ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಕನ್ನಡಿಗರು ಕಟ್ಟಿದ ಕೋಟೆ

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ವಿಶಾಲವಾದ ಭಾರತದಲ್ಲಿ ಕಾಸರಗೋಡು ಅತಿ ಚಿಕ್ಕ ಭಾಗ. ಆದರೂ ತನ್ನ ಸಾಂಸ್ಕೃತಿಕ, ಐತಿಹಾಸಿಕ ಹಿರಿಮೆ ಗರಿಮೆಗಳಿಂದ ಗಮನ ಸೆಳೆಯುವ ಸ್ಥಳ. ಕಾಸರಗೋಡು ಬಹುಭಾಷೆ ಮತ್ತು ಬಹುಸಂಸ್ಕೃತಿಯ ನೆಲ. ಮೈಸೂರು ರಾಜ್ಯದ ಕೆನರಾ ಜಿಲ್ಲೆಯ ಭಾಗವಾಗಿದ್ದ ಕಾಸರಗೋಡು ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡಿಗರ ಪ್ರಾಬಲ್ಯದಿಂದ ಕನ್ನಡದ್ದೇ ಆದ ಭೂಮಿಯಾಗಿತ್ತು. 1956ರಲ್ಲಿ ರಾಜ್ಯ ಪುನರ್ ವಿಂಗಡನಾ ಆಯೋಗ ನೇಮಿಸಿ ಭಾಷಾವಾರು ಪ್ರಾಂತ ರಚನೆಗೆ ಅನುಮತಿ ನೀಡಿದರೂ ಕಾಸರಗೋಡಿನ ಕನ್ನಡಿಗರಿಗೆ ನ್ಯಾಯ ದೊರೆಯಲಿಲ್ಲ. ಕಾಸರಗೋಡು ಕೇರಳಕ್ಕೆ ಸೇರಿಹೋಯಿತು. ಕಾಸರಗೋಡಿನಲ್ಲಿ ಬಹುತೇಕ ಮಂದಿ ಕೇರಳದ ಪ್ರಾದೇಶಿಕ ಭಾಷೆ ಮಲಯಾಳಂ ಭಾಷೆಯನ್ನು ಬಳಸುತ್ತಾರೆ ನಿಜ. ಆದರೂ ಕನ್ನಡದ ಕಂಪು ಮಾತ್ರ ಇಂದಿಗೂ ಮಾಸಿಲ್ಲ. ಕುತೂಹಲಕ್ಕಾಗಿ ಕಾಸರಗೋಡನ್ನೊಮ್ಮೆ ಸುತ್ತು ಹಾಕಿದಾಗ ಆ ಊರಿನಲ್ಲಿರುವ ಬ್ಯಾಂಕುಗಳು, ಅಂಚೆಕಚೇರಿ, ರೈಲುನಿಲ್ದಾಣ, ಬಸ್‌ ನಿಲ್ದಾಣದಂತಹ ಪ್ರಮುಖ ಕಚೇರಿಗಳ ಮುಂದೆ ಮಲಯಾಳಂ ಜೊತೆಗೆ ಕನ್ನಡದ ನಾಮಫಲಕಗಳನ್ನೂ ನೋಡಬಹುದು. ಕನ್ನಡ ಸಂಸ್ಕೃತಿ, ಕನ್ನಡ ಭಾಷೆ ಜನರ ಹಾವಭಾವಗಳಲ್ಲಿ ಬೆರೆತಿರುವುದು ಎದ್ದುಕಾಣುತ್ತದೆ.

ಕೋಟೆಗಳು ಗತಕಾಲದ ವೈಭವವನ್ನು ಸಾರುವ, ವಿಶಿಷ್ಟ ಕತೆಗಳನ್ನು ಹೇಳುವ, ಮಹತ್ವದ ಘಟನೆಗಳನ್ನು ಕಣ್ಣ ಮುಂದಿರಿಸುವ ಅದ್ಭುತ ರಚನೆ. ಈ ರಚನೆಗಳಲ್ಲಿ ಕಾಸರಗೋಡು ಸಮೀಪವಿರುವ ಬೇಕಲ್ ಕೋಟೆಯೂ ಒಂದು. ಒಂದೆಡೆ ಕೋಟೆ. ಮತ್ತೊಂದೆಡೆ ಭೋರ್ಗರೆಯುವ ಅರಬ್ಬೀ ಸಮುದ್ರ. ಕೋಟೆಯ ಇತಿಹಾಸಕ್ಕೆ ಸಾಗರ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.

ಸುಮಾರು ನಲವತ್ತು ಎಕರೆಯ ವಿಶಾಲ ವಿಸ್ತೀರ್ಣದಲ್ಲಿ ಸುಂದರವಾಗಿ ಕೋಟೆ ನಿರ್ಮಾಣಗೊಂಡಿದೆ. ತಾಳಿಕೋಟೆಯ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯದ ಅಧಃಪತನ ಪ್ರಾರಂಭವಾಯಿತು. ಆಗ ಕೆಳದಿಯ ನಾಯಕರು ಪ್ರಾಬಲ್ಯಕ್ಕೆ ಬಂದು ತುಳುನಾಡಿನ ಹಲವು ಪ್ರದೇಶಗಳಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದರು. ಬೇಕಲ್ ಎಂಬ ಗ್ರಾಮ ಕಡಲ ತೀರದಲ್ಲಿರುವುದರಿಂದ ಮತ್ತು ಬಂದರು ಪ್ರದೇಶವಾಗಿರುವುದರಿಂದ ಇಲ್ಲಿ ಕೋಟೆ ನಿರ್ಮಿಸಲು ಹಿರಿಯ ವೆಂಕಟಪ್ಪ ನಾಯಕ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ.

ಬೆದ್ನೊರೆಯ ಶಿವಪ್ಪ ನಾಯಕ 1650ರಲ್ಲಿ ಈ ಕೋಟೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ. ರಾಣಿ ಕೆಳದಿ ಚೆನ್ನಮ್ಮ ಉಸ್ತುವಾರಿಯನ್ನು ನೋಡಿಕೊಂಡಳು. ಮುಂದೆ ಹೈದರ್ ಅಲಿ ಹಾಗೂ ಟಿಪ್ಪುವಿನ ಪ್ರಭಾವ ಬೆಳೆಯಿತು. ಬೇಕಲ್ ಟಿಪ್ಪುವಿನ ವಶವಾಯಿತು. ಬೇಕಲ್ ಕೋಟೆ ಟಿಪ್ಪುವಿನ ಪ್ರಮುಖ ಸೈನ್ಯದ ಕೇಂದ್ರವಾಗಿ ಪಾತ್ರ ನಿರ್ವಹಿಸಿತು. 1799ರಲ್ಲಿ ನಡೆದ ನಾಲ್ಕನೆಯ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಹತ್ಯೆಯಾಯಿತು. ನಂತರ ಈ ಬೇಕಲ್ ಕೋಟೆ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಅಧೀನಕ್ಕೆ ಒಳಪಟ್ಟಿತು. ಹಲವು ರಾಜಾಡಳಿತಕ್ಕೆ ಒಳಪಟ್ಟಿದ್ದರೂ ಇದು ಮಲಬಾರ್ ಹಾಗೂ ತುಳುನಾಡು ಪ್ರದೇಶದ ಮುಖ್ಯ ಬಂದರು ಪಟ್ಟಣವಾಗಿ ಬೆಳೆಯಿತು.

ಸುತ್ತಮುತ್ತಲಿನ ಹಸಿರಿನ ಐಸಿರಿಯನ್ನು ಹೊತ್ತಿರುವ ಈ ಪ್ರದೇಶ ಹೆಚ್ಚು ವಾಣಿಜ್ಯೀಕರಣಗೊಮಡಿಲ್ಲ. ಇದೇ ಕೋಟೆಯ ವಿಶೇಷ. ಕೋಟೆ ಇಂದಿಗೂ ಸದೃಢವಾಗಿದ್ದು ಆಕರ್ಷಕ ರಚನೆಗಳಿಂದ ಕೂಡಿದೆ. ಇತಿಹಾಸ ಪ್ರಿಯರು ಹಾಗೂ ಪ್ರವಾಸಪ್ರಿಯರಿಗಂತೂ ಹೇಳಿಮಾಡಿಸಿದ ಸ್ಥಳ. ಕೋಟೆಯ ಪ್ರಮುಖ ಲಕ್ಷಣವೆಂದರೆ ನೀರು ಸಂಗ್ರಹಿಸಿ ಶೇಖರಿಸಿಡಲು ನಿರ್ಮಿಸಲಾದ ನೀರಿನ ಟ್ಯಾಂಕ್ ಮತ್ತು ಆ ಟ್ಯಾಂಕ್ ಒಳಗೆ ತೆರಳಲು ಕಟ್ಟಿರುವ ಮೆಟ್ಟಿಲುಗಳು. ರಚನೆಯ ರೂಪು ಬೇರೆಯದೇ ರೀತಿಯಿದ್ದರೂ ನಮ್ಮ ನಾಡಿನಲ್ಲಿರುವ ಕಲ್ಯಾಣಿಗಳು ನೆನಪಿಗೆ ಬರುತ್ತವೆ. ವೀಕ್ಷಣಾ ಗೋಪುರ ಕೋಟೆಯ ಮತ್ತೊಂದು ಅದ್ಭುತ ಸ್ಥಳ. ಇಲ್ಲಿಂದ ಕೋಟೆಯ ಸುತ್ತಮುತ್ತಲಿರುವ ಹಲವು ಪಟ್ಟಣಗಳು ಹಾಗೂ ಅರಬ್ಬೀ ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಕೋಟೆಗೂ - ಸಮುದ್ರಕ್ಕೂ ಸುರಂಗ ಮಾರ್ಗವೂ ಇದೆ. ಆದರೆ ಆ ಪ್ರದೇಶಕ್ಕೆ ಸದ್ಯ ಪ್ರವೇಶವಿಲ್ಲ. ಫೋಟೊಗ್ರಫಿ ಹವ್ಯಾಸವಿರುವವರಿಗಂತೂ ಹಬ್ಬವೋ ಹಬ್ಬ! ಚಲನಚಿತ್ರ ನಿರ್ದೇಶಕರ ನೆಚ್ಚಿನ ಶೂಟಿಂಗ್ ಸ್ಥಳ ಕೂಡ ಹೌದು!

1992ರಲ್ಲಿ ಭಾರತ ಸರ್ಕಾರ ಬೇಕಲ್ ಕೋಟೆಯನ್ನು ವಿಶೇಷ ಪ್ರವಾಸಿ ಪ್ರದೇಶವಾಗಿ ಘೋಷಿಸಿತು. 1995ರಲ್ಲಿ ಬೇಕಲ್ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನನ್ನು ಸ್ಥಾಪಿಸಿ ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಸುಂದರವಾದ ಉದ್ಯಾನ ಕಣ್ಮನ ಸೆಳೆಯುತ್ತದೆ.


ಕೇಟೆಯೊಳಗಿನ ನೆಲಮಹಡಿಯ ದಾರಿ

ಮಂಗಳೂರಿನಿಂದ ಕೇವಲ 67ಕಿ.ಮೀನಷ್ಟು ದೂರ ಕ್ರಮಿಸಿದರೆ ಬೇಕಲ್ ಕೋಟೆ ಸಿಗುತ್ತದೆ. ಇಲ್ಲಿಗೆ ತಲುಪಲು ರೈಲಿನ ಮುಖೇನ ಮಂಗಳೂರು- ಪಾಲಕ್ಕಾಡ್ ರೈಲು ಮಾರ್ಗದಲ್ಲಿರುವ ಕನ್ಹಾಗಡ್ ಹತ್ತಿರದ ರೈಲು ನಿಲ್ದಾಣಕ್ಕೆ ತೆರಳಿದರೆ ಸಾಕು. ಇಲ್ಲಿಂದ 11 ಕಿ.ಮೀ ದೂರದಲ್ಲಿದೆ ಬೇಕಲ್ ಕೋಟೆ. ಕಾಸರಗೋಡಿಂದ 16 ಕಿ.ಮೀ ಸಾಗಿದರೆ ಬೇಕಲ್ ಕೋಟೆಗೆ ತಲುಪಬಹುದು. ಉಳಿದುಕೊಳ್ಳಲು ಸುಸಜ್ಜಿತವಾದ ಲಾಡ್ಜ್ ವ್ಯವಸ್ಥೆಯೂ ಕಾಸರಗೋಡಿನಲ್ಲಿ ಸಿಗುತ್ತದೆ.

ಕೇರಳದಲ್ಲೇ ಅತಿ ದೊಡ್ಡದಾದ ಕೋಟೆ ಎಂದು ಹೆಸರಾಗಿರುವ ಬೇಕಲ್ ಕೋಟೆಯ ನೈರ್ಮಲ್ಯ ನಿರ್ವಹಣೆಯೂ ಅಷ್ಟೇ ಅಚ್ಚುಕಟ್ಟಾಗಿದೆ. ಎತ್ತೆತ್ತ ನೋಡಿದರತ್ತತ್ತ ನೀನೇ ದೇವ ಎಂಬ ವಚನದ ಸಾಲಿನಂತೆ ಎತ್ತೆತ್ತ ನೋಡಿದರೂ ಕೋಟೆಯ ಅಗಾಧತೆ, ಅಲ್ಲೊಂದು ಸಣ್ಣ ಮೌನ..., ಆ ಮೌನದಲ್ಲೂ ರಾಜ ಮಹಾರಾಜರು ಓಡಾಡಿದ ಹೆಜ್ಜೆಯ ಸಪ್ಪಳ.. ಆ ಸಪ್ಪಳ ಕಡಲ ಭೋರ್ಗರೆತದಲ್ಲಿ ವಿಲೀನವಾಗಿರುವಂತೆ ಭಾಸವಾಗುತ್ತದೆ. ನಮ್ಮ ಕನ್ನಡಿಗ ರಾಜರೇ ನಿರ್ಮಿಸಿರುವ ಈ ಕೋಟೆಯನ್ನು ನೋಡುತ್ತಿದ್ದರೆ ಕೇರಳದ ಜನರು ನಮ್ಮ ಕೋಟೆಯನ್ನು ಸಂರಕ್ಷಿಸುತ್ತಿರುವ ಪರಿ ಒಂದು ರೀತಿ ಹೆಮ್ಮೆಯ ಭಾವವನ್ನೂ ಮೂಡಿಸುತ್ತದೆ. ಹಾಗೆಯೇ ನಮ್ಮ ಕರ್ನಾಟಕದಲ್ಲಿ ಇತಿಹಾಸ ಸಾರುವ ಶ್ರೀರಂಗಪಟ್ಟಣ ಕೋಟೆಯ ನೈರ್ಮಲ್ಯವನ್ನು ಕಾಪಾಡಲು ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರ, ಜನಪ್ರತಿನಿಧಿಗಳ ಬಗ್ಗೆ ಬೇಸರವೂ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT