ಬಿಜೆಪಿ ಸೇರ್ಪಡೆಗೆ ಬಸನಗೌಡ ಶತ ‘ಯತ್ನ’..!

7

ಬಿಜೆಪಿ ಸೇರ್ಪಡೆಗೆ ಬಸನಗೌಡ ಶತ ‘ಯತ್ನ’..!

Published:
Updated:

ವಿಜಯಪುರ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭ ಗೊಳ್ಳುತ್ತಿದ್ದಂತೆ, ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಸೇರ್ಪಡೆ ವಿಷಯ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ಫೆ 4ರಂದು ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಯತ್ನಾಳರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಪ್ರಬಲ ಹಕ್ಕೊತ್ತಾಯವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿ ಯೂರಪ್ಪ ವರಿಷ್ಠರ ಬಳಿ ಮಂಡಿಸಿದ್ದಾರೆ.

ಇದಕ್ಕೆ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಸಹ ದನಿಗೂಡಿಸಿದ್ದಾರೆ ಎನ್ನಲಾಗಿದೆ. ಶ್ರೀರಾಮುಲು ಬಸನಗೌಡ ಅಧ್ಯಕ್ಷರಾಗಿರುವ ಸಿದ್ಧಸಿರಿ ಸೌಹಾರ್ದ ನಿಯಮಿತದ ಉಪಾಧ್ಯಕ್ಷರಾಗಿದ್ದಾರೆ. ಹಿಂದಿನಿಂದಲೂ ಒಳ್ಳೆಯ ಗೆಳೆತನ ಹೊಂದಿದ್ದಾರೆ. ಕೆಲ ದಿನ ವಿಜಯಪುರ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜತೆಗೂ ಶ್ರೀರಾಮುಲು ಬಾಂಧವ್ಯ ಹೊಂದಿದ್ದು, ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೌಡ್ರು–ಶೆಟ್ರು ಗದ್ದಲಕ್ಕೆ ತೆರೆ ಎಳೆಯುವ ಕಸರತ್ತು ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಸನಗೌಡ ಪಾಟೀಲ ಯತ್ನಾಳ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಬಾಗಲಕೋಟೆ ಜಿಲ್ಲಾ ಬಿಜೆಪಿ ಘಟಕ ಸಹ ಸೇರ್ಪಡೆಗೆ ದನಿಗೂಡಿಸಿದೆ. ವಿಜಯಪುರ ಜಿಲ್ಲಾ ಬಿಜೆಪಿ ಘಟಕದಲ್ಲಿರುವ ಯತ್ನಾಳ ಅಭಿಮಾನಿಗಳು ಸಹ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಯತ್ನಾಳ ಸೇರ್ಪಡೆ ವಿಷಯ ಮತ್ತೆ ತೀವ್ರ ಚರ್ಚೆಗೆ ಒಳಗಾಗುತ್ತಿದ್ದಂತೆ, ಗೌಡರ ವಿರೋಧಿ ಪಾಳೆಯವೂ ಪ್ರತ್ಯಾಸ್ತ್ರ ಹೂಡಿದೆ.

ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಸೇರ್ಪಡೆಯಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಹಕಾರಿಯಾಗಲಿದೆ. ಯತ್ನಾಳ ವರ್ಣರಂಜಿತ ರಾಜಕಾರಣಿ. ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕ ದಲ್ಲೂ ಜನಪ್ರಿಯತೆ ಹೊಂದಿದ್ದಾರೆ.

ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಬಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿಎಸ್‌ವೈ ತಂಡ ವರಿಷ್ಠರ ಅಂಗಳದಲ್ಲಿ ಯತ್ನಾಳ ಪರ ಪ್ರಬಲ ಬ್ಯಾಟಿಂಗ್‌ ನಡೆಸುತ್ತಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಧಾರವಾಡ ಸಂಸದ ಪ್ರಹ್ಲಾದ ಜೋಶಿ ಮನವೊಲಿಸುವ ಕೆಲಸ ಬಿರುಸುಗೊಂಡಿದೆ.

ಶೆಟ್ಟರ್‌ ಯತ್ನಾಳ ಸೇರ್ಪಡೆಗೆ ಯಾವ ಪ್ರತಿಕ್ರಿಯೆ ನೀಡದಿದ್ದರೂ, ಪ್ರಹ್ಲಾದ ಜೋಶಿ ನಮ್ಮದೇನು ತಕರಾರಿಲ್ಲ. ಸಂಘದ ಹಿರಿಯರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂಬ ‘ಗೂಗ್ಲಿ’ ಎಸೆದಿದ್ದು, ಬಿಎಸ್‌ವೈ ತಂಡಕ್ಕೆ ನುಂಗಲಾರದ ತುತ್ತಾಗಿದೆ.

ಸಂಘದ ಹಿರಿಯರು ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯಿರಿ ಎಂದು ಸೂಚಿಸಿದ್ದು, ಇದು ಮುಳುವಾ ಗಿದೆ. ಯತ್ನಾಳ ವಿರೋಧಿ ಗುಂಪು ಈಗಾಗಲೇ ನೇರವಾಗಿ ನವದೆಹಲಿಯ ವರಿಷ್ಠರಿಗೆ ಸಾಮಾಜಿಕ ಜಾಲತಾಣದ ಮೂಲಕವೇ ಬಸನಗೌಡರ ಅಭಾಸಕಾರಿ ಹೇಳಿಕೆಗಳನ್ನು ರವಾನಿಸಿದೆ.

ಪ್ರಮೋದ್‌ ಮುತಾಲಿಕ್‌ ಜತೆಗಿನ ಸಖ್ಯ, ಅಡ್ವಾಣಿ ಕುರಿತಂತೆ ಹೈಕಮಾಂಡ್‌ ವಿರುದ್ಧ ನಡೆಸಿದ ಟೀಕೆಗಳ ವರದಿಯ ಅನುವಾದ, ಸ್ಥಳೀಯವಾಗಿ ಬಿಜೆಪಿಯ ಕಡು ವಿರೋಧಿ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಜತೆಗಿನ ಒಡನಾಟದ ವಿವರದ ದಾಖಲೆ ಕಳು ಹಿಸಿಕೊಟ್ಟಿದೆ ಎಂಬುದು ತಿಳಿದು ಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಬಾಗಲಕೋಟೆ ಜಿಲ್ಲಾ ಘಟಕ ಯತ್ನಾಳ ಸೇರ್ಪಡೆಗೆ ಅತೀವ ಒತ್ತಡ ಹಾಕುತ್ತಿದ್ದುದನ್ನು ತಪ್ಪಿಸಲು, ನಿಮ್ಮ ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರಲ್ಲೇ ಅವಕಾಶ ಮಾಡಿಕೊಡಿ ಎಂದು ಹೇಳುವ ಮೂಲಕ ಅವರ ಒತ್ತಡಕ್ಕೆ ಕಡಿವಾಣ ಹಾಕಿದೆ.

ಈ ವಿದ್ಯಮಾನ ಅರಿತ ಬಸನಗೌಡ ಬಿಎಸ್‌ವೈ ಜತೆ ಮಾತುಕತೆಯಲ್ಲಿ ವಿಜಯಪುರ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಹೊರುವೆ ಎಂದು ಹೇಳಿರುವುದಕ್ಕೆ, ವಿರೋಧಿ ಪಾಳೆಯ ಸಹ ಬಬಲೇಶ್ವರ ದಲ್ಲಿ ಎಂ.ಬಿ.ಪಾಟೀಲ ವಿರುದ್ಧ ಅಭ್ಯರ್ಥಿಯಾಗುವುದಿದ್ದರೇ ಸೇರ್ಪಡೆ ಮಾಡಿಕೊಳ್ಳಿ ಎಂದು ಟಾಂಗ್‌ ನೀಡಿದೆ ಎನ್ನಲಾಗಿದೆ.

ಸೇರ್ಪಡೆಗೆ ವರದಿ

ಬಿಜೆಪಿ ಹೈಕಮಾಂಡ್‌ ಅವಿಭಜಿತ ಜಿಲ್ಲೆಯಲ್ಲಿ ನಡೆಸಿದ ಆಂತರಿಕ ಸಮೀಕ್ಷೆ, ಕೇಂದ್ರ ಗುಪ್ತ ದಳದ ವರದಿಯಲ್ಲಿ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದರಿಂದ ಅನುಕೂಲವಿದೆ. ಯತ್ನಾಳ ಹೊರಗುಳಿದರೆ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯಾಗಲಿದೆ ಎಂಬ ಉಲ್ಲೇಖವಿದೆ. ಪಕ್ಷದ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry