ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಂಬರನ್ನೇ ಕಾಣದ ಶ್ರೀನಗರದ ರಸ್ತೆಗಳು

Last Updated 28 ಜನವರಿ 2018, 7:06 IST
ಅಕ್ಷರ ಗಾತ್ರ

ತುಮಕೂರು: ನಗರದ 35ನೇ ವಾರ್ಡಿನ ಶ್ರೀನಗರ, ಮಹಾನಗರ ಪಾಲಿಕೆಯಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದು, ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಇದಾವನ್ನೂ ಕಾಣದೇ ನಲುಗುತ್ತಿದೆ.

ನಗರದಿಂದ ಬಟವಾಡಿ ಬೈಪಾಸ್‌ ಮೂಲಕ ಸಿದ್ಧಗಂಗಾ ಕ್ಷೇತ್ರಕ್ಕೆ ಸಾಗುವಾಗ ಎದುರಾಗುವ ಈ ಶ್ರೀನಗರದಲ್ಲಿ 2 ಮುಖ್ಯರಸ್ತೆ ಮತ್ತು 13 ಅಡ್ಡ ರಸ್ತೆಗಳಿದ್ದು, ಯಾವ ಒಂದು ರಸ್ತೆಗೂ ಇದುವರೆಗೂ ಡಾಂಬರು ಹಾಕಲಾಗಿಲ್ಲ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಿವಾಸಿ ಶ್ರೀನಿವಾಸ್‌, ‘ಸರ್‌, ಇಲ್ಲಿನ ಸಮಸ್ಯೆಯ ಯಾರ ಬಾಯಿಂದ ಕೇಳುವ ಅಗತ್ಯವೂ ಇಲ್ಲ. ನೀವೇ ಒಮ್ಮೆ ಎಲ್ಲ ರಸ್ತೆಗಳಲ್ಲಿಯೂ ಸುತ್ತಾಡಿ ಬಂದರೆ ಸಾಕು ಇಲ್ಲಿನ ಜನರ ದುಸ್ಥಿತಿಯ ಅರಿವಾಗುತ್ತದೆ’ ಎಂದರು.

‘ಸುಮಾರು 15 ವರ್ಷಗಳ ಹಿಂದೆಯೇ ಈ ಪ್ರದೇಶ ನಗರಸಭೆ ಆಡಳಿತಕ್ಕೆ ಒಳಪಟ್ಟಿತು. ಈಗ ತುಮಕೂರು ನಗರ ಪಾಲಿಕೆಯಾಗಿ ಮುಂಬಡ್ತಿ ಪಡೆದಿದೆ. ಆದರೆ ನಗರದ ಹೊರವಲಯದಲ್ಲಿರುವ ಶ್ರೀನಗರವನ್ನು ನಿರ್ಲಕ್ಷಿಸುತ್ತಲೇ ಬರುತ್ತಿದೆ. ಸಮಾನ ತೆರಿಗೆ ವಸೂಲಿ ಮಾಡುವ ಪಾಲಿಕೆಯವರಿಗೆ ಸಮಾನ ಸೌಲಭ್ಯಗಳನ್ನು ನೀಡಬೇಕು ಎನ್ನುವುದು ಯಾಕೆ ತಿಳಿಯುತ್ತಿಲ್ಲ’ ಎನ್ನುವುದು ಈ ಭಾಗದ ಜನರ ಪ್ರಶ್ನೆ.

ಶ್ರೀನಗರದ ರಸ್ತೆಗಳಲ್ಲೊಮ್ಮೆ ತಿರುಗಾಡಿದರೆ ಸಾಕು, ಅಲ್ಲಿನ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ. ಶ್ರೀನಗರದಲ್ಲಿ ಹೆಚ್ಚಾಗಿ ದೊಡ್ಡ ದೊಡ್ಡ ಬಂಗಲೆಯಂತಹ ಮನೆಗಳೇ ಕಣ್ಣಿಗೆ ಕಾಣಿಸುತ್ತವೆ. ಆದರೆ ನಾಗರಿಕರಿಗೆ ಬೇಕಾದ ಮೂಲ ಸೌಕರ್ಯಗಳು ಮಾತ್ರ ಶ್ರೀನಗರದ ಬಡಾವಣೆಗೆ ಮರೀಚಿಕೆಯಾಗಿದೆ.

‘ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಯಾವುದೇ ರಸ್ತೆಯಲ್ಲಿ ತಿರುಗಾಡಿದರೂ ಮನೆಯ ಕ್ಕಪಕ್ಕದಲ್ಲಿ ಕೊಳಚೆ ನೀರು ನಿಂತುಕೊಂಡಿದೆ. ಈ ಕೊಳಚೆ ನೀರು ನಿಂತಿರುವ ಜಾಗಗಳನ್ನೇ ತಮ್ಮ ವಾಸಸ್ಥಾನವಾಗಿಸಿಕೊಳ್ಳುತ್ತಿರುವ ಗುಂಪು ಗುಂಪು ಹಂದಿಗಳು ಎಲ್ಲಿ ಬೇಕಾದಲ್ಲಿ ಓಡಾಡಿಕೊಂಡು ಅನೈರ್ಮಲ್ಯ ಉಂಟು ಮಾಡುತ್ತಿವೆ’ ಎನ್ನುತ್ತಾರೆ ನಿವಾಸಿ ಗೋಪಾಲಕೃಷ್ಣ.

‘ಈ ಭಾಗದಲ್ಲಿ ನೀರಿನ ಸಮಸ್ಯೆ ಯಾವಾಗಲೂ ಕಾಡುತ್ತದೆ. ಇಲ್ಲಿನ ಜನರಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಸುಮಾರು 8 ವರ್ಷಗಳ ಹಿಂದೆಯೇ ಒಂದು ನೀರಿನ ಮೇಲ್ತೊಟ್ಟಿಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ಮಾಣವಾಗಿ ವರ್ಷಗಳೇ ಕಳದರೂ ಇದಕ್ಕೆ ನೀರನ್ನು ತುಂಬಿಸಲಾಗಿಲ್ಲ. ಹೀಗೆ ಇರುವ ಸೌಕರ್ಯವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದಲೇ ಜನರು ತೊಂದರೆ ಅನುಭವಿಸುವಂತಾಗಿದೆ’ ಎನ್ನುವುದು ಶ್ರೀನಿವಾಸ್‌ ಅಭಿಪ್ರಾಯ.

‘ಪಾಲಿಕೆ ವತಿಯಿಂದ ಬಡಾವಣೆಯ ರಸ್ತೆಗಳಿಗೆ ಬೀದಿ ದೀಪಗಳನ್ನು ಅಳವಡಿಸಬೇಕು. ಗಂಡಸರು ಹೇಗೋ ಓಡಾಡಬಹುದು. ಆದರೆ ಹೆಣ್ಣು ಮಕ್ಕಳು ಸಂಜೆ 6 ಗಂಟೆಯಾದರೆ ಹೊರಗಡೆ ಹೋಗಲು ಭಯವಾಗುತ್ತಿದೆ. ರಸ್ತೆಗಳಲ್ಲಿ ಬೀದಿ ದೀಪಗಳಾದರೂ ಇದ್ದರೆ ಬಹಳ ಅನುಕೂಲವಾಗುತ್ತದೆ’ ಎನ್ನುತ್ತಾರೆ ದತ್ತ.

* * 

ಬಡಾವಣೆಯ ರಸ್ತೆಗಳು ಗುಂಪು ಗುಂಪು ಹಂದಿಗಳ ಓಡಾಟಕ್ಕೆ ಸಾಕ್ಷಿಯಾಗುತ್ತಿವೆ. ರಾತ್ರಿಯಾದರಂತೂ ನಾಯಿ ಕಾಟ ಅಷ್ಟಿಷ್ಟಲ್ಲ. ವೃದ್ಧರು, ಸಣ್ಣ ಮಕ್ಕಳು ಓಡಾಡುವುದೇ ಕಷ್ಟದ ಮಾತಾಗಿದೆ.
ಶ್ರೀನಿವಾಸ್‌, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT