲಿ ಸಂಪೂರ್ಣ ಕತ್ತಲಾಗುವುದು ರಾತ್ರಿ 10 ಗಂಟೆಗೆನೇ.

ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ, ಕ್ರಿ.ಶ. 1850ರಲ್ಲಿ ಇಲ್ಲಿ ನೆಲೆಸಿದ್ದಕ್ಕೆ, ಇದಕ್ಕೆ ಕ್ವೀನ್ಸ್‌ಟೌನ್ ಎಂಬ ಹೆಸರು. ಇಲ್ಲಿಯ ನಿಸರ್ಗ ರಾಶಿಗೆ ಮಾರು ಹೋಗಿ, ರಾಣಿ ವಿಕ್ಟೋರಿಯಾ, ಕ್ವೀನ್ಸ್‌ಟೌನನ್ನು ತನ್ನ ಮೆಚ್ಚಿನ ಪ್ರವಾಸಿ ತಾಣಗಳಲ್ಲೊಂದನ್ನಾಗಿ ಮಾಡಿಕೊಂಡಿದ್ದಳಂತೆ. ಸುಮಾರು 40,000 ಜನಸಂಖ್ಯೆಯುಳ್ಳ ಈ ನಗರ ಪ್ರವಾಸಿಗರಿಗೆ ನೆಚ್ಚಿನ ತಾಣ. ನಿಸರ್ಗ ಸೌಂದರ್ಯವಷ್ಟೇ ಅಲ್ಲ, ಇಲ್ಲಿನ ಸಾಹಸ ಕ್ರೀಡೆಗಳಾದ ಬಂಗೀ ಜಂಪ್ (Bungee Jump), ಸ್ಕೈ ಡೈವಿಂಗ್ (Sky diving) ಹಾಗೂ ಜೆಟ್ ಸ್ಕೀ (Jet Skeeing)ಗಳು ಜಗತ್ಪ್ರಸಿದ್ಧವಾದವು.

ವನಾಕಾ ಎಂಬ ಭ್ರಮೆಯ ಊರು

ಮರುದಿನ ಬೆಳಿಗ್ಗೆ ಕ್ವೀನ್ಸ್‌ಟೌನ್‌ನ ಸುತ್ತಲಿನ ಪ್ರವಾಸಿ ತಾಣಗಳಾದ ವನಾಕಾ (Wanaka) ಹಾಗೂ ಆ್ಯರೋ ಟೌನ್ (Arrow Town)ಗಳತ್ತ ಪ್ರಯಾಣ ಬೆಳೆಸಿದೆವು. ಸುಮಾರು ಎರಡು ತಾಸಿನ ಪ್ರಯಾಣ. ಪ್ರವಾಸಿಗರಿಗೆ ಇಲ್ಲಿ ಓಡಾಡಲು ಹಾಗೂ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಬರಲು ಕ್ಯಾಂ‍ಪರ್ ವ್ಯಾನ್ (Camper Van)ಗಳ ಸೌಲಭ್ಯವಿದೆ. ಈ ವಿಶೇಷ ವ್ಯಾನ್‌ಗಳಲ್ಲಿ ಮಲಗಲು ಅನುಕೂಲವಾಗುವಂತಹ ಕೌಚ್‌ಗಳು, ಪುಟ್ಟ ಅಡುಗೆ ಮನೆ, ಪುಟ್ಟ ಬಾತ್‌ರೂಂ ಹಾಗೂ ಟಾಯ್ಲೆಟ್‌ನ ಸೌಲಭ್ಯವಿರುತ್ತದೆ. ಇದು ದಾರಿ ಸಾಗುತ್ತಲೇ ಸಾಗುತ್ತಲೇ ನಮ್ಮ ದಿನನಿತ್ಯದ ವಿಧಿ ವಿಧಾನಗಳನ್ನು ಪೂರೈಸುತ್ತಲೇ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಂಡು, ಇದ್ದ ಕಡಿಮೆ ಸಮಯದಲ್ಲಿ, ಹೆಚ್ಚು ಸ್ಥಳಗಳನ್ನು ನೋಡಬಹುದು. ಅಲ್ಲದೇ ಹೋಟೆಲ್‌, ತಂಗುದಾಣಗಳ ಬಾಡಿಗೆ ಇವುಗಳನ್ನು ಕೂಡ ಕಡಿಮೆ ಮಾಡಬಹುದು.

ನಾವು ನಮ್ಮ ತಮ್ಮನ ಕಾರಿನಲ್ಲಿಯೇ ಪ್ರಯಾಣ ಬೆಳೆಸಿದೆವು. ಪ್ರಯಾಣದುದ್ದಕ್ಕೂ ಕಣ್ಣಿಗೆ ಹಬ್ಬದೂಟ ನೀಡುವ ಹಚ್ಚ ಹಸಿರಿನ ಹುಲ್ಲಿನ ಕಿರಿದಾದ ಬೆಟ್ಟಗಳು, ಬೆಟ್ಟದ ಮೇಲೆ ಹುಲ್ಲು ಮೇಯುತ್ತಿರುವ ಬಿಳಿ ಕುರಿ ಅಥವಾ ಆಡುಗಳು. ಇಲ್ಲಿನ ಜನರ ಪ್ರಮುಖ ಉದ್ಯೋಗವೇ ‘ಕುರಿ ಸಾಕಾಣಿಕೆ’ ಅಲ್ಲದೇ ಇಲ್ಲಿನ ಹುಲ್ಲಿನಲ್ಲಿರುವ ಸಿಲಿಕಾನ್ ಅಂಶದಿಂದ ಇಲ್ಲಿನ ಹುಲ್ಲು ಜಗತ್ತಿನ ಮೂಲೆ ಮೂಲೆಗಳಿಗೆ ರಫ್ತಾಗುತ್ತದೆ. ವನಾಕಾ ನಗರದ ಪ್ರಮುಖ ಆಕರ್ಷಣೆ ಇಲ್ಲಿನ ಪಝಲ್ ವರ್ಲ್ಡ್. ಆಪ್ಟಿಕಲ್‌ ಇಲ್ಯೂಶನ್‌ ಅಥವಾ ದೃಷ್ಟಿ ಭ್ರಮೆ ಮೇಲೆ ಆಧಾರಿತ ಈ ಸ್ಥಳ. ವಿಚಿತ್ರಾಕಾರದ ಓರೆ ಮನೆಗಳು, ಅಸಮತಟ್ಟಾದ  ಕೋಣೆಗಳು ಮುಂತಾದವುಗಳನ್ನೊಳಗೊಂಡಿದೆ. ವನಾಕಾ ನಗರದ ಪ್ರಸಿದ್ಧ ಸರೋವರವೇ ‘ಲೇಕ್ ವನಾಕಾ’ ಇದು ಜೆಟ್ ಸ್ಕೀಯಿಂಗ್‌ಗೆ ಸುಪ್ರಸಿದ್ಧ.

‘ಕ್ವೀನ್ಸ್‌ಟೌನ್‌ಗೆ ಹೊತ್ತಿಕೊಂಡೇ ಇರುವ ಇನ್ನೊಂದು ನಗರ ಆ್ಯರೋಟೌನ್‌ಗೆ  ಚಿನ್ನದ ಗಣಿಗಾರಿಕೆಯ ಇತಿಹಾಸವಿದೆ. ಇಲ್ಲಿರುವ ನದಿ ‘ಆರೋ’ನಲ್ಲಿ ಇಂದಿಗೂ ಪ್ರವಾಸಿಗರಿಗೆ ಖುದ್ದು ಚಿನ್ನ ಹುಡುಕುವ ಸೌಲಭ್ಯವುಂಟು.

ಲೇಕ್‌ ವಾಕಟಿಪು ಇದು ‘ಕ್ವೀನ್ಸ್‌ಟೌನ್‌’ನ ಹೃದಯ ಭಾಗವಾಗಿದೆ. ಈ ಸುಂದರ ಪಾರದರ್ಶಕ ಸರೋವರದುದ್ದಕ್ಕೂ ನೀವು ಲಾಂಗ್ ವಾಕ್ ಹೋಗಬಹುದು. ಅಲ್ಲದೇ ಬೈಸಿಕಲ್ ಅಥವಾ ಸ್ಕೇಟ್ ಬೋರ್ಡ್‌ಗಳು ಕೂಡ ಬಾಡಿಗೆಗೆ ಲಭ್ಯ. ಜನಜಂಗುಳಿ ಇಲ್ಲದ, ಟ್ರಾಫಿಕ್ ಇಲ್ಲದ, ಯಾವ ಒತ್ತಡಗಳಿಲ್ಲದೇ ಈ ಸರೋವರದ ತೀರದಲ್ಲಿ ನೇಚರ್ ವಾಕ್ ಮಾಡುವಾಗ ಜೀವನ ಸ್ವಲ್ಪ ಸಮಯ ನಿಂತಂತೆ ಭಾಸವಾಯಿತು.

ಈ ಸುಂದರ ನಗರಿಯ ಪಕ್ಷಿ ನೋಟಕ್ಕಾಗಿ ಒಮ್ಮೆ ‘ಗಂಡೋಲಾ ರೈಡ್’ ಅಂದರೆ ಕೇಬಲ್ ಕಾರಿನ ಮೂಲಕ ಬೆಟ್ಟದ ತುದಿಯವರೆಗೂ ಹೋಗಿ, ಅಲ್ಲಿನ ರೆಸ್ಟೊರೆಂಟಿನ ಕಾಫಿಯ ಜತೆ ವಿಹಂಗಮ ನೋಟವನ್ನೂ ಸವಿಯಬಹುದು.

ಮಿಲ್‌ಫೋರ್ಡ್ ಸೌಂಡ್

‘ಕ್ವೀನ್ಸ್‌ಟೌನ್‌ನಿಂದ ಸುಮಾರು 300 ಕಿ.ಮಿ. ದಕ್ಷಿಣಕ್ಕೆ ಇರುವ ಮಿಲ್‌ಫೋರ್ಡ್ ಸೌಂಡ್ ನೋಡದಿದ್ದರೆ ನ್ಯೂಜಿಲೆಂಡ್ ಪ್ರವಾಸ ಅಪೂರ್ಣವಾದಂತೆಯೇ ಸರಿ. ಇದೊಂದು ಮಳೆಕಾಡಿನ ಪ್ರದೇಶವಾಗಿದ್ದು, ಕಡಿದಾದ ಬೆಟ್ಟಗಳು ಹಾಗೂ ಕಣಿವೆಗಳನ್ನೊಳಗೊಂಡಿದ್ದು ಜಲಪಾತಗಳಿಗೆ ಪ್ರಸಿದ್ಧವಾಗಿದೆ. ಕಡಿದಾದ ಬೆಟ್ಟಗಳ ಮಧ್ಯೆ, ಕಿರಿದಾದ ಸಮುದ್ರ ಕೊರೆತದ ಹಾದಿಯಲ್ಲಿ ಕ್ರೂಸ್ (ವಿಹಾರ ನೌಕೆ) ಸಂಚಾರ ಪ್ರವಾಸಿಗರಿಗೆ ಲಭ್ಯವಿದೆ. ವಿಹಾರದುದ್ದಕ್ಕೂ ಬೆಟ್ಟಗಳಲ್ಲಿ ಹರಿಯುವ ಜಲಪಾತಗಳು ಕಣ್ಮನ ಸೆಳೆಯುವಂತಿವೆ. ಇಲ್ಲಿಗೆ ವರ್ಷಕ್ಕೆ ಸುಮಾರು ಹತ್ತು ಲಕ್ಷ ಪ್ರವಾಸಿಗರು ಜಗತ್ತಿನ ಮೂಲೆ ಮೂಲೆಗಳಿಂದ ವೀಕ್ಷಿಸಲು ಬರುತ್ತಾರೆ.

ಸಾಹಸ ಕ್ರೀಡೆ

ಕ್ವೀನ್ಸ್‌ಟೌನ್ ಸಾಹಸ ಕ್ರೀಡೆಗಳಿಗೆ ಜಗತ್ತಿನಲ್ಲೇ ಹೆಸರು ವಾಸಿಯಾಗಿದೆ. ಬಂಗೀ ಜಿಗಿತ (ಎತ್ತರದ ಸೇತುವೆ ಮೇಲಿಂದ ಹಗ್ಗಕಟ್ಟಿಕೊಂಡು ಕೆಳಗೆ ಜಿಗಿಯುವುದು), ಸ್ಕೈಡೈವ್  15,000 ಅಡಿ ಎತ್ತರ ಹಾರಾಡುತ್ತಿರುವ ಹೆಲಿಕಾಪ್ಟರಿನಿಂದ ಪ್ಯಾರಾಚೂಟ್‌ ಕಟ್ಟಿಕೊಂಡು ಕೆಳಗೆ ಹಾರುವುದು ಹಾಗೂ ಹೀಗೂ ಮನಸ್ಸು ಗಟ್ಟಿ ಮಾಡಿಕೊಂಡು, ಮನೆ ದೇವರನ್ನು ಮನದಲ್ಲೇ ನೆನೆದು, ಸ್ಕೈ ಡೈವಿಂಗ್‌ಗೆ ಸಿದ್ಧರಾದೆವು. ಇದೊಂದು ಜೀವಮಾನದ ಮರೆಯಲಾರದ ಅನುಭವಗಳಲ್ಲೊಂದು. ಬಾನಂಗಳದಲ್ಲಿ ಯಥಾವತ್ ಹಕ್ಕಿಯಂತೆ ಹಾರುವ ಅದೃಷ್ಟ. 15,000 ಅಡಿ ಮೇಲಿನಿಂದ ಹಾರಿದ ಮೊದಲೆರಡು ಕ್ಷಣಗಳು ಹೃದಯ ನಿಂತಂತೆ ಬಾಸವಾದರೂ, ಆಮೇಲಿನ ಅನುಭವ ವರ್ಣಿಸಲಸಾಧ್ಯ. ‘ಸ್ಕೈಡೈವ್ ಮಾಡಿ ಬಂದ ಗುಂಡಿಗೆ ಇರುವವರು ಜೀವನದ ಎಂತಹ ಕಷ್ಟದ ಸಂದಿಗ್ಧ ಪರಿಸ್ಥಿತಿಯಲ್ಲೂ ಧೈರ್ಯಗೆಡರು’ ಎಂಬುದೇ ಈ ಸ್ಕೈಡೈವಿಂಗ್ ಕಂಪನಿಯ ಧ್ಯೇಯ ವಾಕ್ಯವಾಗಿತ್ತು.


ಸ್ಕೈ ಡೈವಿಂಗ್‌ನ ರೋಚಕ ಅನುಭವ
 

ಆಚೀಚೆಯ ನಗರಗಳು

ಕ್ವೀನ್ಸ್‌ಟೌನ್‌ನಲ್ಲಿ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತ ನ್ಯೂಜಿಲೆಂಡ್‌ನ ಮತ್ತೊಂದು ಪ್ರಮುಖ ನಗರ ಕ್ರೈಸ್ಟ್ ಚರ್ಚ್‌ಗೆ ಬಂದಿಳಿದೆವು. ಮಾರ್ಗ ಮಧ್ಯದಲ್ಲಿ ಇಲ್ಲಿನ ಮೌಂಟ್ ಕುಕ್ ಪರ್ವತವನ್ನು ಹೆಲಿಕಾಪ್ಟರ್ ಚಾಪರ್ ರೈಡ್ ಮೂಲಕ ವಿಹರಿಸಿದೆವು. ಮಂಜುಗಡ್ಡೆಯಿಂದ ಆವೃತವಾದ ಈ ಪರ್ವತ ನಮ್ಮ ಕೈಲಾಸ ಪರ್ವತವನ್ನು ನೆನಪಿಸಿತು.

ಕ್ರೈಸ್ಟ್‌ಚರ್ಚ್‌ನ ಪ್ರಮುಖ ಆಕರ್ಷಣೆ ಇಲ್ಲಿನ ಅಂಟಾರ್ಟಿಕ ಸೆಂಟರ್. ದಕ್ಷಿಣ ಧ್ರುವಕ್ಕೆ ಹತ್ತಿರವಿರುವ ನ್ಯೂಜಿಲೆಂಡ್‌ಗೆ, ಅಂಟಾರ್ಟಿಕ ಖಂಡ ಸಮೀಪವಿರುವುದು.

ಅಂಟಾರ್ಟಿಕ ಖಂಡದ ಯಥಾವತ್ತು ತುಣುಕು ಮಾದರಿಯೇ ಅಂಟಾರ್ಟಿಕ್ ಸೆಂಟರ್. ಅಂಟಾರ್ಟಿಕದ ತಾಪಮಾನ, ಹವಾಮಾನ ಅನುಭವ ಹಾಗೂ ಅಲ್ಲಿನ ಪಕ್ಷಿ ಪೆಂಗ್ವಿನ್‌ಗಳನ್ನು ನೋಡಲು ಇಲ್ಲಿ ಅವಕಾಶವಿದೆ.

ನಮ್ಮ ಮುಂದಿನ ಮೈಲಿಗಲ್ಲು ರೊಟೊರೊವಾ ನಗರ. ನ್ಯೂಜಿಲೆಂಡ್‌ನ ಆದಿವಾಸಿ ಮಾವೊರಿ ಜನಾಂಗದವರು ಇಲ್ಲಿ ಕಾಣಸಿಗುತ್ತಾರೆ. ‘ವಕಾರೆವಾರೆವಾ’ ಎಂಬ ಹಳ್ಳಿಯಲ್ಲಿ ಮಾವೊರಿ ಆದಿವಾಸಿಗಳ ಜೀವನಶೈಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಈ ಹಳ್ಳಿಯನ್ನೇ ಉಷ್ಣಹಳ್ಳಿ ಅಥವಾ Thermal Village ಎಂದು ಕರೆಯುವರು. ಇಡೀ ಪ್ರದೇಶವು ಭೂಶಾಖದ ಪ್ರದೇಶವಾಗಿದ್ದು, ನ್ಯೂಜಿಲೆಂಡ್‌ನ ಜ್ವಾಲಾಮುಖಿ ವಲಯವಾಗಿದೆ. ಬಿಸಿನೀರಿನ ಬುಗ್ಗೆಗಳು, ಸುಮಾರು 500ಕ್ಕೂ ಹೆಚ್ಚು ಆಮ್ಲ ಕ್ಷಾರೀಯ ಕೊಳಗಳಿವೆ. ಈ ಕೊಳಗಳಲ್ಲಿ ಗಂಧಕದ ಅಂಶದ ದ್ರವ ಕುದಿಯುತ್ತಿದ್ದು, ಪ್ರದೇಶವೆಲ್ಲ ಇದರ ವಾಸನೆಯ ಹೊಗೆಯಿಂದ ಕೂಡಿರುತ್ತದೆ.

ರೊಟೊರೊವಾದ ರೇನ್‌ಬೋ ರಾಷ್ಟ್ರೀಯ ಉದ್ಯಾನದಲ್ಲಿ ನ್ಯೂಜಿಲೆಂಡ್‌ನ ರಾಷ್ಟ್ರೀಯ ಪಕ್ಷಿ, ಅಳಿವಿನಂಚಿನಲ್ಲಿರುವ ‘ಕಿವಿ’ ಪಕ್ಷಿಯನ್ನು ನೋಡಿದೆವು. ಹಾರಲಾರದ ಈ ಪಕ್ಷಿಯ ಸಂತತಿಯನ್ನು ಅಪಾಯದ ಅಂಚಿನಿಂದ ಉಳಿಸುವಲ್ಲಿ ಇಲ್ಲಿನ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.


ಹಿಮದ ತೊಗಲು ಹೊದ್ದಿರುವ ಮೌಂಟ್‌ ಕುಕ್‌ನ ಪರ್ವತ

ಕುರಿ ಸಾಕಾಣಿಕೆಯೇ ನ್ಯೂಜಿಲೆಂಡ್‌ನ ಪ್ರಮುಖ ಉದ್ದಿಮೆ. ಇಲ್ಲಿನ ‘ಅಗ್ರೋಡೋಮ್ ಫಾರ್ಮ್’ನಲ್ಲಿ ನಡೆಸುವ ಜಗತ್ಪ್ರಸಿದ್ಧವಾದ ಫಾರ್ಮ್‌ಶೋ ಕಳೆದ 40 ವರ್ಷಗಳಿಂದ ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ. ನ್ಯೂಜಿಲೆಂಡ್‌ನ ರೈತ (ಇವರಿಗೆ ಕಿವೀಸ್ ರೈತರೆಂದೂ ಹೆಸರು). ನಮಗೆ ನಾನಾ ವಿಧದ ಕುರಿ ತಳಿಗಳನ್ನು ಪರಿಚಯಿಸಿ, ಕುರಿ ಕಾಯುವ ನಾಯಿಗಳು ಹೇಗೆ ಕುರಿಗಳನ್ನು ತನ್ನೊಡೆಯನ ಆಜ್ಞೆಯಂತೆ ನಿಯಂತ್ರಿಸುತ್ತವೆ ಹಾಗೂ ಕುರಿ ಮೈಮೇಲಿನ ತುಪ್ಪಳವನ್ನು ಕ್ಷೌರ ಮಾಡುವುದನ್ನು ಪ್ರೇಕ್ಷಕರಿಗೆ ತೋರಿಸುತ್ತಾರೆ. ನನ್ನ ಆರು ವರ್ಷದ ಮಗಳು ಸ್ಟೇಜ್ ಮೇಲೆ ಹೋಗಿ ಕುರಿಯ ಕ್ಷೌರ ಮಾಡುವುದನ್ನು ಆನಂದಿಸಿದರೆ, ನನ್ನ ಒಂದೂವರೆ ವರ್ಷದ ಮಗಳು ಕುರಿಮರಿಗಳಿಗೆ ಬಾಟಲ್‌ನಿಂದ ಹಾಲು ಕುಡಿಸಿ ಖುಷಿಪಟ್ಟಳು.

ಇಲ್ಲಿನ ವಾಯಿಟೊಮೊ ಎಂಬ ಊರಿನ ಮತ್ತೊಂದು ಜಗತ್ಪ್ರಸಿದ್ಧ ಆಕರ್ಷಣೀಯ ಮಿಂಚುಹುಳಗಳ ಗುಹೆ. ಇಲ್ಲಿನ ಕ್ಯಾಲ್ಸಿಯಂನಿಂದ ಆವೃತವಾದ ಬಿಳಿ ಬೆಟ್ಟಗಳ ಗುಹೆಗಳಲ್ಲಿ, ಪ್ರಶಾಂತವಾದ ದೋಣಿ ವಿಹಾರದಲ್ಲಿ, ಆಗಸದಲ್ಲಿ ನಕ್ಷತ್ರಗಳು ಮಿಂಚುವಂತೆ ಮಿನುಗುವ ಮಿಂಚು ಹುಳಗಳ ದೃಶ್ಯ ಮನಪಟದಲ್ಲಿ ಅಚ್ಚಳಿಯದೇ ಮೂಡಿದೆ.

ಇದಿಷ್ಟು ನ್ಯೂಜಿಲೆಂಡ್‌ನ ದಕ್ಷಿಣದ ನೈಸರ್ಗಿಕ ಸೌಂದರ್ಯ ರಾಶಿಯನ್ನು ಸವಿದು, ಉತ್ತರದ ಕಡೆಗೆ, ರಾಜಧಾನಿ ಆಕ್ಲೆಂಡ್‌ಗೆ  ಬಂದಾಗ, ಮಾನವ ನಿರ್ಮಿತ ಕಾಂಕ್ರೀಟ್ ಕಾಡು, ಜನಜಂಗುಳಿ, ಮೆಟ್ರೋದಂತಹ ಶಹರ ಜೀವನಶೈಲಿ ಮಜವೆನಿಸಲಿಲ್ಲ. ಪದೇ ಪದೇ ಭೂಕಂಪಕ್ಕೀಡಾಗಿ ನಲುಗಿದರೂ ಕೊಂಚವೂ ಸುಂದರತೆಯನ್ನು ಕಳೆದುಕೊಳ್ಳದ, ಟ್ರಾಫಿಕ್ ಸಿಗ್ನಲ್‌ಗಳೇ ಇಲ್ಲದ, ಪ್ರಕೃತಿಯ ಮಡಿಲು ಕ್ವೀನ್ಸ್‌ಟೌನ್. ನಿಸರ್ಗ ಆರಾಧಕರು ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT