‘ವಿಶ್ವ ಗುರು ಹಂಬಲ, ಕಾನೂನು ದುರ್ಬಲ’

7

‘ವಿಶ್ವ ಗುರು ಹಂಬಲ, ಕಾನೂನು ದುರ್ಬಲ’

Published:
Updated:
‘ವಿಶ್ವ ಗುರು ಹಂಬಲ, ಕಾನೂನು ದುರ್ಬಲ’

ಜೈಪುರ: ಜಾಗತಿಕ ವಾತಾವರಣದಲ್ಲಿನ ಬದಲಾವಣೆಗೆ ಸಂಬಂಧಿಸಿದಂತೆ ಭಾರತ ನಾಯಕತ್ವ ವಹಿಸಿಕೊಳ್ಳಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ದಾವೋಸ್‌ನ ‘ವಿಶ್ವ ಆರ್ಥಿಕ ವೇದಿಕೆ’ಯಲ್ಲಿ ಘೋಷಿಸುತ್ತಾರೆ. ಆದರೆ, ಅವರ ನೇತೃತ್ವದ ಕೇಂದ್ರ ಸರ್ಕಾರ ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ. ಹೀಗಿರುವಾಗ ವಿಶ್ವ ಗುರುವಾಗುವ ಭಾರತದ ಹಂಬಲವನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂದು ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಕರ್ತ ಜೆಫ್ರಿ ಗೆಟ್ಲ್‌ಮನ್‌ ಪ್ರಶ್ನಿಸಿದರು.

ವಾತಾವರಣದಲ್ಲಿನ ಬದಲಾವಣೆ ಕುರಿತು ‘ಜೈಪುರ ಸಾಹಿತ್ಯೋತ್ಸವ’ದಲ್ಲಿ ಶನಿವಾರ ನಡೆದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿಗಳ ವ್ಯವಹಾರ ಸುಲಲಿತಗೊಳಿಸುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಕಳೆದ ಮೂರು ವರ್ಷಗಳಿಂದ ದುರ್ಬಲಗೊಳಿಸಲಾಗುತ್ತಿದೆ ಎಂದರು.

ದೆಹಲಿಯಲ್ಲಿ ವಾಯು ಮಾಲಿನ್ಯ ತಾರಕಕ್ಕೇರಿದ ಸಂದರ್ಭದಲ್ಲಿ ಪ್ರಧಾನಿ ಮೌನವಾಗಿರುತ್ತಾರೆ. ಮಾಲಿನ್ಯ ತಡೆಗಾಗಿ ಸಾರ್ವಜನಿಕ ಸಹಭಾಗಿತ್ವ ಪಡೆಯಬೇಕಾದ ಸಂದರ್ಭದಲ್ಲಿ ಮೆಟ್ರೊ ರೈಲಿನ ಪ್ರಯಾಣವನ್ನು ದುಬಾರಿಯಾಗಿಸಲಾಗುತ್ತದೆ. ಈ ಮೂಲಕ ಖಾಸಗಿ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತದೆ ಎಂದು ಸರ್ಕಾರದ ದೂರದೃಷ್ಟಿ ದೋಷವನ್ನು ಅವರು ವಿಶ್ಲೇಷಿಸಿದರು.

ಅಳಿವಿನಂಚಿನಲ್ಲಿ ಬದುಕು: ಪರಿಸರದಲ್ಲಿನ ಅಸಮತೋಲನಕ್ಕೆ ಜನಸಂಖ್ಯೆ ಹೆಚ್ಚಳ ಕೂಡ ಒಂದು ಪ್ರಮುಖ ಕಾರಣವಾಗಿದೆ. ಆಫ್ರಿಕಾದ ದೇಶಗಳಲ್ಲಿನ ಲಕ್ಷಾಂತರ ಜನ ಅಳಿವಿನ ಅಪಾಯದಂಚಿನಲ್ಲಿ ಬದುಕುತ್ತಿದ್ದಾರೆ. ವಿಶ್ವದ ಅನೇಕ ಭಾಗಗಳು ಮರುಭೂಮಿಯಾಗುತ್ತಿವೆ ಎಂದು ಜೆಫ್ರಿ ಹೇಳಿದರು.

ಜೆಫ್ರಿ ಆತಂಕಕ್ಕೆ ದನಿಗೂಡಿಸಿದ ಪತ್ರಕರ್ತ–ಲೇಖಕ ಪಂಕಜ್‌ ಸೆಕ್ಸಾರಿಯಾ, ‘ಜಲಾಶಯ ನಿರ್ಮಾಣದಂತಹ ಜನಪ್ರಿಯ ಕಾಮಗಾರಿಗಳ ಮೂಲಕ ಪರಿಸರದಲ್ಲಿನ ಸಮಸ್ಯೆಗಳನ್ನು ಹೆಚ್ಚಿಸುತ್ತಿದ್ದೇವೆ. ಹೊಸ ಉದ್ಯೋಗಗಳನ್ನು ರೂಪಿಸುವ ಭರಾಟೆಯಲ್ಲಿ ಗ್ರಾಮೀಣ ಭಾಗಗಳಲ್ಲಿದ್ದ ಸಾವಿರಾರು ಉದ್ಯೋಗಗಳನ್ನು ನಾಶಪಡಿಸಿದ್ದೇವೆ’ ಎಂದು ವಿಷಾದಿಸಿದರು.

ಭಾರತದ ಶೇ.1ರಷ್ಟು ಜನ ದೇಶದ ಶೇ. 73ರಷ್ಟು ಸಂಪನ್ಮೂಲದ ಮೇಲೆ ಅಧಿಕಾರ ಹೊಂದಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ಭಾರತದ್ದು ವಿಶ್ವದಲ್ಲಿ ಅತ್ಯಂತ ಕಳಪೆ ಪ್ರದರ್ಶನ ಎಂದು ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಪ್ರೇರಣಾಸಿಂಗ್‌ ಬಿಂದ್ರಾ ಟೀಕಿಸಿದರು.

ಪರಿಸರ ರಕ್ಷಣೆಯ ದೇಶಭಕ್ತಿ: ರಾಷ್ಟ್ರೀಯತೆ ಮತ್ತು ಅದರ ಸಂಕೇತಗಳ ಬಗ್ಗೆ ಉತ್ಸಾಹದಿಂದ ಚರ್ಚಿಸುತ್ತಿರುವ ಸಂದರ್ಭವಿದು. ಶುದ್ಧಗಾಳಿ ಹಾಗೂ ನೀರಿನ ಕುರಿತ ಬದ್ಧತೆ ನಮ್ಮ ದೇಶಭಕ್ತಿಯ ನಿಜವಾದ ಅಭಿವ್ಯಕ್ತಿ ಆಗಬೇಕಿದೆ. ಪಾವಿತ್ಯ್ರದೊಂದಿಗೆ ತಳಕುಹಾಕುವ ಎಲ್ಲವನ್ನೂ ಕಲುಷಿತಗೊಳಿಸುತ್ತಿರುವ ವೈರುಧ್ಯವನ್ನು ಕಾಣುತ್ತಿದ್ದೇವೆ. ದೇಶದಲ್ಲಿ ಪ್ರತಿವರ್ಷ ನೂರಕ್ಕೂ ಹೆಚ್ಚು ಪರಿಸರ ಸಂರಕ್ಷಕರ ಕೊಲೆಗಳು ಸಂಭವಿಸುತ್ತಿವೆ ಎಂದು ಪ್ರೇರಣಾ ವಿಷಾದಿಸಿದರು.

ದೇಶದ ರಾಜಧಾನಿಯಲ್ಲಿ ಉಸಿರುಗಟ್ಟುವ ಪರಿಸ್ಥಿತಿಯಿದ್ದರೂ ಜನ ಬೀದಿಗಿಳಿದು ಪ್ರತಿಭಟಿಸುವುದಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರಬೇಕಾದ ಸಾರ್ವಜನಿಕರು ಮೂಗಿಗೆ ಮುಸುಕು ಹಾಕಿಕೊಂಡು ಓಡಾಡುತ್ತಾರೆ. ವಾಯುಮಾಲಿನ್ಯಕ್ಕೆ ಗಾಳಿ ಶುದ್ಧೀಕರಣ ಸಲಕರಣೆಗಳು ಪರಿಹಾರವಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪ್ರೇರಣಾ ಹಾಗೂ ಜೆಫ್ರಿ ಹೇಳಿದರು.

ಸುಧಾಮೂರ್ತಿ ‘ಕುಟುಂಬ ಸಂಹಿತೆ’

ತಮ್ಮ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ‘ಇನ್ಫೊಸಿಸ್‌’ ಸಂಸ್ಥೆಯ ಜೊತೆಗೆ ಗುರ್ತಿಸಿಕೊಳ್ಳಲು ಬಯಸುವುದಿಲ್ಲ ಎಂದು ಲೇಖಕಿ ಸುಧಾಮೂರ್ತಿ ಹೇಳಿದರು.

ನನ್ನಿಂದ ನೆರವು ಪಡೆಯುವ ಅನೇಕರಿಗೆ ‘ಐಟಿ ಕುಟುಂಬ’ದ ಜೊತೆಗಿನ ಹಿನ್ನೆಲೆ ಅಷ್ಟಾಗಿ ತಿಳಿದಿರುವುದಿಲ್ಲ. ನನ್ನ ಹಿನ್ನೆಲೆ ತಿಳಿದರೆ ಅವರ ಅಪೇಕ್ಷೆಗಳೇ ಬೇರೆ ರೀತಿಯಾಗಬಹುದು ಎಂದರು.

‘ನಾನು ಶಿಕ್ಷಕರ ಕುಟುಂಬದಿಂದ ಬಂದವಳು. ಆ ವಾತಾವರಣವೇ ಲೇಖಕಿಯಾಗಲು ಸ್ಫೂರ್ತಿ. ಬರವಣಿಗೆ ನನ್ನ ಅಭಿವ್ಯಕ್ತಿ’ ಎಂದು ಸುಧಾಮೂರ್ತಿ ಹೇಳಿಕೊಂಡರು. ತಮ್ಮ ‘ದಿ ಮ್ಯಾನ್‌ ಫ್ರಂ ದಿ ಎಗ್‌’ ಕೃತಿ ಪರಿಚಯದ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುರಾಣ ಕಥೆಗಳನ್ನು ಈ ಕಾಲದ ಓದುಗರಿಗೆ ಹೊಸ ರೀತಿಯಲ್ಲಿ ಹೇಳುವ ಹಂಬಲದಿಂದ ಈ ಪುಸ್ತಕ ರಚಿಸಿರುವೆ’ ಎಂದರು. ಈ ಪುಸ್ತಕ ಬ್ರಹ್ಮ, ವಿಷ್ಣು, ಶಿವನ ಕಥನಗಳನ್ನು ಒಳಗೊಂಡಿದೆ.

ತಮ್ಮ ಮದುವೆಯ ಪ್ರಸಂಗ ನೆನಪಿಸಿಕೊಂಡ ಅವರು, ‘ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ’ ಎಂದು ಕೇಳಲು ಬಂದ ನಾರಾಯಣಮೂರ್ತಿ, ಅನಾಥಾಶ್ರಮ ಸ್ಥಾಪಿಸುವ ತಮ್ಮ ಆಸೆಯ ಕುರಿತು ಹೇಳಿಕೊಂಡಿದ್ದರು. ಈ ಮಾತಿಗೆ, ‘ಮೊದಲು ಒಂದು ಕೆಲಸ ಹುಡುಕಿಕೊ’ ಎಂದು ತಮ್ಮ ತಂದೆ ಪ್ರತಿಕ್ರಿಯಿಸಿದ್ದರು ಎಂದು ಹೇಳಿದರು.

ಪ್ರಸೂನ್‌ಗೆ ‘ಕರ್ಣಿಸೇನಾ’ ಸೆನ್ಸಾರ್!

‘ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ’ ಅಧ್ಯಕ್ಷ ಪ್ರಸೂನ್‌ ಜೋಷಿ ‘ಜೆಎಲ್‌ಎಫ್‌’ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ‘ಪದ್ಮಾವತ್‌’ ಚಲನಚಿತ್ರಕ್ಕೆ ಸಂಬಂಧಿಸಿದಂತೆ ರಜಪೂತ ಕರ್ಣಿಸೇನಾ ಒಡ್ಡಿರುವ ಪ್ರತಿಭಟನೆಗೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ.

‘ಸಾಹಿತ್ಯೋತ್ಸವದಿಂದ ದೂರ ಉಳಿಯುತ್ತಿರುವುದಕ್ಕೆ ಬೇಸರವಾಗುತ್ತಿದೆ. ಉತ್ಸವದಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಹಾಗೂ ಸಹೃದಯರು ವಿವಾದಗಳ ಬದಲಾಗಿ ಸೃಜನಶೀಲ ಚರ್ಚೆಗಳ ಬಗ್ಗೆ ಗಮನಹರಿಸಲಿ ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಸಂಘಟಕರಿಗೆ ಇ–ಮೇಲ್‌ ಮೂಲಕ ತಿಳಿಸಿದ್ದಾರೆ.

‘ಸಾಹಿತ್ಯೋತ್ಸವದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ’ ಎಂದು ಕರ್ಣಿಸೇನಾ ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

‘ಪದ್ಮಾವತ್‌’ ಚಿತ್ರಕ್ಕೆ ಸಂಬಂಧಿಸಿದಂತೆ ನಾನು ಏನು ಮಾಡಬಹುದಿತ್ತೋ ಅದನ್ನು ಮಾಡಿದ್ದೇನೆ. ಸಿನಿಮಾಕ್ಕೆ ಸಂಬಂಧಿಸಿದಂತೆ ವ್ಯಕ್ತವಾದ ಪ್ರತಿಕ್ರಿಯೆಗಳು ದುರದೃಷ್ಟಕರ. ಆರೋಗ್ಯಕರ ಸಂವಾದಗಳಿಗೆ ನಾವು ತೆರೆದುಕೊಂಡಿಲ್ಲ. ಪರಸ್ಪರ ನಂಬಿಕೆ ಹಾಗೂ ಸಂಸ್ಥೆಗಳ ನಡುವೆ ವಿಶ್ವಾಸ ಇದ್ದಾಗ ‘ಪದ್ಮಾವತ್‌’ ರೀತಿಯ ಘಟನೆಗಳು ಸಂಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ನಡೆಯಬೇಕಾಗಿದ್ದ ಗೋಷ್ಠಿಯೊಂದರಲ್ಲಿ ಪ್ರಸೂನ್‌ ಜೋಷಿ ಭಾಗವಹಿಸಬೇಕಿತ್ತು.

‘ಜೆಎಲ್‌ಎಫ್‌’ ಬೆಂಬಲ: ಪ್ರಸೂನ್‌ ಜೋಷಿ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಅವರು ‘ಜೆಎಲ್‌ಎಫ್‌’ಗೆ ಬರುವುದನ್ನು ಕೆಲವರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಬಯಸಿದರು. ಈ ಹಿನ್ನೆಲೆಯಲ್ಲಿ ಪ್ರಸೂನ್‌ ತೆಗೆದುಕೊಂಡಿರುವ ನಿರ್ಧಾರವನ್ನು ‘ಜೆಎಲ್‌ಎಫ್‌’ ಗೌರವಿಸುತ್ತದೆ ಎಂದು ಉತ್ಸವದ ಸಂಘಟಕರಲ್ಲಿ ಒಬ್ಬರಾದ ಸಂಜಯ್‌ ರಾಯ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry