ಬಡ್ತಿ ಮೀಸಲಾತಿ: ಯಥಾಸ್ಥಿತಿಗೆ ‘ಸುಪ್ರೀಂ’ ಆದೇಶ

7

ಬಡ್ತಿ ಮೀಸಲಾತಿ: ಯಥಾಸ್ಥಿತಿಗೆ ‘ಸುಪ್ರೀಂ’ ಆದೇಶ

Published:
Updated:
ಬಡ್ತಿ ಮೀಸಲಾತಿ: ಯಥಾಸ್ಥಿತಿಗೆ ‘ಸುಪ್ರೀಂ’ ಆದೇಶ

ನವದೆಹಲಿ: ಬಡ್ತಿ ಮೀಸಲಾತಿ ಕಾಯ್ದೆ ರದ್ದುಪಡಿಸಿರುವ ಆದೇಶ ಪಾಲಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಹೊರಡಿಸಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಸರ್ಕಾರಿ ನೌಕರರಾದ ಆರ್‌.ಟಿ. ಚಂದ್ರಮೌಳಿ ಮತ್ತಿತರರು ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್‌ ನೇತೃತ್ವದ ಪೀಠವು, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕಳೆದ ಸೋಮವಾರ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತ್ತಲ್ಲದೆ, ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲು ಸಮ್ಮತಿ ಸೂಚಿಸಿದೆ.

ಬಿ.ಕೆ. ಪವಿತ್ರಾ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಕಳೆದ ಫೆಬ್ರುವರಿ 9ರಂದು ಆದೇಶ ಹೊರಡಿಸಿದ್ದ ನ್ಯಾಯಮೂರ್ತಿಗಳಾದ ಎ.ಕೆ. ಗೋಯಲ್‌ ಹಾಗೂ ಯು.ಯು. ಲಲಿತ್‌ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠವು, ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ರದ್ದುಪಡಿಸಿತ್ತಲ್ಲದೆ, ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವಂತೆಯೂ ಸೂಚಿಸಿತ್ತು.

ಆ ಆದೇಶದ ಪ್ರಕಾರ ಕಳೆದ ಮೇ 8ರಂದು ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಚಂದ್ರಮೌಳಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ್ದ ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠವು, ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಆಗುವುದಿಲ್ಲ ಎಂದು ತಿಳಿಸಿತ್ತು.

ಇಂದಿರಾ ಸಹಾನಿ (1992ರಲ್ಲಿ) ಹಾಗೂ ಎಂ.ನಾಗರಾಜ್‌ (2002ರಲ್ಲಿ) ಅವರು ಸಲ್ಲಿಸಿದ್ದ ಮೇಲ್ಮನವಿ ಕುರಿತಂತೆ 2006ರ ಸುಪ್ರೀಂ ಕೋರ್ಟ್‌ ಆದೇಶವನ್ನು ಆಧರಿಸಿಯೇ 2017ರ ಫೆಬ್ರುವರಿ 9ರ ಆದೇಶ ನೀಡಲಾಗಿದೆ. ಇದೀಗ ಆ ಆದೇಶದ ಮರು ಪರಿಶೀಲನೆ ಜವಾಬ್ದಾರಿಯನ್ನು ಸಂವಿಧಾನ ಪೀಠಕ್ಕೆ ವಹಿಸಲಾಗಿದೆ. ಚಂದ್ರಮೌಳಿ ಅವರ ಮೇಲ್ಮನವಿ ಅರ್ಜಿ ವಿಚಾರಣೆಯನ್ನೂ ಸಂವಿಧಾನ ಪೀಠವೇ ನಡೆಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry