ಜಲಸಸ್ಯದಿಂದ ಕೊಳಚೆ ನೀರು ಶುದ್ಧೀಕರಣ!

7
ಹೆಸರಘಟ್ಟ ಕೆರೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿಯುವ ಮಾರ್ಗದಲ್ಲಿ ಯೋಜನೆ ಅನುಷ್ಠಾನ

ಜಲಸಸ್ಯದಿಂದ ಕೊಳಚೆ ನೀರು ಶುದ್ಧೀಕರಣ!

Published:
Updated:
ಜಲಸಸ್ಯದಿಂದ ಕೊಳಚೆ ನೀರು ಶುದ್ಧೀಕರಣ!

ಬೆಂಗಳೂರು: ಅರ್ಕಾವತಿ ನದಿ ಪುನಶ್ಚೇತನದ ಭಾಗವಾಗಿ ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುವ ಕೊಳಚೆ ನೀರನ್ನು ನೈಸರ್ಗಿಕ ಜೈವಿಕ ವ್ಯವಸ್ಥೆ (ಎನ್‌ಬಿಎಸ್‌) ಮೂಲಕ ಶುದ್ಧೀಕರಿಸುವ ಕೆಲಸ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ.

‘ತಜ್ಞ ಗುತ್ತಿಗೆದಾರರಿಂದ ಟೆಂಡರ್‌ ಆಹ್ವಾನಿಸಿದ್ದೆವು. ಕಳೆದ ವಾರ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡಿದ್ದು, ಹೈದರಾಬಾದ್‌ನ ಅಕಿಲ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಆಯ್ಕೆಯಾಗಿದೆ. ₹11.49 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ (ಕಾವೇರಿ ವಿಭಾಗ) ಡಾ.ಪಿ.ಎನ್‌.ರವೀಂದ್ರ ತಿಳಿಸಿದರು.

ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿಗೆ ನೀರು ಹರಿಯುವ 1.2 ಕಿ.ಮೀ ಮಾರ್ಗದಲ್ಲಿ 800 ಮೀಟರ್‌ ಉದ್ದದಲ್ಲಿ ಜಲ ಸಸ್ಯಗಳನ್ನು (ರೀಡ್‌) ಬೆಳೆಸಿ ನೈಸರ್ಗಿಕವಾಗಿ ನೀರನ್ನು ಶುದ್ಧೀಕರಿಸುತ್ತೇವೆ. ಇದರಿಂದ ಶೇ 85ರಷ್ಟು ಪ್ರಮಾಣದ ನೀರು ಶುದ್ಧಿಯಾಗುತ್ತದೆ. ಹೈದರಾಬಾದ್ ಬಳಿಯ ಹುಸೇನ್ ಸಾಗರ್‌ ಜಲಾಶಯದ ಬಳಿ ಈ ಪದ್ಧತಿ ಮೂಲಕ ನೀರು ಶುದ್ಧೀಕರಿಸಲಾಗಿದೆ ಎಂದರು.

‘ಎತ್ತಿನಹೊಳೆ ಯೋಜನೆಯಿಂದ ಬರುವ 1.7 ಟಿಎಂಸಿ ಅಡಿ ನೀರನ್ನು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಶೇಖರಿಸಲು ನಿರ್ಧರಿಸಲಾಗಿದೆ. ಸದ್ಯ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಮಲ್ಲೇಶ್ವರದ ನೀರು ಪರೀಕ್ಷಾ ಕೇಂದ್ರ ವರದಿ ನೀಡಿದೆ. ಇನ್ನು ಮುಂದೆ ಅದಕ್ಕೆ ತ್ಯಾಜ್ಯ ನೀರು ಸೇರದಂತೆ ತಡೆಯಲು ಇದು ನೆರವಾಗುತ್ತದೆ’ ಎಂದು ವಿವರಿಸಿದರು.

ಪ್ರತಿನಿತ್ಯ ಹರಿಯುತ್ತಿದೆ ತ್ಯಾಜ್ಯ: ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿಗೆ ನಿತ್ಯ ಕೊಳಚೆ ನೀರು ಹರಿಯುತ್ತಿದೆ. ಯಶವಂತಪುರ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದಿಂದ ಸುಮಾರು 80 ಲಕ್ಷ ಲೀಟರ್‌ ಕೊಳಚೆ ನೀರು ಜಲಾಶಯಕ್ಕೆ ಸೇರುತ್ತಿದೆ.

ಶುದ್ಧೀಕರಣ ಹೇಗಾಗುತ್ತದೆ?: ಮರಳು, ಮಣ್ಣಿನಡಿ ಅಂತರ್ಜಲ ಮರುಪೂರಣದ ವೇಳೆ ಸಸ್ಯಗಳ ಮೂಲಕ ನೀರು ನೈಸರ್ಗಿಕವಾಗಿ ಶುದ್ಧಿಗೊಳ್ಳುವ ವಿಧಾನವೇ ಇಲ್ಲಿಯೂ ಅನ್ವಯವಾಗುತ್ತದೆ. ಇಲ್ಲಿ ಬೆಳೆಯಲಾಗುವ ಜಲಸಸ್ಯ ನೀರಿನಲ್ಲಿರುವ ನೈಟ್ರೇಟ್‌, ರಂಜಕವನ್ನು ಹೀರಿಕೊಂಡು ನೀರನ್ನು ಕಲ್ಮಷಗಳಿಂದ ಮುಕ್ತಗೊಳಿಸುತ್ತದೆ.

‘ಸಸ್ಯಗಳನ್ನು ಬೆಳೆಸುವ ಮೊದಲು ಪ್ರವಾಹ ತಡೆಯುವ ದ್ವಾರಗಳನ್ನು ನಿರ್ಮಿಸಿ ಗಿಡಗಳ ಮಧ್ಯದಿಂದ ನೀರು ಹರಿಯುವ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ’ ಎಂದು ರವೀಂದ್ರ ಮಾಹಿತಿ ನೀಡಿದರು.

ಹೀಗಿದೆ ರೀಡ್‌ ಸಸ್ಯ

ಇದು ಅಗಲ ಎಲೆಯ ಸಸ್ಯ. 5 ಅಡಿಯಿಂದ 16.5 ಅಡಿ ಎತ್ತರ ಬೆಳೆಯುತ್ತದೆ. ನಯವಾದ ಕಾಂಡ ಹೊಂದಿದೆ. ಈ ವರ್ಗಕ್ಕೆ ಸೇರುವ ಇತರೆ ಸಸ್ಯಗಳೆಂದರೆ, ದೈತ್ಯ ರೀಡ್, ಸಮುದ್ರ ರೀಡ್‌, ಬ್ಲೂಜಾಯಿಂಟ್‌.

ಅರ್ಕಾವತಿ ಹರಿವು

ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿಯು ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ರಾಮನಗರ, ಕನಕಪುರ ಮೂಲಕ ತಮಿಳುನಾಡಿನ ಗಡಿ ಮೇಕೆದಾಟು ಬಳಿ ಕಾವೇರಿ ನದಿಯಲ್ಲಿ ಸಂಗಮಗೊಳ್ಳುತ್ತದೆ.

ಅರ್ಕಾವತಿ ನದಿಗೆ ಕುಮುದ್ವತಿ, ವೃಷಭಾವತಿ, ಸುವರ್ಣಮುಖಿ, ಕುಟ್ಟೆ ಹೊಳೆ ಉಪನದಿಗಳಿವೆ. ಅರ್ಕಾವತಿ ನದಿಪಾತ್ರ ನಂದಿ ತಪ್ಪಲು ಪ್ರದೇಶದಿಂದ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೆಸರಘಟ್ಟದ ಮಾರ್ಗವಾಗಿ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೂ 60 ಕಿ.ಮೀ ವ್ಯಾಪ್ತಿಯಲ್ಲಿದೆ.

‘ಸಂರಕ್ಷಣೆಗೆ ಆದ್ಯತೆ ನೀಡಿ’

‘ಹೆಸರಘಟ್ಟ ಕೆರೆ ಸಂರಕ್ಷಣೆಗೆ ಮೊದಲು ಆದ್ಯತೆ ನೀಡಬೇಕು’ ಎಂದು ಪರಿಸರ ತಜ್ಞ ಅ.ನ.ಯಲ್ಲಪ್ಪ ರೆಡ್ಡಿ ಸಲಹೆ ನೀಡಿದರು.

ನೈಸರ್ಗಿಕ ಜೈವಿಕ ವ್ಯವಸ್ಥೆಯಡಿ ಗಿಡಗಳನ್ನು ಬೆಳೆಸಲು ಯೋಜನೆ ರೂಪಿಸುವುದಕ್ಕಿಂತ ನದಿ ಜಲಾನಯನ ಪ್ರದೇಶದ ಪರಿಸರ ಸಂರಕ್ಷಿಸಿದರೆ ನೈಸರ್ಗಿಕವಾಗಿ ಜೌಗು ಪ್ರದೇಶಗಳಲ್ಲಿ ಬೆಳೆಯುವ ಗಿಡಗಳೇ ನೀರನ್ನು ಶುದ್ಧೀಕರಿಸುತ್ತವೆ ಎಂದು ತಿಳಿಸಿದರು.

ಕೆಲವು ವರ್ಷಗಳ ಹಿಂದಿನ ವರೆಗೂ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರಿಗೆ ನೀರು ಒದಗಿಸಲಾಗುತ್ತಿತ್ತು. ಕಲ್ಲು ಹಾಗೂ ಮರಳು ಗಣಿಗಾರಿಕೆಯಿಂದ ಅರ್ಕಾವತಿ ನದಿ ಬತ್ತಿಹೋಗಿದ್ದು, ಸುತ್ತಲಿದ್ದ ಸಸ್ಯರಾಶಿಯೂ ಮಾಯವಾಗಿವೆ ಎಂದರು.

 ಮುಖ್ಯಾಂಶಗಳು

* ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 3.345 ಟಿಎಂಸಿ ಅಡಿ

* 1998ರಿಂದ ಇಲ್ಲಿಯವರೆಗೆ ನೀರು ಗರಿಷ್ಟ ಮಟ್ಟ (74 ಅಡಿ) ತಲುಪಿಲ್ಲ

* 2017ರಲ್ಲಿ 68 ಅಡಿ ನೀರು ಬಂದಿದೆ

* ನೀರಿನಲ್ಲಿ ಸದ್ಯ ಬಯೊ ಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌ (ಬಿಒಡಿ) ಪ್ರಮಾಣ ಲೀಟರ್‌ಗೆ 60 ರಿಂದ 85 ಮಿಲಿಗ್ರಾಂ ಇದೆ

* ಸಸ್ಯಗಳ ಮೂಲಕ ಶುದ್ಧೀಕರಣಗೊಂಡ ನಂತರ ಬಿಒಡಿ ಪ್ರಮಾಣ ಲೀಟರ್‌ಗೆ 2 ಮಿಲಿಗ್ರಾಂಕ್ಕಿಂತ ಕಡಿಮೆಯಾಗುತ್ತದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry