ಪೊಲೀಸರ ಕುಮ್ಮಕ್ಕು,ಎಸ್ಪಿಗೆ ಪತ್ರ

7

ಪೊಲೀಸರ ಕುಮ್ಮಕ್ಕು,ಎಸ್ಪಿಗೆ ಪತ್ರ

Published:
Updated:
ಪೊಲೀಸರ ಕುಮ್ಮಕ್ಕು,ಎಸ್ಪಿಗೆ ಪತ್ರ

ಬಳ್ಳಾರಿ: ‘ನಗರದ ಎಪಿಎಂಸಿ ಮಾರುಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ಸಾರ್ವಜನಿಕರಿಂದ ಲಂಚ ಪಡೆದ ಆರೋಪದ ಮೇರೆಗೆ ಇಬ್ಬರು ಗೃಹರಕ್ಷಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಲಂಚ ಪಡೆಯಲು ಅವರಿಗೆ ಪೊಲೀಸ್‌ ಸಿಬ್ಬಂದಿ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಆ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗಿದೆ’ ಎಂದು ಗೃಹರಕ್ಷಕದ ದಳದ ಜಿಲ್ಲಾ ಕಮಾಂಡೆಂಟ್‌ ಎಂ.ಎ.ಶಾಕಿಬ್‌ ತಿಳಿಸಿದರು.

ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ಇಲಾಖೆಯ ರಾಜ್ಯಮಟ್ಟದ ಕ್ರೀಡಾಕೂಟದ ವೃತ್ತಿಪರ ಸ್ಪರ್ಧೆಗಳಲ್ಲಿ ಜಿಲ್ಲೆಯ ತಂಡ ಚಾಂಪಿಯನ್‌ ಆಗಿರುವ ಕುರಿತು ಮಾಹಿತಿ ನೀಡಲು ನಗರ ತಮ್ಮ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

‘ಕೆಲಸ ಮಾಡುವ ಸ್ಥಳದಲ್ಲಿ ಗೃಹರಕ್ಷಕರು ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದಾರೆ. ಲಂಚ ಪಡೆದು ನೀಡುವಂತೆ ಪೊಲೀಸ್‌ ಸಿಬ್ಬಂದಿ ಒತ್ತಡ ಹೇರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ಸಂಬಂಧವೇ ಇಬ್ಬರನ್ನು ಅಮಾನತ್ತು ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಎಸ್ಪಿಗೆ ಪತ್ರ: ‘ಲಂಚಕ್ಕಾಗಿ ಪೊಲೀಸ್‌ ಸಿಬ್ಬಂದಿ ಗೃಹರಕ್ಷಕರ ಮೇಲೆ ಒತ್ತಡ ಹೇರುತ್ತಿರುವುದನ್ನು ತಡೆಯಬೇಕು ಎಂದು ಕೋರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಅವರಿಗೆ ಪತ್ರವನ್ನೂ ಬರೆದಿರುವೆ’ ಎಂದರು.

ಕಿರುಕುಳ: ‌‘ಜಿಲ್ಲೆಯಲ್ಲಿ ಕೆಲವು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಗೃಹರಕ್ಷಕ ಸಿಬ್ಬಂದಿಗೆ ಕಿರುಕುಳ ನೀಡಿದ್ದಾರೆ ಎಂಬ ದೂರುಗಳು ಬಂದಿವೆ. ಆ ಬಗ್ಗೆ ಗೃಹರಕ್ಷಕರಿಂದ ಮಾಹಿತಿ ಪಡೆಯಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಎಸ್ಪಿಗೆ ದೂರು ಅರ್ಜಿಗಳನ್ನು ರವಾನಿಸಲಾಗಿದೆ’ ಎಂದರು. ಆದರೆ ಹೆಚ್ಚಿನ ಮಾಹಿತಿ ನೀಡಲಿಲ್ಲ.

ನೇಮಕ: ಜಿಲ್ಲೆಯ ಸರ್ಕಾರಿ ಕಚೇರಿ, ಆಸ್ಪತ್ರೆ ಸೇರಿದಂತೆ ವಿವಿಧೆಡೆ ನಿಯೋಜನೆಗೊಂಡಿರುವ ಗೃಹರಕ್ಷಕರು ಪೊಲೀಸರಿಗಿಂತಲೂ ಹೆಚ್ಚಿನ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಫೆಬ್ರುವರಿಯಲ್ಲಿ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯಲ್ಲಿ 44 ಗೃಹರಕ್ಷಕರ ನೇಮಕಾತಿ ನಡೆಯಲಿದೆ’ ಎಂದರು.

ಅಧಿಕ ಅರ್ಜಿ: ‘ಗೃಹರಕ್ಷಕರಾಗಲು ಹೆಚ್ಚಿನ ಯುವಜನ ಆಸಕ್ತಿ ತೋರಿದ್ದು,ಹಿಂದಿನ ವರ್ಷ ಕುರುಗೋಡಿನಲ್ಲಿ 41 ಹುದ್ದೆಗೆ 220 ಮಂದಿ, ತೆಕ್ಕಲಕೋಟೆಯಲ್ಲಿ 22 ಹುದ್ದೆಗೆ 280 ಮಂದಿ, 45ಹುದ್ದೆಗೆ 900 ಮಂದಿ ಅರ್ಜಿ ಸಲ್ಲಿಸಿದ್ದರು’ ಎಂದರು.

ಬಳ್ಳಾರಿ ತಂಡ ಚಾಂಪಿಯನ್‌’

ಬಳ್ಳಾರಿ: ‘ಅಗ್ನಿಶಾಮಕ ಮತ್ತು ಗೃಹರಕ್ಷಕ ಇಲಾಖೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದ ವೃತ್ತಿಪರ ಸ್ಪರ್ಧೆಗಳಲ್ಲಿ ಜಿಲ್ಲೆಯ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ’ ಎಂದು ಗೃಹರಕ್ಷಕದ ದಳದ ಜಿಲ್ಲಾ ಕಮಾಂಡೆಂಟ್‌ ಎಂ.ಎ.ಶಕಿಬ್‌ ತಿಳಿಸಿದರು.

‘ಪ್ರಥಮ ಚಿಕಿತ್ಸೆ, ರೈಫಲ್‌ ಡ್ರಿಲ್‌, ಲಘು ಸಂರಕ್ಷಣೆ, ಫೈರ್‌ ಫೈಟಿಂಗ್‌ ಮತ್ತು ಶೂಟಿಂಗ್‌ ವಿಭಾಗದಲ್ಲಿ ಜಿಲ್ಲೆಯ ಗೃಹರಕ್ಷಕರು ಪ್ಲಟೂನ್‌ ಕಮಾಂಡರ್‌ ಬಿ.ಕೆ.ಬಸವಲಿಂಗ ನೇತೃತ್ವದಲ್ಲಿ ಅಪ್ರತಿಮ ಸಾಧನೆ ಮಾಡಿದರು.

ಮಹಿಳೆಯರ ಆಟೋಟ ವಿಭಾಗದಲ್ಲಿ ಹೊಸಪೇಟೆಯ ಊರ್ಮಿಳಾ ಚಾಂಪಿಯನ್‌ ಆದರು. ಕ್ರೀಡಾಕೂಟದಲ್ಲಿ 31 ಪುರುಷ ಮತ್ತು ನಾಲ್ವರು ಮಹಿಳಾ ಗೃಹರಕ್ಷಕರು ಪಾಲ್ಗೊಂಡಿದ್ದರು. ಆರು ವರ್ಷದಿಂದ ಈ ವಿಭಾಗದಲ್ಲಿ ಬಳ್ಳಾರಿ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮುತ್ತಿರುವುದು ವಿಶೇಷ’ ಎಂದರು.

* * 

ಲಂಚಕ್ಕಾಗಿ ಪೊಲೀಸರು ಗೃಹರಕ್ಷಕರ ಮೇಲೆ ಒತ್ತಡ ಹೇರುತ್ತಿರುವುದನ್ನು ತಡೆಯುವಂತೆ ಎಸ್ಪಿ ಚೇತನ್‌ ಅವರಿಗೆ ಪತ್ರ ಬರೆದಿರುವೆ

ಎಂ.ಎ.ಶಕಿಬ್‌ ಗೃಹರಕ್ಷಕದ ದಳದ ಜಿಲ್ಲಾ ಕಮಾಂಡೆಂಟ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry