7

ಚಾಮುಂಡಿ ಅವತಾರದಲ್ಲಿ ರೋಬೊ ಸ್ಪರ್ಧೆ

Published:
Updated:
ಚಾಮುಂಡಿ ಅವತಾರದಲ್ಲಿ ರೋಬೊ ಸ್ಪರ್ಧೆ

ಬೆಂಗಳೂರು: ನಿಗದಿತ ಪಥದಲ್ಲಿ ಸೈನಿಕರಂತೆ ಶಿಸ್ತುಬದ್ಧವಾಗಿ ಸಂಚರಿಸುತ್ತಿದ್ದ ಪುಟಾಣಿ ಯಂತ್ರಗಳು. ಚಾಮುಂಡಿ–ಮಹಿಷಾಸುರ ಸೇರಿದಂತೆ ವಿವಿಧ ವೇಷಭೂಷಣಗಳನ್ನು ತೊಟ್ಟು ಚಿಣ್ಣರ ನೃತ್ಯ ಅನುಕರಿಸಿ ಹೆಜ್ಜೆ ಹಾಕುತ್ತಿದ್ದ ರೋಬೊಟ್‌ಗಳು...

ಇಂಡಿಯನ್ ರೋಬೊ ಕಪ್ ಜೂನಿಯರ್ ಫೌಂಡೇಷನ್ ವತಿಯಿಂದ ನಗರದ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ರೋಬೊ ಕಪ್–2018ರ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಕಂಡ ದೃಶ್ಯಗಳಿವು.

ಕಟ್ಟಡಗಳ ಒಳಗೆ ಕಾರ್ಯಾಚರಣೆ, ವೇದಿಕೆ ಮೇಲೆ ನೃತ್ಯ ಹಾಗೂ ನಿರ್ದಿಷ್ಟ ಪಥದೊಳಗೆ ಸಂಚಾರ ಎಂಬ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಚಿಕ್ಕಬಳ್ಳಾಪುರದ ಬಿಜಿಎಸ್ ವರ್ಲ್ಡ್ ಸ್ಕೂಲ್‌ನ ವಿದ್ಯಾರ್ಥಿಗಳ ‘ಚಾಮುಂಡೇಶ್ವರಿ–ಮಹಿಷಾಸುರ’, ‘ಕಥಕ್ಕಳಿ’ ಹಾಗೂ ಬೆಂಗಳೂರಿನ ಆರ್ಮಿ ‍ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ‘ದಾಂಡಿಯಾ’ ರೂಪದ ರೋಬೊಟ್‌ಗಳು ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದವು. ಮನೆ ಕೆಲಸ ಮಾಡುವ, ಮಕ್ಕಳ ಜತೆ ಆಟವಾಡುವ ಹಾಗೂ ಸಂಕಷ್ಟದಲ್ಲಿರುವ ಜನರನ್ನು ಪಾರು ಮಾಡುವ ಹಾಗೂ ಎತ್ತರದ ಶಿಖರಗಳನ್ನು ಏರುವ ರೋಬೊಟ್‌ಗಳು ಇದ್ದವು.

ಇಲ್ಲಿ ವಿಜೇತರಾಗುವ ಮೂರು ತಂಡಗಳು ಕೆನಡಾದಲ್ಲಿ ಜೂನ್‌ನಲ್ಲಿ ನಡೆಯಲಿರುವ ‘ಅಂತರರಾಷ್ಟ್ರೀಯ ಮಟ್ಟದ ರೋಬೊ ಜೂನಿಯರ್ ಕಪ್‌’ ಸ್ಪರ್ಧೆಯಲ್ಲಿ ಭಾಗವಹಿಸಲಿವೆ.

ವಿಭಿನ್ನತೆಗಾಗಿ ಚಾಮುಂಡೇಶ್ವರಿ ವೇಷ: ‘ವಿಭಿನ್ನತೆ ಇರಲಿ ಎಂದು ನಾವು ಅಭಿವೃದ್ಧಿ ಪಡಿಸಿದ ರೊಬೋಟ್‌ಗಳಿಗೆ ‘ಚಾಮುಂಡೇಶ್ವರಿ–ಮಹಿಷಾಸುರ ಮರ್ದಿನಿ’ಯ ಕಲಾತ್ಮಕ ಸ್ಪರ್ಶ ನೀಡಿದೆವು’ ಎಂದು ಬಿಜಿಎಸ್ ವರ್ಲ್ಡ್ ಸ್ಕೂಲ್‌ನ ವಿದ್ಯಾರ್ಥಿಗಳಾದ ಗೌತಮ್, ಕಾರ್ತಿಕ್, ಕೀರ್ತಿನಾರಾಯಣ್ ಹಾಗೂ ಜೀವನ್ ಹೇಳಿದರು. ಶಿಕ್ಷಕರಾದ ಶ್ವೇತಾ, ಸುಭಾಷ್ ಹಾಗೂ ಧನಲಕ್ಷ್ಮಿ ಮಾರ್ಗದರ್ಶನಲ್ಲಿ ಸಿದ್ದಪಡಿಸಿದೆವು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry