ನಮ್ಮದು ಸಂತರ, ಕಾವಿ ಬಟ್ಟೆಯ ಇತಿಹಾಸ: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅನಂತಕುಮಾರ್‌ ಹೆಗಡೆ

7

ನಮ್ಮದು ಸಂತರ, ಕಾವಿ ಬಟ್ಟೆಯ ಇತಿಹಾಸ: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅನಂತಕುಮಾರ್‌ ಹೆಗಡೆ

Published:
Updated:
ನಮ್ಮದು ಸಂತರ, ಕಾವಿ ಬಟ್ಟೆಯ ಇತಿಹಾಸ: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅನಂತಕುಮಾರ್‌ ಹೆಗಡೆ

ಜಗಳೂರು: ‘ಭಾರತದ ಇತಿಹಾಸ ರಾಜ–ಮಹರಾಜರದ್ದಲ್ಲ; ಇದು ಸಂತರ, ಕಾವಿ ಬಟ್ಟೆಯ ಇತಿಹಾಸ’ ಎಂದು ಕೇಂದ್ರ ಕೌಶಲ– ಉದ್ಯಮಶೀಲತಾ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಐದನೇ ದಿನವಾದ ಶನಿವಾರ ಮಾತನಾಡಿದ ಅವರು, ‘ಇಂದಿನ ರಾಜಕೀಯ ವ್ಯವಸ್ಥೆ ವಿಕಾರವಾಗಿದೆ. ಅದನ್ನು ಸರಿದಾರಿಗೆ ತರುವ ಶಕ್ತಿ ಕೇಸರಿ ಕಾವಿ ಬಟ್ಟೆಯ ಸಂತರಿಗೆ ಮಾತ್ರ ಇದೆ’ ಎಂದರು.

‘ಇಂದು ನಾವು ಹೇಳಿಕೊಳ್ಳುತ್ತಿರುವ ಪ್ರಜಾಪ್ರಭುತ್ವವನ್ನು ಇಂಗ್ಲೆಂಡ್‌, ಅಮೆರಿಕದವರು ನಮಗೆ ಹೇಳಿಕೊಟ್ಟಿದ್ದು. ಸಂವಿಧಾನ, ರಾಜ್ಯ, ದೇಶ ಈಗ ಬಂದಿದ್ದು. ಆದರೆ, ಐದೂವರೆ ಸಾವಿರ ವರ್ಷಗಳ ಹಿಂದೆಯೇ ನಮ್ಮಲ್ಲಿ ಅತ್ಯಂತ ಪ್ರಬುದ್ಧವಾದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಸುಹೊಕ್ಕಾಗಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ಈ ಹಿಂದೆ ಭಾರತದಲ್ಲಿ ರಾಜನೂ ಇರಲಿಲ್ಲ; ರಾಜ್ಯವೂ ಇರಲಿಲ್ಲ. ದಂಡಕರೂ ಇರಲಿಲ್ಲ; ಶಿಕ್ಷೆಗೆ ಒಳಗಾಗುವವರೂ ಇರಲಿಲ್ಲ. ಪರಸ್ಪರ ಅರಿತು ಜನರೇ ಸಮಾಜವನ್ನು ಮುನ್ನಡೆಸುತ್ತಿದ್ದರು. ಆದರೆ, ಇತ್ತೀಚಿನವರು, ಇತಿಹಾಸ ಬರೆದವರು ರಾಜ–ಮಹಾರಾಜರದ್ದೇ ದೇಶದ ಇತಿಹಾಸ ಎಂದು ಬಿಂಬಿಸುತ್ತಿದ್ದಾರೆ. ನಾವು ಚೌಕಟ್ಟನ್ನು ದಾಟಿ ವಿಚಾರ ಮಾಡಿದಾಗ ನಮ್ಮ ರಕ್ತದ ಪರಿಚಯವಾಗುತ್ತದೆ’ ಎಂದು ಪ್ರತಿಪಾದಿಸಿದ ಅವರು, ಸಂಸ್ಕೃತದ ಶ್ಲೋಕವನ್ನು ಉಲ್ಲೇಖಿಸಿದರು.

‘ಸಮಾಜ ವಿಕೃತಿಯ ಜಾಡು ಹಿಡಿದಾಗ ಮಹಾಪುರುಷರು ಬಂದರು. ಸಾವಿರಾರು ವರ್ಷಗಳ ಪರಂಪರೆಯನ್ನು ಇನ್ನಷ್ಟು ಶುಭ್ರ, ಸ್ವಚ್ಛಗೊಳಿಸಿ ಅದನ್ನೇ ನಮ್ಮ ಮುಂದಿಟ್ಟರು. ಪ್ರತಿಯೊಬ್ಬ ಶರಣರೂ ಸಮಾಜಕ್ಕೆ ದಿಕ್ಕು ತೋರಿಸಿದರು. ಜೀವನದಲ್ಲಿ ಇಂದು ನಾನು ಗೌರವ ನೀಡುವುದು, ತಲೆ ಬಾಗುವುದು ಕಾವಿ ಬಟ್ಟೆ ತೊಟ್ಟ ಸಂತರಿಗೆ ಮಾತ್ರ. ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು.

‘ಬಸವಣ್ಣ ಜಾತಿ ವ್ಯವಸ್ಥೆಯನ್ನು ಮೀರಿ ಎಂದರು. ಆದರೆ, ಇಂದು ನಾವು ಅದನ್ನೇ ‘ಜಾತಿ’ಯನ್ನಾಗಿ ಮಾಡಿಕೊಂಡಿದ್ದೇವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆಯೇ’ ಎಂದು ಅವರು ಪ್ರಶ್ನಿಸಿದರು.

‘ಇಂದು ಏನೇ ಹೇಳಿದರೂ ತಪ್ಪಾಗಿ ಅರ್ಥೈಸಿಕೊಳ್ಳುವ ವ್ಯವಸ್ಥೆ ನಿರ್ಮಾಣಗೊಂಡಿದೆ. ಹೊಸ ವ್ಯವಸ್ಥೆ ಅನಾವರಣಗೊಳ್ಳಬೇಕಾಗಿದೆ. ಸಮಯಕ್ಕೆ ತಕ್ಕಂತೆ ನಾವು ಹೆಜ್ಜೆ ಇಡದಿದ್ದರೆ ನಾವು ಹಿಂದೆಯೇ ಉಳಿಯುತ್ತೇವೆ’ ಎಂದು ಸಚಿವರು ಅಭಿಪ್ರಾಯಪಟ್ಟರು.

‘ಭಾರತದ ಪ್ರತಿ ಮಣ್ಣಿನ ಕಣದಲ್ಲೂ ಜ್ಞಾನ ಇದೆ. ‘ಭಾ’ ಎಂದರೆ ಜ್ಞಾನ ಎಂದು. ಇಲ್ಲಿ ಜ್ಞಾನದ ಆರಾಧನೆ ನಡೆಯುತ್ತಿದೆ. ಜ್ಞಾನದ ಬೆಳಕಿನ ರಥವಾಗಿರುವ ಭೂಮಿಯೇ ಭಾರತ’ ಎಂದು ಅವರು ಹೇಳಿದರು.

‘ಸಮಾಜದಲ್ಲಿ ಹೊಸ ಜ್ಞಾನ ದಾಸೋಹ ನಡೆಯಬೇಕು. ಇಲ್ಲಿ ನಡೆಯುತ್ತಿರುವ ಜ್ಞಾನ ದಾಸೋಹ ಕಾಯಕವೇ ಲಿಂಗಾಯತ ಧರ್ಮ. ಸ್ವಾಮೀಜಿ ನಮಗೆ ದಿಕ್ಕನ್ನು ತೋರಿಸಬೇಕಾಗಿದೆ. ಅವರು ತಮಗಾಗಿ ಏನನ್ನೂ ಮಾಡುವುದಿಲ್ಲ. ಸಮುದಾಯದ ನೆಮ್ಮದಿ, ಧನ್ಯತೆಯಲ್ಲೇ ಬದುಕಿನ ಧನ್ಯತೆಯನ್ನು ಕಾಣುತ್ತಾರೆ. ನಾವು ಅವರ ಘನತೆಯನ್ನು ಕಾಪಾಡಬೇಕು’ ಎಂದು ಹೇಳಿದರು.

ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೋಹನ ಶಾಂತನಗೌಡರ್, ಹೃದಯ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರೂ ಇದ್ದರು.

ಕೇಕೆ, ಸಿಳ್ಳೆಗಳ ಮೊರೆತ

ಅನಂತಕುಮಾರ್‌ ಮಾತನಾಡಲು ಬಂದ ತಕ್ಷಣವೇ ಅಭಿಮಾನಿಗಳಿಂದ ಸುಮಾರು ಒಂದು ನಿಮಿಷ ಶಿಳ್ಳೆ, ಕೇಕೆ, ಚಪ್ಪಾಳೆಗಳ ಮೊರೆತ ಬಿದ್ದವು. ಆಗಾಗ ಅವರ ಮಾತಿನ ಝಲಕ್‌ಗೆ ಮರುಳಾದ ಅಭಿಮಾನಿಗಳು ಸಂಭ್ರಮ ಪಟ್ಟರು. ವೇದಿಕೆಯಿಂದ ಕೆಳಗಿಳಿದ ಬಳಿಕ ಹಲವು ಯುವಕರು ಮೊಬೈಲ್‌ನಲ್ಲಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry