ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲೂ ಟಿಪ್ಪು ಸುಲ್ತಾನ್ ಗದ್ದಲ

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಾದ್ಯಂತ ಸಾಕಷ್ಟು ಪರ–ವಿರೋಧ ಚರ್ಚೆ ಹುಟ್ಟುಹಾಕಿದ್ದ ಟಿಪ್ಪು ಸುಲ್ತಾನ್‌  ವಿಚಾರ ಈಗ ದೆಹಲಿ ವಿಧಾನಸಭೆಗೂ ತಲುಪಿದೆ.

ದೇಶ ನಿರ್ಮಾಣ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 70 ಮಹನಿಯರ ಭಾವಚಿತ್ರಗಳನ್ನು ಎಎಪಿ ಸರ್ಕಾರ ವಿಧಾನಸಭೆಯಲ್ಲಿ ಹಾಕಿದೆ. ಇದರಲ್ಲಿ ಟಿಪ್ಪು ಭಾವಚಿತ್ರವೂ ಇದೆ. ಬಿಜೆಪಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ವಿವಾದಾತ್ಮಕ ವ್ಯಕ್ತಿಗಳನ್ನು ದೂರ ಇಡಬೇಕು ಎಂದು ಅದು ಹೇಳಿದೆ.

ಆದರೆ, ತಮ್ಮ ನಿರ್ಧಾರವನ್ನು ದೆಹಲಿ ವಿಧಾನಸಭೆಯ ಸಭಾಧ್ಯಕ್ಷ ರಾಮ್‌ ನಿವಾಸ್‌ ಗೋಯಲ್‌ ಮತ್ತು ಎಎಪಿ ಮುಖಂಡರು ಸಮರ್ಥಿಸಿಕೊಂಡಿದ್ದಾರೆ. ಟಿಪ್ಪು ಸುಲ್ತಾನ್‌ ಭಾವಚಿತ್ರ ದೇಶದ ಸಂವಿಧಾನದಲ್ಲೂ ಇದೆ ಎಂದು ಅವರು ಹೇಳಿದ್ದಾರೆ.

ಕಲಾವಿದ ಗುರು ದರ್ಶನ್‌ ಸಿಂಗ್‌ ಬಿಂಕಲ್‌ ಅವರು ರಚಿಸಿರುವ ಕಲಾಕೃತಿಗಳನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಗಣರಾಜ್ಯೋತ್ಸವ ದಿನದಂದು ವಿಧಾನಸಭೆಯಲ್ಲಿ ಅನಾವರಣಗೊಳಿಸಿದ್ದರು.

ಭಗತ್‌ಸಿಂಗ್‌, ಅಷ್ಫಾಖುಲ್ಲಾ ಖಾನ್‌, ಬಿರ್ಸಾ ಮುಂಡಾ, ಕಿತ್ತೂರು ರಾಣಿ ಚನ್ನಮ್ಮ, ಸುಭಾಷ್‌ ಚಂದ್ರ ಬೋಸ್‌ ಸೇರಿದಂತೆ ಹಲವರ ಭಾವಚಿತ್ರಗಳಿವೆ.

ಇತರೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳೊಂದಿಗೆ ವಿವಾದಾತ್ಮಕ ವ್ಯಕ್ತಿಗಳನ್ನು ಗೌರವಿಸುವುದು ಸರಿಯಲ್ಲ ಎಂದು ಬಿಜೆಪಿ ಶಾಸಕರಾದ ಒ.ಪಿ. ಶರ್ಮಾ ಮತ್ತು ಮಜೀಂದರ್‌ ಹೇಳಿದ್ದಾರೆ.

ದೆಹಲಿ ನಗರಕ್ಕೆ ಕೊಡುಗೆ ನೀಡದ ವ್ಯಕ್ತಿಯನ್ನು ಈ ರೀತಿ ಗೌರವಿಸುತ್ತಿರುವುದಾದರೂ ಏಕೆ ಎಂದು ಮಜೀಂದರ್‌ ಸಿಂಗ್‌ ಪ್ರಶ್ನಿಸಿದ್ದಾರೆ.

ಬಿಜೆಪಿ ಅಥವಾ ಆರ್‌ಎಸ್ಎಸ್‌ನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದವರ ಹೆಸರುಗಳನ್ನು ನೀಡುವಂತೆ ಅದರ ಮುಖಂಡರನ್ನು ಕೇಳಲಾಗಿತ್ತು. ಆದರೆ, ಅವರು ಯಾವುದೇ ಹೆಸರು ನೀಡಲಿಲ್ಲ ಎಂದು ಎಎಪಿ ಹೇಳಿದೆ.

* ಬಿಜೆಪಿ ಯಾವಾಗಲೂ ವಿವಾದ ಹುಟ್ಟುಹಾಕುವುದಕ್ಕೇ ಯತ್ನಿಸುತ್ತದೆ. ಸಂವಿಧಾನದ 144ನೇ ಪುಟದಲ್ಲಿ ಟಿಪ್ಪು ಸುಲ್ತಾನ್‌ ಚಿತ್ರ ಇದೆ

–ರಾಮ್‌ ನಿವಾಸ್‌ ಗೋಯಲ್‌,  ದೆಹಲಿ ವಿಧಾನಸಭೆ ಸಭಾಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT