ವೀರಭದ್ರೇಶ್ವರ ರಥೋತ್ಸವ ಭಲೇ ಜೋರು

7

ವೀರಭದ್ರೇಶ್ವರ ರಥೋತ್ಸವ ಭಲೇ ಜೋರು

Published:
Updated:

ಹುಮನಾಬಾದ್: ಪಟ್ಟಣದ ರಥ ಮೈದಾನದಲ್ಲಿ ಶನಿವಾರ ಜರುಗಿದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಜಾತ್ರೆ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ಹಿರೇಮಠದ ರೇಣುಕ ಗಂಗಾ ಧರ ಸ್ವಾಮೀಜಿ ಅವರು ರಥದ ಮುಂಭಾಗದಲ್ಲಿ ಹಂದರದಲ್ಲಿ ವೀರಭದ್ರ ಸ್ವಾಮಿ ನೈವೇದ್ಯಕ್ಕಾಗಿ ಇಡಲಾಗಿದ್ದ ಎಳ್ಳಿನ ಹೋಳಿಗೆ, ಜೋಳದ ಅನ್ನ ಮೊದಲಾದ ನೈವೇದ್ಯಗಳ ಮೇಲಿಂದ ಹಾಯ್ದು ರಥದಲ್ಲಿ ಆಸೀನರಾದರು. ಬಳಿಕ ಪರಂಪರೆಯಂತೆ ಕಲಬುರ್ಗಿ ಶರಣಸಪ್ಪ ಕಲ್ಯಾಣಿ ಅವರು ರಥ ಹತ್ತುತ್ತಿದ್ದಂತೆ ಭಕ್ತ ಸಮುದಾಯ ಮಧ್ಯದಿಂದ ಕರತಾಡನ ಸದ್ದಿನೊಂದಿಗೆ ಬಂದ ವೀರಭದ್ರೇಶ್ವರ ಮಹಾರಾಜಕೀ...ಜೈ ಎಂಬ ಘೋಷಗಳೊಂದಿಗೆ ರಥೋತ್ಸವವಕ್ಕೆ ಚಾಲನೆ ದೊರೆಯಿತು.

ವಿಜಯಪುರದ ಸಿದ್ದೇಶ್ವರ ನಂದಿಕೋಲು, ಸೊಲ್ಲಾಪುರದ ಬ್ರಾಸ್‌ ಬ್ಯಾಂಡ್‌, ಕನಕಟ್ಟಾ, ಬಸವಕಲ್ಯಾಣ, ಸ್ಥಳೀಯ ಆನಂದ ಬ್ರಾಸ್‌ಬ್ಯಾಂಡ್‌, ಬೀಳಗಿಯ ಡೋಲು, ಕರಡಿಮಜಲು, ಡೊಳ್ಳು ಕುಣಿತ ಇತ್ಯಾದಿ ತಂಡಗಳ ಆಕರ್ಷಕ ಪ್ರದರ್ಶನ ಒಂದರ ಹಿಂದೆ ಒಂದು ಸಾಗಿದವು. ಈ ದೃಶ್ಯಗಳು ಕಣ್ಮನಸೆಳೆದವು. ರಥ ಬೀದಿ ಸಂಪೂರ್ಣ ಜನರಿಂದ ತುಂಬಿದ್ದರಿಂದ ಸುತ್ತಲಿನ ಕಟ್ಟಡಗಳನ್ನು ಜನ ಹತ್ತಿ ಕುಳಿತಿರುವುದು ಸಾಮಾನ್ಯವಾಗಿತ್ತು.

ರಥ ಸಾಗಿ ಬರುವ ವೇಳೆ ಭಕ್ತರು ಕಲ್ಲು ಸಕ್ಕರೆ, ಖಾರಿಕು, ವಿವಿಧ ಹಣ್ಣುಗಳು ಸೇರಿದಂತೆ ನ್ಯಾಣ್ಯಗಳನ್ನು ರಥದತ್ತ ಎಸೆದು ಭಕ್ತಿಸೇವೆ ಸಲ್ಲಿಸಿದರು. ರಥದಲ್ಲಿ ಆಸೀನರಾದ ಸ್ವಾಮೀಜಿ ಭಕ್ತರತ್ತ ಎಸೆದ ಪ್ರಸಾದ ಹಿಡಿಯಲು ನಾಮುಂದು ತಾಮುಂದು ಎಂದು ನೂಕುನುಗ್ಗಲು ನಡೆಯಿತು. ಕಳೆದ ವರ್ಷ 2ಕ್ಕೆ ನಡೆದಿದ್ದ ರಥೋತ್ಸವ ಈ ವರ್ಷ 3.20 ಗಂಟೆಗೆ ನೆರವೇರಿತು.

ಭೂಸೇನಾ ನಿಗಮದ ಅಧ್ಯಕ್ಷ ರಾಜಶೇಖರ ಪಾಟೀಲ, ತಹಶೀಲ್ದಾರ್‌ ಡಿ.ಎಂ.ಪಾಣಿ, ಗೌರವ ಕಾರ್ಯದರ್ಶಿ ವೀರಣ್ಣ ಎಚ್‌.ಪಾಟೀಲ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಬೀದರ್‌–ಕಲಬುರ್ಗಿ ಹಾಗೂ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಅಪಾರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಭಾರಿ ಭದ್ರತೆ: ರಥೋತ್ಸವದಲ್ಲಿ ಲಕ್ಷಾಂತರ ಸಂಖ್ಯೆ ಭಕ್ತರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಪೊಲೀಸ್‌ ಬಿಗಿ ಬಂದೊ ಬಸ್ತ್‌ ಮಾಡಲಾಗಿತ್ತು. ರಥ ಮೈದಾನ. ದೇವಸ್ಥಾನ ಮುಂಭಾಗ ಹಾಗೂ ಪ್ರಮುಖ ವೃತ್ತಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀ ಸರನ್ನು ನಿಯೋಜಿಸಲಾಗಿತ್ತು. ಇದರಿಂದ ರಥೋತ್ಸವ ಶಾಂತಿಯುತವಾಗಿ ಅಂತ್ಯಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry