‘ಸತ್ಯೋತ್ತರ ಕಾಲವಲ್ಲ, ಉದ್ವಿಗ್ನತೆಯ ಕಾಲ’

7

‘ಸತ್ಯೋತ್ತರ ಕಾಲವಲ್ಲ, ಉದ್ವಿಗ್ನತೆಯ ಕಾಲ’

Published:
Updated:
‘ಸತ್ಯೋತ್ತರ ಕಾಲವಲ್ಲ, ಉದ್ವಿಗ್ನತೆಯ ಕಾಲ’

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾ ‘ಪದ್ಮಾವತ್’ ಈಗ ತೆರೆಗೆ ಬಂದಿದೆ. ‘ರಜಪೂತರ ಬಗ್ಗೆ ಗೌರವ ಹೆಚ್ಚುವಂತೆ ಅವರನ್ನು ಇದರಲ್ಲಿ ಚಿತ್ರಿಸಲಾಗಿದೆ’ ಎಂದು ಸಿನಿಮಾ ವೀಕ್ಷಿಸಿದ ಕೆಲವರು ಹೇಳಿದ್ದಾರೆ. ಸಿನಿಮಾದ ಹೂರಣವನ್ನು ತಪ್ಪಾಗಿ ಗ್ರಹಿಸಿದ ಪರಿಣಾಮವಾಗಿ ಅದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು ಎಂದು ಭಾಸವಾಗುತ್ತಿದೆ. ಆದರೆ, ಪದ್ಮಾವತ್ ಸಿನಿಮಾ ವಿರೋಧಿಸಿದ್ದರ ಹಿಂದೆ ಇದ್ದಿದ್ದು ತಪ್ಪು ಗ್ರಹಿಕೆ ಮಾತ್ರವೇ? ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರಹಾರ ಮಾಡುವಂತಹ ವರ್ತನೆಗಳ ಹಿಂದೆ ಇದ್ದ ರಾಜಕೀಯ ಏನು, ಕೆಲವು ರಾಜ್ಯ ಸರ್ಕಾರಗಳು ಈ ಸಿನಿಮಾ ಪ್ರದರ್ಶನದ ಮೇಲೆ ನಿರ್ಬಂಧ ಹೇರಿದ್ದು ಏಕೆ ಎಂಬ ವಿಚಾರಗಳ ಬಗ್ಗೆ ನಟ, ನಿರ್ದೇಶಕ ಬಿ. ಸುರೇಶ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ. ಅವರೊಂದಿಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

* ಪರಿಣತರನ್ನು ಹೊಂದಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಮಾಣಪತ್ರ ನೀಡಿದ ಸಿನಿಮಾ ಪ್ರದರ್ಶನವನ್ನು ರಾಜ್ಯ ಸರ್ಕಾರಗಳು ನಿಷೇಧ ಮಾಡುವುದರ ಅರ್ಥವೇನು?

– ಚರ್ಚೆಯನ್ನು ಒಪ್ಪದ, ಏಕಮುಖಿ ನಿಲುವನ್ನು ಒಪ್ಪಿಕೊಳ್ಳುವಂತಹ ವಿಚಿತ್ರ ಸ್ಥಿತಿಗೆ ಭಾರತ ತಲುಪಿದೆ ಎಂಬುದು ಕಣ್ಣಿಗೆ ಕಾಣುತ್ತದೆ. ಸಿಬಿಎಫ್‌ಸಿ ಎಂಬುದು ಪ್ರಜಾತಾಂತ್ರಿಕವಾಗಿ ರೂಪುಗೊಂಡಿರುವ ಮಂಡಳಿ. ಅದಕ್ಕೆ ಸಾಂವಿಧಾನಿಕವಾದ ಎಲ್ಲ ಅಧಿಕಾರಗಳು ಇವೆ. ಈ ಮಂಡಳಿ ರಾಜಕೀಯದಿಂದ ದೂರ ಇರಬೇಕು, ಜಾತ್ಯತೀತವಾಗಿ ಇರಬೇಕು, ಬಹುತ್ವವನ್ನು ಗೌರವಿಸಬೇಕು ಎಂಬ ನಿಯಮಗಳು ಇವೆ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ದೇಶ ಕಂಡ ಸರ್ಕಾರಗಳು ತನಗೆ ಬೇಕಾದವರನ್ನೇ ಮಂಡಳಿಗೆ ನೇಮಿಸುವ ಕೆಲಸ ಮಾಡಿವೆ. ರಾಜಕಾರಣಿಗಳೂ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ. ಸರ್ಕಾರಗಳ ನಿಲುವನ್ನು ಬೆಂಬಲಿಸುವವರಿಗೆ ಮಾತ್ರ ಇದರಲ್ಲಿ ಜಾಗ ಸಿಗುತ್ತಿದೆ. ಇದು ಬಹುದೊಡ್ಡ ಅಪಾಯ.

ಮಂಡಳಿಯು ಸಿನಿಮಾ ವೀಕ್ಷಿಸಿ ಪ್ರಮಾಣಪತ್ರ ನೀಡುತ್ತದೆ. ಇದಾದ ನಂತರವೂ ಸಿನಿಮಾ ಪ್ರದರ್ಶನಕ್ಕೆ ರಾಜ್ಯ ಸರ್ಕಾರಗಳು ಅವಕಾಶ ಕೊಡದೆ, ತಮ್ಮ ನಿರ್ಧಾರಕ್ಕೆ ಕಾನೂನು ಸುವ್ಯವಸ್ಥೆ ಕಾರಣ ನೀಡುತ್ತವೆ. ಶಾಂತಿ ಕಾಪಾಡಲು ಆಗದು ಎಂದಾದರೆ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳುವ ಸಣ್ಣ ಯೋಗ್ಯತೆ ಕೂಡ ಸರ್ಕಾರದಲ್ಲಿ ಇರುವವರಿಗೆ ಇಲ್ಲವೆಂದು ಅರ್ಥ. ಸರ್ಕಾರದಲ್ಲಿ ಇರುವವರು ಎಲ್ಲರಿಗೂ ರಕ್ಷಣೆ ನೀಡುವ ಪ್ರಮಾಣ ವಚನ ತೆಗೆದುಕೊಂಡಿರುತ್ತಾರೆ. ಆದರೆ, ಸಿನಿಮಾ ನಿಷೇಧಿಸುವ ಸರ್ಕಾರಗಳು ವಾಗ್ದಾನ ಈಡೇರಿಸುವ ಹೊಣೆಯಿಂದ ತಪ್ಪಿಸಿಕೊಳ್ಳುತ್ತಿವೆ.

* ಹಾಗಾದರೆ ಇದು ಹೊಣೆಯಿಂದ ಜಾರಿಕೊಳ್ಳುವ ಯತ್ನ ಎಂದಷ್ಟೇ ಗ್ರಹಿಸಬೇಕೇ?

– ಅತ್ಯಂತ ಪ್ರಜ್ಞಾವಂತ ರಾಜಕಾರಣಿ ಎಂದು ನಾವು ಇಷ್ಟು ಕಾಲ ಹೇಳುತ್ತಿದ್ದ ನಿತೀಶ್ ಕುಮಾರ್ ಕೂಡ ಬಿಹಾರದಲ್ಲಿ ‘ಪದ್ಮಾವತ್’ ಸಿನಿಮಾ ಪ್ರದರ್ಶನದ ಮೇಲೆ ನಿರ್ಬಂಧ ವಿಧಿಸುತ್ತಾರೆ ಎಂದಾದರೆ ನಮ್ಮ ಗ್ರಹಿಕೆಗಳೆಲ್ಲವೂ ತಪ್ಪು ಎಂದೇ ಅರ್ಥ. ಇವತ್ತು ದೇಶದಲ್ಲಿ ಆಗುತ್ತಿರುವುದು ಸಮಾಜವನ್ನು ಕಟ್ಟುವ ರಾಜಕಾರಣ ಅಲ್ಲ. ಇಲ್ಲಿ ನಡೆಯುತ್ತಿರುವುದು ಅವಕಾಶವಾದಿ ರಾಜಕಾರಣ. ದೊರೆಯನ್ನು ಮೆಚ್ಚಿಸುವ ರಾಜಕಾರಣ. ದೊರೆಯನ್ನು ಓಲೈಸುವ ರಾಜಕಾರಣವು ಹೀಗೆ ನಿರ್ಬಂಧ ವಿಧಿಸುವ ಕೆಲಸಗಳನ್ನು ಮಾಡಿಸುತ್ತಿದೆ.

ದೇವನೂರ ಮಹಾದೇವ ಅವರು ಒಂದು ಕಥೆ ಹೇಳಿದ್ದರು. ಕೊಳ್ಳೆ ಹೊಡೆಯುವವರು ಊರಾಚೆಯ ಬಣವೆಗೆ ಮೊದಲು ಬೆಂಕಿ ಕೊಡುತ್ತಾರೆ. ಊರಿನ ಜನ ಅದನ್ನು ಆರಿಸುವ ಕೆಲಸದಲ್ಲಿ ತೊಡಗಿರುವಾಗ ಕಳ್ಳರು ಊರನ್ನು ಕೊಳ್ಳೆ ಹೊಡೆಯುತ್ತಾರೆ. ‘ಪದ್ಮಾವತ್’ ಎಂಬುದು ಅತಿಸಣ್ಣ ರೂಪಕ. ನಾವು ‘ಪದ್ಮಾವತ್’ನಂತಹ ವಿಷಯಗಳ ಬಗ್ಗೆ ಮಾತನಾಡುತ್ತ ಇರಲಿ, ಜನಸಾಮಾನ್ಯರಿಗೆ ತೊಂದರೆ ಕೊಡುವ ದೊಡ್ಡ ವಿಷಯಗಳು ನಮ್ಮ ಗಮನಕ್ಕೆ ಬಾರದೇ ಇರಲಿ ಎಂಬುದು ಇದರ ಹಿಂದೆ ಇರುವ ಉದ್ದೇಶ.

* ‘ಪದ್ಮಾವತ್’ ಸಿನಿಮಾ ವೀಕ್ಷಿಸದೆಯೇ ಜನ ಪ್ರತಿಭಟನೆ ನಡೆಸಿದ್ದು, ಗಲಾಟೆ ಮಾಡಿದ್ದು ಏಕಿರಬಹುದು?

– ನಾವು ಬದುಕುತ್ತಿರುವ ಸಂದರ್ಭವನ್ನು ‘ಸತ್ಯೋತ್ತರ ಕಾಲ’ ಎಂದು ಹಲವರು ಹೇಳುತ್ತಾರೆ. ಆದರೆ ಇದು ಅದಲ್ಲ ಅನಿಸುತ್ತದೆ. ಇದು ಉದ್ವಿಗ್ನತೆಯ ಕಾಲ. ನಿರ್ದಿಷ್ಟ ಬಗೆಯ ಸಂದೇಶಗಳು ಮೊಬೈಲ್‌ಗೆ ಪ್ರತಿಕ್ಷಣ ಬರುತ್ತಿರುತ್ತವೆ. ನಿಮ್ಮ ಎದುರು ಒಂದು ಭೂತ ಬರುತ್ತಿದೆ ಎಂಬಂತಹ ಚಿತ್ರಣವನ್ನು ಅಂತಹ ಸಂದೇಶಗಳು ನೀಡುತ್ತವೆ. ಆಲೋಚಿಸುವ ಮುನ್ನವೇ ಪ್ರತಿಕ್ರಿಯೆ ನೀಡಬೇಕು ಎಂಬ ಸನ್ನಿವೇಶವನ್ನು ಅವು ಸೃಷ್ಟಿಸುತ್ತವೆ.

‘ವಿಶ್ವರೂಪಂ’ ಸಿನಿಮಾ ವಿಚಾರದಲ್ಲೂ ಹೀಗೇ ಆಯಿತು. ಒಂದು ಸಮುದಾಯ ಸಿನಿಮಾ ವೀಕ್ಷಿಸದೆಯೇ ಜಗಳವಾಡಿತು. ಅದರ ಹಿಂದಿನ ರಾಜಕೀಯ ದುರುದ್ದೇಶ ಗೊತ್ತಿರುವಂಥದ್ದೇ. ಹಾಗೆ ಮಾಡಿಸಿದವರು ಈಗ ಬದುಕಿಲ್ಲ. ‘ಪದ್ಮಾವತ್’ ನೋಡದವರು ಆ ಸಿನಿಮಾ ವಿರುದ್ಧ ಗಲಾಟೆ ಮಾಡಿದರು. ಗಲಾಟೆ ಮಾಡುತ್ತಿರುವವರು ಸಮಾಜದ ಕೆಳವರ್ಗದ ಜನ. ಕೊನೆಯಲ್ಲಿ ಬಂಧಿತರಾಗುವವರೂ ಅವರೇ. ಬ್ರೈನ್‌ವಾಶ್‌ಗೆ ಒಳಗಾಗಿರುವವರು ಹೀಗೆ ಗಲಾಟೆ ಮಾಡುತ್ತಿದ್ದಾರೆ. ಅವರ ಬ್ರೈನ್‌ವಾಶ್‌ ಮಾಡಿದವರು ಇನ್ನೊಂದು ವರ್ಗದ ಜನ.

* ಪದ್ಮಾವತ್ ಸಿನಿಮಾ ಬಿಡುಗಡೆ ಮಾಡುವ ಮೊದಲು ಪ್ರತಿಭಟನಾಕಾರರಿಗೆ ಅದನ್ನು ತೋರಿಸಲು ಬನ್ಸಾಲಿ ಮುಂದಾಗಿದ್ದರು. ಇದು ಅಗತ್ಯವೇ?

– ನಾನು ನಿರ್ದೇಶಿಸಿದ ‘ದೇವರ ನಾಡಲ್ಲಿ’ ಸಿನಿಮಾಗೆ ಸಿಬಿಎಫ್‌ಸಿ ಪ್ರಮಾಣಪತ್ರ ಸಿಕ್ಕ ನಂತರ, ಬಿಡುಗಡೆ ಆಗುವ ಮೊದಲು ಒಂದು ಸಂಘಟನೆಯಿಂದ ದಿನಕ್ಕೆ ಹತ್ತು ಕರೆ ಬರುತ್ತಿತ್ತು. ‘ನಮ್ಮವರು ನೋಡದೆ ಸಿನಿಮಾ ಬಿಡುಗಡೆ ಮಾಡಿದರೆ ನಿಮ್ಮನ್ನು ಕೊಲ್ಲುತ್ತೇವೆ’ ಎಂದು ಬೆದರಿಕೆ ಹಾಕುತ್ತಿದ್ದರು. ಅವರು ನನ್ನ ವಿರುದ್ಧ ವಾಟ್ಸ್‌ಆ್ಯಪ್‌ ಅಭಿಯಾನ ನಡೆಸಿದರು. ಹೀಗಿದ್ದರೂ ಜನ ನನ್ನ ಕೈಹಿಡಿದರು. ನಾನು ಬಚಾವಾದೆ. ಸಿನಿಮಾ ಬಗ್ಗೆ ಜನ ತೀರ್ಮಾನಿಸುತ್ತಾರೆ. ನನ್ನ ಅಭಿಪ್ರಾಯ ಯಾರಿಗಾದರೂ ಸರಿ ಕಾಣದಿದ್ದರೆ ಅವರ ಅಭಿ‍ಪ್ರಾಯವನ್ನೂ ಸಿನಿಮಾ ಮಾಡಲು ಅವರು ಸ್ವತಂತ್ರರಿದ್ದಾರೆ. ಆದರೆ, ಪುಂಡ ಗುಂಪುಗಳು ‘ನಮಗೆ ಸಿನಿಮಾ ತೋರಿಸಬೇಕು’ ಎನ್ನುವ ನಿಲುವು ಅಪ್ರಜಾತಾಂತ್ರಿಕ. ಅಂಥವರಿಗೆ ಪ್ರಚಾರ ನೀಡಬಾರದು. ಅವರ ಮಾತು ಕೇಳಿದ ಜನ ಭೀತಿಗೆ ಒಳಗಾಗುತ್ತಾರೆ.

* ಸಾಮಾಜಿಕ ಮಾಧ್ಯಮ ಸೃಷ್ಟಿಸುವ ಉದ್ವಿಗ್ನತೆ ಮತ್ತು ರಾಜಕಾರಣವು ಸಿನಿಮಾ ನೋಡದೆಯೇ ಪ್ರತಿಭಟಿಸುವುದಕ್ಕೆ ಕಾರಣವೇ?

ಸಿನಿಮಾದಲ್ಲಿ ಏನಿದೆ ಎಂಬುದನ್ನೇ ತಿಳಿಯದೆ ಗಲಾಟೆ ಮಾಡುವ ಅಭ್ಯಾಸ ನಮ್ಮಲ್ಲಿ ಬಹುಕಾಲದಿಂದಲೂ ಇದೆ. ಆದರೆ, ಆಸ್ತಿಗೆ ಬೆಂಕಿ ಹಚ್ಚುವುದು, ಕಲ್ಲು ತೂರುವುದು, ಮೂಗು ಕೊಯ್ಯುತ್ತೇನೆ, ತಲೆ ಕಡಿಯುತ್ತೇನೆ ಎನ್ನುವ ಧೈರ್ಯ, ಹಾಗೆ ಮಾತನಾಡಿದವರನ್ನು ಬಂಧಿಸದೆ ಇರುವುದು... ಇವುಗಳೆಲ್ಲದರ ಹಿಂದೆ ಯಾವ ಶಕ್ತಿ ಇದ್ದಿರಬಹುದು? ನನ್ನ ಬೆನ್ನಿಗೆ ಒಂದು ಸರ್ಕಾರ ಇದೆ ಎಂಬ ಧೈರ್ಯವೇ? ಇಡೀ ದೇಶವೇ ಒಂದು ವಿಚಿತ್ರ ಸ್ಥಿತಿಯತ್ತ ಸಾಗುತ್ತಿದೆ. ಉದ್ವಿಗ್ನತೆಯ ಕಾಲದಲ್ಲಿ ಆಲೋಚನೆಗಳು ಇರುವುದಿಲ್ಲ. ಕ್ರಿಯೆ ಮಾತ್ರ ಇರುತ್ತದೆ. ಆಲೋಚನೆ ಇಲ್ಲದೆ ಕ್ರಿಯೆ ಮಾತ್ರ ನಡೆಯುವಾಗ ದೇಶಭಕ್ತಿ, ಧರ್ಮ ಎಂಬುದು ಅಫೀಮಿನಂತೆ ಆಗುತ್ತವೆ. ಇವುಗಳಿಂದ ತಪ್ಪಿಸಿಕೊಳ್ಳದಿದ್ದರೆ ದೇಶದಲ್ಲಿ ಒಳ್ಳೆಯ ಪರಿವರ್ತನೆ ಆಗದು.

* ಇತಿಹಾಸ ಅಥವಾ ಕಾವ್ಯ ಆಧರಿಸಿ ಸಿನಿಮಾ ಮಾಡುವಾಗ ಅವುಗಳಲ್ಲಿ ಇರುವುದನ್ನು ಸೃಜನಾತ್ಮಕವಾಗಿ ಎಷ್ಟರಮಟ್ಟಿಗೆ ಬದಲಾಯಿಸಬಹುದು?

ಪ್ರತಿ ಕಲಾವಿದನೂ ತನಗೆ ಬೇಕಾದಂತೆ ಕಥೆ ಹೇಳಬಹುದು. ಇದು ಹಿಂದಿನಿಂದಲೂ ಇದೆ. ಚರಿತ್ರೆಯನ್ನು ನೋಡುವವ ಯಾವ ಜಾಗದಲ್ಲಿ ನಿಂತು ನೋಡುತ್ತಿರುತ್ತಾನೆ ಎಂಬುದನ್ನು ಆಧರಿಸಿ, ಅದನ್ನು ಕಟ್ಟಿಕೊಡುವ ಬಗೆ ಹೇಗಿರುತ್ತದೆ ಎಂಬುದು ತೀರ್ಮಾನವಾಗುತ್ತದೆ. ರಾಮನ ಜಾಗದಲ್ಲಿ ನಿಂತು ನೋಡಿದರೆ ರಾಮ ಶ್ರೇಷ್ಠ, ರಾವಣನ ಜಾಗದಲ್ಲಿ ನಿಂತು ನೋಡಿದರೆ ರಾವಣ ಶ್ರೇಷ್ಠ. ಇಬ್ಬರ ದೃಷ್ಟಿಕೋನದಿಂದಲೂ ಕಥೆಯನ್ನು ಹೇಳುವ ಅಧಿಕಾರ ಕಲಾವಿದನಿಗೆ ಇದೆ.

ನೋಡುವವನಿಗೆ ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಇದ್ದೇ ಇರುತ್ತದೆ. ನನಗೆ ಕಂಡಿದ್ದನ್ನು ನಾನು ನನ್ನ ದೃಷ್ಟಿಕೋನದಿಂದ ಹೇಳುತ್ತೇನೆ, ಜಗತ್ತಿನ ಎಲ್ಲರ ದೃಷ್ಟಿಕೋನಗಳಿಗೆ ಸರಿಹೊಂದುವಂತೆ ಕಥೆ ಹೇಳಲು ನನ್ನಿಂದಾಗದು. ಮಲಿಕ್ ಮುಹಮ್ಮದ್ ಜಾಯಸಿ ಬರೆದ ‘ಪದ್ಮಾವತ್’ ಕಾವ್ಯವನ್ನು ಬನ್ಸಾಲಿ ಅವರು ಇಷ್ಟಬಂದಂತೆ ಬದಲಾವಣೆ ಮಾಡಬಹುದು. ಹಾಗೆ ಬದಲಾವಣೆ ಮಾಡಲಾಗಿದೆ ಎಂಬುದನ್ನು ಮತ್ತು ಇದು ಕಾವ್ಯವನ್ನು ಆಧರಿಸಿದ ತನ್ನ ನಿರ್ದೇಶನದ ಸಿನಿಮಾ ಎಂದು ಹೇಳಿಕೊಂಡರೆ ಸಾಕು. ಎಸ್.ಎಲ್. ಭೈರಪ್ಪ ಬರೆದ ‘ನಾಯಿ–ನೆರಳು’ ಕಾದಂಬರಿಯಲ್ಲಿ ಇಲ್ಲದ್ದನ್ನು ಗಿರೀಶ್ ಕಾಸರವಳ್ಳಿ ‘ನಾಯಿ–ನೆರಳು’ ಸಿನಿಮಾದಲ್ಲಿ ತೋರಿಸಿದ್ದಾರೆ. ಎಲ್ಲ ಅಭಿಪ್ರಾಯಗಳನ್ನೂ ಮುಕ್ತವಾಗಿ ತೋರಿಸುವ ಸ್ವಾತಂತ್ರ್ಯ ಇರಬೇಕು. ಐತಿಹಾಸಿಕ ವಿಷಯಗಳನ್ನು ಸೃಜನಶೀಲವಾಗಿ ತೋರಿಸುವ ಸ್ವಾತಂತ್ರ್ಯಕ್ಕೂ ಇದೇ ಮಾತು ಅನ್ವಯವಾಗುತ್ತದೆ. ಈಚೆಗೆ ಬಿಡುಗಡೆಯಾದ ‘ದಿ ಪೋಸ್ಟ್‌’ ಸಿನಿಮಾ ಇದಕ್ಕೊಂದು ಉದಾಹರಣೆ. ಆರ್ಯನ್ ಜನಾಂಗವೇ ಶ್ರೇಷ್ಠ ಎಂದು ನಾಜಿಗಳು ಸಿನಿಮಾ ಮಾಡಿದ್ದಾರೆ. ಅದನ್ನು ಒಪ್ಪುವುದು, ಬಿಡುವುದು ವೀಕ್ಷಕರಿಗೆ ಸಂಬಂಧಿಸಿದ್ದು. ಇದು ವಿದೇಶಿ ಸಿದ್ಧಾಂತವಲ್ಲ. ಭಾರತದ ಅಭಿನವಗುಪ್ತ ‘ರಸಸಿದ್ಧಾಂತ’ದಲ್ಲಿ ಹೇಳಿದ ಮಾತು ಇದು.

* ಸಿನಿಮಾ ವಿರುದ್ಧ ಪ್ರತಿಭಟನೆ, ಗಲಾಟೆ, ಸಿನಿಮಾಕ್ಕೆ ನಿರ್ಬಂಧ... ಇವೆಲ್ಲದರ ಹಿಂದಿನ ಉದ್ದೇಶ ಏನಿರಬಹುದು?

ಪದ್ಮಾವತಿಯ ಕಥೆಯನ್ನು ಮೂರು ಬಾರಿ ಸಿನಿಮಾ ಮಾಡಲಾಗಿದೆ. ಆಗೆಲ್ಲ ತಕರಾರು ಬಂದಿರಲಿಲ್ಲ. ಆದರೆ ಈ ಬಾರಿ ತಕರಾರು ಬಂದಿರುವುದು, ಅದರ ಬೆನ್ನಲ್ಲೇ ಗುಜರಾತ್‌ ಚುನಾವಣೆ ಎದುರಾಗಿದ್ದು, ಚುನಾವಣೆಯ ನಂತರವೂ ಪದ್ಮಾವತ್ ವಿಷಯ ಇಟ್ಟುಕೊಂಡು ಹಿಂಸೆ ನಡೆಯುವುದು... ಇವೆಲ್ಲದರ ಹಿಂದೆ ಇರುವುದು ಜನ ಬೇರೆ ವಿಷಯಗಳನ್ನು ಚರ್ಚಿಸದಿರಲಿ ಎಂಬ ಮನಸ್ಥಿತಿ. ಹರಿಯಾಣದಲ್ಲಿ, ಉತ್ತರ ಪ್ರದೇಶದಲ್ಲಿ ನಡೆಯುವ ಅತ್ಯಾಚಾರಗಳು, ದೇಶದಲ್ಲಿನ ನಿರುದ್ಯೋಗ ಚರ್ಚೆಯಾಗದಿರಲಿ, ನಾವು ಯಾವುದರ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಬೇಕೋ ಅದನ್ನು ಮಾಡದಿರಲಿ ಎಂಬ ಉದ್ದೇಶ ಇಷ್ಟೆಲ್ಲ ಕಸರತ್ತುಗಳ ಹಿಂದಿದೆ.

ಜಾಯಸಿ ಕಾವ್ಯದ ಬಗ್ಗೆ ಸುರೇಶ ಹೇಳಿದ್ದು...

ಜಾಯಸಿ ಬರೆದ ‘ಪದ್ಮಾವತ್’ ಕಾವ್ಯದ ಹಿಂದೆ ಒಂದು ತತ್ವವಿದೆ. ತನ್ನ ದೇವರು ನಿಷ್ಕಲ್ಮಶ ಪ್ರತಿಮೆ ಎಂಬುದು ಆ ತತ್ವ. ಆ ಪ್ರತಿಮೆಯನ್ನು ತಾನು ಪಡೆಯಬೇಕು ಎಂಬ ಯತ್ನವನ್ನು ಪ್ರತಿ ವ್ಯಕ್ತಿಯೂ ಮಾಡುತ್ತಾನೆ. ಆದರೆ ಅದು ದಕ್ಕುವುದಿಲ್ಲ. ಪದ್ಮಾವತಿ ಜಾಯಸಿಯ ಸೃಷ್ಟಿ. ಅವಳು ಚಾರಿತ್ರಿಕವಾಗಿ ಇದ್ದಳು ಎಂಬುದಕ್ಕೆ ಸಾಕ್ಷ್ಯ ಇಲ್ಲ.

ಖಿಲ್ಜಿ ಚಿತ್ತೋರಗಡ ಕೋಟೆಯ ಮೇಲೆ ದಾಳಿ ಮಾಡಿದ್ದು ಚರಿತ್ರೆ, ಆದರೆ ಆತ ಪದ್ಮಾವತಿಯನ್ನು ಪಡೆಯಲು ದಾಳಿ ನಡೆಸಿದ ಎಂಬುದು ಕಾವ್ಯ. ಖಿಲ್ಜಿ ಸಾಮ್ರಾಜ್ಯಶಾಹಿ ಆಗಿದ್ದ. ಎಲ್ಲ ಸಾಮ್ರಾಜ್ಯಗಳೂ ತನ್ನವಾಗಬೇಕು ಎಂಬ ಬಯಕೆ ಹೊಂದಿದ್ದ ಎಂಬುದು ಚರಿತ್ರೆ. ಖಿಲ್ಜಿ ಒಬ್ಬ ಭಕ್ತನಾಗಿ ಅತ್ಯಂತ ಶ್ರೇಷ್ಠವಾದದನ್ನು ಪಡೆಯುವ ಪ್ರಯತ್ನದಲ್ಲಿ ಇದ್ದ ಎಂದು ಜಾಯಸಿಯ ಕಾವ್ಯ ಚಿತ್ರಿಸುತ್ತದೆ. ಆದರೆ ಅವನಿಗೆ ಅದು ಸಿಗುವುದಿಲ್ಲ. ಅತ್ಯಂತ ಶ್ರೇಷ್ಠವಾಗಿದ್ದು ಆತನಿಂದ ಯಾವಾಗಲೂ ದೂರವೇ ಇರುತ್ತದೆ ಎಂಬುದು ಕಾವ್ಯದ ಒಟ್ಟು ತತ್ವ. ‘ನೀನಿನ್ನೂ ಸರಿಹೋಗಬೇಕು, ಸರಿಹೋದಮೇಲೆ ನಿನಗೆ ಅದು ಸಿಗುತ್ತದೆ’ ಎಂಬ ತತ್ವವೂ ಕಾವ್ಯದಲ್ಲಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry