ಪ್ರತಿಯೊಬ್ಬರೂ ಮತ ಚಲಾಯಿಸಿ

7

ಪ್ರತಿಯೊಬ್ಬರೂ ಮತ ಚಲಾಯಿಸಿ

Published:
Updated:

ಕಲಬುರ್ಗಿ: ‘ನೂರರಷ್ಟು ಮತದಾನ ಮಾಡುವುದರಿಂದ ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗುತ್ತಾರೆ. ಇದರಿಂದ ದೇಶದ ಪ್ರಗತಿಗೂ ಸಹಕಾರಿಯಾಗುತ್ತದೆ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು. ಇಲ್ಲಿನ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಚುನಾವಣೆಯಲ್ಲಿ ಜಾತಿ, ಹಣ, ಧಾರ್ಮಿಕ ಒತ್ತಡ ಸೇರಿದಂತೆ ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಆಮಿಷಗಳಿಗೆ ಒಳಗಾಗುವುದು ಅಪರಾಧ. ಶಾಲಾ ಮಕ್ಕಳು ಈ ಬಗ್ಗೆ ತಮ್ಮ ಪೋಷಕರಿಗೆ ತಿಳಿಹೇಳಬೇಕು’ ಎಂದರು.

‘ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬಹುಮುಖ್ಯ ಘಟ್ಟವಾಗಿದೆ. ಮಾರ್ಚ್‌ ಕೊನೆಯ ವಾರದಲ್ಲಿ ಚುನಾವಣೆ ಘೋಷಣೆ ಆಗಬಹುದು. ಈ ವರ್ಷ 70 ಸಾವಿರ ಹೊಸ ಮತದಾರರ ಸೇರ್ಪಡೆ ಆಗಿದೆ. ಜಿಲ್ಲೆಯಲ್ಲಿ ಹೊಸ ಮತಗಟ್ಟೆ 109 ಸೇರಿದಂತೆ 2,267 ಮತಗಟ್ಟೆಗಳಿವೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ ಮಾತನಾಡಿ, ‘ಪ್ರತಿ ವ್ಯಕ್ತಿ ಮತದಾನ ತಪ್ಪಿಸಿಕೊಳ್ಳಬಾರದು. ಜವಾಬ್ದಾರಿ ಎಂದು ಅರಿತು ಮತದಾನ ಮಾಡುವುದಲ್ಲದೇ ಮತ್ತೊಬ್ಬರಿಗೂ ಕರೆದುಕೊಂಡು ಹೋಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ‘ಸುಲಭ ಮತದಾನಕ್ಕೆ ಚುನಾವಣಾ ಆಯೋಗವು ಅಂಗವಿಕಲರು, ಹಿರಿಯ ನಾಗರಿಕರಿಗೆ ತೊಂದರೆ ಆಗದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. 18 ವರ್ಷ ತುಂಬಿದ ಎಲ್ಲರಿಗೂ ಮತದಾನದ ಹಕ್ಕಿದೆ’ ಎಂದು ಹೇಳಿದರು.

‘ಮತದಾನ ಜಾಗೃತಿಗೆ ಸ್ವೀಪ್‌ ಸಮಿತಿ ವತಿಯಿಂದ ಶಾಲಾ ಹಂತದಿಂದಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಹೇಳಿದರು.

ಪಾಲಿಕೆ ಆಯುಕ್ತ ರಘುನಂದನ್‌ ಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ, ಜೇವರ್ಗಿ ತಹಶೀಲ್ದಾರ್‌ ಅಕೃತಿ ಸಾಗರ್‌, ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ್‌, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಇದ್ದರು. ಉಪ ವಿಭಾಗಾಧಿಕಾರಿ ಬಿ.ಸುಶೀಲಾ ಸ್ವಾಗತಿಸಿದರು. ಸ್ವಚ್ಛ ಭಾರತ ಜಿಲ್ಲಾ ಸಂಯೋಜಕಿ ಗುರುಬಾಯಿ ನಿರೂಪಿಸಿದರು. ಡಿಡಿಪಿಐ ಶಾಂತಗೌಡ ಪಾಟೀಲ ವಂದಿಸಿದರು.

ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಿಸಲಾಯಿತು. ಮತದಾನ ಜಾಗೃತಿ ಅಂಗವಾಗಿ ವಿವಿಧ ಹಂತದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಫಲಕ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಜಿಲಾನಾಬಾದ್‌ ಉರ್ದು ಪಿಯು ಕಾಲೇಜು ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ ಖವ್ವಾಲಿ ಗಮನ ಸೆಳೆಯಿತು.

ವಾಕ್‌ಥಾನ್‌

ಕಾರ್ಯಕ್ರಮಕ್ಕೂ ಮೊದಲು ಮತದಾನ ಜಾಗೃತಿ ಸಂಬಂಧ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಡಾ.ಎಸ್‌.ಎಂ.ಪಂಡಿತ ರಂಗಮಂದಿರದವರೆಗೆ ವಾಕ್‌ಥಾನ್‌ ಹಮ್ಮಿಕೊಳ್ಳಲಾಗಿತ್ತು.

ಅಧಿಕಾರಿಗಳು, ಗೃಹರಕ್ಷಕ ದಳ ಸಿಬ್ಬಂದಿ, ಜಿಲ್ಲೆಯ ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಸುಮಾರು 8 ಸಾವಿರ ಜನರು ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry