ಶಿಲೆಗಳಿಗೆ ಮೂರ್ತರೂಪ ನೀಡುವ ಮೇಘರಾಜ

7

ಶಿಲೆಗಳಿಗೆ ಮೂರ್ತರೂಪ ನೀಡುವ ಮೇಘರಾಜ

Published:
Updated:
ಶಿಲೆಗಳಿಗೆ ಮೂರ್ತರೂಪ ನೀಡುವ ಮೇಘರಾಜ

ಹುಣಸಗಿ: ನೋಡುಗರ ಕಣ್ಣಿಗೆ ಬರಿ ಕಲ್ಲು ಕಂಡರೆ ಅದು ಶಿಲ್ಪಿಯ ಕೈಯಲ್ಲಿ ಸುಂದರ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಆ ಕೆಲಸದಲ್ಲಿ ಮೇಘರಾಜ ಪತ್ತಾರ ಅವರು ಕಳೆದ 25 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹುಣಸಗಿ ಸಮೀಪದ ನಾರಾಯಣಪುರ ಗ್ರಾಮದಲ್ಲಿ ವಿಶ್ವಕರ್ಮ ಶಿಲ್ಪಕಲಾ ಕೇಂದ್ರದಲ್ಲಿ ಮೂರ್ತಿಗಳನ್ನು ತಯಾರು ಮಾಡುವ ಮೂಲಕ ಎಲೆಮರೆಯ ಕಾಯಿಯಂತೆ ಇದ್ದಾರೆ.

ಕಿತ್ತು ತಿನ್ನುವ ಬಡತನದಿಂದಾಗಿ 7ನೇ ತರಗತಿವರೆಗೆ ಶಾಲೆ ಕಲಿಯಲು ಸಾಧ್ಯವಾಯಿತು. ಬಳಿಕ ಬಸವನ ಬಾಗೇವಾಡಿಯಲ್ಲಿ ಬಸ್ ನಿಲ್ದಾಣದಲ್ಲಿ ಚಾಕೊಲೇಟ್ ಮಾರಾಟ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸಿನಿಮಾ ಬಂದಿತ್ತು. ಅದನ್ನು ನೊಡಿದೆ ಆಗ ನನ್ನ ಜೀವನಕ್ಕೆ ಹೊಸ ದಾರಿ ಕಂಡಂತಾಯಿತು ಎಂದು ಮೇಘರಾಜ ಹೇಳಿದರು.

ಬಳಿಕ ಬಾಗಲಕೋಟೆಯ ಜಿ.ಬಿ.ಮಾಯಾಚಾರಿ ಅವರ ಬಳಿ ಶಿಲ್ಪ ಕಲೆಯನ್ನು ಕಲಿತೆ. ಆ ಸಂದರ್ಭದಲ್ಲಿ ಜಯಣ್ಣ ಚಿತ್ತವಾಡಗಿ ಅವರು ತಮ್ಮ ಮನೆಯಲ್ಲಿಯೇ ನನ್ನನ್ನು ಇಟ್ಟುಕೊಂಡು ಊಟ ವಸತಿ ಬಟ್ಟೆ ನೀಡಿದ್ದಾರೆ. ಅವರ ಋಣವನ್ನು ಎಂದಿಗೂ ತಿರಿಸಲಾಗದು. ಆಗ ಕಲೆಯನ್ನು ಕರಗತ ಮಾಡಿಕೊಂಡು ನಾರಾಯಣಪುರದಲ್ಲಿಯೇ ಶಿಲ್ಪಗಳನ್ನು ಕೆತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡೆ ಎಂದರು.

ಕೆಲಸಕ್ಕೆ ನನ್ನ ಮಗ ಸಿದ್ದಣ್ಣ ಕೂಡಾ ಸಹಕಾರಿಯಾಗಿ ನಿಂತಿದ್ದಾನೆ. ಬಾಗಲಕೋಟೆ ಜಿಲ್ಲೆಯ ಕಲಾದಗಿ ಬಳಿಕಯ ಶೆಲ್ಲಿಕೇರಿಯಿಂದ ಕಲ್ಲನ್ನು ತರಲಾಗುತ್ತದೆ. ಆ ಕಲ್ಲಿನಿಂದ ಮೂರ್ತಿ ಕೆತ್ತನೆ ಮಾಡಲಾಗುತ್ತದೆ ಎಂದು ವಿವರಿಸಿದರು.

ದಿನಕ್ಕೆ ನಾಲ್ಕುತಾಸು ಮಾತ್ರ ಕೆಲಸ: ಸ್ನಾನ ಮಾಡಿ ಶುಚಿಯಿಂದ ಕೆಲಸಕ್ಕೆ ಅಣಿಯಾದರೆ ಬೆಳಿಗ್ಗೆ ಎರಡು ತಾಸು ಮತ್ತು ಸಂಜೆ ಎರಡು ತಾಸು ಮಾತ್ರ ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತೇವೆ. ಇದರಿಂದಾಗಿ ಒಂದು ಮೂರ್ತಿ ರೂಪುಗೊಳ್ಳಲು 4 ತಿಂಗಳು ಸಮಯ ಬೇಕಾಗುತ್ತದೆ. ಆದರೆ, ಯಾರಿಗೂ ಇಷ್ಟೇ ಹಣ ನೀಡಬೇಕು ಎಂದು ಒತ್ತಾಯ ಮಾಡುವುದಿಲ್ಲ . ಅವರು ನೀಡಿದ ಹಣದಲ್ಲಿಯೇ ಸಂತೃಪ್ತ ಜೀವನ ನಡೆಸಿಕೊಂಡು ಬಂದಿದ್ದೇವೆ. ದೇವರು ಊಟಕ್ಕೆ ಕಡಿಮೆ ಮಾಡಿಲ್ಲ ಎಂದು ಅವರು ಹೇಳುತ್ತಾರೆ.

ಶ್ರೀದೇವಿ, ವೆಂಕಟೇಶ್ವರ, ಹನುಮಂತ, ತ್ರಯಂಬಕೇಶ್ವರಿ, ದುರ್ಗಾದೇವಿ ಸೇರಿದಂತೆ ದೇವತೆಗಳ ಮೂರ್ತಿಗಳೊಂದಿಗೆ ಶರಣೆ ತಂಗಡಗಿ ನೀಲಮ್ಮ, ಅಕ್ಕಮಹಾದೇವಿ, ವಾಲ್ಮೀಕಿ ಮೂರ್ತಿಗಳನ್ನು, ದೇವಸ್ಥಾನದ ಕಲ್ಲಿನ ಬಾಗಿಲುಗಳನ್ನು ಮಾಡಿದ್ದಾಗಿ ಹೇಳುತ್ತಾರೆ. ಇವರು ಕೆತ್ತನೆ ಮಾಡಿದ ಅಖಿಲಾಂಡೇಶ್ವರಿ ಮೂರ್ತಿ ಚೆನ್ನೈಗೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಗ್ರಾಮದ ಬಸವರಾಜ ಶಾರದಳ್ಳಿ ತಿಳಿಸಿದರು.

ಮೇಘರಾಜ ಅವರಿಗೆ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರಸಿವಿದ್ದನ್ನು ಹೊರತು ಪಡಿಸಿ ಸರ್ಕಾರದ ಸೌಲಭ್ಯಗಳು ದೊರಕಿಲ್ಲ. ಭೀಮಶೇನರಾವ ಕುಲಕರ್ಣಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry