ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ನಲ್ಲಿ ಭಾರತ–ಬೆಲ್ಜಿಯಂ ಪೈಪೋಟಿ

ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿ; ಜಪಾನ್ ಎದುರು ಜಯ ದಾಖಲಿಸಿದ ತಂಡ
Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್‌, ನ್ಯೂಜಿಲೆಂಡ್‌: ಭಾರತ ಪುರುಷರ ತಂಡವು ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ಶನಿವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡವು 4–2 ಗೋಲುಗಳಿಂದ ಜಪಾನ್‌ ತಂಡವನ್ನು ಸೋಲಿಸಿತು. ಲೀಗ್ ಹಂತದ ಪಂದ್ಯಗಳಲ್ಲಿ ಭಾರತ ತಂಡ ನ್ಯೂಜಿಲೆಂಡ್‌ (3–2), ಬೆಲ್ಜಿಯಂ (5–4) ಎದುರು ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು.

ಜಪಾನ್ ವಿರುದ್ಧದ ಪಂದ್ಯದಲ್ಲಿ ಭಾರತದ ವಿವೇಕ್‌ ಸಾಗರ್ ಪ್ರಸಾದ್ (12ನೇ ನಿ.), ವರುಣ್ ಕುಮಾರ್‌ (30ನೇ ನಿ.), ಮನ್‌ದೀಪ್‌ ಸಿಂಗ್‌ (58ನೇ ನಿ.), ರಮಣ್‌ದೀಪ್ ಸಿಂಗ್‌ (58ನೇ ನಿ.) ತಲಾ ಒಂದು ಗೋಲು ತಂದಿತ್ತರು. ನ್ಯೂಜಿಲೆಂಡ್ ಪರ ಸೆರೆನ್‌ ತನಕಾ (14ನೇ ನಿ.), ಶೊತಾ ಯಮಡ (43ನೇ ನಿ.) ಗೋಲು ಗಳಿಸಿದರು.

ಮೊದಲ ಕ್ವಾರ್ಟರ್‌ನಲ್ಲಿ ಭಾರತ ಚುರುಕಿನ ಪಾಸ್‌ಗಳಿಂದ ಗಮನಸೆಳೆಯಿತು. ಅರ್ಮಾನ್‌ ಖುರೇಷಿ ನೀಡಿದ ಪಾಸ್‌ನಲ್ಲಿ ವಿವೇಕ್ ಭಾರತಕ್ಕೆ ಆರಂಭಿಕ ಗೋಲು ತಂದುಕೊಟ್ಟರು. ತೌರಂಗದಲ್ಲಿ ನಡೆದ ಪಂದ್ಯದಲ್ಲಿಯೂ ವಿವೇಕ್‌ ಅತ್ಯುತ್ತಮ ಪಾಸ್‌ಗಳಿಂದ ಗಮನಸೆಳೆದಿದ್ದರು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತ ರಕ್ಷಣಾತ್ಮಕವಾಗಿ ಆಡಿತು. 30ನೇ ನಿಮಿಷದಲ್ಲಿ ವರುಣ್‌ ಕುಮಾರ್‌ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿದರು. 32ನೇ ನಿಮಿಷದಲ್ಲಿ ಭಾರತಕ್ಕೆ ಇನ್ನೊಂದು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತ್ತು. ಆದರೆ ಹರ್ಮನ್‌ಪ್ರೀತ್ ಸಿಂಗ್ ಅವರು ಒದ್ದ ಚೆಂಡು ಇನ್ನೇನು ಗುರಿ ಸೇರುವಷ್ಟರಲ್ಲಿ ಜಪಾನ್‌ ಗೋಲ್‌ಕೀಪರ್‌ ತಕಾಶಿ ಅಮೋಘವಾಗಿ ತಡೆದರು.

14ನೇ ನಿಮಿಷದಲ್ಲಿ ಸಮಬಲ ಮಾಡಿಕೊಂಡಿದ್ದ ನ್ಯೂಜಿಲೆಂಡ್‌ 43ನೇ ನಿಮಿಷದಲ್ಲಿ ಎರಡನೇ ಗೋಲು ದಾಖಲಿಸಿತ್ತು. ಕೊನೆಯ ಕ್ವಾರ್ಟರ್‌ನಲ್ಲಿಯೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿತು. ಆದರೆ ಭಾರತದ ರಮಣ್‌ದೀಪ್ ಹಾಗೂ ಮನ್‌ದೀಪ್‌ ಅವರ ಗೋಲುಗಳಿಂದ ಎದುರಾಳಿ ತಂಡ ಹಿನ್ನಡೆ ಅನುಭವಿಸಿತು.

ಭಾರತ–ಬೆಲ್ಜಿಯಂ ಪೈಪೋಟಿ: ಮೊದಲ ಹಂತದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಬೆಲ್ಜಿಯಂ ಎದುರು ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. ಈಗ ಮತ್ತೊಮ್ಮೆ ಫೈನಲ್‌ನಲ್ಲಿಯೇ ಬೆಲ್ಜಿಯಂ ಎದುರು ಆಡಲಿದೆ. ಈ ಲೆಗ್‌ನ ಎರಡನೇ ಪಂದ್ಯದಲ್ಲಿ ಭಾರತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ತಂಡಕ್ಕೆ ಸೋಲುಣಿಸಿದೆ. ಬೆಲ್ಜಿಯಂ ತಂಡ 4–0ರಲ್ಲಿ ನ್ಯೂಜಿಲೆಂಡ್‌ ಎದುರು ಗೆದ್ದು ಫೈನಲ್ ಪ್ರವೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT