ರಮೇಶ್‌ಕುಮಾರ್‌ ಅವರಿಗೆ ಅಧಿಕಾರದ ಮದ

7

ರಮೇಶ್‌ಕುಮಾರ್‌ ಅವರಿಗೆ ಅಧಿಕಾರದ ಮದ

Published:
Updated:
ರಮೇಶ್‌ಕುಮಾರ್‌ ಅವರಿಗೆ ಅಧಿಕಾರದ ಮದ

ಕೋಲಾರ: ‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಅವರಿಗೆ ಅಧಿಕಾರದ ಮದವೇರಿದೆ. ರಾಜಕೀಯವಾಗಿ ನನ್ನನ್ನು ನಿರ್ನಾಮ ಮಾಡಲು ಅವರು ರೂಪಿಸಿರುವ ಸಂಚು ತಿರುಗು ಬಾಣವಾಗುತ್ತದೆ’ ಎಂದು ಶಾಸಕ ವರ್ತೂರು ಪ್ರಕಾಶ್‌ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯವಾಗಿ ವಿವಿಧ ಆಡಳಿತ ಮಂಡಳಿ ಗಳಲ್ಲಿ ನಾಮನಿರ್ದೇಶಿತ ಸದಸ್ಯರಾಗಿದ್ದ ತನ್ನ 21 ಬೆಂಬಲಿಗರ ಸದಸ್ಯತ್ವವನ್ನು ಸರ್ಕಾರ ಏಕಾಏಕಿ ರದ್ದುಪಡಿಸಿದೆ. ಇದರ ಸೂತ್ರಧಾರಿ ರಮೇಶ್‌ಕುಮಾರ್‌ ತಮ್ಮ ಕುತಂತ್ರಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಹರಿಹಾಯ್ದರು.

‘ರಾಜ್ಯಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಮತ್ತು ಸಚಿವ ಡಿ.ಕೆ.ಶಿವಕುಮಾರ್‌ ನನ್ನನ್ನು ಒಳಗೊಂಡಂತೆ ಹಲವು ಪಕ್ಷೇತರ ಶಾಸಕರ ಬೆಂಬಲ ಕೋರಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡುವುದಾಗಿ ಮತ್ತು ಸ್ಥಳೀಯ ಆಡಳಿತ ಮಂಡಳಿಗಳಿಗೆ ಬೆಂಬಲಿಗರನ್ನು ನಾಮನಿರ್ದೇಶಿತ ಸದಸ್ಯರಾಗಿ ನೇಮಿಸುತ್ತೇವೆಂದು ಆ ನಾಯಕರು ಮಾತು ಕೊಟ್ಟಿದ್ದರು’ ಎಂದು ಅವರು ಹೇಳಿದರು.

ಪಕ್ಷೇತರ ಶಾಸಕರೆಲ್ಲಾ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸಿದ್ದೆವು. ಕಾಂಗ್ರೆಸ್‌ ನಾಯಕರು ಕೊಟ್ಟ ಮಾತಿನಂತೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟರು ಮತ್ತು ಬೆಂಬಲಿಗರನ್ನು ನಾಮನಿರ್ದೇಶಿತ ಸದಸ್ಯರಾಗಿ ನೇಮಿಸಿದರು. ಆದರೆ, ಈಗ ಆ ಸದಸ್ಯರನ್ನು ವಜಾ ಮಾಡಿ ವಚನ ಭ್ರಷ್ಟರಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯವಿಲ್ಲದ ಶೋಷಿತ ಸಮುದಾಯಗಳ ಮುಖಂಡರಿಗೆ ನಾಮನಿರ್ದೇಶಿತ ಸದಸ್ಯತ್ವ ಕೊಡಿಸಿದ್ದೆ. ಆದರೆ, ಸರ್ಕಾರ ಅವರನ್ನು ವಜಾಗೊಳಿಸಿ ತಪ್ಪು ಮಾಡಿದೆ ಎಂದು ದೂರಿದರು.

ಮುನಿಯಪ್ಪರ ಪಾತ್ರವಿಲ್ಲ: ರಮೇಶ್‌ ಕುಮಾರ್‌ ಮುಖ್ಯಮಂತ್ರಿ ಮೇಲೆ ಒತ್ತಡ ತಂದು ತನ್ನ ಬಣದ ನಾಮನಿರ್ದೇಶಿತ ಸದಸ್ಯರು ವಜಾ ಆಗುವಂತೆ ಮಾಡಿದ್ದಾರೆ. ಇದರಲ್ಲಿ ಸಂಸದ ಕೆ.ಎಚ್‌. ಮುನಿಯಪ್ಪ ಅವರ ಪಾತ್ರವಿಲ್ಲ. ಅವರು ಶೋಷಿತ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ರಮೇಶ್‌ಕುಮಾರ್‌ ಮಾತ್ರ ಇಂತಹ ಚಿಲ್ಲರೆ ಕೆಲಸ ಮಾಡಲು ಸಾಧ್ಯ ಎಂದು ವ್ಯಂಗ್ಯವಾಡಿದರು.

‘ರಮೇಶ್‌ ಕುಮಾರ್‌, ಕೋಲಾರ ದಲ್ಲಿ ಎರಡು ತಿಂಗಳ ಹಿಂದೆ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ನಾನು ಪಾಲ್ಗೊಳ್ಳದಂತೆ ಸಂಚು ಮಾಡಿದರು. ವರ್ತೂರು ಪ್ರಕಾಶ್‌ ಸಮಾವೇಶಕ್ಕೆ ಬಂದರೆ ತಾನು ಗೈರಾಗುತ್ತೇನೆ ಎಂದು ಅವರು ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ್ದರು. ಹೀಗಾಗಿ ನಾನು ಸಮಾವೇಶದಿಂದ ದೂರ ಉಳಿದೆ. ನಾನು ಕಾಂಗ್ರೆಸ್‌ ಸೇರಬೇಕೆಂದು ಅರ್ಜಿ ಹಾಕಿದವನಲ್ಲ. ಅದರ ಅಗತ್ಯವೂ ಇಲ್ಲ’ ಎಂದು ತಿಳಿಸಿದರು.

ಸೇಡು ತೀರಿಸಿಕೊಳ್ಳುತ್ತೇನೆ: ‘ಜೆಡಿ ಎಸ್‌ನ ಕೆ.ಶ್ರೀನಿವಾಸಗೌಡರ ಜತೆ ಒಳ ಒಪ್ಪಂದ ಮಾಡಿಕೊಂಡಿರುವ ರಮೇಶ್‌ಕುಮಾರ್‌ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೊರಟಿ ದ್ದಾರೆ. ನಾನು ಮತ್ತು ಮುನಿಯಪ್ಪ, ಅವರ ಗುರಿ. ಶ್ರೀನಿವಾಸಗೌಡರನ್ನು ಗೆಲ್ಲಿಸುವ ಉದ್ದೇಶಕ್ಕಾಗಿ ರಮೇಶ್‌ ಕುಮಾರ್‌ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಸಮರ್ಥರನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಮಾಡಿದ್ದಾರೆ. ಕಾಂಗ್ರೆಸ್‌ನ ನಜೀರ್‌ ಅಹಮ್ಮದ್‌ ನನಗೆ ಸರಿಯಾದ ಎದುರಾಳಿ. ಅವರು ಅಖಾಡಕ್ಕಿಳಿದರೆ ತ್ರಿಕೋನ ಸ್ಪರ್ಧೆ ಖಚಿತ’ ಎಂದರು.

‘ಶ್ರೀನಿವಾಸಪುರ ಕ್ಷೇತ್ರದಲ್ಲಿ ರಮೇಶ್‌ಕುಮಾರ್‌ಗೆ ಸೋಲಿನ ರುಚಿ ತೋರಿಸುವುದು ನನ್ನ ಪರಮೋಚ್ಛ ಗುರಿ. ಶೋಷಿತ ಸಮುದಾಯಗಳು ಅವರ ಕುತಂತ್ರ ತಿಳಿಯಬೇಕು. ಅಹಿಂದ ವರ್ಗದ ಜತೆ ಶ್ರೀನಿವಾಸಪುರಕ್ಕೆ ಲಗ್ಗೆಯಿಟ್ಟು ಸೇಡು ತೀರಿಸಿಕೊಳ್ಳುತ್ತೇನೆ’ ಎಂದು ಸವಾಲು ಹಾಕಿದರು. ಶಾಸಕರ ಬೆಂಬಲಿಗರಾದ ಬೆಗ್ಲಿ ಪ್ರಕಾಶ್, ರಘುರಾಮ್, ಕೃಷ್ಣ, ಜಯದೇವಪ್ರಸನ್ನ, ನಾರಾಯಣಸ್ವಾಮಿ, ಕುಮಾರ್ ಹಾಜರಿದ್ದರು.

* * 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸ ಬಯಸಿದರೆ ಕ್ಷೇತ್ರ ತ್ಯಾಗ ಮಾಡುತ್ತೇನೆ. ನಮ್ಮಿಬ್ಬರ ನಡುವೆ ಏನೇ ಏರುಪೇರಿದ್ದರೂ ಬೆನ್ನಿಗೆ ನಿಲ್ಲುತ್ತೇನೆ

ವರ್ತೂರು ಪ್ರಕಾಶ್‌ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry