ಪಕ್ಷ ವಿರೋಧಿ ಚಟುವಟಿಕೆ: ಉಚ್ಛಾಟನೆ ಸಂದೇಶ ರವಾನೆ

7

ಪಕ್ಷ ವಿರೋಧಿ ಚಟುವಟಿಕೆ: ಉಚ್ಛಾಟನೆ ಸಂದೇಶ ರವಾನೆ

Published:
Updated:
ಪಕ್ಷ ವಿರೋಧಿ ಚಟುವಟಿಕೆ: ಉಚ್ಛಾಟನೆ ಸಂದೇಶ ರವಾನೆ

ಕೋಲಾರ: ಶಾಸಕ ವರ್ತೂರು ಪ್ರಕಾಶ್ ಬಣದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ಉಚ್ಛಾಟನೆಯ ಸಂದೇಶ ರವಾನಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶನಿವಾರ ನಡೆದ ಪಕ್ಷದ ಸಭೆಯಲ್ಲಿ ಮುಖಂಡರು, ‘ಕಾಂಗ್ರೆಸ್‌ನಿಂದ ಬಿ ಫಾರಂ ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೀರಿ. ಹೀಗಾಗಿ ಪಕ್ಷಕ್ಕೆ ನಿಷ್ಠರಾಗಿರಬೇಕು. ಈ ಸಂಬಂಧ ಈಗಾಗಲೇ ನೋಟಿಸ್‌ ನೀಡಿದ್ದೇವೆ. ಆದರೂ ಪಕ್ಷ ದ್ರೋಹದ ಕೆಲಸ ಮಾಡುತ್ತಿದ್ದೀರಿ’ ಎಂದು ಶಾಸಕರ ಬೆನ್ನಿಗೆ ನಿಂತಿರುವ ಜಿ.ಪಂ ಮತ್ತು ತಾ.ಪಂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ‘15 ವರ್ಷದಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿದ್ದೆವು. ಜಿ.ಪಂ ಚುನಾವಣೆ ವೇಳೆ ವರ್ತೂರು ಪ್ರಕಾಶ್ ಕಾಂಗ್ರೆಸ್‌ನ ಬಿ ಫಾರಂ ವಿತರಿಸಿದ್ದರು. ಅವರ ನೇತೃತ್ವದಲ್ಲೇ ಗೆದ್ದು ಬಂದಿದ್ದೇವೆ. ಆದರೆ, ಕಾಂಗ್ರೆಸ್‌ನಿಂದ ನಮ್ಮನ್ನು ಗುರುತಿಸುವ ಕೆಲಸ ಆಗಲಿಲ್ಲ. ಪದಾಧಿಕಾರಿಗಳ ಆಯ್ಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಸೇರಿದಂತೆ ಯಾವುದೇ ಸಂದರ್ಭದಲ್ಲೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬಳಸಿಕೊಂಡಿದ್ದೀರಿ, ಗೆದ್ದ ನಂತರ ಅಭಿನಂದನೆ ಸಲ್ಲಿಕೆ ಸೇರಿದಂತೆ ಪಕ್ಷದ ಯಾವುದೇ ವಿಚಾರದಲ್ಲೂ ನಮ್ಮನ್ನು ಪರಿಗಣಿಸಲಿಲ್ಲ. ವರ್ತೂರು ಪ್ರಕಾಶ್‌ರ ಬೆಂಬಲಿಗರನ್ನು ನಾಮನಿರ್ದೇಶಿತ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗಿದೆ’ ಎಂದು ಜಿ.ಪಂ ಸದಸ್ಯರಾದ ಅರುಣ್‌ಪ್ರಸಾದ್‌ ಮತ್ತು ರೂಪಶ್ರೀ ಆಕ್ರೋಶ ವ್ಯಕ್ತಪಡಿಸಿದರು.

ನಿಷ್ಠೆ ಪ್ರಶ್ನಿಸುವುದಿಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್, ‘ಈವರೆಗೆ ಆಗಿರುವುದನ್ನು ಚರ್ಚಿಸುವುದು ಬೇಡ. ನೀವೆಲ್ಲಾ ಪಕ್ಷದ ಬಿ ಫಾರಂನಿಂದ ಗೆದ್ದಿದ್ದೀರಿ. ನಿಮ್ಮ ನಿಷ್ಠೆ ಪ್ರಶ್ನಿಸುವುದಿಲ್ಲ. ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದ್ದೆ. ಪಕ್ಷದ ವತಿಯಿಂದ ಸಂಹವನದ ಕೊರತೆಯಾಗಿದೆ. ಮುಂದೆ ಇದಕ್ಕೆ ಅವಕಾಶ ನೀಡಬಾರದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ನಾಮನಿರ್ದೇಶಿತ ಸದಸ್ಯರನ್ನು ಸರ್ಕಾರ ನೇಮಕ ಮಾಡಿತ್ತು. ಈಗ ಸರ್ಕಾರವೇ ಅವರ ಸದಸ್ಯತ್ವ ರದ್ದುಪಡಿಸಿದೆ. ಇದರಲ್ಲಿ ಪಕ್ಷದ ಪಾತ್ರವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್‌, ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಯವರ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದರು.

ಲೋಪವಾಗಿದೆ: ‘ಭವ್ಯ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷದಲ್ಲಿ ಶಿಸ್ತು ಇದೆ. ಹಲವು ತಿಂಗಳಿನಿಂದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರ ನೇಮಕವಾಗಿರಲಿಲ್ಲ. ಈಗ ನೇಮಕಾತಿ ನಡೆದಿದೆ. ಪಕ್ಷದಿಂದ ಗೆದ್ದ ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಲೋಪವಾಗಿದೆ. ಪಕ್ಷದಲ್ಲಿ ಯಾವುದೂ ಶಾಶ್ವತವಲ್ಲ. ಅಗತ್ಯವಿದ್ದರೆ ಚರ್ಚಿಸಿ ಬದಲಾವಣೆ ಮಾಡಬಹುದು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಅನಿಲ್‌ಕುಮಾರ್ ಸಲಹೆ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ವೆಂಕಟಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಪ್ರಸಾದ್‌ಬಾಬು, ಮಾಜಿ ಸಚಿವ ಕೆ.ಎ.ನಿಸಾರ್ ಅಹಮ್ಮದ್‌, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈ.ಶಿವಕುಮಾರ್, ನಗರಸಭೆ ಸದಸ್ಯ ಸಲಾವುದ್ದೀನ್ ಬಾಬು ಹಾಜರಿದ್ದರು.

ಸಭೆಯಲ್ಲಿ ಛೀಮಾರಿ

ವರ್ತೂರು ಪ್ರಕಾಶ್‌ ಜತೆ ಗುರುತಿಸಿಕೊಂಡಿರುವ ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ಅರುಣ್ ಪ್ರಸಾದ್, ಉಷಾ, ರೂಪಶ್ರೀ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸಿ.ಲಕ್ಷ್ಮೀ, ಸದಸ್ಯರಾದ ಆರ್.ಮಂಜುನಾಥ್, ಮುದ್ದುಮಣಿ, ಸುಜಾತಾ, ಸುನಿತಾ ಮತ್ತು ಮಂಜುಳಾ ಅವರಿಗೆ ಕಾಂಗ್ರೆಸ್‌ ಜಿಲ್ಲಾ ಘಟಕವು ಸಭೆಯಲ್ಲಿ ಛೀಮಾರಿ ಹಾಕಿತು.

* * 

ಕಾಂಗ್ರೆಸ್‌ನಿಂದ ಜಿ.ಪಂ ಮತ್ತು ತಾ.ಪಂಗೆ ಆಯ್ಕೆಯಾಗಿರುವ ಸದಸ್ಯರು ನೆಪಕ್ಕೆ ಪಕ್ಷದ ಸಭೆಗೆ ಹೋಗಿದ್ದಾರೆ. ಆದರೆ, ಅವರೆಲ್ಲಾ ನನಗೆ ನಿಷ್ಠರಾಗಿದ್ದಾರೆ. ಕಾಂಗ್ರೆಸ್ ಮುಖಂಡರು ಬೇಸರವಾಗಬಾರದೆಂದು ಆ ಸದಸ್ಯರನ್ನು ನಾನೇ ಸಭೆಗೆ ಕಳುಹಿಸಿದ್ದೇನೆ.

ವರ್ತೂರು ಪ್ರಕಾಶ್‌ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry