ಉಪನಗರ ರೈಲು ಯೋಜನೆ

7

ಉಪನಗರ ರೈಲು ಯೋಜನೆ

Published:
Updated:
ಉಪನಗರ ರೈಲು ಯೋಜನೆ

ನವದೆಹಲಿ: ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಮಂಜೂರಾಗಿರುವ ಉಪನಗರ ರೈಲು ಯೋಜನೆ ಅನುಷ್ಠಾನ ವಿಳಂಬವಾಗುತ್ತಿರುವ ಕಾರಣ, ಕೇಂದ್ರ ಸರ್ಕಾರವೇ ಯೋಜನೆ ಕೈಗೆತ್ತಿಕೊಳ್ಳಲಿದೆ.

2013ರಲ್ಲೇ ಕೇಂದ್ರ ಸರ್ಕಾರ ಯೋಜನೆಗಾಗಿ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ವೆಚ್ಚದ ವಿಷಯದಲ್ಲಿ ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ನಡುವೆ ಹೊಂದಾಣಿಕೆಯ ಸಮಸ್ಯೆ ಎದುರಾಗಿರುವುದರಿಂದ, ಉಪನಗರ ರೈಲು ಯೋಜನೆ ಅನುಷ್ಠಾನಗೊಳ್ಳದೆ ನನೆಗುದಿಗೆ ಬಿದ್ದಿದೆ. ಹಾಗಾಗಿ ಸ್ವಯಂ ವೆಚ್ಚ ನಿರ್ವಹಣಾ ಮಾದರಿಯಡಿ ಕೇಂದ್ರವೇ ಯೋಜನೆ ಕೈಗೆತ್ತಿಕೊಳ್ಳಲಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಬೆಂಗಳೂರು ನಗರ ಹಾಗೂ ಹೊರ ವಲಯದ 170 ಕಿಲೋಮೀಟರ್‌ ರೈಲ್ವೆ ಮಾರ್ಗದ ಮೇಲೆ, ಮೆಟ್ರೋ ರೈಲಿನ ಮಾದರಿಯಲ್ಲಿ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಲು ಚಿಂತನೆ ನಡೆದಿದ್ದು, ಗಂಟೆಗೆ 90ರಿಂದ 125 ಕಿಲೋ ಮೀಟರ್‌ ವೇಗದ ರೈಲು ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.

ಬೈಯ್ಯಪ್ಪನಹಳ್ಳಿ ಹಾಗೂ ಬೆಂಗಳೂರು ನಗರ ರೈಲ್ವೆ ನಿಲ್ದಾಣಗಳನ್ನು ವಿಶ್ವ ದರ್ಜೆಗೆ ಏರಿಸುವುದಲ್ಲದೆ, ಬಾಣಸವಾಡಿ, ಯಲಹಂಕ, ಯಶವಂತಪುರ, ಕೆಂಗೇರಿ, ಕಾಕ್ಸ್‌ಟೌನ್‌, ಮಲ್ಲೇಶ್ವರಂ, ರಾಮನಗರ, ವೈಟ್‌ಫೀಲ್ಡ್‌, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ರೈಲು ನಿಲ್ದಾಣಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳುವ ಕುರಿತ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಯೋಜನೆಗಾಗಿ ಅಂದಾಜು ₹12,000 ಕೋಟಿ ವೆಚ್ಚ ತಗುಲಲಿದ್ದು, ರೈಲ್ವೆ ಇಲಾಖೆ ಹೊಂದಿರುವ ಭೂಮಿಯನ್ನು ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಿ ಆದಾಯ ಪಡೆಯುವ ಮೂಲಕ ಹಣಕಾಸಿನ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ.

ಎಲೆವೇಟೆಡ್‌ ಕಾರಿಡಾರ್‌ ನಿರ್ಮಾಣ ಹಾಗು ರೈಲು ನಿಲ್ದಾಣಗಳ ಅಭಿವೃದ್ಧಿಗೆ ಸಂಬಂಧಿಸಿದ ವೆಚ್ಚವನ್ನು ಸರಿದೂಗಿಸಲು ಹಾಗೂ ಅಗತ್ಯವಿರುವ ಭೂಮಿ ಒದಗಿಸಲು ರಾಜ್ಯ ಸರ್ಕಾರದ ಸಹಭಾಗಿತ್ವಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಯೋಜನೆಗೆ ತಗಲುವ ವೆಚ್ಚದಲ್ಲಿನ ಪಾಲುದಾರಿಕೆ ಹಾಗೂ ಭೂಮಿ ಹಸ್ತಾಂತರಿಸುವ ವಿಷಯದಲ್ಲಿನ ಗೊಂದಲ ಬಗೆಹರಿದಿಲ್ಲ. ರೈಲ್ವೆ ಸಚಿವಾಲಯದ ಬೇಡಿಕೆಗಿಂತ ಕಡಿಮೆ ಪ್ರಮಾಣದ ಭೂಮಿ ಒದಗಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದ್ದರಿಂದ ಮಹತ್ವದ ಈ ಯೋಜನೆ ಕಾರ್ಯ ರೂಪಕ್ಕೆ ಬರುವುದು ವಿಳಂಬವಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry