‘ಸಹ್ಯಾದ್ರಿ’ಯ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ

7

‘ಸಹ್ಯಾದ್ರಿ’ಯ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ

Published:
Updated:
‘ಸಹ್ಯಾದ್ರಿ’ಯ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ

ಮಂಗಳೂರು ನಗರ ಹೊರವಲಯದ ಅಡ್ಯಾರ್‌ನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಎರಡು ದಿನ ಹೆಲಿಕಾಪ್ಟರ್‌ ಮತ್ತು ವಿಮಾನಗಳ ಸದ್ದು ಜೋರಾಗಿತ್ತು. ಕಿರು ವಿಮಾನಗಳು ಒಂದೊಂದಾಗಿ ರನ್‌ವೇ ಪ್ರವೇಶಿಸುತ್ತಿದ್ದಂತೆ ಜನರ ನಿರೀಕ್ಷೆಯೂ ಗರಿಗೆದರಿತ್ತು. ಪುಟ್ಟ ಪುಟ್ಟ ಹೆಲಿಕಾಪ್ಟರ್‌ಗಳು ಹೆಲಿಪ್ಯಾಡ್‌ಗೆ ಇಳಿಯುತ್ತಿದ್ದಂತೆ ಪ್ರೇಕ್ಷಕರ ಉತ್ಸಾಹ ಇನ್ನೂ ಹೆಚ್ಚಿತು. ಆಕಾಶದಲ್ಲಿ ಕಿರು ಲೋಹದ ಹಕ್ಕಿಗಳ ಕಲರವಕ್ಕೆ ನೋಡುಗರು ತಲೆದೂಗಿದರು.

ಸಹ್ಯಾದ್ರಿ ಕಾಲೇಜಿನ ಆವರಣದ ಬಾನಂಗಳದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಏರೋ ಮಾಡೆಲಿಂಗ್ ಸ್ಪರ್ಧೆ ‘ಏರೊ ಫಿಲಿಯಾ 2018’ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಮಾನಗಳ, ಹೆಲಿಕಾಪ್ಟರ್‌ಗಳ ಮಾದರಿಗಳು, ಡ್ರೋಣ್‌, ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.

ಲೋಹದ ಹಕ್ಕಿಗಳ ಚಮತ್ಕಾರವನ್ನು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರೂ ತುದಿಗಾಲ ಮೇಲೆ ನಿಂತು ಕಣ್ತುಂಬಿಕೊಂಡರು. ಜತೆಗೆ ವಾಟರ್‌ ರಾಕೆಟ್‌, ಚಕ್‌ ಗ್ಲೈಡರ್‌, ರುಬಿಕ್ಸ್‌ ಕ್ಯೂಬ್‌, ಕಾಗದದ ವಿಮಾನ, ಟ್ರೇಜರ್‌ ಹಂಟ್‌, ಪಿಸಿ ಗೇಮ್ಸ್‌ ಮತ್ತು ಫೋಟೊಗ್ರಾಫಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಏರೊನ್ಯಾಟಿಕ್ಸ್ ಕ್ಷೇತ್ರದಲ್ಲಿ ವಿಶಾಲ ದೃಷ್ಟಿಕೋನ ಇಟ್ಟುಕೊಂಡಿರುವ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಭವಿಷ್ಯದಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಆಗಲಿರುವ ಬದಲಾವಣೆ ಕುರಿತು ಅನ್ವೇಷಣೆ, ಆಲೋಚನೆಗೆ ಏರೊ ಮಾದರಿ ಸ್ಪರ್ಧೆ ವೇದಿಕೆ ಕಲ್ಪಿಸಿತ್ತು.

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಿಮಾನಯಾನ ಕ್ಷೇತ್ರ ದೇಶದ ಅಭಿವೃದ್ಧಿಗೆ ಯಾವ ರೀತಿ ಸಹಕಾರಿಯಾಗಬಲ್ಲದು ಎಂಬುದನ್ನು ಉತ್ಸಾಹಿ ಯುವ ಮನಸ್ಸುಗಳಿಗೆ ತಿಳಿಸುವುದಕ್ಕಾಗಿ ಸ್ಪರ್ಧೆಯನ್ನು ಆಯೋಜಿಸಿತ್ತು. ಪ್ರೌಢಶಾಲೆ ವಿಭಾಗದಿಂದ ಆರಂಭಗೊಂಡು ಪದವಿಪೂರ್ವ, ಪದವಿ ಕಾಲೇಜು ಹಾಗೂ ಎಂಜಿನಿಯರಿಂಗ್ ಪದವಿಯ ವಿದ್ಯಾರ್ಥಿಗಳಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ತಾವು ತಯಾರಿಸಿದ ನಾನಾ ವಿಧದ ಮಾದರಿಯನ್ನು ಪ್ರದರ್ಶಿಸಿ, ಜನರ ಮನಸೂರೆಗೊಳಿಸಿದರು. 50ಕ್ಕೂ ಅಧಿಕ ತಂಡಗಳು ಮತ್ತು 105ಕ್ಕೂ ಅಧಿಕ ಮಾದರಿಗಳು ಸ್ಪರ್ಧೆಯಲ್ಲಿತ್ತು. ಅಂತರರಾಷ್ಟ್ರೀಯ ಮಟ್ಟದ ರೇಡಿಯೊ ಫೈಯರ್ಸ್‌ಗಳಾದ ದುಬೈನ ಅಬ್ದುಲ್ಹಾ ಗಸೀಮ್ ಮತ್ತು ಎಸ್ಸಾ ಸಯೀದ್ ಅವರು ತಂದಿದ್ದ ಲಕ್ಷಾಂತರ ರೂಪಾಯಿ ವೆಚ್ಚದ 3ಡಿ ಹೆಲಿಕಾಪ್ಟರ್‌ ಮಾದರಿಯ ಪ್ರಾತ್ಯಕ್ಷಿಕೆಯನ್ನು ಶುಕ್ರವಾರ ಮಾಡಿ ಗಮನ ಸೆಳೆದರು.

ಪೆಟ್ರೋಲ್‌ ಇಂಧನದ ಈ ಲೋಹದ ಹಕ್ಕಿಯು ಆಕಾಶದಲ್ಲಿ ಮೂಡಿಸಿದ ಚಮತ್ಕಾರವನ್ನು ಪ್ರೇಕ್ಷಕರು ನಿಬ್ಬೇರಗಾಗಿ ನೋಡಿದರು. ಗಾಳಿಯನ್ನು ಸೀಳಿ ಮಿಂಚಿನಂತೆ ಸಾಗುವ ಕಿರು ಹೆಲಿಕಾಪ್ಟರನ್ನು ರಿಮೋಟ್‌ ಮೂಲಕ ಅಬ್ದುಲ್ಹಾ ಗಸೀಮ್ ಅವರು ನಿಯಂತ್ರಿಸುತ್ತಿದ್ದ ರೀತಿ ಎಲ್ಲರನ್ನೂ ಚಕಿತಪಡಿಸಿತು.

ನಂತರ ರಿಮೋಟ್‌ ಹಿಡಿದು ರನ್‌ವೇಗೆ ಧಾವಿಸಿದ ವಿದ್ಯಾರ್ಥಿಗಳು ನೆಚ್ಚಿನ ವಿಮಾನದ ಮಾದರಿಯನ್ನು ಪರಿಚಯಿಸಿದರು. ಇದರ ವಿಶೇಷ, ಸಾಮರ್ಥ್ಯದ ಕುರಿತು ನಿರೂಪಕರು ಕಿರು ಮಾಹಿತಿ ನೀಡುತ್ತಿದ್ದಂತೆ ಹಾರಾಟಕ್ಕೆ ಸಿದ್ಧತೆ ನಡೆಯುತ್ತಿತ್ತು.

ಸೂಚನೆ ಸಿಕ್ಕ ಕ್ಷಣಾರ್ಧದಲ್ಲಿ ಬಾನಂಗಳಕ್ಕೆ ಚಿಮ್ಮುತ್ತಿದ್ದ ಪರಿ ಮನಗೆದ್ದಿತು. ವಿಮಾನಗಳಂತೆ ಒಂದಷ್ಟು ಮುಂದಕ್ಕೆ ವೇಗವಾಗಿ ಸಾಗಿ ನಿಧಾನವಾಗಿ ಮೇಲೆ ಹಾರುತ್ತಿದ್ದ ರೀತಿಯೂ ವಿಶಿಷ್ಟವಾಗಿತ್ತು. ಯುದ್ಧ ವಿಮಾನಗಳ ರೀತಿಯಲ್ಲಿ ಆಗಸದಲ್ಲಿ ಪಲ್ಟಿ ಹೊಡೆಯುತ್ತಿದ್ದಾಗ ಎಲ್ಲೆಡೆ ಹರ್ಷೋದ್ಗಾರ ಮೊಳಗುತ್ತಿತ್ತು. ವಿದ್ಯಾರ್ಥಿಗಳಂತೂ ವಿಡಿಯೋ ಚಿತ್ರೀಕರಿಸಲು, ಸೆಲ್ಫಿ ತೆಗೆಯಲು ಪೈಪೋಟಿ ನಡೆಸುತ್ತಿದ್ದರು.

ಏರೊಫಿಲಿಯಾ 2018ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟು ₹ 2.75ಲಕ್ಷದಷ್ಟು ನಗದು ಬಹುಮಾನ ನೀಡಲಾಯಿತು. ಡ್ರೋಣ್ ಸ್ಪರ್ಧೆಗೆ ₹ 50 ಸಾವಿರ ಬಹುಮಾನ ನೀಡಲಾಯಿತು. ಹೊರರಾಜ್ಯಗಳಿಂದಲೂ ಸ್ಪರ್ಧಾಳುಗಳು ಭಾಗವಹಿಸಿದ್ದರು. ಸ್ಪರ್ಧಾಳುಗಳಿಂದ ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಸಂಘಟಕ ಗೌಸ್‌ ತಿಳಿಸಿದರು.

ಸ್ಪರ್ಧೆಯ ಆಕರ್ಷಣೆಗಳು

l ಭಾರತ ಮತ್ತು ದುಬೈಗಳ ವೃತ್ತಿಪರ ತಂಡಗಳಿಂದ ಫಕ್ಸ್ಡ್ ವಿಂಗ್ ಮತ್ತು 3ಡಿ ಹೆಲಿಕಾಫ್ಟರ್ ಏರ್ ಶೋ

l ಡಿಆರ್‌ಡಿಒ, ವಾಯುಪಡೆ, ಇಸ್ರೋ ಮತ್ತು ಐಐಎಸ್‌ಸಿಗಳಿಂದ ತಜ್ಞರು ಭಾಗಿ

l ಆಕರ್ಷಕ ಏರೋ ಮಾದರಿ, ಡ್ರೋಣ್ ರೇಸ್ ಮತ್ತು ಇತರೆ ಸ್ಪರ್ಧೆಗಳಿಗೆ ಬಹುಮಾನ ವಿತರಣೆ

l ದೇಶದ ವಿವಿಧ ಸಂಸ್ಥೆಗಳಿಂದ 100ಕ್ಕೂ ಅಧಿಕ ಮಾದರಿಗಳು ಸ್ಪರ್ಧೆಯಲ್ಲಿ ಭಾಗಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry