ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡದಿಂದ ತಳ್ಳಿ ಕೊಂದವರ ಸೆರೆ

Last Updated 27 ಜನವರಿ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು: ಹನುಮಂತನಗರದ ನಾಗೇಂದ್ರ ಬ್ಲಾಕ್‌ನಲ್ಲಿ ಜ.19ರ ರಾತ್ರಿ ಆಂಬುಲೆನ್ಸ್ ಚಾಲಕ ದೇವರಾಜ್ ಅವರನ್ನು ಕಟ್ಟಡದಿಂದ ತಳ್ಳಿ ಕೊಲೆಗೈದಿದ್ದ ಸಿವಿಲ್ ಎಂಜಿನಿಯರ್ ಸೇರಿ ಇಬ್ಬರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ರಾಜರಾಜೇಶ್ವರಿನಗರದ ಜಿ.ಸುರೇಶ್ (40) ಹಾಗೂ ಮೈಸೂರು ರಸ್ತೆ ಟಿಂಬರ್ ಯಾರ್ಡ್ ಲೇಔಟ್‌ನ ಗೋಪಾಲ್ (48) ಬಂಧಿತರು. ಆ ದಿನ ರಾತ್ರಿ ದೇವರಾಜ್ ಕಟ್ಟಡದ ಮೊದಲ ಮಹಡಿಯಿಂದ ರಸ್ತೆಗೆ ಕಸ ಬಿಸಾಡಿದ್ದರು. ಈ ವಿಚಾರಕ್ಕೆ ಜಗಳವಾಗಿ ಆರೋಪಿಗಳು ಅವರನ್ನು ಕೆಳಗೆ ತಳ್ಳಿ ಹತ್ಯೆಗೈದಿದ್ದರು.

‘ಕೃತ್ಯದ ನಂತರ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದರು. ಆ ದೃಶ್ಯ ಸಮೀಪದ ಅಂಗಡಿಯೊಂದರ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸ್ಥಳೀಯರು ಆ ಬೈಕ್‌ನ ನೋಂದಣಿ ಸಂಖ್ಯೆಯನ್ನೂ ನೀಡಿದರು. ಈ ಸುಳಿವು ಆಧರಿಸಿ ಅವರನ್ನು ಪತ್ತೆ ಮಾಡಲಾಯಿತು’ ಎಂದು ಪೊಲೀಸರು ಹೇಳಿದರು.

ನಶೆಯಲ್ಲಿ...  ಮೊದಲು ಶ್ರೀನಗರದಲ್ಲಿ ನೆಲೆಸಿದ್ದ ಸಿವಿಲ್ ಎಂಜಿನಿಯರ್ ಸುರೇಶ್, ನಾಲ್ಕು ತಿಂಗಳ ಹಿಂದಷ್ಟೇ ರಾಜರಾಜೇಶ್ವರಿನಗರಕ್ಕೆ ವಾಸ್ತವ್ಯ ಬದಲಿ ಸಿದ್ದರು. ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಗೋಪಾಲ್ ಸಹ ಆರಂಭದಲ್ಲಿ ಶ್ರೀನಗರದಲ್ಲೇ ನೆಲೆಸಿದ್ದರು. ಹೀಗಾಗಿ, ಇಬ್ಬರೂ 15 ವರ್ಷಗಳಿಂದ ಪರಿಚಿತರು.

ಜ.19ರಂದು ಸ್ನೇಹಿತರು ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಔತಣ ಕೂಟಕ್ಕೆ ಹೊರಟಿದ್ದ ಆರೋಪಿಗಳು, ಮೊದಲು ಶ್ರೀನಗರಕ್ಕೆ ತೆರಳಿದ್ದರು. ದೇವರಾಜ್ ಅವರ ಮನೆ ಹತ್ತಿರವೇ ತಮ್ಮ ಬೈಕ್ ನಿಲ್ಲಿಸಿ, ಅಲ್ಲಿಂದ ಪರಿಚಿತರ ಕಾರಿನಲ್ಲಿ ಔತಣಕೂಟಕ್ಕೆ ತೆರಳಿದ್ದರು.

ಪಾರ್ಟಿ ಮುಗಿಸಿ ರಾತ್ರಿ 10.30ರ ಸುಮಾರಿಗೆ ಅವರು ಬೈಕ್‌ನ ಬಳಿ ಬರುತ್ತಿದ್ದಾಗ, ದೇವರಾಜ್ ಕಸದ ಕವರ್‌ಗಳನ್ನು ಮಹಡಿಯಿಂದಲೇ ರಸ್ತೆಗೆ ಎಸೆದಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳು, ‘ಅಲ್ಲಿಂದಲೇ ಕಸ ಎಸೆಯುತ್ತೀಯಲ್ಲ. ಸ್ವಲ್ಪವೂ ಬುದ್ಧಿ ಇಲ್ವಾ’ ಎಂದಿದ್ದರು. ಅದಕ್ಕೆ ಪ್ರತಿಯಾಗಿ ದೇವರಾಜ್ ಸಹ ಬೈದಿದ್ದರು.

ವಾಗ್ವಾದ ಜೋರಾದಾಗ ಇಬ್ಬರೂ ಮಹಡಿಗೆ ತೆರಳಿ ದೇವರಾಜ್ ಜತೆ ಕೈ ಮಿಲಾಯಿಸಿದ್ದರು. ಆಗ ಕಟ್ಟಡದ ಎಲ್ಲ ನಿವಾಸಿಗಳೂ ಆರೋಪಿಗಳ ವಿರುದ್ಧ ತಿರುಗಿ ಬಿದ್ದಿದ್ದರು. ಮದ್ಯದ ಅಮಲಿನಲ್ಲಿದ್ದ ದೇವರಾಜ್, ಸುರೇಶ್ ಅವರ ಅಂಗಿ ಹಿಡಿದು ಎಳೆದಾಡಿದ್ದರು. ಈ ಹಂತದಲ್ಲಿ ಆರೋಪಿಗಳು ಕೆಳಗೆ ತಳ್ಳಿದ್ದರಿಂದ ತಲೆಗೆ ಪೆಟ್ಟು ಬಿದ್ದು ದೇವರಾಜ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.

ಸತ್ತ ಮೇಲೂ ಹುಡುಕಾಟ!
ಮದ್ಯದ ಅಮಲಿನಲ್ಲಿದ್ದ ಆರೋಪಿಗಳಿಗೆ, ತಾವು ದೇವರಾಜ್ ಅವರನ್ನು ಮಹಡಿಯಿಂದ ತಳ್ಳಿರುವ ವಿಷಯ ಗೊತ್ತಿರಲಿಲ್ಲ. ಹೀಗಾಗಿಯೇ, ಅವರು ಸತ್ತ ನಂತರವೂ ಸುರೇಶ್ ಹಾಗೂ ಗೋಪಾಲ್ ಕಟ್ಟಡದ ಎಲ್ಲ ಕೊಠಡಿಗಳಲ್ಲೂ ದೇವರಾಜ್‌ಗಾಗಿ ಹುಡುಕಾಟ ನಡೆಸಿದ್ದರು. ಕೆಳಗೆ ಬಂದಾಗ ರಕ್ತದ ಮಡುವಿನಲ್ಲಿ ಅವರು ಸತ್ತು ಬಿದ್ದಿರುವುದನ್ನು ಕಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT