ಅಣಬೆಯಿಂದ ಬಿಸ್ಕತ್‌, ಹಪ್ಪಳ

7

ಅಣಬೆಯಿಂದ ಬಿಸ್ಕತ್‌, ಹಪ್ಪಳ

Published:
Updated:
ಅಣಬೆಯಿಂದ ಬಿಸ್ಕತ್‌, ಹಪ್ಪಳ

ಮಂಡ್ಯ: ಉತ್ತಮ ಆರೋಗ್ಯಕ್ಕೆ ಪೋಷಕಾಂಶ ನೀಡುವ ಅಣಬೆಯಿಂದ ಅಂಗವಿಕಲ ರಾಮಕೃಷ್ಣ ಎಂಬುವವರು 18 ಉಪ ಉತ್ಪನ್ನ ತಯಾರಿಸುತ್ತಿದ್ದಾರೆ. ನಗರದಲ್ಲಿ ‘ಅಣಬೆ ವಿಜ್ಞಾನ ಸಂಸ್ಥೆ’ ಸ್ಥಾಪಿಸಿರುವ ಅವರು ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಅಣಬೆ ಬೆಳೆಗಾರರ ಗುಂಪು ಕಟ್ಟಿದ್ದಾರೆ.

2 ವರ್ಷದ ಮಗುವಾಗಿದ್ದಾಗಲೇ ಪೋಲಿಯೊದಿಂದ ಅಂಗವಿಕಲರಾಗಿರುವ ಅವರು, ಅಣಬೆ ಬೇಸಾಯದಲ್ಲಿ ಸ್ವಾವಲಂಬನೆ ಸಾಧಿಸಿದ್ದಾರೆ. ಆರಂಭದಲ್ಲಿ ಚಿಪ್ಪು ಅಣಬೆ ತಯಾರಿಸಿ ಮಾರಾಟ ಮಾಡುತ್ತಿದ್ದರು. ಈಗ ಉಪ ಉತ್ಪನ್ನ ತಯಾರಿಸಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿ

ದ್ದಾರೆ. ಅಣಬೆ ಬಿಸ್ಕತ್‌, ರಸಂ ಪೌಡರ್‌, ಮಾಲ್ಟ್‌, ಹಪ್ಪಳ, ಉಪ್ಪಿನಕಾಯಿ, ಚಹಾ ಸೇರಿ 18 ಉತ್ಪನ್ನಗಳನ್ನು ಅವರೇ ಸಂಶೋಧನೆ ಮಾಡಿದ್ದಾರೆ.

ಒಣಗಿಸಿದ ಅಣಬೆಯನ್ನು ಪೌಡರ್‌ ಮಾಡಿ ಒಂದೆಲಗ, ಬ್ರಾಹ್ಮಿ, ನುಗ್ಗೆ ಮತ್ತಿತರ ಔಷಧೀಯ ಸಸ್ಯ ಬಳಸಿ ಉತ್ಪನ್ನ ತಯಾರಿಸುತ್ತಾರೆ. ಇದಕ್ಕೆ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ), ಭಾರತೀಯ ತೋಟಗಾರಿಕಾ ತಂತ್ರಜ್ಞಾನ ಸಂಸ್ಥೆ (ಐಐಎಚ್‌ಟಿ) ವಿಜ್ಞಾನಿಗಳು ಹಾಗೂ ಆಯುರ್ವೇದ ವೈದ್ಯರು ಮಾರ್ಗದರ್ಶನ ಪಡೆದಿದ್ದಾರೆ.

ವಿ.ವಿ ನಗರದಲ್ಲಿರುವ ತಮ್ಮ ಮನೆಯಲ್ಲೇ ಸಣ್ಣ ಉದ್ಯಮದ ಮಾದರಿಯಲ್ಲಿ ಅಣಬೆ ಬೇಸಾಯ ಮಾಡುತ್ತಿದ್ದಾರೆ. ಅವರು ಸ್ಥಾಪಿಸಿರುವ ಅಣಬೆ ವಿಜ್ಞಾನ ಸಂಸ್ಥೆಗೆ ಭಾರತೀಯ ಆಹಾರ ಗುಣಮಟ್ಟ ಮತ್ತು ಭದ್ರತಾ ಪ್ರಾಧಿಕಾರ (ಎಫ್ಎಸ್‍ಎಸ್‍ಎಐ) ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಯ ಮಾನ್ಯತೆ ಪಡೆದಿದ್ದಾರೆ.

‘ಅಣಬೆಯಲ್ಲಿರುವ ಪೋಷಕಾಂಶಗಳ ಅರಿವು ಇದ್ದರೂ ಕೆಲವರು ಅದನ್ನು ಮಾಂಸಾಹಾರ ಎಂದು ಮೂಗು ಮುರಿಯುತ್ತಾರೆ. ಹೀಗಾಗಿ ಉಪ ಉತ್ಪನ್ನ ತಯಾರಿಕೆಯತ್ತ ಸಂಶೋಧನೆ ಮಾಡಿದೆ. ನಮ್ಮ ಸಂಸ್ಥೆಯಿಂದ 300ಕ್ಕೂ ಹೆಚ್ಚು ಜನರು ಅಣಬೆ ಬೇಸಾಯ ಮಾಡುತ್ತಿದ್ದಾರೆ. ಅವರ ಮೂಲಕ ನೇರವಾಗಿ ಹೋಟೆಲ್‌, ಅಂಗಡಿಗಳಿಗೆ ರವಾನೆ ಮಾಡಲಾಗುತ್ತದೆ. ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ನಮ್ಮ ಬೆಳೆಗಾರರು ಇದ್ದಾರೆ. ಜೊತೆಗೆ ಬಳಕೆದಾರರ ಗುಂಪುಗಳಿದ್ದು ಅವರು ನೇರವಾಗಿ ನಮ್ಮ ಮನೆಗೆ ಬಂದು ಕೊಳ್ಳುತ್ತಾರೆ’ ಎಂದು ರಾಮಕೃಷ್ಣ ಹೇಳಿದರು.

ರೈತರಿಗೆ ತಿಂಗಳ ಆದಾಯ ಯೋಜನೆ: ರೈತರಿಗಾಗಿ ‘ರೈತ ಕುಟುಂಬ ಖಚಿತ ತಿಂಗಳ ಆದಾಯ ಯೋಜನೆ’ ಆರಂಭಿಸಿದ್ದಾರೆ. ಈ ಯೋಜನೆಗೆ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಸಂಜೀವಿನಿ) ಅನುಮೋದನೆ ನೀಡಿದೆ. ಆ ಮೂಲಕ 5 ಸಾವಿರ ರೈತರಿಗೆ ಅಣಬೆ ಬೇಸಾಯ ವಿಸ್ತರಣೆ ಗುರಿ ಹೊಂದಲಾಗಿದ್ದು, ಆರಂಭಿಕವಾಗಿ ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನ ಮಾಡಲಾಗಿದೆ.

‘ರೈತರು ಕೃಷಿ ಚಟುವಟಿಕೆ ಜೊತೆ ಅಣಬೆ ಬೇಸಾಯ ಮಾಡಬಹುದು. ಬೆಳೆದ ಅಣಬೆಯನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಉಳಿಕೆಯನ್ನು ನಮಗೆ ವಾಪಸ್‌ ಕೊಡುತ್ತಾರೆ. ನಾವು ಒಣಗಿಸಿ ಉಪ ಉತ್ಪನ್ನ ತಯಾರಿಸುತ್ತೇವೆ’ ಎಂದು ರಾಮಕೃಷ್ಣ ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಸೇವೆಯಲ್ಲಿದ್ದ ಅವರು ರಾಜೀನಾಮೆ ಸಲ್ಲಿಸಿ ಮೂರೂವರೆ ವರ್ಷಗಳಿಂದ ಅಣಬೆ ಬೇಸಾಯ ಮಾಡುತ್ತಿದ್ದಾರೆ. ಉಪ ಉತ್ಪನ್ನ ತಯಾರಿಕೆಯಲ್ಲಿ ರಾಮಕೃಷ್ಣ ಪತ್ನಿ ಟಿ.ಎಸ್‌.ಕಲ್ಪನಾ ಪ್ರಮುಖ ಪಾತ್ರ ವಹಿಸುತ್ತಾರೆ.

ಮಕ್ಕಳಿಗೆ ಅಣಬೆ ಬಿಸ್ಕತ್‌ ಕೊಡಿ

ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆ ಅಡಿ ಶಾಲಾ ಮಕ್ಕಳಿಗೆ ಹಾಲಿನ ಜೊತೆ ಅಣಬೆ ಬಿಸ್ಕತ್‌ ವಿತರಣೆಗೆ ಅವಕಾಶ ಕೋರಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಂಟಿ ನಿರ್ದೇಶಕರಿಗೆ ರಾಮಕೃಷ್ಣ ಪತ್ರ ಬರೆದಿದ್ದಾರೆ.

ಮಾತೃಪೂರ್ಣ ಯೋಜನೆ ಅಡಿ ಗರ್ಭಿಣಿಯರಿಗೆ ಪೌಷ್ಟಿಕಾಂಶದ ಅಣಬೆ ಉತ್ಪನ್ನ ವಿತರಣೆ ಮಾಡಬೇಕು ಎಂದೂ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry