ರೈತರ ಬದುಕು ಹಸನು: ಜೆಡಿಎಸ್ ಧ್ಯೇಯ

7

ರೈತರ ಬದುಕು ಹಸನು: ಜೆಡಿಎಸ್ ಧ್ಯೇಯ

Published:
Updated:

ಪಾವಗಡ: ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ರೈತರ ಬದುಕನ್ನು ಹಸನಾಗಿಸುವುದು ಜೆಡಿಎಸ್ ಪಕ್ಷದ ಧ್ಯೇಯ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ಶನಿವಾರ ನಡೆದ ಕುಮಾರಪರ್ವ ಕರ್ನಾಟಕ ವಿಕಾಸ ವಾಹಿನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ ಅಧಿಕಾರಕ್ಕೆ ಬಂದ ಕೂಡಲೇ ರೈತರಿಗೆ ಅಗತ್ಯವಿರುವ ರಸಗೊಬ್ಬರ, ಬಿತ್ತನೆ ಬೀಜವನ್ನು ವಿತರಿಸುವ ವ್ಯವಸ್ಥೆ ಮಾಡಲಾಗುವುದು. ಕೃಷಿ ಉಪಯೋಗಿ ಸಲಕರಣೆಗಳನ್ನು ಶೇ 50 ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ರೈತರು ಸಣ್ಣ, ಕೈಗಾರಿಕೆಗಳಿಗೆ 24 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು’ ಎಂದರು.

‘ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರೋತ್ಸಾಹ ನೀಡಲಾಗುವುದು. ಅಧಿಕಾರಕ್ಕೆ ಬಂದ 24 ಗಂಟೆಗಳೊಳಗಾಗಿ ರೈತರು, ನೇಕಾರರು, ಕಾರ್ಮಿಕರು, ಮೀನುಗಾರರು, ಕುಶಲಕರ್ಮಿಗಳ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು’ ಎಂದರು. ‘ಗರ್ಭಿಣಿಯರಿಗೆ 6 ತಿಂಗಳಿಗೆ 36 ಸಾವಿರ ಭತ್ಯೆ, ವಿಧವಾ ವೇತನ, ವೃದ್ಧಾಪ್ಯ ವೇತನವನ್ನು ಹೆಚ್ಚಿಸಲಾಗುವುದು’ ಎಂದರು.

‘ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಲಾದ ಜನತಾ ದರ್ಶನ, ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಮುಂದುವರೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಪರಿಸರಕ್ಕೆ ಹಾನಿಯಾಗುವ ಅಕ್ರಮ ಗಣಿಗಾರಿಕೆ ನಿಷೇಧಿಸಿ, ರಾಜ್ಯದ ಯುವ ಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು’ ಎಂದರು.

ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ‘ರಾಜ್ಯದ ಅಭಿವೃದ್ಧಿಗಾಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಅನಿವಾರ್ಯತೆ ಇದೆ. ರೈತರು, ಬಡ ಜನತೆಯ ಸ್ವಾವಲಂಬನೆಗಾಗಿ ಪ್ರಾದೇಶಿಕ ಪಕ್ಷಕ್ಕೆ ಜನರು ಒತ್ತು ನೀಡಬೇಕು’ ಎಂದರು. ತಾಲ್ಲೂಕಿನ ಕಸಬಾ, ವೈ.ಎನ್.ಹೊಸಕೋಟೆ, ನಿಡಗಲ್ ಹೋಬಳಿಗಳ ಗ್ರಾಮಗಳಿಗೆ ಕುಮಾರಸ್ವಾಮಿ ಅವರು ಭೇಟಿ ನೀಡಿ ರೋಡ್ ಷೋ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ತಿಮ್ಮಾರೆಡ್ಡಿ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಆರ್.ಸಿ.ಅಂಜಿನಪ್ಪ, ತುಮುಲ್ ನಿರ್ದೇಶಕ ಕೆ.ಆರ್.ಸುರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಯುವ ಘಟಕದ ಅಧ್ಯಕ್ಷ ಮಂಜುನಾಥ ಚೌದರಿ, ಮುಖಂಡ ಕೋಟಗುಡ್ಡ ಅಂಜಿನಪ್ಪ, ಅಕ್ಕಲಪ್ಪ, ಲೋಕೇಶ್, ಅನಿಲ್, ಅಜಯ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry