ಶೀಘ್ರ ದೋಷಾರೋಪ ಪಟ್ಟಿ ಸಲ್ಲಿಕೆ?

7

ಶೀಘ್ರ ದೋಷಾರೋಪ ಪಟ್ಟಿ ಸಲ್ಲಿಕೆ?

Published:
Updated:
ಶೀಘ್ರ ದೋಷಾರೋಪ ಪಟ್ಟಿ ಸಲ್ಲಿಕೆ?

ಬೆಂಗಳೂರು: ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಪಿಪಿ) ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು, ಮುಂದಿನ ವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

‌‘ಅಭ್ಯರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ 25 ಜಿಲ್ಲಾ ನ್ಯಾಯಾಧೀಶರು, ಪರೀಕ್ಷಾ ಕೇಂದ್ರಗಳ ಪರಿವೀಕ್ಷಕರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್‌) ವಿಜ್ಞಾನಿಗಳು ಸೇರಿ 94 ಸಾಕ್ಷಿದಾರರ ಹೇಳಿಕೆ ಸಹಿತ ದೋಷಾರೋಪ ಪಟ್ಟಿ ಸಿದ್ಧಗೊಂಡಿದೆ’ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

‘ಇದೊಂದು ಪ್ರಮುಖ ಪ್ರಕರಣವಾಗಿದ್ದು, ಆರೋಪ ಪಟ್ಟಿ ಸಾವಿರಾರು ಪುಟಗಳಷ್ಟಿದೆ. ಇದರ ವಿಸ್ತೃತ ಪರಿಶೀಲನೆ ನಡೆಯುತ್ತಿದೆ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.

‘ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ 60ಕ್ಕೂ ಹೆಚ್ಚು ಎಪಿಪಿಗಳು ಕೆಲಸ ಕಳೆದುಕೊಳ್ಳುವ ಜೊತೆಗೆ ಬಂಧನಕ್ಕೂ ಒಳಗಾಗುವ ಸಾಧ್ಯತೆ ಇದೆ. ಬಂಧನ ಭೀತಿಗೆ ಒಳಗಾಗಿರುವ ಎಪಿಪಿಗಳಲ್ಲಿ ಕೆಲವರು ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

2014ನೇ ಸಾಲಿನಲ್ಲಿ 197 ಎಪಿಪಿಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಪೂರ್ವಭಾವಿ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಕೀಲ ತೀರ್ಥಹಳ್ಳಿಯ ಎಚ್.ಟಿ. ರವಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು, ಪ್ರಾಸಿಕ್ಯೂಷನ್‌ ನಿರ್ದೇಶನಾಲಯದ ಆಡಳಿತಾಧಿಕಾರಿಯಾಗಿದ್ದ ನಾರಾಯಣಸ್ವಾಮಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಅಲ್ಲದೇ, ಅವರ ಮನೆಯ ಮೇಲೆ ದಾಳಿ ನಡೆಸಿ ಉತ್ತರ ಪತ್ರಿಕೆಗಳನ್ನೂ ವಶಕ್ಕೆ ಪಡೆದಿದ್ದರು.

‘ಉತ್ತರ ಪತ್ರಿಕೆ ತಿದ್ದಿರುವುದು, ಮೌಲ್ಯಮಾಪನ ಮಾಡಿದ ನ್ಯಾಯಾಧೀಶರ ಸಹಿ ನಕಲು ಮಾಡಿರುವುದು ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿದೆ. ಪರೀಕ್ಷಾ ಕೇಂದ್ರದ ಪರಿವೀಕ್ಷಕರು, ಮೌಲ್ಯಮಾಪಕರ ಸಹಿ ನಕಲಿ ಆಗಿದ್ದು, ಅಭ್ಯರ್ಥಿಗಳ ಸಹಿ ಮಾತ್ರ ನಕಲಿ ಅಲ್ಲ. ಹೀಗಾಗಿ ಅಕ್ರಮದಲ್ಲಿ ಅಭ್ಯರ್ಥಿಗಳ ಪಾತ್ರವೂ ಇದೆ’ ಎಂದು ಮೂಲಗಳು ಖಚಿತಪಡಿಸಿವೆ.

ಎಪಿಪಿಗಳ ಕೊರತೆ

ರಾಜ್ಯದಲ್ಲಿ ಸದ್ಯ 150 ಸಹಾಯಕ ಪ್ರಾಸಿಕ್ಯೂಟರ್‌ ಹುದ್ದೆ ಖಾಲಿ ಇದ್ದು, 60 ಎಪಿಪಿಗಳು ಕೆಲಸ ಕಳೆದುಕೊಂಡರೆ ತನ್ನ ಪರ ಹಾಜರಾಗಲು ವಕೀಲರೇ ಇಲ್ಲದೆ ಸಮಸ್ಯೆ ಎದುರಾಗಲಿದೆ ಎಂಬ ಆತಂಕ ಸರ್ಕಾರಕ್ಕೆ ಎದುರಾಗಿದೆ.

ಇದೇ ಕಾರಣಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಎಂದೂ ಹೇಳಲಾಗಿದೆ.

ಹೊಸದಾಗಿ 100 ಎಪಿಪಿಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮತಿ ನೀಡಿದ್ದು, ಸದ್ಯದಲ್ಲೆ ಅಧಿಸೂಚನೆ ಹೊರ ಬೀಳುವ ಸಾಧ್ಯತೆ ಇದೆ.

* ಎಫ್‌ಎಸ್‌ಎಲ್ ವರದಿ ಬಂದು ಮೂರು ತಿಂಗಳಾಗಿದೆ. ದೋಷಾರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಅನಗತ್ಯ ವಿಳಂಬ ಮಾಡುತ್ತಿದ್ದಾರೆ

– ಎಚ್‌.ಟಿ. ರವಿ, ದೂರುದಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry