ಮರಳು ಮಾಫಿಯಾಗೆ ಶೆಟ್ಟರ್‌ ಬೆಂಬಲ: ಕುಲಕರ್ಣಿ

7

ಮರಳು ಮಾಫಿಯಾಗೆ ಶೆಟ್ಟರ್‌ ಬೆಂಬಲ: ಕುಲಕರ್ಣಿ

Published:
Updated:

ಬೆಂಗಳೂರು: ‘ಮರಳು ಮಾಫಿಯಾದ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮಲೇಷ್ಯಾ ಮರಳು ಆಮದಿನಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸುತ್ತಿದ್ದಾರೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ದೂರಿದರು.

‘ಮರಳು ಆಮದು ವಿಷಯದಲ್ಲಿ ₹ 5,000 ಕೋಟಿ ಅವ್ಯವಹಾರವಾಗಿದೆ ಎಂದು ಶೆಟ್ಟರ್ ಆರೋಪಿಸಿದ್ದಾರೆ. ಆದರೆ, ಮಲೇಷ್ಯಾದಿಂದ ಮರಳು ಆಮದಾಗಿರುವುದೇ ಈಗ. ಐದು ವರ್ಷ ಆಮದು ಮಾಡಿಕೊಂಡರೂ ₹ 5,000 ಕೋಟಿ ದಾಟಲ್ಲ’ ಎಂದು ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದರು.

‘ಈವರೆಗೆ ₹ 37 ಲಕ್ಷ ಮೌಲ್ಯದ 937 ಟನ್ ಮರಳು ಮಾತ್ರ ಆಮದಾಗಿದೆ. ನಿತ್ಯ 12,000 ಟನ್ ತರಿಸಿಕೊಂಡು ಮಾರಾಟ ಮಾಡುವ ಸಾಮರ್ಥ್ಯ ಇರುವ ಯಾವುದೇ ಸಂಸ್ಥೆ ಬೇಕಾದರೂ ಟೆಂಡರ್‌ನಲ್ಲಿ ಭಾಗವಹಿಸಬಹುದು. ಮರಳು ಮಾಫಿಯಾ ಹತ್ತಿಕ್ಕಲು ವಿದೇಶಿ ಮರಳು ಆಮದಿಗೆ ನಿರ್ಧರಿಸಲಾಗಿದೆ’ ಎಂದು ಅವರು ಸಮರ್ಥಿಸಿಕೊಂಡರು.

‘ಎಂಎಸ್‍ಐಎಲ್ ಜತೆ ಇನ್ನು ಕೆಲವು ಸಂಸ್ಥೆಗಳು ಆಮದು ಆರಂಭಿಸಿದರೆ ಸಹಜವಾಗಿಯೇ ದರ ಕಡಿಮೆಯಾಗುತ್ತದೆ. ಎಂ– ಸ್ಯಾಂಡ್ (ಕೃತಕ ಮರಳು) ದರಕ್ಕೂ ವಿದೇಶಿ ಮರಳಿನ ದರಕ್ಕೂ ಹೋಲಿಕೆ ಸಾಧ್ಯವಿಲ್ಲ. ಪ್ರತಿ ಟನ್‍ಗೆ ₹ 4,000 ದರದಲ್ಲಿ ವಿದೇಶಿ ಮರಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಬಂದರಿನಲ್ಲೇ ಮರಳು ಪ್ಯಾಕ್‌ ಮಾಡಿ, ಜಿಎಸ್‍ಟಿ ಸೇರಿಸಿ ದರ ನಿಗದಿಪಡಿಸಲಾಗುತ್ತದೆ. ಹೀಗಾಗಿ ಅವ್ಯವಹಾರಕ್ಕೆ ಆಸ್ಪದವಿಲ್ಲ’ ಎಂದರು.

‘ಮರಳು ಆಮದು ಪರವಾನಗಿ ಹೊಂದಿರುವ ಖಾಸಗಿಯವರು ಕೂಡಾ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಮರಳು ಮಾಫಿಯಾ ತಡೆಯಲು ಕಾಯ್ದೆಗೆ ತಿದ್ದುಪಡಿ ತಂದು ಈ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ. ಇದು ರಾಜ್ಯದ ಜನತೆಗೆ ಶೇ 100ರಷ್ಟು ನ್ಯಾಯ ಒದಗಿಸಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry