ಬೇಡಿಕೆ ಪರಿಶೀಲನೆಗೆ ಸಮಿತಿ ರಚನೆ

7

ಬೇಡಿಕೆ ಪರಿಶೀಲನೆಗೆ ಸಮಿತಿ ರಚನೆ

Published:
Updated:

ಬೆಂಗಳೂರು: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಬೇಡಿಕೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸರ್ಕಾರ ಸಮಿತಿ ರಚಿಸಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಟಿ.ಎಂ. ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತ ಡಿ.ವಿ. ಪ್ರಸಾದ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವಸತಿ, ಕಂದಾಯ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸಮಿತಿಯಲ್ಲಿ ಇದ್ದಾರೆ.ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದ ನಿಯೋಗದೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದ್ದಾರೆ.

‘ಅರಣ್ಯ ಭೂಮಿ ಒತ್ತುವರಿ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸದಂತೆಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಬಗರ್‌ ಹುಕುಂ ಸಾಗುವಳಿದಾರರ ಭೂಮಿ ಮಂಜೂರಾತಿಗೆ ಅರ್ಜಿ ಹಾಕಲು ಮತ್ತೊಮ್ಮೆ ಅವಕಾಶ ಕಲ್ಪಿಸಲು ಒತ್ತಾಯಿಸಲಾಯಿತು’ ಎಂದು ಹೋರಾಟ ಸಮಿತಿಯ ಸಿರಿಮನೆ ನಾಗರಾಜ್ ತಿಳಿಸಿದರು.

‌‘ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ. ಭೂ ಮಂಜೂರಾತಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಮುಂದಿನ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು’ ಎಂದೂ ಅವರು ಹೇಳಿದರು.

‘ನಗರದ ಗಾಂಧಿ ಭವನದ ಬಳಿ 18 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಭಾನುವಾರ ನಿರ್ಣಾಯಕ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಸರ್ಕಾರ ಸ್ಪಂದಿಸಿರುವುರಿಂದ ಹೋರಾಟ ಕೈಬಿಡಲಾಗಿದೆ’ ಎಂದೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry