ಇಂದು ಯಡೂರು ಸರ್ಕಾರಿ ಶಾಲೆ ಶತಮಾನೋತ್ಸವ

7

ಇಂದು ಯಡೂರು ಸರ್ಕಾರಿ ಶಾಲೆ ಶತಮಾನೋತ್ಸವ

Published:
Updated:
ಇಂದು ಯಡೂರು ಸರ್ಕಾರಿ ಶಾಲೆ ಶತಮಾನೋತ್ಸವ

ಹೊಸನಗರ: ತಾಲ್ಲೂಕಿನಲ್ಲಿರುವ ಶತಮಾನ ಕಂಡ ಕೇವಲ 4 ಶಾಲೆಗಳಲ್ಲಿ ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇಂದು ಶತಮಾನೋತ್ಸವ ಸಂಭ್ರಮ ಆಚರಿಸುತ್ತಿದೆ. ಸರಿ ಸುಮಾರು 1915ರಲ್ಲಿ ಐಗಳ ಮನೆಯಲ್ಲಿ (ಯಡೂರು ಶ್ರೀನಿವಾಸ ಜೋಯ್ಸ್) ಈ ಪಾಠ ಶಾಲೆಯು ಆರಂಭವಾಗಿತ್ತು ಎಂದು ಶಾಲೆಯಲ್ಲಿ ಲಭ್ಯವಿರುವ ದಾಖಲೆಗಳು ತಿಳಿಸುತ್ತದೆ.

ಈ ಶಾಲೆಯಲ್ಲಿ ಹಿರಿಯರಾಗಿದ್ದ ವೈ.ಕೆ.ಅನಂತ ಜೋಯ್ಸ್, ನಾಗಪ್ಪ ಶೇಟ್, ಸುಳಗೋಡು ಶಂಕ್ರಪ್ಪ ಗೌಡ, ನಾಗಪ್ಪಯ್ಯ, ಕಾನುಗೋಡು ಮಹದೇವಯ್ಯ, ಕೆ.ಸೂರ್ಯನಾರಾಯಣ ಭಟ್ ಮತ್ತಿತರರು ಗ್ರಾಮದ ಹಿರಿಯರು ಕಲಿತಿದ್ದಾರೆ ಎನ್ನುತ್ತಾರೆ ಶಿಕ್ಷಣ ತಜ್ಞ ವೈ.ಭಾಸ್ಕರ ಜೋಯ್ಸ್.

ಹುಲ್ಲಿನ ಸೂರು ಶಾಲೆ: ನಂತರ ಮುಖ್ಯರಸ್ತೆಯ ಪಕ್ಕದಲ್ಲಿ ಹುಲ್ಲಿನ ಸೂರು, ಹಸಿ ಇಟ್ಟಿಗೆ ಗೋಡೆಯ ಪುಟ್ಟ ಶಾಲೆ ನಿರ್ಮಿಸಲಾಯಿತು. ಮಳೆಗೆ ಉದುರಲು ಶುರುವಾದಾಗ ಅಲ್ಲಿಂದ ಚಿನ್ನಪ್ಪ ಗೌಡರ ಮನೆ ಉಪ್ಪರಿಗೆ, ಎಚ್.ಎಸ್.ಗುಡಂಪ್ಪ ಗೌಡರ ಮನೆ ಆವರಣಕ್ಕೆ ಸ್ಥಳಾಂತರ ಆಗುತ್ತಿತ್ತು ಎಂದು ಗ್ರಾಮದ ಹಿರಿಯ ಅಪ್ಪಾಚಾರ ತಮ್ಮ ನೆನಪುಗಳನ್ನು ಬಿಚ್ಚಿಟ್ಟರು.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಶಾಲೆಗೆ ತಮ್ಮದೇ ಆದ ಕಟ್ಟಡ ಬೇಕು ಎಂದು ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಪಂಚಾಯ್ತಿ ಚೇರ್ಮನ್ ಎಚ್.ಎಂ.ರಾಮಪ್ಪ ಗೌಡ ಸೇರಿದಂತೆ ಊರ ಹಿರಿಯರು ಮನವಿ ಸಲ್ಲಿಸಿದರು. ಉಳೆಬೈಲು ಎಂದು ಕರೆಯುತ್ತಿದ್ದ ಈ ಗ್ರಾಮದ ಪೊಲೀಸ್ ಠಾಣೆಯಲ್ಲಿ ಮಾದರಿ ಪ್ರಾಥಮಿಕ ಶಾಲೆ ನಡೆಸಲು ಅನುಮತಿ ನೀಡಲಾಯಿತು. ಶತಾಯುಷಿ ಗಿರಿಯಪ್ಪ ಹೆಗ್ಗಡೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಎನ್ನುತ್ತಾರೆ ಎಚ್.ಆರ್.ಮೂರ್ತಿ ಗೌಡ.

ಪರಿಹಾರ ದೊರಕಿಲ್ಲ: ಖೈರುಗುಂದಾ ಗ್ರಾಮದ ಸ.24ರಲ್ಲಿ 1955-56ರಲ್ಲಿ ವೈ.ಎಸ್.ಶ್ರೀನಿವಾಸ ಜೋಯ್ಸ್ ಶಾಲೆಗಾಗಿ ಸುಮಾರು 4.8 ಎಕರೆ ಜಮೀನನ್ನು ರಾಜಪ್ರಮುಖರ ಹೆಸರಿಗೆ ದಾನ ಮಾಡಿದ್ದರು. ಆದರೆ ಅದು ವಾರಾಹಿ ಯೊಜನೆಯಲ್ಲಿ ಮುಳುಗಡೆ ಆದರೂ ಶಾಲೆಗೆ ಪರಿಹಾರ ದೊರಕಿಲ್ಲ ಎಂದು ಶಾಲಾ ದಾಖಲೆ ತಿಳಿಸುತ್ತದೆ.

ಸುತ್ತಲೂ ವಾರಾಹಿ ಹಿನ್ನೀರು ಆವರಿಸಿದ್ದರೂ ಜನವಸತಿ ಕಡಿಮೆ ಆಗಿದ್ದರೂ ಸಹ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖ ಆಗದಿರುವುದು ಸರ್ಕಾರಿ ಶಾಲೆಯ ದೃಷ್ಟಿಯಲ್ಲಿ ಶುಭ ಸಂದೇಶ ಆಗಿದೆ.

ಈ ಪ್ರಾಥಮಿಕ ಶಾಲೆಯು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ವೈದ್ಯರು, ಎಂಜಿನಿಯರ್, ವಕೀಲರು, ಪ್ರಗತಿಪರ ಕೃಷಿಕರು ಸೇರಿದಂತೆ ಅನೇಕ ಗಣ್ಯರಿಗೆ ಇದು ಮೊದಲ ಮೆಟ್ಟಿಲು ಆಗಿ ಸೇವೆ ಸಲ್ಲಿಸಿದೆ. ಹಿರಿಯ ವಿದ್ಯಾರ್ಥಿಗಳ, ಗ್ರಾಮಸ್ಥರ, ಪೋಷಕರ ಸಹಕಾರದಿಂದ ಜ.28 ಹಾಗೂ 29ರಂದು ಅದ್ದೂರಿಯಾಗಿ ಶತಮಾನೋತ್ಸವ ಆಚರಿಸುತ್ತಿದೆ.

* * 

ಸರ್ಕಾರಿ ಶಾಲೆಗಳು ಅಳಿವಿನ ಹಂತಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಶತಮಾನೋತ್ಸವ ಸಂಭ್ರಮ ಶಾಲೆಗೆ ಪುನಃಶ್ಚೇತನ ಕೊಡುವ ಇನ್ನೊಂದು ವೇದಿಕೆ ಆಗಲಿ.

ಎಚ್.ಜಿ.ಶಂಕರಪ್ಪ ಗೌಡ, ಶತಮನೋತ್ಸವ ಸಮಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry