ಹುಲಿ ಚರ್ಮ ಮಾರಾಟ; ದಲ್ಲಾಳಿ ಸೆರೆ

7

ಹುಲಿ ಚರ್ಮ ಮಾರಾಟ; ದಲ್ಲಾಳಿ ಸೆರೆ

Published:
Updated:

ಬೆಂಗಳೂರು: ಯಶವಂತಪುರ ಹೂವಿನ ಮಾರುಕಟ್ಟೆ ಬಳಿ ಹುಲಿ ಚರ್ಮ ಮಾರುತ್ತಿದ್ದ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಆರ್‌ಎಂಸಿ ಯಾರ್ಡ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಜ.22ರಂದು ಮಾರುಕಟ್ಟೆಗೆ ಹುಲಿ ಚರ್ಮ ತಂದಿದ್ದ ತಮಿಳುನಾಡಿನ ಡಿ.ಬಾಲಕೃಷ್ಣ, ಮಹೇಶ್ ಹಾಗೂ ರಂಗರಾಜು ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಗುಂಡ್ಲುಪೇಟೆಯ ಪುಟ್ಟಮಲ್ಲಪ್ಪ (38) ಎಂಬಾತನನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಗುಂಡ್ಲುಪೇಟೆ ಗಡಿ ಅಂಚಿನಲ್ಲೇ ಸತ್ಯಮಂಗಲ ಹುಲಿ ಸುರಕ್ಷಿತ ಅರಣ್ಯ ಪ್ರದೇಶವಿದೆ. ಬಾಲಕೃಷ್ಣ ಹಾಗೂ ರಂಗರಾಜು, ಸಮೀಪದ ತಿಗೆನಾರೆ (ತಮಿಳುನಾಡಿಗೆ ಸೇರುತ್ತದೆ) ಗ್ರಾಮದವರು. ಕಾಡು ಉತ್ಪನ್ನಗಳ ಮಾರಾಟದ ದಲ್ಲಾಳಿಯಾಗಿದ್ದ ಪುಟ್ಟಮಲ್ಲಪ್ಪನಿಗೆ, ಅವರಿಬ್ಬರ ಬಳಿ ಹುಲಿ ಚರ್ಮವಿರುವ ವಿಚಾರ ಗೊತ್ತಾಗಿತ್ತು.

ನಂತರ ಅವರನ್ನು ಸಂಪರ್ಕಿಸಿದ್ದ ಆತ, ‘ಹುಲಿ ಚರ್ಮಕ್ಕೆ ಬೆಂಗಳೂರಿನಲ್ಲಿ ಭಾರೀ ಬೇಡಿಕೆ ಇದೆ. ಪರಿಚಿತರ ಮೂಲಕ ಮಾರಾಟ ಮಾಡಿಸುತ್ತೇನೆ’ ಎಂದಿದ್ದ. ಹಣದಾಸೆಗೆ ಬಿದ್ದ ಅವರು, ಆತನ ಸೂಚನೆಯಂತೆ ಮಹೇಶ್‌ನೊಂದಿಗೆ ಜ.22ರಂದು ನಗರಕ್ಕೆ ಬಂದಿದ್ದರು.

ಉಗುರು ಎಫ್ಎಸ್‌ಎಲ್‌ಗೆ: ಆರೋಪಿಗಳು ತಮಿಳುನಾಡಿನ ಸತ್ಯಮಂಗಲ ಅರಣ್ಯದಲ್ಲಿ ಹುಲಿ ಬೇಟೆಯಾಡಿ, ಅದರ ಚರ್ಮವನ್ನು ನಗರಕ್ಕೆ ತಂದಿದ್ದರು. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಅವರನ್ನು ಸತ್ಯಮಂಗಲಕ್ಕೆ ಕರೆದೊಯ್ದಿದ್ದರು. ರಂಗರಾಜು ಮನೆ ಶೋಧಿಸಿದಾಗ ಹುಲಿಯ 12 ಉಗುರುಗಳು ಪತ್ತೆಯಾಗಿದ್ದವು.

‘ಚರ್ಮ ಹಾಗೂ ಉಗುರುಗಳು ಒಂದೇ ಹುಲಿಯದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿದ್ದೇವೆ’ ಎಂದು ತನಿಖಾಧಿಕಾರಿಗಳು ತಿಳಿಸಿದರು.

6 ಕಿ.ಮೀ ಹೊತ್ತೊಯ್ದರು: ‘ಆರೋಪಿಗಳು ಹಂದಿ ಹಿಡಿಯಲು ಒಡ್ಡಿದ್ದ ಉರುಳಿಗೆ ಹುಲಿ ಸಿಕ್ಕಿ ಹಾಕಿಕೊಂಡಿತ್ತು. ಎರಡು ದಿನಗಳ ಬಳಿಕ ಅದನ್ನು ನೋಡಿದ್ದ ಅವರು, ಸತ್ತ ಹುಲಿಯನ್ನು ಅರಣ್ಯದಲ್ಲೇ ಆರು ಕಿ.ಮೀ ದೂರ ಹೊತ್ತೊಯ್ದಿದ್ದರು. ನಂತರ ಪೊದೆಯೊಂದರ ಬಳಿ ಚರ್ಮ ಸುಲಿದು, ಉಗುರುಗಳನ್ನೂ ಬಿಡಿಸಿಕೊಂಡು ಬಂದಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಹುಲಿ ಕಳೇಬರ ಪತ್ತೆ

‘ಅರಣ್ಯಾಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಸ್ಥಳದಲ್ಲಿ ಸಿಕ್ಕ ಹುಲಿಯ ಕಳೇಬರವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಬಂದ ಕೂಡಲೇ ಮಾಹಿತಿ ನೀಡುವಂತೆ ಡಿಎಫ್‌ಒ ಪದ್ಮಾ ಅವರನ್ನು ಕೋರಿದ್ದೇವೆ. ಪುಟ್ಟಮಲ್ಲಪ್ಪನ ವಿರುದ್ಧ ಹಿಂದೆಯೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೈಸೂರಿನಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry