ಮರುಹುಟ್ಟು ಪಡೆದ ಗೋವಿಂದರಾಜಸ್ವಾಮಿ ದೇವಾಲಯ

7

ಮರುಹುಟ್ಟು ಪಡೆದ ಗೋವಿಂದರಾಜಸ್ವಾಮಿ ದೇವಾಲಯ

Published:
Updated:
ಮರುಹುಟ್ಟು ಪಡೆದ ಗೋವಿಂದರಾಜಸ್ವಾಮಿ ದೇವಾಲಯ

ಹನುಮಸಾಗರ: ಇಲ್ಲಿನ ಅನಂತಶಯನ ದೇವಾಲಯವು ದೇವಸ್ಥಾನ ಅಭಿವೃದ್ಧಿ ಮಂಡಳಿಯ ಅವಿರತ ಪರಿಶ್ರಮದಿಂದಾಗಿ ಜೀರ್ಣೋದ್ಧಾರದ ಕಂಡಿದೆ. ಸದ್ಯ ದೇವಾಲಯ ಶಿಲ್ಪಕಲೆಯ ಖನಿಯಾಗಿದೆ ಎಂಬುದು ಕಂಡು ಬರುತ್ತದೆ. ಬೆಳಿಗ್ಗೆ ದೇವಾಲಯಕ್ಕೆ ಸೂರ್ಯನ ಹೊಂಬಣ್ಣದ ಕಿರಣಗಳು ಬಿದ್ದ ಸಮಯದಲ್ಲಿ ದೇವಾಲಯ ಬಂಗಾರದ ವರ್ಣದಂತೆ ಮನಮೋಹಕವಾಗಿ ಕಾಣುತ್ತದೆ.

ಸುಮಾರು ಮುನ್ನೂರು ವರ್ಷಗಳಷ್ಟು ಹಳೆಯದು ಎಂದು ಹೇಳುವ ಗೋವಿಂದರಾಜಸ್ವಾಮಿ ದೇವಸ್ಥಾನ ತನ್ನಲ್ಲಿ ಅದ್ಭುತವಾದ ಶಿಲ್ಪಕಲೆಯನ್ನು ತುಂಬಿಕೊಂಡಿದ್ದರೂ ನೂರಾರು ವರ್ಷಗಳಿಂದ ಸುಣ್ಣ ಬಣ್ಣ ಬಳಿಯುತ್ತಾ ಬಂದಿದ್ದರಿಂದ ಗೋಡೆ, ಕಂಬಗಳ, ಮುಖ್ಯದ್ವಾರದ ಮೇಲೆ ಇದ್ದ ಕಲಾತ್ಮಕ ಕೆತ್ತನೆಗಳು ಮುಚ್ಚಿ ಹೋಗಿದ್ದವು. ಗೋಡೆಯ ಮೇಲೆ ಎರಡು ಅಂಗುಲದಷ್ಟು ದಪ್ಪವಾದ ಸುಣ್ಣ, ಬಣ್ಣದ ದಪ್ಪ ಲೇಪನ ಹೊಂದಿತ್ತು. ಸ್ಯಾಂಡ್ ಬ್ಲಾಸ್ಟ್ ಯಂತ್ರದಿಂದ ಕಲ್ಲಿನ ಮೇಲೆ ಇದ್ದ ಮುಸುಕಿನ ಪೊರೆ ಹಾರಿತೊ ಆಗ ಲಕ್ಷಣವಾದ ಕಲಾಕೃತಿಗಳು ಗೋಚರಿಸಲಾರಂಭಿಸಿದವು.

ಗೋವಿಂದರಾಜಸ್ವಾಮಿ ದೇವಾಲಯದ ಮುಖ್ಯದ್ವಾರ ಅತ್ಯಂತ ನಾಜೂಕಿನ ಕಲೆ ಹೊಂದಿದ್ದರೆ, ಲಕ್ಷ್ಮೀ ದೇವಾಲಯದ ಮೇಲ್ಚಾವಣಿಯಲ್ಲಿ ಧಾರ್ಮಿಕ ಕಥೆಗಳನ್ನು ಹೇಳುವ ಹಲವಾರು ಉಬ್ಬು ಕೆತ್ತನೆಗಳು ಕಂಡು ಬರುತ್ತವೆ. ಬೃಹದಾಕಾರದ ಕಲ್ಲಿನ ಬಾಗಿಲಿನ ಮೇಲೆ ಮಾವಿನ ಎಲೆಗಳಿಂದ ಮಾಡಿದ ತೋರಣ, ಹಾವಿನ ಬಾಲ ಹಿಡಿದು ಹಾರುತ್ತಿರುವ ಗರುಡ, ಕಮಲದ ಎಸಳು, ಮುತ್ತುಗಳನ್ನು ಪೋಣಿಸಿದಂತೆ ಕೆತ್ತನೆ ಮಾಡಿದ ಹೂವಿನ ಹಾರ, ಅಂಬಾರಿ ವರ್ಣನೆ, ಆಕರ್ಷಕ ಸರಪಳಿ, ಹೀಗೆ ಬಾಗಿಲಿನ ಮೇಲೆ ಇಂಚಿಂಚು ಜಾಗ ಖಾಲಿ ಬಿಡದಂತೆ ಕೆತ್ತನೆ ಮಾಡಲಾಗಿದೆ.

ದೇವಾಲಯ ಬದಾಮಿ ಚಾಲುಕ್ಯರ ಶಿಲ್ಪಕಲೆಯನ್ನೇ ಹೋಲುತ್ತಿದ್ದರೂ ಲಕ್ಷ್ಮೀ ದೇವಾಲಯದಲ್ಲಿರುವ ಓಲಗದ ದಂಡಿನ ಚಿತ್ರವೊಂದು ನವಾಬರ ವೇಷ ಭೂಷಣವನ್ನು ಹೊಂದಿದೆ. ಆಗ ನವಾಬರ ಆಳ್ವಿಕೆಯ ಪ್ರಭಾವವನ್ನು ತೋರಿಸುತ್ತದೆ ಎಂದು ಸುರೇಶಬಾಬು ಜಮಖಂಡಿಕರ ಹೇಳುತ್ತಾರೆ.

ದೇವಾಲಯದ ವಿವಿಧ ಭಾಗಗಳಲ್ಲಿ ಅನೇಕ ಚಿಕ್ಕ ಚಿಕ್ಕ ನಾಗರ ಹಾವುಗಳಿಂದ ಕೆತ್ತಲ್ಪಟ್ಟ ಶಿಲ್ಪಗಳು ಇವೆ. ಅಲ್ಲದೆ ಇಲ್ಲಿನ ಭಿತ್ತಿಗಳಲ್ಲಿ (ಗೋಡೆ) ಪುರಾಣದ ಕಥೆಗಳನ್ನಾಧರಿಸಿದ ಸುಂದರ ಶಿಲ್ಪಕಲಾ ಕೆತ್ತನೆಗಳಿವೆ. ವಿಷ್ಣುವಿನ ಸ್ತುತಿಸಿದಂತೆ ದೇವನಾಗರ, ವಿರಾಜಮಾನವಾಗಿರುವ ಅನಂತಪದ್ಮನಾಭ ಮೂರ್ತಿ, ಲಕ್ಷ್ಮೀ ದೇವಸ್ಥಾನದಲ್ಲಿರುವ ಕಲಾತ್ಮಕ 16 ಕಂಬಗಳು ಇವೆ. ಸ್ಥಳಿಯವಾಗಿಯೇ ದೊರಕುವ ತಿಳಿಗುಲಾಬಿ ಬಣ್ಣದ ಬೃಹದಾಕಾರದ ಕಲ್ಲುಗಳನ್ನೇ ಬಳಸಲಾಗಿದೆ. ಇದನ್ನು ಉತ್ತಮ ಐತಿಹಾಸಿಕ ತಾಣ ಮಾಡುವ ಉದ್ದೇಶವಿದೆ ಎಂದು ಟ್ರಸ್ಟಿ ಪ್ರಾಣೇಶಾಚಾರ ಪುರೋಹಿತ ಹೇಳಿದರು.

ಕಲೆ ಉಳಿಸುವ ಯತ್ನವಾಗಿ ದೇವಸ್ಥಾನ ಸಮಿತಿಯಿಂದ ಜೀರ್ಣೋದ್ಧಾರ ಮಾಡುವ ತೀರ್ಮಾನಕ್ಕೆ ಬಂದೆವು. ನಿರಂತರ ಒಂದು ವಾರದವರೆಗೆ ಭಾರಿ ಪ್ರಮಾಣದಲ್ಲಿ ಗಾಳಿ ಒತ್ತಡದ ನಿರ್ಮಿಸಬಲ್ಲ ಸ್ಯಾಂಡ್ ಬ್ಲಾಸ್ಟ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಇದಕ್ಕಾಗಿ ಸುಮಾರು ₹2 ಲಕ್ಷ ನೀಡಲಾಗಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಪ್ರಹ್ಲಾದರಾಜಪ್ಪಯ್ಯ ದೇಸಾಯಿ ಹೇಳಿದರು.

ದೇವಸ್ಥಾನ ಪ್ರಾಂಗಣದಲ್ಲಿ ರಸ್ತೆ, ಕುಡಿಯುವ ನೀರು, ದೀಪದ ವ್ಯವಸ್ಥೆ ಮಾಡಬೇಕಾಗಿದೆ. ನವರಾತ್ರಿ ಸಂದರ್ಭದಲ್ಲಿ ವಿಶೇಷ ಆಕರ್ಷಣೆ ಹೆಚ್ಚಿಸುವ ವಿಚಾರ ಹಾಕಿಕೊಂಡಿದ್ದೇವೆ ಎಂದು ಹಿರಿಯರಾದ ಮುರಳೀಧರರಾವ್ ಪ್ಯಾಟಿ, ಯಂಕಪ್ಪಯ್ಯ ದೇಸಾಯಿ, ಕೃಷ್ಟಾಚಾರ ಕಟ್ಟಿ ತಿಳಿಸಿದರು.

ತಿರುಪತಿಯಲ್ಲಿರುವಂತೆ ಇಲ್ಲಿ ಗರುಡ, ವರಾಹ ದೇವರ ಗುಡಿ, ಪುಷ್ಕರಣಿ ಹಾಗೂ ಬೆಟ್ಟದ ಕೆಳಗೆ ಒಂದು ಕೆರೆ ನಿರ್ಮಿಸಲಾಗಿದೆ. ಅದಕ್ಕೆ ಹೊಂದಿಕೊಂಡು ಮುಖ್ಯ ಪ್ರಾಣ ದೇವರು ಗುಡಿ ಇದೆ. ಎಡಕ್ಕೆ ಲಕ್ಷ್ಮೀದೇವಿ ಗುಡಿ, ಪಾಕಶಾಲೆ ಹಾಗೂ ಮೊಗಸಾಲೆ, ಕಲ್ಲುಮಂಟಪ ಕಾಣಬಹುದು. ಬೆಟ್ಟದ ಮೇಲೆ ಯಾತ್ರಿಗಳ ಅನುಕೂಲಕ್ಕಾಗಿ ಇತ್ತೀಚೆಗೆ ಯಾತ್ರಿ ನಿವಾಸ ಕಟ್ಟಲಾಗಿದೆ. ಇಲ್ಲಿ ದಸರಾ ಉತ್ಸವ ವೈಭವದಿಂದ ನಡೆಯುತ್ತದೆ. ಹನುಮಸಾಗರದಿಂದ ಮೆಟ್ಟಿಲುಗಳ ಮೂಲಕ ಅಥವಾ ರಸ್ತೆಯ ಮುಖಾಂತರ ಬೆಟ್ಟ ಏರಬಹುದಾಗಿದೆ ಎಂದು ಗುರುರಾಜ ದೇಸಾಯಿ ಹಾಗೂ ಸತೀಶ ಜಮಖಂಡಿಕರ ವಿವರಣೆ ನೀಡುತ್ತಾರೆ. ಮಾಹಿತಿಗೆ ಪ್ರವಾಸಿಗರು 9448032583/9686679090 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

* * 

ಬೆಟ್ಟದ ಮೇಲಿರುವ ವೆಂಕಟೇಶ್ವರ ದೇವಸ್ಥಾನವನ್ನೂ ಸುಮಾರು ₹10 ಲಕ್ಷ ವೆಚ್ಚದಲ್ಲಿ ದೇವಸ್ಥಾನ ವಿಶ್ವಸ್ಥ ಮಂಡಳಿಯಿಂದ ಜೀರ್ಣೋದ್ಧಾರ ಮಾಡಲಾಗುವುದು.

ಪ್ರಹ್ಲಾದ ರಾಜಪ್ಪಯ್ಯ ದೇಸಾಯಿ, ವಿಶ್ವಸ್ಥ ಟ್ರಸ್ಟ್ ಕಾರ್ಯಾಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry