ಹನುಮ ಜಯಂತಿಗೆ ಸಂಭ್ರಮದ ತೆರೆ

7

ಹನುಮ ಜಯಂತಿಗೆ ಸಂಭ್ರಮದ ತೆರೆ

Published:
Updated:
ಹನುಮ ಜಯಂತಿಗೆ ಸಂಭ್ರಮದ ತೆರೆ

ಹುಣಸೂರು: ನಗರದಲ್ಲಿ ಶನಿವಾರ ಆಯೋಜಿಸಿದ್ದ ಹನುಮ ಜಯಂತಿ ಸುಮಾರು 25 ಸಾವಿರ ಭಕ್ತರ ಉದ್ಘೋಷಗಳ ನಡುವೆ ಶಾಂತಿಯಿಂದ ಮುಕ್ತಾಯವಾಯಿತು. ಬೆಳಿಗ್ಗೆ 11ಕ್ಕೆ ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಆರಂಭವಾದ ಮೆರವಣಿಗೆ ಸಂಜೆ 5ರ ವೇಳೆಗೆ ಮೈಸೂರು ಮುಖ್ಯರಸ್ತೆಯ ಮಂಜುನಾಥಸ್ವಾಮಿ ದೇವಾಲಯ ಆವರಣದಲ್ಲಿ ಸಮಾಪ್ತಿಯಾಯಿತು. ಆವರಣಕ್ಕೆ ಬಂದ 11 ಅಡಿ ಎತ್ತರದ ಹನುಮನ ಮೂರ್ತಿ ಹಾಗೂ 6 ಅಡಿ ಎತ್ತರದ ಹನುಮನ ಪಂಚಲೋಹದ ಮೂರ್ತಿಗೆ ರಘುವೀರ್‌ಜೀ ತಂಡ ಪೂಜೆ ಸಲ್ಲಿಸಿತು. ಈ ಮೂಲಕ ಮೆರವಣಿಗೆ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಹನುಮ ಜಯಂತಿ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಸಂಸದ ಪ್ರತಾಪಸಿಂಹ, ಶಾಸಕ ಎಚ್.ಪಿ.ಮಂಜುನಾಥ್, ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್, ಜಿ.ಪಂ ಸದಸ್ಯೆ ಡಾ.ಪುಷ್ಪಾ ಅಮರನಾಥ್, ಬಿಜೆಪಿ ವಕ್ತಾರರಾದ ತೇಜಸ್ವಿನಿ ರಮೇಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್, ನಗರಾಧ್ಯಕ್ಷ ರಾಜೇಂದ್ರ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು, ಉಪವಿಭಾಗಾಧಿಕಾರಿ ಕೆ.ನಿತೀಶ್, ತಹಶೀಲ್ದಾರ್ ಎಸ್.ಪಿ.ಮೋಹನ್, ಇಒ ಸಿ.ಆರ್.ಕೃಷ್ಣಕುಮಾರ್, ಸಮಾಜ ಕಲ್ಯಾಣಾಧಿಕಾರಿ ಹೊನ್ನೇಗೌಡ ಭಾಗವಹಿಸಿದ್ದರು.

ಕೇಸರಿಮಯ: ಇಡೀ ನಗರ ಕೇಸರಿಮಯವಾಗಿತ್ತು. ಎಲ್ಲೆಡೆ ‘ಹನುಮಾನ್ ಕೀ ಜೈ ಹೋ’ ಎಂಬ ಘೋಷಣೆಯೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದ ಯುವಕರ ಸಮೂಹ ಕಂಡು ಬಂದಿತು. ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಮೆರವಣಿಗೆ ಆರಂಭವಾದಾಗ ನೂರಾರು ಮಂದಿಯಷ್ಟೇ ಇದ್ದರು. ಆದರೆ, ಅರ್ಧಗಂಟೆ ಆಗುವುದರೊಳಗೆ ತಂಡೋಪತಂಡವಾಗಿ ಭಕ್ತರು ಜಮಾವಣೆಗೊಳ್ಳಲು ಆರಂಭಿಸಿದರು. ನೋಡನೋಡುತ್ತಲೇ ಇಡೀ ರಂಗನಾಥ ಬಡಾವಣೆಯ ಮುಖ್ಯರಸ್ತೆ ಕೇಸರಿಮಯವಾಯಿತು. ಭಕ್ತರ ಕೈಯಲ್ಲಿ ಕೇಸರಿ ಧ್ವಜಗಳು ರಾರಾಜಿಸತೊಡಗಿದವು.

ಈ ಮೊದಲು ಡಿ.3ಕ್ಕೆ ಆಯೋಜನೆಗೊಂಡಿದ್ದ ಹನುಮ ಜಯಂತಿ ಕಾರಣಾಂತರಗಳಿಂದ ಮುಂದೂಡಲಾಗಿತ್ತು. 4–5 ಸರಣಿ ಸಭೆ ನಡೆಸಿದ ಜಿಲ್ಲಾಡಳಿತ ಜ.27ರಂದು 19ಕ್ಕೂ ಹೆಚ್ಚು ನಿಬಂಧನೆ ವಿಧಿಸಿ ಅವಕಾಶ ಕಲ್ಪಿಸಿತ್ತು.

80 ಸಿ.ಸಿ ಟಿ.ವಿ ಕ್ಯಾಮೆರಾ, 65 ವಿಡಿಯೊ ಕ್ಯಾಮೆರಾ: ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಫ್ತಿಯಲ್ಲಿ 150ಕ್ಕೂ ಹೆಚ್ಚು ಮಹಿಳಾ ಮತ್ತು ಪುರುಷ ಪೊಲೀಸರು ಪಹರೆ ನಡೆಸಿದರೆ, ನಾಲ್ವರು ಡಿವೈಎಸ್‌ಪಿ, 11 ಸಿಪಿಐ, 30 ಪಿಎಸ್‌ಐ, 50 ಎಎಸ್‌ಐ, 300ಕ್ಕೂ ಹೆಚ್ಚು ಕಾನ್‌ಸ್ಟೆಬಲ್, 6 ಕೆಎಸ್‌ಆರ್‌ಪಿ ತುಕಡಿ, 10 ಡಿಎಆರ್ ತುಕಡಿ ಕರ್ತವ್ಯ ನಿರ್ವಹಿಸಿದವು. ಅಲ್ಲದೆ, ವಿವಿಧ ಸಂಘಟನೆಗಳ 250ಕ್ಕೂ ಹೆಚ್ಚು ಸ್ವಯಂಸೇವಕರು ಇದ್ದರು.

ಸಂಸದ ಪ್ರತಾಪಸಿಂಹ ನೇತೃತ್ವದಲ್ಲಿ ಮೆರವಣಿಗೆ ಮುಂದೆ ಸಾಗಿದರೆ ಶಾಸಕ ಎಚ್.ಪಿ.ಮಂಜುನಾಥ್‌ ಅಭಿಮಾನಿಗಳ ತಂಡ ಹಿಂದೆ ಬರುತ್ತಿತ್ತು. ಈ ನಡುವೆ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಬೆರಳೆಣಿಕೆಯಷ್ಟು ಬೆಂಬಲಿಗರೊಂದಿಗೆ ಹೆಜ್ಜೆ ಹಾಕಿದರು.

ಡಿ.20ರಂದು ಹನುಮ ಜಯಂತಿ

ಸಂಸದ ಪ್ರತಾಪಸಿಂಹ ಮಾತನಾಡಿ, ‘ಹನುಮಭಕ್ತರು ಎಂದೂ ಹಿಂಸಾಪ್ರಿಯರಲ್ಲ. ಕಲ್ಲು ತೂರಾಟ ಮಾಡಿ ಗೊಂದಲಕ್ಕೆ ಆಸ್ಪದ ನೀಡುವವರಲ್ಲ. ಶಾಂತಿಯುತವಾಗಿ ಹನುಮ ಜಯಂತಿ ನಡೆದಿದೆ. ಮೆರವಣಿಗೆ ಮೇಲೆ ಕಲ್ಲು ಎಸೆಯುವವರ ಮೇಲೆ ಪೊಲೀಸರು ಕಣ್ಣು ಇಡಬೇಕೇ ಹೊರತು ಶಾಂತಿಪ್ರಿಯರ ಮೇಲೆ ಲಾಠಿ ಬೀಸುವುದಲ್ಲ. ಈ ವರ್ಷ ಡಿ.20ರಂದು ಹನುಮ ಜಯಂತಿ ನಡೆಯಲಿದೆ. ಜಿಲ್ಲಾಡಳಿತ ಇದೇ ರೀತಿ ಸಹಕಾರ ನೀಡಬೇಕು’ ಎಂದರು.

* * 

ಸಭೆ, ಸಮನ್ವಯತೆಯಿಂದ ಯಶಸ್ವಿಯಾಗಿ ಮುಗಿದಿದೆ. ಡಿ.3ರಂದು ಆಚರಣೆ ರದ್ದಾಗಿದ್ದಕ್ಕೆ ವಿಷಾದಿಸುತ್ತೇನೆ. ಯಶಸ್ಸು ಒಬ್ಬರಿಗೆ ಸಲ್ಲುವಂತಹದ್ದಲ್ಲ. ಎಲ್ಲರ ಶ್ರಮ ಇದೆ

ಎಚ್.ಪಿ.ಮಂಜುನಾಥ್, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry