7

ಮಾಯಕ್ಕನ ಜಾತ್ರೆಗೆ ಸಿದ್ಧಗೊಂಡ ಚಿಂಚಲಿ

Published:
Updated:
ಮಾಯಕ್ಕನ ಜಾತ್ರೆಗೆ ಸಿದ್ಧಗೊಂಡ ಚಿಂಚಲಿ

ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಅತ್ಯಂತ ಪ್ರಭಾವಿ ಶಕ್ತಿ ದೇವತೆ ತಾಲ್ಲೂಕಿನ ಚಿಂಚಲಿ ಮಾಯಕ್ಕಾ ದೇವಿಯ ಜಾತ್ರೆ ಜ. 30ರಿಂದ ಆರಂಭಗೊಂಡು 15 ದಿನಗಳ ಕಾಲ ನಡೆಯಲಿದೆ. ಫೆ. 4ರಂದು ಮಹಾನೈವೇದ್ಯ ನಡೆಯಲಿದೆ. ಈ ವರ್ಷವೂ ಜಾತ್ರೆಯಲ್ಲಿ ಸುಮಾರು 15ರಿಂದ 20 ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿ ಕೃಷ್ಣಾ ನದಿ ತೀರದಲ್ಲಿರುವ ಚಿಂಚಲಿ ಕ್ಷೇತ್ರ ಗಡಿಭಾಗದ ಜಾಗೃತ ಸ್ಥಳ. ಜನಮಾನಸದಲ್ಲಿ ಅಚ್ಚಳಿ ಯದ ಪ್ರಭಾವ ಉಳಿಸಿರುವ ಈ ಶಕ್ತಿ ದೇವತೆಯನ್ನು ಮಾಯಕ್ಕ, ಮಹಾ ಕಾಳಿ, ಮಾಯಕಾರತಿ, ಮಾಯವ್ವಾ ಎಂಬ ಹೆಸರಿನಿಂದ ಕರೆಯುತ್ತಾರೆ.

ಹಿನ್ನಲೆ: ಮಾಯಕ್ಕದೇವಿಯ ಮೂಲಸ್ಥಳ ಮಹಾರಾಷ್ಟ್ರದ ಮಾನದೇಶ (ಕೊಂಕಣ) ಎಂದು ಹೇಳಲಾಗುತ್ತದೆ. ಮಾಯಕ್ಕ ಮಾನ ದೇಶದಿಂದ ‘ಕೀಲ ಮತ್ತು ಕಿಟ್ಟ’ ಎಂಬ ರಾಕ್ಷಸರನ್ನು ಬೆನ್ನಟ್ಟಿಕೊಂಡು ಚಿಂಚಲಿಗೆ ಬಂದು ಅವರನ್ನು ಸಂಹಾರ ಮಾಡಿದಳೆಂಬ ಐತಿಹ್ಯವಿದೆ. ರಾಕ್ಷಸರ ಸಂಹಾರದ ನಂತರ ಮಾಯಕ್ಕ ಇಲ್ಲಿಯೇ ನೆಲೆಯೂರಿದಳೆಂಬ ಪ್ರತೀತಿ ಇದೆ.

ದೇವಿಯ ‘ನೆಲೆ’ ಕುರಿತು ಮತ್ತೊಂದು ಐತಿಹ್ಯವಿದೆ. ದೇವಿ ನೆಲೆಗಾಗಿ ಚಿಂಚಲಿಯ ಕ್ಯಾರಿಪೊಪ್ಪ, ಎಡಿಮಾಯವ್ವಾ, ಕರಗುತ್ತಿ, ಬಂಗಾರ ಗಿಡ ಮೊದಲಾದ ಕಡೆ ಅಲೆದಳೆಂದು ಕೊನೆಗೆ ಇಲ್ಲಿಯ ದೊಡ್ಡಹಾಳು ಮಣ್ಣಿನ ದಿಣ್ಣೆ ಇರುವ ಸ್ಥಳದಲ್ಲಿ ಹಿರಿದೇ ವಿ ಗುಡಿ ಇತ್ತಂತ್ತೆ. ಹಿರಿದೇವಿ ಬಳಿ ಬಂದು ತನಗೆ ಆಶ್ರಯ ನೀಡುವಂತೆ ಮಾಯಕ್ಕ ಕೇಳಿ ಕೊಂಡಾಗ, ಹಿರಿದೇವಿ, ‘ಭಕ್ತರಿಂದ ಮೊದಲ ಮಾನ ನನಗೆ ಸಿಗಬೇಕು, ಭಕ್ತರ ಮೊದಲು ನನ್ನ ದರ್ಶನವನ್ನೇ ಪಡೆಯಬೇಕು’ ಎಂಬ ಕರಾರಿನೊಂದಿಗೆ ಮಾಯಕ್ಕನಿಗೆ ಆಶ್ರಯ ನೀಡಿದಳು ಎಂಬ ನಂಬಿಕೆ ಇದೆ. ಹೀಗಾಗಿ, ಇಂದಿಗೂ ಮೊದಲು ಹಿರಿದೇವಿಯ ದರ್ಶನ ಪಡೆದು ನೈವೇದ್ಯ ಸಲ್ಲಿಸಿದ ನಂತರವಷ್ಟೇ ಮಾಯಕ್ಕನಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ.

ಮಾಯಕ್ಕ ಒಂದು ದಿನ ಚಿಂಚಲಿ ಗ್ರಾಮದ ಹೊರವಲಯದ ಹಳ್ಳದ ಹತ್ತಿರ ಹೋಗಿದ್ದಳಂತೆ. ಆ ಸಂದರ್ಭದಲ್ಲಿ ಅಲ್ಲಿ ಕುರಿ ಕಾಯುತ್ತಿದ್ದ ಕುರುಬನ ಬಳಿ ಸ್ವಲ್ಪ ಹಾಲು ಬೇಕೆಂದು ಕೇಳಿದಳಂತೆ. ಆತ ಹಾಲು ಕೊಡಲು ನಿರಾಕರಿಸಿದಾಗ, ಅವಳು ಹಳ್ಳವೆಲ್ಲ ಹಾಲಾಗಿ ಹರಿಯಲಿ ಎಂದಳಂತೆ. ಆಗ ಹಳ್ಳವೆಲ್ಲ ಹಾಲಾಗಿ ತುಂಬಿ ಹರಿಯಿತೆಂಬ ಪವಾಡದ ಉಲ್ಲೇಖವಿದೆ. ಅದಕ್ಕಾಗಿ ಇಂದಿಗೂ ಭಕ್ತರು ಈ ಹಾಲಹಳ್ಳದಲ್ಲಿ ಪವಿತ್ರ ಸ್ನಾನ ಮಾಡಿ, ಸಾಂಪ್ರದಾಯಿಕ ಪೂಜೆ ಸಲ್ಲಿಸುತ್ತಾರೆ.

ಇದೇ ಹಾಲಹಳ್ಳದ ಪಕ್ಕದಲ್ಲಿ ಕುರಿ ಕಾಯುತ್ತಿದ್ದ ಕುರುಬರಲ್ಲಿ ಕುರಿಯ ಉಣ್ಣೆ ಕೊಡುವಂತೆ ದೇವಿ ಕೇಳಿದಾಗ, ಅವರು ಕೊಡಲಿಲ್ಲ. ಆಗ ಸಿಟ್ಟಿನಿಂದ ದೇವಿ ‘ಕುರಿಗಳೆಲ್ಲವೂ ಕಲ್ಲಾಗಲಿ’ ಎಂದು ಶಪಿಸಿದಳಂತೆ. ಹೀಗಾಗಿ ಕುರಿಗಳೆಲ್ಲ ಕಲ್ಲಾಗಿ ಬಿದ್ದವು ಎಂಬ ನಂಬಿಕೆ ಇದೆ. ಹಾಲಹಳ್ಳದ ದಡದಲ್ಲಿರುವ ಕಲ್ಲುಗಳನ್ನು ‘ಉಣ್ಣೆ ಮುತ್ತಪ್ಪನ ಕಲ್ಲುಗಳು’ ಎಂದು ಕರೆಯಲಾಗುತ್ತದೆ.

ಮಾಯಕ್ಕ ದೇವಿಯ ದೇವಾಲಯ ದ ಜೀರ್ಣೊದ್ಧಾರಗಳಿಗೆ ಗ್ರಾಮದ ಹಿರಿಯರೇ ಶ್ರಮಿಸಿದ್ದಾರೆ. 1988ರಲ್ಲಿ ದೇವಸ್ಥಾನದ ಟ್ರಸ್ಟ್ ಸಮಿತಿ ರಚನೆಯಾಗಿದೆ. ದೇವಿಯ ಕಾಣಿಕೆ ಸಂಗ್ರಹ, ಜೀರ್ಣೋದ್ಧಾರ, ಧರ್ಮಶಾಲೆಗಳ ವ್ಯವಸ್ಥೆ, ನಿರಂತರ ಅನ್ನದಾಸೋಹ ಹೀಗೆ ಹಲವಾರು ಯೋಜನೆಗಳನ್ನು ಜಾರಿಗಳಿಸಿ ಸುಧಾರಣೆ ಮಾಡಿದ್ದಾರೆ.

ಮಾಯಕ್ಕದೇವಿ ದರ್ಶನಕ್ಕೆ ಬರು ಭಕ್ತರು, ಬಂಗಾರ ಬೆಳ್ಳಿ, ನಗದು, ವಸ್ತು, ದವಸ–ಧಾನ್ಯ ಹೀಗೆ ವಿವಿಧ ರೂಪಗಳಲ್ಲಿ ಕಾಣಿಕೆ ನೀಡಿ ತಮ್ಮ ಹರಕೆ ತೀರಿಸಿ, ದರ್ಶನ ಪಡೆಯುತ್ತಾರೆ. ಭರತ ಹುಣ್ಣಿಮೆಯಿಂದ ಶಿವರಾತ್ರಿ ಅಮವಾಸ್ಯೆಯವರೆಗೆ 15 ದಿನ ಮಾಯಕ್ಕದೇವಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಗುಡಿಯ ಸುತ್ತ ಸುಮಾರು ಆರೇಳು ಕಿ.ಮೀ ಪ್ರದೇಶ 15 ಲಕ್ಷಕ್ಕೂ ಹೆಚ್ಚು ಭಕ್ತರಿಂದ ತುಂಬಿರುತ್ತದೆ.

ಹತ್ತಾರು ಎಕರೆ ಪ್ರದೇಶಗಳಲ್ಲಿ ಮೂಡಲ ಹೋರಿಗಳ ಜಾನುವಾರ ಸಮಾವೇಶ ಹಾಗೂ ಮಾರಾಟ ನಡೆಯುತ್ತಿದೆ. ಅತ್ಯಧಿಕ ಸಂಖ್ಯೆಯಲ್ಲಿ ಜಾನುವಾರಗಳ ಮಾರಾಟವಾಗಿರುವುದು ಈ ಜಾತ್ರೆಯ ದಾಖಲೆಯಾಗಿದೆ.

ಸಾಕಷ್ಟು ಸಾರಿಗೆ ಸೌಕರ್ಯ

ಬೆಳಗಾವಿಯಿಂದ 110 ಕಿ.ಮೀ, ರಾಯಬಾಗ ಪಟ್ಟಣದಿಂದ 10 ಕಿ.ಮೀ, ದೂರದಲ್ಲಿ ಚಿಂಚಲಿ ಕ್ಷೇತ್ರವಿದೆ. ಚಿಂಚಲಿಯಲ್ಲಿ ರೈಲು ನಿಲ್ದಾಣವಿದೆ. ಜಾತ್ರೆಯ ವೇಳೆ ಎಲ್ಲ ಎಕ್ಸಪ್ರೆಸ್ ರೈಲುಗಳೂ ಇಲ್ಲಿ ನಿಲುಗಡೆ ಆಗುತ್ತವೆ. ಮುಂಬಯಿ–ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಿಂದ ಚಿಂಚಲಿಗೆ ಬಸ್ ಸೌಲಭ್ಯವಿದೆ. ಜಾತ್ರೆಯ ವೇಳೆ ವಿಶೇಷ ಬಸ್‌ಗಳನ್ನು ಬಿಡಲಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry