ಗೆದ್ದು ಗೌರವ ಉಳಿಸಿಕೊಂಡ ಭಾರತ

7
ಮೂರನೇ ಟೆಸ್ಟ್‌; 63 ರನ್‌ಗಳಿಂದ ಆತಿಥೇಯರನ್ನು ಹಣಿದ ಕೊಹ್ಲಿ ಬಳಗ

ಗೆದ್ದು ಗೌರವ ಉಳಿಸಿಕೊಂಡ ಭಾರತ

Published:
Updated:
ಗೆದ್ದು ಗೌರವ ಉಳಿಸಿಕೊಂಡ ಭಾರತ

ಜೊಹಾನ್ಸ್‌ಬರ್ಗ್‌: ಬೌಲರ್‌ಗಳ ಪರಿಣಾಮಕಾರಿ ಸಾಮರ್ಥ್ಯದ ಬಲದಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ 63ರನ್‌ಗಳಿಂದ ಗೆದ್ದು ಗೌರವ ಉಳಿಸಿಕೊಂಡಿದೆ.

ಅಂತಿಮ ಪಂದ್ಯದಲ್ಲಿ ಸೋತರೂ ದಕ್ಷಿಣ ಆಫ್ರಿಕಾ 2–1ರಿಂದ ಸರಣಿ ತನ್ನದಾಗಿಸಿಕೊಂಡಿದೆ. ಫಾಫ್‌ ಡು ಪ್ಲೆಸಿ ಪಡೆ ಮೊದಲ ಎರಡು ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಬಳಗವನ್ನು ಹಣಿದಿತ್ತು.

ವಾಂಡರರ್ಸ್‌ ಅಂಗಳದಲ್ಲಿ 1 ವಿಕೆಟ್‌ಗೆ 17ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ಹರಿಣಗಳ ನಾಡಿನ ತಂಡ 73.3 ಓವರ್‌ಗಳಲ್ಲಿ 177ರನ್‌ಗಳಿಗೆ ಆಲೌಟ್‌ ಆಯಿತು. ಡು ಪ್ಲೆಸಿ ಬಳಗ ಗೆಲುವಿಗೆ 241ರನ್‌ಗಳ ಗುರಿ ಬೆನ್ನಟ್ಟಿತ್ತು.

ದಿಟ್ಟ ಆಟ: ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡ ನಾಲ್ಕನೇ ದಿನದ ಮೊದಲ ಅವಧಿಯಲ್ಲಿ ಅಮೋಘ ಆಟ ಆಡಿತ್ತು. ಡೀನ್‌ ಎಲ್ಗರ್‌ (ಔಟಾಗದೆ 86; 240ಎ, 9ಬೌಂ, 1ಸಿ) ಮತ್ತು ಹಾಶೀಮ್‌ ಆಮ್ಲಾ (52; 140ಎ, 5ಬೌಂ) ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 119ರನ್‌ ಕಲೆಹಾಕಿದರು. ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಆತಿಥೇಯರ ಗೆಲುವಿನ ಕನಸಿಗೆ ಬಲ ತುಂಬಿತ್ತು.

53ನೇ ಓವರ್‌ ಬೌಲ್‌ ಮಾಡಿದ ಇಶಾಂತ್ ಶರ್ಮಾ, ನಾಲ್ಕನೇ ಎಸೆತದಲ್ಲಿ ಆಮ್ಲಾ ವಿಕೆಟ್‌ ಉರುಳಿಸಿ ಭಾರತದ ಪಾಳಯದಲ್ಲಿ ಚೊಚ್ಚಲ ಜಯದ ಆಸೆ ಚಿಗುರೊಡೆಯುವಂತೆ ಮಾಡಿದರು.

ಶಮಿ ವೇಗದ ಮೋಡಿ: ಆಮ್ಲಾ ಪೆವಿಲಿಯನ್‌ ಸೇರಿದಾಗ ದಕ್ಷಿಣ ಆಫ್ರಿಕಾದ ಗೆಲುವಿಗೆ 120ರನ್‌ಗಳ ಅಗತ್ಯವಿತ್ತು. 56ನೇ ಓವರ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ, ಎಬಿ ಡಿವಿಲಿಯರ್ಸ್‌ಗೆ (6) ಪೆವಿಲಿಯನ್‌ ದಾರಿ ತೋರಿಸಿದರು. ನಾಯಕ ಪ್ಲೆಸಿಸ್‌, 2ರನ್‌ ಗಳಿಸಿ ಇಶಾಂತ್‌ಗೆ ವಿಕೆಟ್‌ ನೀಡಿದರು. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಸೊನ್ನೆ ಸುತ್ತಿದರು. 64ನೇ ಓವರ್‌ನಲ್ಲಿ ಬೂಮ್ರಾ, ಡಿ ಕಾಕ್‌ ವಿಕೆಟ್‌ ಉರುಳಿಸಿದರು.

ಆ ನಂತರ ಮಧ್ಯಮ ವೇಗಿ ಮಹಮ್ಮದ್‌ ಶಮಿ ಮೋಡಿ ಮಾಡಿದರು. ವರ್ನಾನ್‌ ಫಿಲಾಂಡರ್‌ (10), ಆ್ಯಂಡಿಲೆ ಪೆಹ್ಲುಕವಾಯೊ (0),

ಮಾರ್ನ್‌ ಮಾರ್ಕೆಲ್‌ (0) ಮತ್ತು ಲುಂಗಿ ಗಿಡಿ (4) ಅವರನ್ನು ಔಟ್‌ ಮಾಡಿದ ಶಮಿ, ಭಾರತದ ಆಟಗಾರರು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry