‘ಜೀತಗಾರನ ಮಗ; ಹೆಮ್ಮೆ ಇದೆ’

7

‘ಜೀತಗಾರನ ಮಗ; ಹೆಮ್ಮೆ ಇದೆ’

Published:
Updated:
‘ಜೀತಗಾರನ ಮಗ; ಹೆಮ್ಮೆ ಇದೆ’

ಬೆಂಗಳೂರು: ‘ನಾನು ತಳವಾರ ಕುಟುಂಬದಿಂದ ಬಂದವನು, ಅಜ್ಜ ಊರ ತಳವಾರನಾಗಿದ್ದ. ಅಪ್ಪ, ಚಿಕ್ಕಪ್ಪ ಜೀತಗಾರರಾಗಿದ್ದರು. ಜೀತಗಾರನ ಮಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಇದರಲ್ಲಿ ನನಗೆ ಯಾವುದೇ ಸಂಕೋಚ, ಮುಜುಗರವೂ ಇಲ್ಲ’

–ಇದು ಕವಿ ಹಾಗೂ ರಾಜಕಾರಣಿ ಡಾ.ಎಲ್‌.ಹನುಮಂತಯ್ಯ ಅವರು ಮನಬಿಚ್ಚಿ ಆಡಿದ ಮಾತು.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ದಲ್ಲಿ ಮಾತನಾಡಿದರು.

'ನಮ್ಮ ಕುಟುಂಬ ಹುಲ್ಲು ಗುಡಿಸಲಿನಲ್ಲಿ ವಾಸವಿತ್ತು. ಯುಗಾದಿ, ಮಹಾನವಮಿ ಹಾಗೂ ಮದುವೆಯಲ್ಲಿ ಮಾತ್ರ ಅನ್ನದ ಮುಖ ನೋಡುವ ಪರಿಸ್ಥಿತಿ ಇತ್ತು. ಮನೆಗೆಹೆಂಚು ಹಾಕಿಸಿಕೊಂಡಿದ್ದು ಸರ್ಕಾರದ ಸಹಾಯಧನ ಮತ್ತು ಪ್ರೌಢಶಾಲೆಯಲ್ಲಿ ದೊರೆತ ₹150 ವಿದ್ಯಾರ್ಥಿ ವೇತನದಲ್ಲಿ. 1973ರಲ್ಲಿ ತಾಯಿಯ ಕಿವಿಯೋಲೆ ಅಡವಿಟ್ಟು ಹಾಸ್ಟೆಲ್‌ ಪ್ರವೇಶ ಶುಲ್ಕ ₹100 ಕಟ್ಟಿದ್ದೆ’ ಎಂದು ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

‘ಸಾಹಿತಿ ಹಾಗೂ ಕವಿ ಆಗುವುದೇ ಶ್ರೇಷ್ಠ ಎನ್ನುವ ಮೌಲ್ಯ ನಂಬಿದ್ದ ಕಾಲಘಟ್ಟದಲ್ಲಿ ಬೆಳೆದುಬಂದವರು ನಾವು. ಆದರೆ, ಇಂದು ಕವಿ, ಸಾಹಿತಿ ಎಂದರೆ ಸಮಾಜ ನೋಡುವ ದೃಷ್ಟಿಕೋನವೇ ಬದಲಾಗಿದೆ. ಮೌಲ್ಯಗಳ ಪಲ್ಲಟವಾಗಿದೆ’ ಎಂದು ಹೇಳಿದರು.

ಎಂಎಲ್‌ಎ ಟಿಕೆಟ್ ಕೇಳಿದ್ದೇನೆ

‘ಬ್ಯಾಂಕ್‌ ನೌಕರಿಯಿಂದ 43ನೇ ವಯಸ್ಸಿನಲ್ಲಿ ಸ್ವಯಂನಿವೃತ್ತಿ ಪಡೆದೆ. ವಿಧಾನ ಪರಿಷತ್‌ಗೆ ಎಸ್‌.ಎಂ.ಕೃಷ್ಣ ಅವರು ಮರುದಿನವೇ ಹೆಸರು ಶಿಫಾರಸು ಮಾಡಿದರು. 6 ವರ್ಷಗಳು ಪರಿಷತ್‌ನಲ್ಲಿ ಮಾಡಿದ ಕೆಲಸ ತೃಪ್ತಿ ನೀಡಿದೆ. ಸ್ವತಂತ್ರ ಸದಸ್ಯನೆಂದೇ ಗುರುತಿಸಿಕೊಳ್ಳುತ್ತಿದ್ದೆ. ಆದರೆ, ಡಿ.ಕೆ.ಶಿವಕುಮಾರ್‌ ಎಲ್ಲ ಕಡೆಯೂ ಕಾಂಗ್ರೆಸಿನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದರು. ಇದುವರೆಗೆ ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗೂ ನ್ಯಾಯ ಸಲ್ಲಿಸಿದ್ದೇನೆ. ಈಗ ನೆಲಮಂಗಲದಿಂದ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್‌ ಕೇಳಿದ್ದೇನೆ. ಪ್ರಮುಖರು ನೋಡೋಣ ಎಂದಿದ್ದಾರೆ’ ಎಂದು ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry