ನೆಹರೂ ಮೈದಾನ ಸುತ್ತ ಮಾನವ ಸರಪಳಿ

7

ನೆಹರೂ ಮೈದಾನ ಸುತ್ತ ಮಾನವ ಸರಪಳಿ

Published:
Updated:

ಮಂಗಳೂರು: ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಇದೇ 30ರಂದು ಕರ್ನಾಟಕದಾದ್ಯಂತ ನಡೆಯುವ ‘ಸೌಹಾರ್ದತೆಗಾಗಿ ಕರ್ನಾಟಕ ಮಾನವ ಸರಪಳಿ’ ರಚಿಸಲು ನಿರ್ಧರಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮತ್ತು ಮಂಗಳೂರು ನಗರದಲ್ಲಿ ಬೃಹತ್‌ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು 'ಸೌಹಾರ್ದತೆಗಾಗಿ ಕರ್ನಾಟಕ' ಜಿಲ್ಲಾ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘30ರಂದು ಸಂಜೆ 3.30ಕ್ಕೆ ನಗರದ ಕ್ಲಾಕ್‌ಟವರ್ ವೃತ್ತದಿಂದ ಆರಂಭಿಸಿ ಎ.ಬಿ.ಶೆಟ್ಟಿ ವೃತ್ತ ಮತ್ತು ಹ್ಯಾಮಿಲ್ಟನ್‌ ವೃತ್ತ ಹಾದು ಮತ್ತೆ ಕ್ಲಾಕ್‌ ಟವರ್‌ ಬಳಿ ಮಾನವ ಸರಪಳಿ ವೃತ್ತವನ್ನು ನಿರ್ಮಿಸಲಾಗುವುದು. ಮಾನವ ಸರಪಳಿಯಲ್ಲಿ ಭಾಗವಹಿಸಿದವರು ನೆಹರೂ ಮೈದಾನದಲ್ಲಿ ಸಭೆ ಸೇರಲಿದ್ದು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಸಭೆಯನ್ನು ಉದ್ದೇಶಿಸಿ ಮಾತನಾಡುವರು’ ಎಂದು ವಿವರಿಸಿದರು.

ಬಂಟ್ವಾಳದಲ್ಲಿ ಸಚಿವ ರಮಾನಾಥ ರೈ, ಮಂಗಳೂರಿನಲ್ಲಿ ಶಾಸಕ ಅಭಯಚಂದ್ರ ಜೈನ್‌, ಬೆಳ್ತಂಗಡಿಯಲ್ಲಿ ಶಾಸಕ ವಸಂತ ಬಂಗೇರ ಕೂಡ ಈ ಮಾನವ ಸರಪಳಿಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲಿಯೂ ಏಕಕಾಲಕ್ಕೆ ಮಾನವ ಸರಪಳಿ ರಚಿಸಲಾಗುವುದು ಎಂದರು.

'ರಾಜ್ಯದ 500 ನಗರಗಳಲ್ಲಿ ಏಕ ಕಾಲಕ್ಕೆ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ಮಾನವ ಸರಪಳಿ ನಿರ್ಮಿಸಲಿದ್ದಾರೆ. ಕೋಮುವಾದ ಮತ್ತೆ ಮರುಕಳಿಸದಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಗಣ್ಯರಾದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನ್‌ದಾಸ್‌, ಹಿರಿಯ ಚಿಂತಕ ಕೋ. ಚೆನ್ನಬಸಪ್ಪ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ಡಾ. ಜಿ. ರಾಮಕೃಷ್ಣ, ಪ್ರಕಾಶ್‌ ರೈ, ಚೇತನ್‌ ಮತ್ತಿತರರು ಈ ಮಾನವ ಸರಪಳಿಯಲ್ಲಿ ಭಾಗವಹಿಸುವರು' ಎಂದು ವಿಲ್ಫ್ರೆಡ್‌ ಡಿಸೋಜ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ, ಚಂದ್ರಕಲಾ ನಂದಾವರ, ವಾಸುದೇವ ಉಚ್ಚಿಲ, ಎಂ. ದೇವದಾಸ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry