ಚುನಾವಣಾ ಆಯೋಗದ ಹೊಸ ಸಾರಥಿ

7

ಚುನಾವಣಾ ಆಯೋಗದ ಹೊಸ ಸಾರಥಿ

Published:
Updated:
ಚುನಾವಣಾ ಆಯೋಗದ ಹೊಸ ಸಾರಥಿ

ಲಾಭದಾಯಕ ಹುದ್ದೆಯ ನಿಯಮ ಉಲ್ಲಂಘಿಸಿರುವ ಆರೋಪದಲ್ಲಿ ಆಮ್‌ ಆದ್ಮಿ ಪಕ್ಷದ 20 ಜನ ಶಾಸಕರನ್ನು ಅನರ್ಹಗೊಳಿಸಿದ ಹಾಗೂ ಮುಖ್ಯ ಚುನಾವಣಾ ಆಯುಕ್ತರ ನೇಮಕ ಕುರಿತ ಎರಡು ಮಹತ್ವದ ಘೋಷಣೆಗಳು ರಾಷ್ಟ್ರಪತಿ ಭವನದಿಂದ ಜ.21ರಂದು ಪ್ರಕಟಗೊಂಡವು.

2015ರ ಆಗಸ್ಟ್‌ 14ರಿಂದಲೇ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಐಎಎಸ್‌ ಅಧಿಕಾರಿ ಓಂ ಪ್ರಕಾಶ್ ರಾವತ್ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕಗೊಗೊಳಿಸಲಾಗಿದೆ.

ಬಿಹಾರ, ಗುಜರಾತ್‌, ಹಿಮಾಚಲಪ್ರದೇಶ, ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಮಣಿಪುರ, ಗೋವಾ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಯ ಮೇಲ್ವಿಚಾರಣೆಯ ಗಟ್ಟಿ ಅನುಭವ ಹೊಂದಿರುವ ರಾವತ್‌, ಚುನಾವಣಾ ಆಯೋಗದ ಸಾರಥ್ಯ ವಹಿಸಿಕೊಂಡಿದ್ದು (ಜನವರಿ 23), ಡಿಸೆಂಬರ್‌ ಅಂತ್ಯದವರೆಗೆ ಆ ಹುದ್ದೆಯಲ್ಲಿ ಇರಲಿದ್ದಾರೆ.

‘20 ಶಾಸಕರು ಲಾಭದಾಯಕ ಹುದ್ದೆಯನ್ನು ಹೊಂದಿರುವ ಕುರಿತು ಪ್ರತಿಕ್ರಿಯೆ ಕೋರಿ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿಯೇ ನೋಟಿಸ್‌ ಹೊರಡಿಸಿದ್ದರೂ ಅದಕ್ಕೆ ಆಮ್‌ ಆದ್ಮಿ ಪಕ್ಷವಾಗಲೀ, ಆರೋಪ ಎದುರಿಸಿದ್ದ ಶಾಸಕರಾಗಲೀ ಉತ್ತರ ನೀಡುವ ಗೋಜಿಗೇ ಹೋಗಿರಲಿಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ರಾವತ್‌ ಅವರು ನೀಡಿದ ಹೇಳಿಕೆಯು ಆಮ್‌ ಆದ್ಮಿ ಪಕ್ಷದ ತೀಕ್ಷ್ಣ ಟೀಕೆಗೆ ಗುರಿಯಾಗಿದೆ.

ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸುವಂತೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಅಚಲ್‌ ಕುಮಾರ್‌ ಜೋತಿ ಅವರು ಮಾಡಿದ್ದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಕಿತ ಹಾಕಿದ್ದರಾದರೂ, ಶಿಫಾರಸಿಗೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳನ್ನೂ ಅರಿತಿದ್ದ ರಾವತ್‌, ಅಧಿಕಾರ ವಹಿಸಿಕೊಂಡ ಕೂಡಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಎಎಪಿಯ ಅಸಮಾಧಾನಕ್ಕೆ ಕಾರಣವಾಗಿದೆ.

ಅಚಲ್‌ ಕುಮಾರ್‌ ಜೋತಿ ಅವರ ಸ್ಥಾನವನ್ನು ಅಲಂಕರಿಸಿರುವ ರಾವತ್‌, ಬುಡಕಟ್ಟು ನಿವಾಸಿಗಳಿಗೆ ಸಂಬಂಧಿಸಿದ ಅರಣ್ಯ ಹಕ್ಕುಗಳನ್ನು ರಕ್ಷಿಸಿರುವ ಸಾಧನೆಗಾಗಿ 2010ರಲ್ಲಿ ಪ್ರಧಾನಮಂತ್ರಿ ಪ್ರಶಸ್ತಿಗೆ ಪಾತ್ರರಾಗಿದ್ದರು.

ತಂದೆ, ರಾಮ್‌ ಸ್ವರೂಪ್‌ ರಾವತ್‌ ಅವರಂತೆಯೇ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಅಥವಾ ಉಪನ್ಯಾಸಕನಾಗಿ ಸೇವೆ ಸಲ್ಲಿಸುವ ಕನಸು ಹೊತ್ತಿದ್ದ ಓಂ ಪ್ರಕಾಶ್‌ ಅವರಿಗೆ ಅದಕ್ಕೆ ಅವಕಾಶ ದೊರೆಯದೆ ನಿರಾಸೆ ಅನುಭವಿಸಬೇಕಾಯಿತು. 1953ರ ಡಿಸೆಂಬರ್‌ 2ರಂದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಜನಿಸಿರುವ ಇವರು, ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು, ಕಾಲೇಜು ಉಪನ್ಯಾಸಕ ಹುದ್ದೆಗೆ ನೇಮಕ ಬಯಸಿದ್ದದ್ದರು. ಆದರೆ ನ್ಯಾಯಸಮ್ಮತವಲ್ಲದ ಆಯ್ಕೆ ಪ್ರಕ್ರಿಯೆಯಿಂದಾಗಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ ಇದರಿಂದ ಹತಾಶರಾಗದೆ, ಹೊಸ ಗುರಿ ಇಟ್ಟುಕೊಂಡು ಹಟದೊಂದಿಗೆ ಅದರ ಬೆನ್ನುಹತ್ತಿ ಉನ್ನತ ಸ್ಥಾನಗಳನ್ನು ದಕ್ಕಿಸಿಕೊಂಡರು.

1975ರಲ್ಲಿ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಡೆಹರಾಡೂನ್‌ನಲ್ಲಿ ತರಬೇತಿ ಪಡೆಯುವಾಗಲೇ (1977) ಭಾರತೀಯ ಆಡಳಿತಾತ ಸೇವೆ (ಐಎಎಸ್‌) ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿ ಮಧ್ಯಪ್ರದೇಶ ಕೇಡರ್‌ನ ಅಧಿಕಾರಿಯಾಗಿ ಮಹತ್ವದ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಮಧ್ಯಪ್ರದೇಶದ ನರಸಿಂಗಪುರ ಹಾಗೂ ಇಂದೋರ್‌ನ ಜಿಲ್ಲಾಧಿಕಾರಿಯಾಗಿ, ರಕ್ಷಣಾ ಸಚಿವಾಲಯದ ನಿರ್ದೇಶಕ, ಜಂಟಿ ಕಾರ್ಯದರ್ಶಿಯಾಗಿ, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಬಾಬುಲಾಲ್‌ ಗೌರ್‌ ಅವರ ಪ್ರಧಾನ ಕಾರ್ಯದರ್ಶಿಯಾಗಿ, ನರ್ಮದಾ ಕಣಿವೆ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ನರ್ಮದಾ ಕಣಿವೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಇವರು, ದಕ್ಷ ಆಡಳಿತಕ್ಕೆ ಹೆಸರಾದವರು.

‘ಸಾಮಾಜಿಕ ಅಭಿವೃದ್ಧಿ ಯೋಜನೆ’ ವಿಷಯದಲ್ಲಿ (ಯು.ಕೆ, 1989ರಲ್ಲಿ) ಸ್ನಾತಕೋತ್ತರ ಪದವಿ ಪಡೆದಿರುವ ರಾವತ್‌, ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯಿಂದಾಗಿ ಸ್ಥಗಿತಗೊಂಡಿದ್ದ ಚುನಾವಣಾ ವ್ಯವಸ್ಥೆ ಮರು ಜಾರಿಯಾದ ಸಂದರ್ಭ (1994) ವಿಶ್ವ ಸಂಸ್ಥೆಯಿಂದ ಅಲ್ಲಿಯ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿದ್ದರು.

ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸುತ್ತಲೇ ಬಂದಿರುವ ‘ಒಂದು ದೇಶ ಒಂದು ಚುನಾವಣೆ’ ಕಾರ್ಯಸೂಚಿಯನ್ನು ಇವರೂ ಬೆಂಬಲಿಸುತ್ತಾರೆ. ‘ಸಮಯ ಮತ್ತು ಚುನಾವಣಾ ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ಏಕಕಾಲದ ಚುನಾವಣಾ ವ್ಯವಸ್ಥೆ ಜಾರಿಯಾಗುವ ಅಗತ್ಯವಿದೆ. ಚುನಾವಣೆಯ ಸಂದರ್ಭ ಪದೇಪದೇ ವಿಧಿಸಲಾಗುವ ಮಾದರಿ ನೀತಿ ಸಂಹಿತೆಯು ಸಾರ್ವಜನಿಕರಿಗೆ ಅಡ್ಡಿಯನ್ನುಂಟು ಮಾಡುವ, ಸರಳ ಆಡಳಿತಕ್ಕೆ ನಿರ್ಬಂಧ ಹೇರುವಂತಹ ಪ್ರಕ್ರಿಯೆಯಾಗಿ, ಅಭಿವೃದ್ಧಿಯ ಹಿನ್ನಡೆಗೂ ಕಾರಣವಾಗುವುದರಿಂದ ದೇಶದಾದ್ಯಂತ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ, ಲೋಕಸಭೆಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ, ಪಂಚಾಯಿತಿಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯುವುದು ಯೋಗ್ಯ’ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಜನಾಭಿಪ್ರಾಯವನ್ನು ರೂಪಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸುವುದರ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ. ಸಾಮಾಜಿಕ ಜಾಲತಾಣವನ್ನು ‘ಮಾಧ್ಯಮ’ ಎಂದು ಪರಿಗಣಿಸಬೇಕು’ ಎಂಬುದು ರಾವತ್‌ ಅವರ ನಿಲುವು. ‘ಈ ಕುರಿತು ಉದ್ಭವಿಸಬಹುದಾದ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕು. ಚುನಾವಣಾ ಆಯೋಗವು ಸಾಮಾಜಿಕ ಮಾಧ್ಯಮ ನೀತಿಯನ್ನು ಜಾರಿಗೊಳಿಸುವಲ್ಲಿ ಆಸಕ್ತಿ ಹೊಂದಿದೆ’ ಎಂದೂ ಅವರು ಹೇಳಿದ್ದಾರೆ.

ಚುನಾವಣಾ ಪ್ರಕ್ರಿಯೆಗಳಲ್ಲಿ ಅಂಗವಿಕಲರು ಸಹ ಸ್ಪರ್ಧಿಸುವುದಕ್ಕೆ ಪೂರಕವಾಗುವಂತೆ ‘ರಚನಾತ್ಮಕ ಕ್ರಮ’ದ ಅಗತ್ಯವನ್ನು ಪ್ರತಿಪಾದಿಸಿರುವ ರಾವತ್‌, ಕಾನೂನು ರೂಪಿಸುವ ರಾಜಕಾರಣಿಗಳು ಈ ಕುರಿತು ಆದ್ಯತೆ ನೀಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯವೈಖರಿ ಹಾಗೂ ಸಂಶಯಗಳ ಕುರಿತು ಭಾರಿ ಚರ್ಚೆಗಳು ನಡೆದಿರುವ ಸಂದರ್ಭದಲ್ಲಿಯೇ, ಬದಲಾವಣೆಯನ್ನು ಚುನಾವಣಾ ಆಯೋಗ ಬಯಸಿದೆ ಎಂಬ ಹೇಳಿಕೆ ನೀಡಿರುವ ರಾವತ್‌, ಚುನಾವಣೆಗೆ ಸಂಬಂಧಿಸಿದ ಸುಧಾರಣೆಗಳತ್ತ ತೀವ್ರ ಆಸಕ್ತ ಹೊಂದಿದ್ದಾಗಿ ಪ್ರಕಟಿಸಿದ್ದಾರೆ.

ಕೆಲಸ ಅರಸಿ ವಲಸೆ ಹೋಗುವ ದೇಶದ ಪ್ರತಿ ನಾಗರಿಕನೂ ಸೇನೆಯಲ್ಲಿರುವ ಸಿಬ್ಬಂದಿಯಂತೆಯೇ ತನ್ನ ಮತವನ್ನು ಚಲಾಯಿಸುವ ಹಕ್ಕನ್ನೂ ಹೊಂದಬೇಕು. ಬೇರೆಡೆ ಇದ್ದೂ, ತಮ್ಮ ಊರಿನಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಹ ವ್ಯವಸ್ಥೆ ಜಾರಿಗೊಳಿಸುವುದನ್ನೂ ಆಯೋಗ ಪರಿಗಣಿಸಿದೆ ಎಂದು ತಿಳಿಸಿರುವ ಇವರು, ‘ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಜೊತೆ ಜೋಡಿಸುವುದಕ್ಕೆ ನನ್ನ ಬೆಂಬಲ ಇದೆ. ಮತಗಟ್ಟೆಗೆ ಪ್ರವೇಶಿಸುವ ಪ್ರತಿ ಮತದಾರನ ಬೆರಳಚ್ಚಿನ ಮೂಲಕ ಗುರುತು ಸಾಬೀತುಪಡಿಸಿ ಮತದಾನ ಮಾಡುವ ವ್ಯವಸ್ಥೆ ಜಾರಿಯಾದಲ್ಲಿ ಅಕ್ರಮವನ್ನು ತಡೆಯಬಹುದಾಗಿದೆ. ಅಂತರ್ಜಾಲ ಸಂಪರ್ಕಕ್ಕೆ ಒಳಪಡದ ಸ್ವತಂತ್ರ ಯಂತ್ರಗಳಾಗಿ ಇವಿಎಂಗಳು ಕಾರ್ಯ ನಿರ್ವಹಿಸುವುದು ಸೂಕ್ತ. ಸಮರ್ಪಕ, ನ್ಯಾಯಸಮ್ಮತ ಹಾಗೂ ವಿಶ್ವಾಸಾರ್ಹ ಚುನಾವಣಾ ವ್ಯವಸ್ಥೆ ಇಂದಿನ ಅಗತ್ಯವಾಗಿದೆ ಎಂದು ಹೇಳುವ ಮೂಲಕ ಚುನಾವಣಾ ವ್ಯವಸ್ಥೆಯಲ್ಲಿ ಸಂಭವನೀಯ ಬದಲಾವಣೆಯ ಸುಳಿವನ್ನೂ ನೀಡಿದ್ದಾರೆ.

ವರ್ಷಾಂತ್ಯದವರೆಗೆ ತ್ರಿಪುರಾ, ನಾಗಾಲ್ಯಾಂಡ್‌, ಮೇಘಾಲಯ, ಕರ್ನಾಟಕ, ಮಿಜೋರಾಂ, ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್‌ಗಡ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಳಿಗೆ ರಾವತ್‌ ಅವರ ಸಾರಥ್ಯ ಇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry