ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗು, ನೆನಪು ಉಳಿಸಿಹೋದ ರಸಿಕ

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ಗಾಳಿ ಸೀಳಿಕೊಂಡು ಸಾಗುವ ಬೈಕ್‌ನ ವೇಗ, ಅದರ ಮೇಲೆ ಕುಳಿತ ಹೊಂಬಣ್ಣದ ನಾಯಕ, ‘ವಿರಹ ನೂರು ನೂರು ತರಹ...’ ಹಾಡು – ಇವೆಲ್ಲದರ ಜೊತೆಗೆ ಬೆಸೆದುಕೊಂಡ ಹೆಸರು ಕೂದುವಳ್ಳಿ ಚಂದ್ರಶೇಖರ್. ಆಪ್ತೇಷ್ಟರು ಚಂದ್ರು ಎಂದೇ ಕರೆಯುತ್ತಿದ್ದುದು. ‘ಎಡಕಲ್ಲು ಗುಡ್ಡದ ಮೇಲೆ ಚಂದ್ರು’ ಎಂದರೆ ಚಿತ್ರಾಭಿಮಾನಿಗಳಿಗೆ ಥಟ್ಟನೆ ಹೊಳೆದೀತು.

ಮಧ್ಯಮವರ್ಗದ ಕುಟುಂಬದ ಕುಡಿ ಚಂದ್ರು. ಶಿವಸ್ವಾಮಿ ಹಾಗೂ ರತ್ನಾ ದಂಪತಿಯ ಮಗನಾಗಿ ಹುಟ್ಟಿದ ಅವರು ಬೆಂಗಳೂರಿಗನಾಗಿಯೇ ಬೆಳೆದರು. ನ್ಯಾಷನಲ್‌ ಸ್ಕೂಲ್‌ನಲ್ಲಿ ಓದುತ್ತಿದ್ದಾಗ ಬಿ.ಎಸ್. ನಾರಾಯಣರಾವ್ ಎಂಬ ನಾಟಕದ ಮೇಷ್ಟ್ರು ಇದ್ದರು. ಸಿನಿಮಾಗಳಲ್ಲೂ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸು
ತ್ತಿದ್ದ ಅವರಿಗೆ ಚಿತ್ರರಂಗದವರ ಪರಿಚಯವಿತ್ತು. ‘ಗೆಜ್ಜೆಪೂಜೆ’ ಚಿತ್ರದಲ್ಲಿ ಅಭಿನಯಿಸಿದ್ದ ಆ ಮೇಷ್ಟ್ರಿಗೆ ಆರ್. ನಾಗೇಂದ್ರರಾಯರು ‘ಒಬ್ಬ ಒಳ್ಳೆಯ ಹುಡುಗ ಬೇಕಾಗಿದ್ದಾನೆ’ ಎಂದು ಕೇಳಿದರು. ಆಗ ಆಡಿಷನ್‌ಗೆ ಒಳಗಾದ ಹುಡುಗರಲ್ಲಿ ಬಾಲಕ ಚಂದ್ರು ಕೂಡ ಇದ್ದರು. ನಾರಾಯಣರಾವ್ ಹಾಗೂ ನಾಗೇಂದ್ರ
ರಾಯರು ಹುಡುಗನ ಮನೆಗೇ ಹೋಗಿ ಆಡಿಷನ್ ಮಾಡಿದ್ದರೆನ್ನುವುದು ವಿಶೇಷ. 1969ರಲ್ಲಿ ತೆರೆಕಂಡ ‘ನಮ್ಮ ಮಕ್ಕಳು’ ಸಿನಿಮಾದಲ್ಲಿ ಚಂದ್ರು ಬಾಲನಟ ಆದದ್ದು ಹಾಗೆ. ಆ ಸಿನಿಮಾದ ‘ನಿನ್ನೊಲುಮೆ ನಮಗಿರಲಿ ತಂದೆ ಕೈಹಿಡಿದು ನೀ ನಡೆಸು ಮುಂದೆ’ ಹಾಡು ಟೀವಿ ಪರದೆ ಮೇಲೆ ಬಂದಾಗಲೆಲ್ಲ ಮುದ್ದು ಮುಖದ ಚಂದ್ರು ನೆನಪಾಗದೇ ಇರಲಾರರು. ಆ ಹಾಡು ಕೆಲವು ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯೂ ಆಗಿತ್ತು.

ಆ ಕಾಲಘಟ್ಟದಲ್ಲಿ ಸಿನಿಮಾ ಅವಕಾಶಗಳೇನೂ ದಿಢೀರನೆ ಹುಡುಕಿಕೊಂಡು ಬರುತ್ತಿರಲಿಲ್ಲ. ಬಿ.ವಿ. ಕಾರಂತರು ಹಾಗೂ ಗಿರೀಶ ಕಾರ್ನಾಡರು ‘ವಂಶವೃಕ್ಷ’ (1973) ಚಿತ್ರ ರೂಪಿಸಿದಾಗ ಅದೇ ಹುಡುಗನಿಗೆ ಮತ್ತೊಮ್ಮೆ ತೆರೆಮೇಲೆ ಕಾಣಿಸಿಕೊಳ್ಳುವ ಯೋಗ.

‘ನಾಗರಹಾವು’ ಚಿತ್ರಕ್ಕೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಹೊಸ ನಾಯಕ ಬೇಕೆಂದಾಗ, ಆಡಿಷನ್‌ಗೆಂದು ಸಾಲುಗಟ್ಟಿ ನಿಂತ ತರುಣರಲ್ಲಿ ಚಂದ್ರು ಕೂಡ ಒಬ್ಬರಾಗಿದ್ದರು. ಆಗ ತಪ್ಪಿದ ಅವಕಾಶ ಆಮೇಲೆ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾ ಮೂಲಕ ಒಲಿಯಿತು. ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಚಂದ್ರು ಅವರಿಗೆ ವೈಎನ್‌ಕೆ ತರಹದ ಸಾಹಿತಿಗಳ ಒಡನಾಟವಿತ್ತು. ರಂಗಾಸಕ್ತಿ ಇತ್ತು. ಬಾಲ್ಯದಿಂದ ಏಕಪಾತ್ರಾಭಿನಯಗಳಿಂದಲೇ ಶಿಕ್ಷಕರ ಮನಗೆದ್ದಿದ್ದ ಅವರು ಒಳ್ಳೆಯ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ತಪ್ಪದೇ ನೋಡುತ್ತಿದ್ದರು.

ಒಮ್ಮೆ ಶ್ರೀನಿವಾಸ ಎಂಬ ಜ್ಯೋತಿಷಿಯೊಬ್ಬರು ಕೈ ನೋಡಿ, ‘ನೀನು ಬೇರೆ ದೇಶಕ್ಕೆ ಹೋಗುತ್ತೀಯೆ’ ಎಂದು ಭವಿಷ್ಯ ನುಡಿದರು. ಅದಾದ ಕೆಲವೇ ತಿಂಗಳಲ್ಲಿ ಸಿನಿಮಾ ಕಾರ್ಯಕ್ರಮದಲ್ಲೇ ಚಂದ್ರು ಒಬ್ಬ ಯುವತಿಯನ್ನು ಮೆಚ್ಚಿದರು. ಹೆಚ್ಚಿನ ಓದಿದಾಗಿ ಆ ಯುವತಿ ವಿದೇಶಕ್ಕೆ ಹಾರಿದಾಗ ತುಸು ಕಂಗಾಲಾದರು. ಪ್ರೇಮ ಗಟ್ಟಿಯಾಗಿತ್ತು. ನಾಲ್ಕು ವರ್ಷಗಳ ನಂತರ ಮತ್ತೆ ಅದೇ ಸಂಗಾತಿ ಸಿಕ್ಕಮೇಲೆ ಚಂದ್ರು ಗೃಹಸ್ಥರಾದದ್ದು. ಕೆನಡಾದಲ್ಲಿ ಕಂಪ್ಯೂಟರ್ ಕಂಪನಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವ ಪತ್ನಿ ಶೀಲಾ ಅವರನ್ನು ಕುರಿತು ಚಂದ್ರು ಸದಾ ಹೊಗಳಿಕೆಯ ಮಾತುಗಳನ್ನೇ ಆಡುತ್ತಿದ್ದರು. ಕೆನಡಾಗೆ ಹೋಗಿ ಪತ್ನಿಯ ಜತೆ ಅವರು ನೆಲೆಸಿದ ಮೇಲೆ ಸಿನಿಮಾ ಅಭಿನಯದಿಂದ ಕೆಲವು ವರ್ಷ ವಿಮುಖರಾದರು. ಕೆನಡಾದಲ್ಲಿನ ಇಂಡಿಯನ್ ಹೈಕಮಿಷನ್‌ನಲ್ಲಿ ವೀಸಾ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡರು. ಆಗೀಗ ಬಂದು ಚಿತ್ರಗಳಲ್ಲಿ ಅಭಿನಯಿಸಿ ಹೋಗುತ್ತಿದ್ದರಾದರೂ ನಟನಾಗಿ ಗ್ರಾಫ್ ಏರಿಸಿಕೊಳ್ಳಲು ಆಗಲಿಲ್ಲ.

ಹದಿನಾಲ್ಕು ವರ್ಷಗಳ ಹಿಂದೆ ಅವರು ನಿರ್ದೇಶಕನ ಟೋಪಿ ತೊಟ್ಟರು. ‘ಪೂರ್ವಾಪರ’ ಅವರ ಮಹತ್ವಾಕಾಂಕ್ಷೆಯ ಸಿನಿಮಾ. ಟೊರಾಂಟೊ ಚಿತ್ರೋತ್ಸವದಲ್ಲಿಯೂ ಅದು ಪ್ರದರ್ಶನಗೊಂಡಿತ್ತು. ಕನ್ನಡದವರೇ ಆದ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಅವರನ್ನು ಮಲಯಾಳಂ ಚಿತ್ರಲೋಕದಿಂದ ಇಲ್ಲಿಗೆ ಕರೆತಂದು, ಪರಿಚಯಿಸಿದ ಚಿತ್ರ ಅದು. ‘ಕೆಂಪಮ್ಮನ ಕೋರ್ಟ್ ಕೇಸ್’ ಅವರು ನಿರ್ದೇಶಿಸಿದ ಇನ್ನೊಂದು ಸಿನಿಮಾ. ಅದನ್ನು ತೆರೆಕಾಣಿಸುವ ಬಯಕೆ ಅವರಿಗೆ ಇತ್ತಾದರೂ ಸಾಧ್ಯವಾಗಿರಲಿಲ್ಲ. ಕಳೆದ ವಾರವಷ್ಟೆ ತೆರೆಕಂಡ ‘3 ಗಂಟೆ 30 ದಿನ 30 ಸೆಕೆಂಡ್’ ಅವರ ಅಭಿನಯದ ಕೊನೆಯ ಸಿನಿಮಾ.

ಹೋದ ವರ್ಷ ಜೂನ್‌ನಲ್ಲಿ ‘ಎಡಕಲ್ಲು ಗುಡ್ಡದ ಮೇಲೆ’ ಹೆಸರಿನದ್ದೇ ಮಕ್ಕಳ ಸಿನಿಮಾ ನಿರ್ದೇಶಿಸುವುದಾಗಿ ವಿವಿನ್ ಸೂರ್ಯ ಪ್ರಕಟಿಸಿದ್ದರು. ಅದರಲ್ಲಿ ಜಯಂತಿ, ಭಾರತಿ, ದತ್ತಣ್ಣ ಅವರೊಟ್ಟಿಗೆ ಚಂದ್ರು ಕೂಡ ನಟಿಸಲು ನಿಕ್ಕಿಯಾಗಿದ್ದರು.

ಮಗಳು ತಾನ್ಯ ಬೆಂಗಳೂರಿನಲ್ಲಿ ನೆಲೆಸಿದ್ದರಿಂದ ಆಗಾಗ ಇಲ್ಲಿಗೆ ಬರುತ್ತಿದ್ದ ಚಂದ್ರು, ಗೆಳೆಯರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು.

ಸಂಪತ್ತಿಗೆ ಸವಾಲ್, ಹಂಸಗೀತೆ, ರಾಜಾ ನನ್ನ ರಾಜಾ, ಮಾಗಿಯ ಕನಸು, ಶಂಕರ್ ಗುರು, ಮಾನಸ ಸರೋವರ, ಶಿವಲಿಂಗ, ಅಸ್ತಿತ್ವ, ಕಾರಂಜಿ– ಇವು ಚಂದ್ರು ನಟಿಸಿದ ಚಿತ್ರಪಟ್ಟಿಯಲ್ಲಿ ಕಾಣುವ ಪ್ರಮುಖ ಸಿನಿಮಾಗಳು. 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಸಹೃದಯಿ ನಟನೊಬ್ಬನ ಬದುಕಿನ ಪಯಣವೀಗ ಮುಗಿದಂತಾಗಿದೆ.

ಶಬರಿಮಲೆಗೆ ಹೋಗಿದ್ದು...

ನಮ್ಮದು 40 ವರ್ಷಗಳ ಸ್ನೇಹ. ಅವನು ಸಹೃದಯಿ. ಪುಟ್ಟಣ್ಣ ಅವರ ಕೈಗೆ ಸಿಕ್ಕು ಒಳ್ಳೆಯ ನಟನಾದ. ನಾನು, ಅವನು, ಶಿವಣ್ಣ (ಶಿವರಾಜ್‌ ಕುಮಾರ್) ಸ್ನೇಹಿತರ ಜತೆ ಮೂರು ಸಲ ಶಬರಿಮಲೆಗೆ ಹೋಗಿ ಬಂದಿದ್ದೆವು. ಆ ತಂಡದಲ್ಲಿ ಇದ್ದ ವಯಸ್ಸಾದವರೆಂದರೆ ನಾನು, ಅವನು ಹಾಗೂ ನಟ ಶಿವರಾಂ. ಖುಷಿ ಖುಷಿಯಾಗಿ ಇರುತ್ತಿದ್ದ ಅವನನ್ನು 15 ದಿನಗಳ ಹಿಂದೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ. ಆರೋಗ್ಯ1ದ ಸಮಸ್ಯೆಯೇ ಇರಲಿಲ್ಲ. ಈಗ ಸಾವಿನ ಸುದ್ದಿ ಕೇಳಿ ಆಶ್ಚರ್ಯವಾಯಿತು.

–ಜೈಜಗದೀಶ್, ನಟ

ಮೃದುಹೃದಯಿ ಅಂಕಲ್

ಚಂದ್ರು ಅಂಕಲ್ ನನ್ನ ಸಂಬಂಧಿ. ಶೀಲಾ ಆಂಟಿ (ಚಂದ್ರು ಪತ್ನಿ) ಅವರ ಮೂಲಕ ಬೆಳೆದ ಸಂಬಂಧ ಅದು. ನನಗೆ ಕನ್ನಡದಲ್ಲಿ ಹಲವು ಸಿನಿಮಾಗಳ ಅವಕಾಶ ಬಂದಿದ್ದರೂ ಒಪ್ಪಿಕೊಂಡಿರಲಿಲ್ಲ. ಅವರು ‘ಪೂರ್ವಾಪರ’ ಚಿತ್ರ ಮಾಡಿದಾಗ ಒಪ್ಪಿಕೊಂಡೆ. ಅವರು ಸದಾ ಹಸನ್ಮುಖಿಯಾಗಿರುತ್ತಿದ್ದರು. ಮೃದುಹೃದಯಿ. ಕಣ್ಣಿನಲ್ಲಿ ಮಾನವೀಯತೆಯ ಸೆಲೆ ಇರುತ್ತಿತ್ತು. ತಮಾಷೆ ಮಾಡುತ್ತಿದ್ದರು. ನನ್ನ ಎಷ್ಟೋ ನೃತ್ಯ ಕಾರ್ಯಕ್ರಮಗಳಿಗೆ ಆಹ್ವಾನ ನೀಡದಿದ್ದರೂ ಅವರೇ ಬಂದು ಕೂರುತ್ತಿದ್ದರು. ಅವರಿಗೆ ನೃತ್ಯವೆಂದರೆ ತುಂಬಾ ಇಷ್ಟವಿತ್ತು. ಮೂರು ತಿಂಗಳಿಗೊಮ್ಮೆಯಾದರೂ ಸುಮ್ಮನೆ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರ ಸಾವಿನ ಸುದ್ದಿ ಕೇಳಿ ಶಾಕ್ ಆಯಿತು.

–ಲಕ್ಷ್ಮೀ ಗೋಪಾಲಸ್ವಾಮಿ, ಬಹುಭಾಷಾ ನಟಿ

ಕೂದುವಳ್ಳಿ ಚಂದ್ರಶೇಖರ್‌ ನಿಧನ 

ಬೆಂಗಳೂರು: ಹಿರಿಯ ನಟ ಕೂದುವಳ್ಳಿ ಚಂದ್ರಶೇಖರ್ ಶನಿವಾರ ಬೆಳಿಗ್ಗೆ ಕೆನಡಾದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಶೀಲಾ, ಮಗಳು ತಾನ್ಯ ಮತ್ತು ತಾಯಿ ಇದ್ದಾರೆ.

ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಚಂದ್ರಶೇಖರ್‌, ವಿಷ್ಣುವರ್ಧನ್, ರಾಜಕುಮಾರ್‌ ಸೇರಿದಂತೆ ಹಲವು ನಟರೊಂದಿಗೆ ನಟಿಸಿದ್ದರು. ಅಂತ್ಯಕ್ರಿಯೆ ಕೆನಡಾದಲ್ಲಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT