ಸ್ಟೋಕ್ಸ್‌, ಕೃಣಾಲ್ ಪಾಂಡ್ಯ ದುಬಾರಿ

7
ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ: ಇಬ್ಬರಿಗೆ ತಲಾ 11 ಕೋಟಿ

ಸ್ಟೋಕ್ಸ್‌, ಕೃಣಾಲ್ ಪಾಂಡ್ಯ ದುಬಾರಿ

Published:
Updated:
ಸ್ಟೋಕ್ಸ್‌, ಕೃಣಾಲ್ ಪಾಂಡ್ಯ ದುಬಾರಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಹರಾಜು ಪ್ರಕ್ರಿಯೆಯಲ್ಲಿ ಕಳೆದ ಬಾರಿ ₹ 14.5 ಮೊತ್ತಕ್ಕೆ ಪುಣೆ ಸೂಪರ್‌ ಜೈಂಟ್ಸ್ ಪಾಲಾಗಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್ ಈ ಬಾರಿಯೂ ದುಬಾರಿಯಾದರು.

ನಗರದಲ್ಲಿ ಶನಿವಾರ ಆರಂಭಗೊಂಡ ಐಪಿಎಲ್‌ 11ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ₹ 12.5 ಕೋಟಿ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಖರೀದಿಸಿತು. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡದೇ ಇರುವವರ ಪೈಕಿ ಬರೋಡಾದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ₹ 8.80 ಕೋಟಿ ಮೊತ್ತ ಗಳಿಸಿದರು.

ಆದರೆ ಈ ಬಾರಿ ರಣಜಿ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸಿದ ವಿದರ್ಭದ ವೇಗಿ ರಜನೀಶ್ ಗುರುಬಾನಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದೇ ಇರುವವರ ಪಟ್ಟಿಯಲ್ಲಿ ಮಾರಾಟವಾಗದೇ ಉಳಿದರು. ಸ್ಫೋಟಕ ಇನಿಂಗ್ಸ್‌ಗಳ ಮೂಲಕ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್‌ ಮತ್ತು ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಹರಾಜಾಗದೇ ಉಳಿದಿರುವುದು ಮೊದಲ ದಿನದ ಅಚ್ಚರಿ.

ಏಳು ತಾಸುಗಳಿಗೂ ಹೆಚ್ಚು ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 78 ಆಟಗಾರರನ್ನು ಫ್ರಾಂಚೈಸ್‌ಗಳು ಖರೀದಿಸಿದವು. ಆಟಗಾರರನ್ನು ಖರೀದಿಸಲು ಖಾತೆಯಲ್ಲಿ ಅತಿ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್‌ ಮತ್ತು ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡಗಳ ಮಾಲೀಕರು ಉತ್ಸಾಹದಿಂದ ಪಾಲ್ಗೊಂಡು ಕ್ರಮವಾಗಿ ಏಳು ಮತ್ತು ಎಂಟು ಆಟಗಾರರನ್ನು ತಮ್ಮದಾಗಿಸಿಕೊಂಡರು. ಕಡಿಮೆ ಮೊತ್ತ ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡಗಳು ನಾಜೂಕಿನ ಹೆಜ್ಜೆ ಇರಿಸಿದರು.

ಮೊದಲ ಆಟಗಾರ ಶಿಖರ್ ಧವನ್‌

ಈ ಬಾರಿ ಮೊದಲು ಹರಾಜಾದ ಆಟಗಾರ ಶಿಖರ್ ಧವನ್‌. ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿದ್ದ ಅವರನ್ನು ಸೆಳೆದುಕೊಳ್ಳಲು ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡದ ಪ್ರೀತಿ ಜಿಂಟಾ ಸಾಕಷ್ಟು ಪ್ರಯತ್ನಪಟ್ಟರು. ಐದು ಕೋಟಿ 20 ಲಕ್ಷದ ವರೆಗೂ ಆ ತಂಡ ಬಿಡ್ ಸಲ್ಲಿಸಿತ್ತು. ಆದರೆ ಈ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ನನ್ನು ಬಿಟ್ಟುಕೊಡಲು ಮುಂದಾಗದ ಹೈದರಾಬಾದ್‌ ತಂಡ ರೈಟ್‌ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಬಳಸಿ ಇದೇ ಬೆಲೆಗೆ ತನ್ನಲ್ಲಿ ಉಳಿಸಿಕೊಂಡಿತು.

ಕೀರನ್ ಪೊಲಾರ್ಡ್‌ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಡೆಲ್ಲಿ ಡೇರ್ ಡೆವಿಲ್ಸ್ ಭಾರಿ ಪೈಪೋಟಿ ನಡೆಸಿತು. ಆದರೆ ಅವರನ್ನು ಆರ್‌ಟಿಎಂ ಬಳಸಿಕೊಂಡು ಮುಂಬೈ ಇಂಡಿಯನ್ಸ್‌ ತನ್ನಲ್ಲಿ ಉಳಿಸಿಕೊಂಡಿತು.

ಡೇರ್‌ ಡೆವಿಲ್ಸ್ ಪಾಲಾದ ಮ್ಯಾಕ್ಸ್‌ವೆಲ್‌

ಸಿಕ್ಸರ್‌ಗಳ ಸರದಾರ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಕಿಂಗ್ಸ್ ಇಲೆವನ್‌ ಉಳಿಸಿಕೊಳ್ಳಲು ನಿರಾಕರಿಸಿತು. ಅವರಿಗಾಗಿ ಡೆಲ್ಲಿ ಡೇರ್‌ ಡೆವಿಲ್ಸ್‌ ನಿರಂತರ ಬಿಡ್ ಸಲ್ಲಿಸಿ ಮೊತ್ತವನ್ನು ₹ 9 ಕೋಟಿ ವರೆಗೂ ಕೊಂಡೊಯ್ದಿತು. ಈ ಮೊತ್ತಕ್ಕೇ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮ್ಯಾಕ್ಸ್‌ವೆಲ್‌ ಬೇಡ ಎಂದ ಕಿಂಗ್ಸ್ ಇಲೆವನ್‌ ಫ್ರಾಂಚೈಸ್‌ನವರು ಡ್ವೇನ್ ಬ್ರಾವೊ ಅವರನ್ನು ತೆಕ್ಕೆಗೆ ಸೇರಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಅವರನ್ನು ಕೈಬಿಡಲು ಚೆನ್ನೈ ಸೂಪರ್‌ ಕಿಂಗ್ಸ್ ಮುಂದಾಗಲಿಲ್ಲ.

ಹರಭಜನ್‌ ಚೆನ್ನೈಗೆ; ಅಶ್ವಿನ್‌ ಪಂಜಾಬ್‌ಗೆ

ಪಂಜಾಬ್ ಮೂಲದ ಹರಭಜನ್ ಸಿಂಗ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಚೆನ್ನೈನ ರವಿಚಂದ್ರನ್ ಅಶ್ವಿನ್‌ ಪಂಜಾಬ್‌ ಸೂಪರ್ ಕಿಂಗ್ಸ್ ತಂಡಕ್ಕೂ ಹರಾಜಾದದ್ದು ದಿನದ ವಿಶೇಷ. ಅಶ್ವಿನ್‌ ಹೆಸರು ಮೊದಲ ಸುತ್ತಿನ ಪಟ್ಟಿಯಲ್ಲಿತ್ತು. ಅವರಿಗಾಗಿ ಕಿಂಗ್ಸ್ ಇಲೆವನ್‌ ತಂಡ ₹ 7.60 ಕೋಟಿ ವ್ಯಯಿಸಿತು. ಹರಭಜನ್ ಸಿಂಗ್ ಹೆಸರು ಎರಡನೇ ಸುತ್ತಿನ ಪಟ್ಟಿಯಲ್ಲಿತ್ತು. ಅವರಿಗಾಗಿ ₹ 2 ಕೋಟಿ ತೆಗೆದಿರಿಸಲು ಚೆನ್ನೈ ಸೂಪರ್ ಕಿಂಗ್ಸ್ ಹಿಂಜರಿಯಲಿಲ್ಲ.

ಫಾರ್ಮ್‌ನಲ್ಲಿಲ್ಲದ ಯುವರಾಜ್‌ ಸಿಂಗ್‌ ಅವರನ್ನು ಉಳಿಸಿಕೊಳ್ಳಲು ಸನ್‌ರೈಸರ್ಸ್ ಮುಂದೆ ಬರಲಿಲ್ಲ. ಈ ಹಿಂದೆ ದಾಖಲೆ ಮೊತ್ತಕ್ಕೆ ಹರಾಜಾಗಿದ್ದ ಅವರಿಗೆ ಈ ಭಾರಿ ₹ 2 ಕೋಟಿ ಮೂಲಬೆಲೆ ನಿಗದಿಯಾಗಿತ್ತು. ಈ ಮೊತ್ತಕ್ಕೆ ಅವರನ್ನು ತೆಕ್ಕೆಗೆ ಹಾಕಿಕೊಂಡ ಕಿಂಗ್ಸ್‌ ಇಲೆವನ್‌ 10 ವರ್ಷಗಳ ಬಳಿಕ ಮೂಲ ತಂಡಕ್ಕೆ ಸೇರಿಸಿಕೊಂಡಿತು.

ಕರ್ನಾಟಕದ ಆಟಗಾರರಿಗೆ ಬೇಡಿಕೆ

ಮೂರನೇ ಸುತ್ತಿನ ಪಟ್ಟಿಯಲ್ಲಿದ್ದ ಮೊದಲ ಇಬ್ಬರು ಕರ್ನಾಟಕದವರು. ಕರುಣ್ ನಾಯರ್ ಅವರನ್ನು ಸೆಳೆದುಕೊಳ್ಳಲು ಎಲ್ಲ ಫ್ರಾಂಚೈಸ್‌ಗಳು ಕೂಡ ಆಸಕ್ತಿ ತೋರಿಸಿದರು. ಹೀಗಾಗಿ ಅವರಿಗೆ ‘ಬೆಲೆ’ ಕಟ್ಟಲು ತುಂಬ ಸಮಯ ಹಿಡಿಯಿತು. ಕೊನೆಗೆ ಅವರು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಪಾಲಾದರು. ಪಟ್ಟಿಯಲ್ಲಿದ್ದ ಎರಡನೇ ಆಟಗಾರ ಕೆ.ಎಲ್‌.ರಾಹುಲ್ ಅವರನ್ನು ಪಡೆದುಕೊಳ್ಳುವುದಕ್ಕೂ ಸಾಕಷ್ಟು ಪೈಪೋಟಿ ನಡೆಯಿತು. ಅವರನ್ನು ರಾಯಲ್‌ ಚಾಲೆಂಜರ್ಸ್‌ ಕೈಬಿಟ್ಟ ಕಾರಣ ಕಿಂಗ್ಸ್ ಇಲೆವನ್ ತನ್ನದಾಗಿಸಿಕೊಂಡಿತು.

ಶೇನ್‌ ವಾಟ್ಸನ್ ಅವರನ್ನು ಕೂಡ ರಾಯಲ್ ಚಾಲೆಂಜರ್ಸ್ ಕೈಬಿಟ್ಟಿತು. ಮನೀಷ್ ಪಾಂಡೆ ಉಳಿಸಿಕೊಳ್ಳಲು ಕೋಲ್ಕತ್ತ ನೈಟ್ ರೈಡರ್ಸ್‌ ಮನಸ್ಸು ಮಾಡಲಿಲ್ಲ. ಹೀಗಾಗಿ ಹೈದರಾಬಾದ್ ತಂಡ ಅವರನ್ನು ₹ 11 ಕೋಟಿಗೆ ಸೇರ್ಪಡೆ ಮಾಡಿಕೊಂಡಿತು.

ಗೇಲ್‌, ಮುರಳಿ ವಿಜಯ್‌ಗೆ ಇಲ್ಲ ಬೇಡಿಕೆ

ಮೊದಲ ಸುತ್ತಿನ ಪಟ್ಟಿಯಲ್ಲಿ ನಾಲ್ಕನೇಯವರಾಗಿದ್ದವರು ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌. ಅವರಿಗೆ ₹ 2 ಕೋಟಿ ಮೂಲಬೆಲೆ ನಿಗದಿ ಮಾಡಲಾಗಿತ್ತು. ಆದರೆ ಅವರ ಹೆಸರನ್ನು ಘೋಷಿಸುತ್ತಿದ್ದಂತೆ ಎಲ್ಲ ಫ್ರಾಂಚೈಸ್‌ನವರು ಕೂಡ ತಲೆ ತಗ್ಗಿಸಿ ಕುಳಿತುಕೊಂಡರು. ಹೀಗಾಗಿ ಅವರು ಹರಾಜಾಗದ ಆಟಗಾರರ ಪಟ್ಟಿಗೆ ಸೇರಬೇಕಾಯಿತು.

ಎರಡನೇ ಸುತ್ತಿನ ಪಟ್ಟಿಯಲ್ಲಿದ್ದ ಜೋ ರೂಟ್ ಅವರಿಗೂ ಬೇಡಿಕೆ ಇರಲಿಲ್ಲ. ಮೂರನೇ ಸುತ್ತಿನ ಪಟ್ಟಿಯಲ್ಲಿದ್ದ ಭಾರತದ ಮುರಳಿ ವಿಜಯ್‌, ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್‌ ಅವರನ್ನು ಪಡೆಯುವುದಕ್ಕೂ ಯಾರು ಕೂಡ ಮುಂದೆ ಬರಲಿಲ್ಲ. ಆಸ್ಟ್ರೇಲಿಯಾದ ಮಧ್ಯಮ ವೇಗಿಗಳಾದ ಜೇಮ್ಸ್ ಫಾಕ್ನರ್‌, ಜೋಶ್ ಹ್ಯಾಜಲ್‌ವುಡ್‌ ಮತ್ತು ಮಿಚೆಲ್ ಜಾನ್ಸನ್, ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ ಅವರು ಕೂಡ ಮೊದಲ ದಿನ ಹರಾಜಾದವರ ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ.

ಕೃಣಾಲ್‌ ಪಾಂಡ್ಯಗೆ ಉತ್ತಮ ಮೊತ್ತ

ಅಂತರರಾಷ್ಟ್ರೀಯ ಪಂದ್ಯ ಆಡದವರ ಪೈಕಿ ಅನೇಕರ ಬಗ್ಗೆ ಕುತೂಹಲ ಇತ್ತು. 19 ವರ್ಷದೊಳಗಿನವರ ಭಾರತ ತಂಡದ ನಾಯಕ ಪೃಥ್ವಿ ಶಾ, ರಣಜಿಯಲ್ಲಿ ಭರ್ಜರಿ ಬೌಲಿಂಗ್ ಮಾಡಿ ವಿದರ್ಭಕ್ಕೆ ಪ್ರಶಸ್ತಿ ಒದಗಿಸಿಕೊಟ್ಟ ರಜನೀಶ್ ಗುರ್ಬಾನಿ ಮುಂತಾದವರಿಗೆ ಭಾರಿ ಮೊತ್ತ ಸಿಗುವ ನಿರೀಕ್ಷೆ ಇತ್ತು. ಆದರೆ ಎಲ್ಲರನ್ನು ಹಿಮ್ಮೆಟ್ಟಿಸಿ ಹೆಚ್ಚು ಬೆಲೆ ಪಡೆದುಕೊಂಡವರು ಕೃಣಾಲ್ ಪಾಂಡ್ಯ. ವೆಸ್ಟ್ ಇಂಡೀಸ್‌ನ ಆಲ್‌ರೌಂಡ್ ಆಟಗಾರ ಜೊಫ್ರಾ ಆರ್ಚರ್‌, ಆಸ್ಟ್ರೇಲಿಯಾದ ಡಾರ್ಸಿ ಶಾರ್ಟ್‌, ಭಾರತದ ದೀಪಕ್‌ ಹೂಡ ಕೂಡ ಉತ್ತಮ ಬೆಲೆ ಪಡೆದುಕೊಂಡರು.

ಮೂಲಬೆಲೆಗೇ ಹರಾಜಾದ ಬಿನ್ನಿ

ಕರ್ನಾಟಕದ ಸ್ಟುವರ್ಟ್‌ ಬಿನ್ನಿ ಮತ್ತು ನ್ಯೂಜಿಲೆಂಡ್‌ನ ಕಾಲಿನ್ ಮನ್ರೊ ಮೂಲ ಬೆಲೆಗೇ ಮಾರಾಟ ಆದರು. ಇವರಿಬ್ಬರಿಗೆ ತಲಾ ₹ 50 ಲಕ್ಷ ಬೆಲೆ ನಿಗದಿಯಾಗಿತ್ತು. ಇದೇ ಬೆಲೆಗೆ ಅವರನ್ನು ಕ್ರಮವಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಡೇರ್‌ ಡೆವಿಲ್ಸ್‌ ಪಡೆದುಕೊಂಡಿತು. ಸಿದ್ಧಾರ್ಥ್ ಕೌಲ್‌ಗೆ ₹ 30 ಲಕ್ಷ ಮೂಲಬೆಲೆ ನಿಗದಿಯಾಗಿತ್ತು. ಆದರೆ ₹ 3.80 ಕೋಟಿಗೆ ಹರಾಜಾಗಿ ಗಮನ ಸೆಳೆದರು. ₹ 20 ಲಕ್ಷ ಮೂಲ ಬೆಲೆ ನಿಗದಿಯಾಗಿದ್ದ ನವದೀಪ್ ಸೈನಿ ₹ 3 ಕೋಟಿಗೆ ಹರಾಜಾದರು.

ವೇಳೆ ಬದಲಾವಣೆ: ಇನ್ನೂ ನಿರ್ಧಾರವಾಗಲಿಲ್ಲ

ಬೆಂಗಳೂರು:
ಐಪಿಎಲ್ 11ನೇ ಆವೃತ್ತಿಯ ವಾರಾಂತ್ಯದ ಪಂದ್ಯಗಳ ವೇಳೆ ಬದಲಾವಣೆ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಿಲ್ಲ ಎಂದು ಐಪಿಎಲ್‌ ಆಡಳಿತ ಸಮಿತಿ ಮುಖ್ಯಸ್ಥ ರಾಜೀವ್‌ ಶುಕ್ಲಾ ತಿಳಿಸಿದರು.

ಹರಾಜು ಪ್ರಕ್ರಿಯೆಯ ನಡುವೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ವೇಳೆ ಬದಲಾಯಿಸುವಂತೆ ಕೆಲವು ಫ್ರಾಂಚೈಸ್‌ಗಳು ಮತ್ತು ಪಂದ್ಯಗಳ ನೇರ ಪ್ರಸಾರ ಮಾಡುವ ಟಿವಿ ವಾಹಿನಿಯವರು ಬೇಡಿಕೆ ಇರಿಸಿದ್ದಾರೆ. ಇದನ್ನು ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್‌ ಅಂಬಾನಿ ’ವೇಳೆ ಬದಲಾಯಿಸುವಂತೆ ಬೇಡಿಕೆ ಇರಿಸಿದವರಲ್ಲಿ ನಾವೇ ಪ್ರಮುಖರು. ಇದಕ್ಕೆ ಕಾರಣವೂ ಇದೆ. ಮುಂಬೈನಲ್ಲಿ ಬಹುತೇಕ ಎಲ್ಲರೂ ಕೆಲಸ ಮುಗಿಸಿ ಸಂಜೆ ಆರೂವರೆಯ ವೇಳೆಗೆ ಮನೆ ಸೇರುತ್ತಾರೆ. ಅವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಈ ಬೇಡಿಕೆ ಇರಿಸಲಾಗಿದೆ’ ಎಂದರು.

ರಾಹುಲ್‌ಗೆ ಉತ್ತಮ ಮೊತ್ತ: ಥಾಮಸ್ ಸಂತಸ

‘ಕೆ.ಎಲ್‌.ರಾಹುಲ್ ತವರನ್ನು ನಾವು ಉಳಿಸಿಕೊಳ್ಳದಿದ್ದರೂ ಉತ್ತಮ ಬೆಲೆಗೆ ಹರಾಜಾಗಿರುವುದು ಸಂತಸದ ವಿಷಯ’ ಎಂದು ಆರ್‌ಸಿಬಿ ಅಧ್ಯಕ್ಷ ಅಮೃತ್ ಥಾಮಸ್ ಹೇಳಿದರು. ‘ತಂಡ ಮೊದಲ ದಿನ ಉತ್ತಮ ಆಟಗಾರರನ್ನು ಖರೀದಿಸಿದೆ. ಇದು ಸಮಾಧಾನ ತಂದಿದೆ. ಒಂದು ದಿನ ಬಾಕಿ ಇರುವುದರಿಂದ ಇನ್ನಷ್ಟು ಉತ್ತಮ ಆಟಗಾರರನ್ನು ಪಡೆಯಲು ತಂಡಕ್ಕೆ ಅವಕಾಶವಿದೆ.

ಕಿಂಗ್ಸ್ ಬಲಪಡಿಸಲು ಯತ್ನ: ಪ್ರೀತಿ

ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಬಲಪಡಿಸುವ ಉದ್ದೇಶದಿಂದ ಈ ಬಾರಿ ನಾಜೂಕಿನ ಹೆಜ್ಜೆ ಇರಿಸಲಾಗಿದೆ ಎಂದು ತಂಡದ ಮಾಲಕಿ ಪ್ರೀತಿ ಜಿಂಟಾ ತಿಳಿಸಿದರು. ಶಿಖರ್ ಧವನ್‌ ಅವರನ್ನು ಪಡೆಯಲು ಸಾಧ್ಯವಾಗದೇ ಇದ್ದದ್ದು ಬೇಸರ ತಂದಿದೆ. ಆದರೆ ಹತ್ತು ವರ್ಷಗಳ ನಂತರ ಯುವರಾಜ್ ಸಿಂಗ್‌ ಅವರನ್ನು ಮರಳಿ ಪಡೆಯಲು ಸಾಧ್ಯವಾದದ್ದು ಖುಷಿ ನೀಡಿದೆ ಎಂದರು.

ಹಣದ ದಂಧೆಗೆ ದಾರಿ ಐಪಿಎಲ್‌: ಬಿಷನ್ ಸಿಂಗ್ ಬೇಡಿ

ಕೋಲ್ಕತ್ತ : ಐಪಿಎಲ್‌ನಲ್ಲಿ ವಿನಿಯೋಗಿಸುವ ಕೋಟ್ಯಂತರ ಮೊತ್ತದ ಹಣದ ಮೂಲ ಯಾವುದು ಎಂದು ಪ್ರಶ್ನಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ‘ಈ ಲೀಗ್ ಹಣದ ದಂದೆಯಲ್ಲಿ ತೊಡಗಿಸಿಕೊಳ್ಳಲು ಕೆಲವರಿಗೆ ದಾರಿಯಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಆಟಗಾರರಿಗೆ ಹಣ ಸಿಗುವುದರಲ್ಲಿ ನನಗೇನೂ ಅಭ್ಯಂತರವಿಲ್ಲ. ಆದರೆ ಒಂದು ವಿಕೆಟ್‌ ಉರಳಿಸಲು ₹ ಒಂದು ಕೋಟಿ ಮತ್ತು ಒಂದು ರನ್‌ಗೆ ₹ 97 ಲಕ್ಷವನ್ನು ಯಾರಾದರೂ ನೀಡುತ್ತಾರೆ ಎಂದಾದರೆ ಅದು ಆಕ್ಷೇಪಾರ್ಹ ಅಲ್ಲವೇ’ ಎಂದು ಅವರು ಪ್ರಶ್ನಿಸಿದರು.

*ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ, ಮುಂಬೈ ಇಂಡಿಯನ್ಸ್‌ ತಂಡದ ಒಡತಿ ನೀತಾ ಅಂಬಾನಿ, ಮುಂಬೈ ಇಂಡಿಯನ್ಸ್‌ ತಂಡದ ಮಾಲೀಕ ಆಕಾಶ್‌ ಆಂಬಾನಿ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಸಹ ಒಡತಿ ಜೂಹಿ ಚಾವ್ಲಾ ಅವರು ಶನಿವಾರ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಂದ ಕ್ಷಣ. ಪ್ರಜಾವಾಣಿ ಚಿತ್ರಗಳು/ ಕೃಷ್ಣಕುಮಾರ್‌ ಪಿ.ಎಸ್‌

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry