ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಬೇಗೂರು ರಸ್ತೆ ವಿಸ್ತರಣೆ

7

ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಬೇಗೂರು ರಸ್ತೆ ವಿಸ್ತರಣೆ

Published:
Updated:
ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಬೇಗೂರು ರಸ್ತೆ ವಿಸ್ತರಣೆ

ಬೆಂಗಳೂರು: ವಾಹನ ದಟ್ಟಣೆಯಿಂದ ಕೂಡಿರುವ ಬೇಗೂರು ರಸ್ತೆಯನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ವಿಸ್ತರಿಸಲು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗ ಮುಂದಾಗಿದ್ದು, ಇದರ ಪ್ರಸ್ತಾವವನ್ನು ತಾಂತ್ರಿಕ ಸಲಹಾ ಸಮಿತಿಗೆ ಸಲ್ಲಿಸಿದೆ.

ಈ ರಸ್ತೆಯನ್ನು ವಿಸ್ತರಿಸಬೇಕು ಎಂದು ಸ್ಥಳೀಯರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಬೇಗೂರು ರಸ್ತೆಯನ್ನು 24 ಮೀಟರ್‌ಗೆ ವಿಸ್ತರಿಸುವ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪರಿಷ್ಕೃತ ಮಹಾಯೋಜನೆ 2015ರಲ್ಲೂ ಪ್ರಸ್ತಾಪಿಸಲಾಗಿತ್ತು.

ಹೀಗಾಗಿ, ಹೊಸೂರು ರಸ್ತೆಯ ಬೊಮ್ಮನಹಳ್ಳಿ ಸಿಗ್ನಲ್‌ನಿಂದ ಹೊಂಗಸಂದ್ರ ಮಾರ್ಗವಾಗಿ ಬೇಗೂರು ಗ್ರಾಮದವರೆಗಿನ ರಸ್ತೆಯನ್ನು ಅಗಲ ಮಾಡಲು 2017–18ನೇ ಸಾಲಿನಲ್ಲಿ ₹15 ಕೋಟಿ ಮೀಸಲಿಡಲಾಗಿತ್ತು.

ಈ ರಸ್ತೆಯು ಸದ್ಯ 40ರಿಂದ 50 ಅಡಿ ಇದೆ. ಅದನ್ನು 80 ಅಡಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ರಸ್ತೆ ಅಗಲ ಕಾಮಗಾರಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಟೆಂಡರ್‌ ಕರೆಯಬೇಕಿದೆ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಸ್ತೆ ಮಧ್ಯೆ 1ರಿಂದ 1.5 ಮೀಟರ್‌ ಅಗಲದ ವಿಭಜಕ ನಿರ್ಮಿಸಲಾಗುತ್ತದೆ. ಅದರ ಎಡ ಹಾಗೂ ಬಲ ಭಾಗದಲ್ಲಿ ತಲಾ 8 ಮೀಟರ್‌ ಅಗಲದ ರಸ್ತೆ ಇರುತ್ತದೆ. ಒಳಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತದೆ. ಪಾದಚಾರಿ ಮಾರ್ಗದಲ್ಲಿ ಒಎಫ್‌ಸಿ, ಕುಡಿಯುವ ನೀರಿನ ಕೊಳವೆಗಳನ್ನು ಅಳವಡಿಸಲಾಗುತ್ತದೆ ಎಂದು ವಿವರಿಸಿದರು.

ಈ ರಸ್ತೆ ಬೊಮ್ಮನಹಳ್ಳಿ, ಹೊಂಗಸಂದ್ರ, ಕೋಡಿಚಿಕ್ಕನಳ್ಳಿ, ದೇವರ ಚಿಕ್ಕನಹಳ್ಳಿ, ಮೈಕೊ ಬಡಾವಣೆ, ವಿಶ್ವಪ್ರಿಯ ಬಡಾವಣೆ, ಜಿಗಣಿ, ಆನೇಕಲ್, ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಕಿರಿದಾಗಿರುವುದರಿಂದ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತವೆ. ದಟ್ಟಣೆ ಅವಧಿಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ದುಸ್ತರ. ರಸ್ತೆ ವಿಸ್ತರಣೆ ಕಾಮಗಾರಿಯನ್ನು ತ್ವರಿಗತಿಯಲ್ಲಿ ಕೈಗೊಳ್ಳಬೇಕು ಎಂದು ವಿಶ್ವಪ್ರಿಯ ಬಡಾವಣೆಯ ನಿವಾಸಿ ಕೆ.ಗಿರೀಶ್‌ ಒತ್ತಾಯಿಸಿದರು.

‘ಟಿಡಿಆರ್ ಪಡೆಯಲು ಮಾಲೀಕರ ಆಸಕ್ತಿ’

ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯನ್ನು ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ನಿಯಮಾವಳಿ ಪ್ರಕಾರ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸೋಮಶೇಖರ್‌ ತಿಳಿಸಿದರು.

ಅಭಿವೃದ್ಧಿ ಹಕ್ಕು ಬದಲಿಗೆ ಪರಿಹಾರ ನೀಡಬೇಕು ಎಂದು ಕೆಲವರು ಒತ್ತಾಯಿಸಿದ್ದರು. ಟಿಡಿಆರ್‌ ಪಡೆಯಲು ಭೂಮಾಲೀಕರನ್ನು ಒಪ್ಪಿಸುವುದಾಗಿ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಶಾಸಕರಿಗೆ ಸೇರಿದ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಬೇಕಿದೆ. ಟಿಡಿಆರ್‌ ಪಡೆಯಲು ಅವರು ಉತ್ಸುಕರಾಗಿದ್ದು, ಈ ಬಗ್ಗೆ ಬಹಿರಂಗವಾಗಿ ಘೋಷಿಸಿದ್ದಾರೆ.

ಅಲ್ಲದೆ, ಈ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ಗಮನಿಸಿರುವ ಭೂಮಾಲೀಕರು ಅಭಿವೃದ್ಧಿ ಹಕ್ಕು ಪಡೆಯಲು ಆಸಕ್ತಿ ತೋರಿಸಿದ್ದಾರೆ ಎಂದರು.

15 ವರ್ಷ ಹಳೆಯ ಪ್ರಸ್ತಾವ

ಜಿಲ್ಲಾಧಿಕಾರಿಯಾಗಿದ್ದ ಶಂಕರಲಿಂಗೇಗೌಡ ಅವರು ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ 15 ವರ್ಷಗಳ ಹಿಂದೆ ಪ್ರಸ್ತಾವ ಸಲ್ಲಿಸಿದ್ದರು. 2011ರಲ್ಲಿ ನಡೆದ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ನಡೆದಿತ್ತು. ಪಾಲಿಕೆಯ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ್ದರಿಂದ ಯೋಜನೆಯು ನನೆಗುದಿಗೆ ಬಿದ್ದಿತ್ತು.

ರಸ್ತೆ ವಿಸ್ತರಣೆಗೆ ಅಗತ್ಯ ಇರುವ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಟಿಡಿಆರ್ ನೀಡಲು ಬಿಬಿಎಂಪಿ ಮುಂದಾಗಿತ್ತು. ಆದರೆ, ಟಿಡಿಆರ್‌ ಮೌಲ್ಯ ಕಡಿಮೆ ಇದ್ದಿದ್ದರಿಂದ ಭೂಮಿಯ ಮಾಲೀಕರು ಜಾಗ ಬಿಟ್ಟುಕೊಡಲು ಹಿಂದೇಟು ಹಾಕಿದ್ದರು. ಬಳಿಕ ಆ ಮೌಲ್ಯವನ್ನು 1.5ರಿಂದ 2.5ಕ್ಕೆ ಹೆಚ್ಚಿಸಿದ್ದರಿಂದ ಮಾಲೀಕರು ಆಸಕ್ತಿ ತೋರಿಸಿದ್ದರು.

ಸ್ವಾಧೀನ ಪಡಿಸಿಕೊಳ್ಳಬೇಕಿದ್ದ ಭೂಮಿಯ ಪೈಕಿ ಶೇ 75ರಷ್ಟು ಆಸ್ತಿಗಳು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರಿಗೆ ಸೇರಿವೆ. ಹೀಗಾಗಿ ಅವರು ರಸ್ತೆ ವಿಸ್ತರಣೆಗೆ ಬಿಡುತ್ತಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ಅಂಕಿ–ಅಂಶ

* ಬೊಮ್ಮನಹಳ್ಳಿ ಸಿಗ್ನಲ್‌ನಿಂದ ಬೇಗೂರು ಗ್ರಾಮದವರೆಗಿನ ರಸ್ತೆ ಉದ್ದ 4.34 ಕಿ.ಮೀ.

* ರಸ್ತೆ ವಿಸ್ತರಣೆಯ ಅಂದಾಜು ವೆಚ್ಚ ₹60 ಕೋಟಿ

* ಸ್ವಾಧೀನ ಪಡಿಸಿಕೊಳ್ಳಬೇಕಿರುವ ಭೂಮಿ 32 ಸಾವಿರ ಚ.ಮೀ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry